ಬುಧವಾರ, ಏಪ್ರಿಲ್ 21, 2021
31 °C

ಕಾಂಗ್ರೆಸ್‌ನ ಪ್ರಕಾಶ ಬಾಗಳೆ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಗದಗ-ಬೆಟಗೇರಿ ನಗರಸಭೆಯ 31ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್  ಅಭ್ಯರ್ಥಿ  ಪ್ರಕಾಶ ಬಾಗಳೆ ಅವರು ಜಯಭೇರಿ ಬಾರಿಸಿದ್ದಾರೆ.ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಅರ್ಧ ಗಂಟೆಯಲ್ಲಿ ಪೂರ್ಣಗೊಂಡಿತ್ತು. ನಿರೀಕ್ಷೆಯಂತೆ ನಗರಸಭೆ ಮಾಜಿ ಸದಸ್ಯ ಕಾಂಗ್ರೆಸ್‌ನ ಪ್ರಕಾಶ ಅವರು ಪ್ರತಿಸ್ಪರ್ಧಿ ಬಿಜೆಪಿಯ ಶಂಕರ ಸಿದ್ಲಿಂಗ್ ಅವರನ್ನು 534 ಮತಗಳ ಅಂತರದಿಂದ ಸೋಲಿಸಿದರು. ಪ್ರಕಾಶ್ 818 ಮತಗಳು, ಶಂಕರ ಸಿದ್ಲಿಂಗ್ 284 ಹಾಗೂ ಜೆಡಿಎಸ್ ಅಭ್ಯರ್ಥಿ ಅಕ್ಬರ್ ಚೌಡೇಕರ್ 272 ಮತಗಳನ್ನು ಪಡೆದರು. ಒಟ್ಟು ಮತದಾರರು 1851, ಚಲಾವಣೆಯಾದ ಮತಗಳು 1374.ನಗರಸಭೆಯಲ್ಲಿ 21 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಶಂಕರ ಸಿದ್ಲಿಂಗ್ ಸೋಲು ತೀವ್ರ ಮುಖಭಂಗ ಉಂಟು ಮಾಡಿದೆ. ಬಿಜೆಪಿ ಅಭ್ಯರ್ಥಿ ಜವಾಹರಸಾ ಭಾಂಡಗೆ ಅವರ ನಿಧನದಿಂದ ತೆರವಾಗಿದ್ದರಿಂದ ಸ್ಥಾನವನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಫಲಿಸಲಿಲ್ಲ.  ಪ್ರಕಾಶ ಗೆಲುವಿನಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 14ಕ್ಕೇರಿದೆ. ವಿಜಯೋತ್ಸವ: ಪ್ರಕಾಶ ಬಾಗಳೆ ಜಯಭೇರಿ ಬಾರಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಬಣ್ಣ ಎರೆಚಾಡಿ ಸಂಭ್ರಮಿಸಿ ದರು. ಗಾಂಧಿ ವೃತ್ತದಿಂದ ಕಾರ್ಯಕರ್ತರು ಕಾಂಗ್ರೆಸ್ ಜೈ ಎನ್ನುತ್ತಾ ಮೆರವಣಿಗೆಯಲ್ಲಿ ಸಾಗಿದರು.ಪ್ರಕಾಶ ಬಾಗಳೆ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಹಾಗೂ ಮುಖಂಡರನ್ನು ತೆರೆದ ಜೀಪಿನಲ್ಲಿ ಮಹೇಂದ್ರ ಸರ್ಕಲ್, ಹುಯಿಲುಗೋಳ ವೃತ್ತ, ಮೆಹಬೂಬ ಸೂಬಾನಿ ಕಟ್ಟೆ, ಚೌಡಿ ಕೂಟು, ಸರಫಬಜಾರ್, ಜೋಡಿ ಹನುಮಂತ ಗುಡಿ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಕಾಟನ್ ಸೊಸೈಟಿಯಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.   ಶೌಚಾಲಯಕ್ಕೆ ಒತ್ತು: ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ವಾರ್ಡ್ ಜನತೆ ಕೃತಜ್ಞತೆ ಸಲ್ಲಿಸುತ್ತೇನೆ. ರಸ್ತೆ, ಬೀದಿ ದೀಪ, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ರಂಗನವಾಡ ಪ್ರದೇಶದಲ್ಲಿ ಶೌಚಾಲಯದ ಸಮಸ್ಯೆ ಇದೆ. ಕಾಂಕ್ರಿಟ್ ರಸ್ತೆ ನಿರ್ಮಾಣವಾಗಬೇಕು. ಭಂಡಾಗೆ ನಿಧನದಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಇರುವ ಆರು ತಿಂಗಳಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದು  ಬಾಗಳೆ  ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.