ಭಾನುವಾರ, ಏಪ್ರಿಲ್ 18, 2021
24 °C

ಕಾಂಗ್ರೆಸ್‌ನಿಂದ ಎಸ್‌ಸಿ, ಎಸ್‌ಟಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶವನ್ನು ನಡೆಸಲು ಗುರುವಾರ ನಡೆದ ಕೆಪಿಸಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ಸಭೆಯಲ್ಲಿ ನಿರ್ಧರಿಸಲಾಗಿದೆ.ವಿಧಾನಸಭಾ ಚುನಾವಣೆ ಸಿದ್ಧತೆಯ ಭಾಗವಾಗಿ ಈ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಐದು ಲಕ್ಷಕ್ಕೂ ಹೆಚ್ಚು ಜನರನ್ನು ಸಮಾವೇಶಕ್ಕೆ ಕರೆತರುವ ಮೂಲಕ ಶಕ್ತಿ ಪ್ರದರ್ಶಿಸುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಪರಿಶಿಷ್ಟ ಪಂಗಡಗಳ ಘಟಕದ ಅಧ್ಯಕ್ಷ ಟಿ.ಆರ್.ರಾಮಪ್ಪ, ಶಾಸಕರಾದ ವಿ.ಶ್ರೀನಿವಾಸ ಪ್ರಸಾದ್, ಡಾ.ಎಚ್.ಸಿ.ಮಹದೇವಪ್ಪ, ಮೋಟಮ್ಮ, ಮಾಜಿ ಸಚಿವ ಅಂಜನಮೂರ್ತಿ, ಮಾಜಿ ಶಾಸಕರಾದ ಎಚ್.ಆಂಜನೇಯ, ಎಲ್.ಹನುಮಂತಯ್ಯ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಸೇರಿದಂತೆ 100ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ಹಿಂದಿನ ಚುನಾವಣೆಯಲ್ಲಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. 34 ಮೀಸಲು ಕ್ಷೇತ್ರಗಳು ಇದ್ದ ಸಂದರ್ಭದಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು.51 ಮೀಸಲು ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದ ನಂತರ ಕೇವಲ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 35 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ರೀತಿಯಲ್ಲಿ ಕಾರ್ಯತಂತ್ರ ರೂಪಿಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೆ ಎಂಬ ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಗಿದೆ.ದಲಿತ ಸಮುದಾಯದ ಮತಗಳು ಕೈತಪ್ಪಿ ಹೋಗದಂತೆ ನಿರಂತರವಾಗಿ ಕಾರ್ಯಕ್ರಮ ರೂಪಿಸಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಗೊತ್ತಾಗಿದೆ.`3 ಬಾರಿ ಸೋತವರಿಗೆ ಟಿಕೆಟ್ ಬೇಡ~

ಬೆಂಗಳೂರು: ಹಿಂದಿನ ಚುನಾವಣೆಯಲ್ಲಿ 20 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋತವರು ಮತ್ತು ಮೂರು ಬಾರಿ ಸತತವಾಗಿ ಸೋಲು ಕಂಡವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಬಾರದು ಎಂಬ ಸಲಹೆ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.`ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ~ ಸ್ಮರಣಾರ್ಥ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಎಐಸಿಸಿ ವೀಕ್ಷಕರು ಎಲ್ಲ ಕ್ಷೇತ್ರಗಳಿಗೂ ತೆರಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹೆಚ್ಚು ಅಂತರದಿಂದ ಸೋಲು ಕಂಡವರು, ಮೂರು ಬಾರಿ ಸೋಲು ಅನುಭವಿಸಿದವರಿಗೆ ಟಿಕೆಟ್ ಬೇಡ ಎಂಬ ಸಲಹೆ ಬಂದಿದೆ.ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ~ ಎಂದರು.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ, ವೀಕ್ಷಕರಿಂದ ವರದಿ ಪಡೆದಿದೆ. ಕೆಪಿಸಿಸಿ ಕೂಡ ಮಾಹಿತಿ ಸಂಗ್ರಹಿಸಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.ಹಲವು ಕ್ಷೇತ್ರಗಳಲ್ಲಿ ಇತರೆ ಪಕ್ಷಗಳ ಪ್ರಭಾವಿ ಮುಖಂಡರು ಕಾಂಗ್ರೆಸ್‌ಗೆ ಬರುವ ಆಸಕ್ತಿ ತೋರಿದ್ದಾರೆ.

ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳು ಹೆಚ್ಚು ಶಕ್ತಿ ಹೊಂದಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತ ಒಪ್ಪಿ ಬರುವವರಿಗೆ ಅವಕಾಶ ನೀಡುವ ಬಗ್ಗೆಯೂ ಯೋಚಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.