ಶನಿವಾರ, ಜನವರಿ 18, 2020
25 °C

ಕಾಂಗ್ರೆಸ್ ಕಾರ್ಯಕರ್ತ ಆತ್ಮಹತ್ಯೆ: ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ (ದಾವಣಗೆರೆ ಜಿಲ್ಲೆ):  ತಾಲ್ಲೂಕಿನ ಮುದಿಗೆರೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತನ ಆತ್ಮಹತ್ಯೆಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

ವಿವರ: ಮುದಿಗೆರೆ ಗ್ರಾಮದಲ್ಲಿ ಜ. 17ರಂದು ಬೆಳಿಗ್ಗೆ ಕುಡಿಯುವ ನೀರಿನ ಪೈಪ್‌ಲೈನ್ ಸಂಬಂಧವಾಗಿ ಕಾಂಗ್ರೆಸ್ ಕಾರ್ಯಕರ್ತ ಯೋಗೇಶ್ ಅವರಿಗೆ, ಬಿಜೆಪಿ ಕಾರ್ಯಕರ್ತರಾದ ಜಿ.ವಿ. ಲೋಕೇಶಪ್ಪ, ವೀರಭದ್ರಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ಎರಡೂ ಗುಂಪಿನ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 17ರಂದು ಮಧ್ಯರಾತ್ರಿ ಉಭಯ ಪಕ್ಷಗಳ ಕಾರ್ಯಕರ್ತರಿಗೂ ಠಾಣೆಯಿಂದ ಬಿಡುಗಡೆ ದೊರೆತಿತ್ತು.

`ಯೋಗೇಶ್ ಠಾಣೆಯ ಮುಂಭಾಗ ಇರುವಾಗಲೇ ಲೋಕೇಶಪ್ಪ `ಊರಿಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ~ ಎಂದು ಮತ್ತೆ ಬೆದರಿಕೆ ಒಡ್ಡಿದ್ದರು. ಗ್ರಾಮಕ್ಕೆ ವಾಪಸ್ಸಾದ ಯೋಗೇಶ್ ಜೀವಭಯದಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಅಕ್ಕಪಕ್ಕದವರು ನೋಡಿ, 108 ವಾಹನಕ್ಕೆ ಕರೆ ಮಾಡಿದ್ದಾರೆ. ವಾಹನ ಬಂದಾಗ ಲೋಕೇಶಪ್ಪ ಮತ್ತು ವೀರಭದ್ರಪ್ಪ ತಡೆಯೊಡ್ಡಿ, ಚಿಕಿತ್ಸೆಗೆ ಅಸಹಕಾರ ನೀಡಿದ್ದಾರೆ. ಆಗ ಗ್ರಾಮಸ್ಥರು ಚನ್ನಗಿರಿ ಆಸ್ಪತ್ರೆಯಲ್ಲಿ ಯೋಗೇಶ್‌ಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ~ ಎಂದು ಯೋಗೇಶ್ ಅವರ ಮಗ ಸಿ.ವೈ. ಕಾರ್ತೀಕ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ದೌರ್ಜನ್ಯ ಹೆಚ್ಚುತ್ತಿದೆ. ಪೊಲೀಸರು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮೃತ ವ್ಯಕ್ತಿಗೆ ರೂ 15 ಲಕ್ಷ ಪರಿಹಾರ ಘೋಷಿಸಬೇಕು. ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ವಡ್ನಾಳ್ ರಾಜಣ್ಣ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)