ಭಾನುವಾರ, ಏಪ್ರಿಲ್ 11, 2021
26 °C

ಕಾಂಗ್ರೆಸ್ ಕಚೇರಿಯಿಂದ ಪುಟ್ಟಸ್ವಾಮಿ ಬರಿಗೈಲಿ ವಾಪಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯ ಜೀವನ ಆರಂಭಿಸಲು ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ನಡೆಸಿದ ಪ್ರಯತ್ನಕ್ಕೆ ಅರಕಲಗೂಡು ಶಾಸಕ ಎ. ಮಂಜು ಅವರಿಂದ ತಡೆಬಿದ್ದಿದೆ. ಬೆಂಬಲಿಗರೊಂದಿಗೆ ಪಕ್ಷ ಸೇರಲು ಶನಿವಾರ ಕೆಪಿಸಿಸಿ ಕಚೇರಿವರೆಗೂ ಬಂದಿದ್ದ ನಿವೃತ್ತ ಅಧಿಕಾರಿ ಬರಿಗೈಲಿ ಮರಳಿದ್ದಾರೆ.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮೈಸೂರಿನ ಯುವ ಮುಖಂಡ ರಘು ಆಚಾರ್, ಕೆಲ ತಿಂಗಳ ಹಿಂದೆ ಜೆಡಿಎಸ್ ತೊರೆದಿದ್ದ ಮಿಲಿಂದ ಧರ್ಮಸೇನ ಮತ್ತಿತರರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ಕಾಂಗ್ರೆಸ್‌ಗೆ  ಸೇರುವ ಕಾರ್ಯಕ್ರಮ ನಿಗದಿಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಎಚ್.ವಿಶ್ವನಾಥ್, ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಎನ್.ಮಂಜುನಾಥ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು.ಈ ಸಂದರ್ಭದಲ್ಲೇ ಕಾಂಗ್ರೆಸ್‌ಗೆ ಸೇರಲು ಯೋಚಿಸಿದ್ದ ಪುಟ್ಟಸ್ವಾಮಿ ಅರಕಲಗೂಡಿನಿಂದ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಅಲ್ಲಿಂದ ಅವರ ಜೊತೆಯಲ್ಲೇ ಕೆಪಿಸಿಸಿ ಕಚೇರಿಗೆ ಬಂದರು. ಪುಟ್ಟಸ್ವಾಮಿ ಪಕ್ಷ ಸೇರಲು ಸಿದ್ಧತೆ ನಡೆಸಿರುವುದನ್ನು ಅರಿತಿದ್ದ ಶಾಸಕ ಮಂಜು, ಐದು ದಿನಗಳ ಹಿಂದೆಯೇ ಪರಮೇಶ್ವರ್ ಅವರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರು.`ಪುಟ್ಟಸ್ವಾಮಿ ದೀರ್ಘ ಕಾಲದಿಂದಲೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದ ನಿಕಟವರ್ತಿ. ಅವರು ತಮ್ಮ ಸೇವಾವಧಿಯಲ್ಲಿ ಜೆಡಿಎಸ್‌ಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ.  ವಿವಿಧ ಆರೋಪಗಳನ್ನು ಎದುರಿಸುತ್ತಿದ್ದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಅವರು ಕಾಂಗ್ರೆಸ್‌ಗೆ ಬಂದಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ. ಅವರನ್ನು ಸೇರಿಸಿಕೊಂಡಲ್ಲಿ ನಾನು ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ~ ಎಂಬುದಾಗಿ ಮಂಜು ಪತ್ರದಲ್ಲಿ ಎಚ್ಚರಿಸಿದ್ದರು ಎಂದು ಮೂಲಗಳು ತಿಳಿಸಿವೆ.ಬೆಳಿಗ್ಗೆ 11.30ಕ್ಕೆ ರಘು ಆಚಾರ್ ಸೇರ್ಪಡೆ ಕಾರ್ಯಕ್ರಮ ನಡೆಯಬೇಕಿತ್ತು. ಅಷ್ಟರಲ್ಲಾಗಲೇ ಸಿದ್ದರಾಮಯ್ಯ ಅವರ ಜೊತೆ ಪುಟ್ಟಸ್ವಾಮಿ ಕೆಪಿಸಿಸಿ ಕಚೇರಿಗೆ ಬಂದಿದ್ದರು. ಇದನ್ನು ತಿಳಿದ ಪರಮೇಶ್ವರ್ ತುಸು ತಡವಾಗಿಯೇ ಬಂದರು. ಬಳಿಕ ಪರಮೇಶ್ವರ್, ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಈ ಕುರಿತು ಸಭೆ ನಡೆಸಿದರು. ಪುಟ್ಟಸ್ವಾಮಿ ಪಕ್ಷ ಸೇರಲು ಬಂದಿರುವ ಕುರಿತು ಮಂಜು ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆಗೆ ಪ್ರಯತ್ನವೂ ನಡೆಯಿತು. ಆದರೆ, `ಅವರು ಪಕ್ಷ ಸೇರಿದರೆ ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ~ ಎಂದು ಶಾಸಕರು ಕಡ್ಡಿ ಮುರಿದಂತೆ ಹೇಳಿದರು ಎನ್ನಲಾಗಿದೆ.ಇಷ್ಟರ ನಡುವೆಯೂ ಪುಟ್ಟಸ್ವಾಮಿ ನಡೆಸಿದ ಪ್ರಯತ್ನಗಳು ಫಲ ಕೊಡಲಿಲ್ಲ. ಸದ್ಯಕ್ಕೆ ಪಕ್ಷ ಸೇರ್ಪಡೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಪರಮೇಶ್ವರ್ ಅವರಿಂದ ದೊರೆಯಿತು. ಇದು ಸಿದ್ದರಾಮಯ್ಯ ಅವರಲ್ಲಿಯೂ ನಿರಾಶೆ ಮೂಡಿಸಿತು.  ಬಳಿಕ ರಘು ಆಚಾರ್ ಮತ್ತು ಮಿಲಿಂದ ಧರ್ಮಸೇನ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.