ಭಾನುವಾರ, ಮೇ 22, 2022
27 °C

ಕಾಂಗ್ರೆಸ್ ಜನ್ಮ ಜಾಲಾಡುವೆ:ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾಂಗ್ರೆಸ್‌ನವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಅವರ ಜನ್ಮ ಜಾಲಾಡಬೇಕಾಗುತ್ತದೆ. ಎಲ್ಲದಕ್ಕೂ ಒಂದು ಮಿತಿ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಇಲ್ಲಿ ಕಿಡಿಕಾರಿದರು.

 ‘ವಿರೋಧ ಪಕ್ಷಗಳು ಈ ರೀತಿ ನಿರಾಧಾರ ಆರೋಪ ಮಾಡುವುದರಿಂದ ಏನೂ ಆಗಲ್ಲ. ಬಜೆಟ್ ಅಧಿವೇಶನದಲ್ಲಿ ಎಲ್ಲದಕ್ಕೂ ತಕ್ಕ ಉತ್ತರ ನೀಡುತ್ತೇನೆ. ಇನ್ನೂ ಎಷ್ಟು ಅಂತ ಅಗ್ನಿಪರೀಕ್ಷೆ ಎದುರಿಸಲಿ. ಪ್ರತಿಪಕ್ಷಗಳದ್ದು ಅತಿಯಾಯಿತು’ ಎಂದು ಎಂದು ಸಿಡಿಮಿಡಿಗೊಂಡರುನವದೆಹಲಿಯಿಂದ ಹಿಂತಿರುಗಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಭೂಹಗರಣದ ಬಗ್ಗೆ ತಾಕತ್ತಿದ್ದರೆ ಕಾಂಗ್ರೆಸ್‌ನವರು ಸಂಸತ್ತಿನಲ್ಲಿ ಪ್ರಸ್ತಾಪಿಸಲಿ, ಅದಕ್ಕೆ ರಾಜ್ಯದ ಬಿಜೆಪಿ ಸಂಸದರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಸವಾಲು ಎಸೆದರು.ಏನು ಕ್ರಮ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ವಿರುದ್ಧ ಲೋಕಾಯುಕ್ತರೇ ವರದಿ ನೀಡಿದ್ದರೂ ಕಾಂಗ್ರೆಸ್ ಪಕ್ಷ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ಏಕೆ? ಇಲ್ಲಿಯವರೆಗೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಅವರು, ದೇಶವನ್ನು ಕೊಳ್ಳೆ ಹೊಡೆದ ಕಾಂಗ್ರೆಸ್‌ಗೆ ತಮ್ಮ ವಿರುದ್ಧ ಅರೋಪ ಮಾಡುವ ನೈತಿಕ ಹಕ್ಕು ಇಲ್ಲ ಎಂದರು.ಸುಳ್ಳು ಆಸ್ತಿ ವಿವರ ನೀಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರೀತಿ ಸುಳ್ಳು ವಿವರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ಇದೇ 20ರಂದು ನಗರಕ್ಕೆ ಭೇಟಿ ನೀಡುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಜೊತೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಪ್ರಧಾನಿ ಡಾ. ಮನಮೋಹನಸಿಂಗ್ ಅವರನ್ನು ಆಹ್ವಾನಿಸಲು ನವದೆಹಲಿಗೆ ಹೋಗಿದ್ದೆ. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.