ಭಾನುವಾರ, ಮೇ 16, 2021
22 °C
ಸನ್ಮಾನ ಸಮಾರಂಭದಲ್ಲಿ ಕೋಳಿವಾಡ ಭರವಸೆ

`ಕಾಂಗ್ರೆಸ್ ಜನರ ನಂಬಿಕೆ ಹುಸಿಗೊಳಿಸದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಸುಭದ್ರ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನಿಟ್ಟು ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸದಂತೆ ಐದು ವರ್ಷಗಳ ಕಾಲ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರ ರಹಿತ ಆಡಳಿತ ನಡೆಸಲಿದೆ' ಎಂದು ರಾಣೆಬೆನ್ನೂರ ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.ಸೋಮವಾರ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನೂತನ ಶಾಸಕರಿಗೆ ಹಾಗೂ 13 ಜನ ಹಾವೇರಿ ನಗರಸಭೆ ಸದಸ್ಯರಿಗೆ ತಾಲ್ಲೂಕು ಕಾಂಗ್ರೆಸ್ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಕಳೆದ ಐದು ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಭ್ರಷ್ಟಾಚಾರ, ದುರಾಡಳಿತ ಹಾಗೂ ಆಂತರಿಕ ಕಚ್ಚಾಟದಲ್ಲಿಯೇ ಕಾಲ ಕಳೆಯಿತು. ಇದರಿಂದ ಬೇಸತ್ತ ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ನಿರೀಕ್ಷೆ ಮೀರಿ ಬಹುಮತ ನೀಡಿದ್ದಾರೆ. ಪಾರದರ್ಶಕ ಆಡಳಿತ ನೀಡುವ ಮೂಲಕ ಅವರ ಋಣ ತೀರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.ಈಗಾಗಲೇ ಪಕ್ಷವು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಒಂದಾದ ಒಂದು ರೂಪಾಯಿಗೆ ಕೆಜೆಯಂತೆ 30 ಕೆಜೆ ಅಕ್ಕಿಯನ್ನು ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯ ಜನರು ನಮ್ಮನ್ನು ಸತ್ಕರಿಸುವ ಮೂಲಕ ತಮ್ಮ ಅಧಿಕಾರವಧಿಯಲ್ಲಿ ಸತ್ಕಾರ್ಯಗಳನ್ನು ಮಾಡುವ ಗುರುತರ ಜವಾಬ್ದಾರಿಯನ್ನು ನಮ್ಮ ಮೇಲೆ ನೀಡಿದ್ದಾರೆ. ಅವರ ಅನತಿಯಂತೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಅಗತ್ಯಕ್ಕನುಗುಣವಾಗಿ ಜಿಲ್ಲೆಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರಲ್ಲದೇ, ತಮ್ಮನ್ನು ಆಯ್ಕೆ ಮಾಡಲು ಶ್ರಮಿಸಿದ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಣೆಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ರುಮಾಲು ತೊಡಿಸದಿ ಮಾಲೆ ಹಾಕಿ, ಶಾಲು ಹೊದಿಸಿ, ಫಲ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರೆ, ನಗರಸಭೆಗೆ ಆಯ್ಕೆಯಾದ ಕಾಂಗ್ರೆಸ್‌ನ 13 ಸದಸ್ಯರಿಗೆ ಶಾಲು, ಸ್ಮರಣ ಸಂಚಿಕೆ ನೀಡಿ ಸನ್ಮಾನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಶಹರ ಘಟಕದ ಕೆ.ಎಸ್. ಪುರದ ವಹಿಸಿದ್ದರು. ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌ಎಫ್‌ಎನ್ ಗಾಜೀಗೌಡ್ರ, ಎಂ.ಎಂ. ಹಿರೇಮಠ, ಶಿವಕುಮಾರ ತಾವರಗಿ, ಜಗದೀಶ ಬಸೇಗಣ್ಣಿ, ಸಂಜೀವ ನೀರಲಗಿ, ರಮೇಶ ಕಡಕೋಳ, ದಾಸಪ್ಪ ಕರ್ಜಗಿ, ಈರಪ್ಪ ಲಮಾಣಿ, ಬಾಬಣ್ಣ ಮಾಗಾವಿ, ಡಾ.ಪ್ರಕಾಶ ಮಾಗಾವಿ, ಜಗದೀಶ ಬೆಟಗೇರಿ, ಶಿವಲಾಲ ಕೋಟಕ್, ಉಳಿಯಪ್ಪ ಹಲಗಣ್ಣನವರ ಅಲ್ಲದೇ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.