ಶನಿವಾರ, ಏಪ್ರಿಲ್ 17, 2021
33 °C

ಕಾಂಗ್ರೆಸ್ ಮಾನ್ಯತೆ ರದ್ದತಿಗೆ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಮಾನ್ಯತೆ ರದ್ದತಿಗೆ ಕೋರಿಕೆ

ನವದೆಹಲಿ (ಪಿಟಿಐ): `ನ್ಯಾಷನಲ್ ಹೆರಾಲ್ಡ್~ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕಂಪೆನಿಗೆ ರೂ 90 ಕೋಟಿ ಸಾಲ ನೀಡಿರುವ ಕಾಂಗ್ರೆಸ್ ಆದಾಯ ತೆರಿಗೆ ನಿಯಮ ಉಲ್ಲಂಘಿಸಿದೆ. ಆದ್ದರಿಂದ ಆ ಪಕ್ಷಕ್ಕೆ ನೀಡಿರುವ `ರಾಜಕೀಯ ಪಕ್ಷ~ದ ಮಾನ್ಯತೆ ರದ್ದು ಮಾಡಬೇಕು ಎಂದು ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಚುನಾವಣಾ ಆಯೋಗವನ್ನು ಕೋರಿದ್ದಾರೆ.`ನ್ಯಾಷನಲ್ ಹೆರಾಲ್ಡ್~ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ (ಈಗ ಸ್ಥಗಿತ) `ಅಸೋಸಿಯೇಟೆಡ್ ಜರ್ನಲ್ಸ್~ ಸಂಸ್ಥೆಗೆ ಕಾಂಗ್ರೆಸ್ ಭದ್ರತೆ ರಹಿತ ಸಾಲ ನೀಡಿ, ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ.  ಆದಾಯ ತೆರಿಗೆ ನಿಯಮದನ್ವಯ ರಾಜಕೀಯ ಪಕ್ಷಗಳು ವಾಣಿಜ್ಯ ಉದ್ದೇಶಕ್ಕೆ ಸಾಲ ನೀಡುವಂತಿಲ್ಲ. ಆದರೆ ಕಾಂಗ್ರೆಸ್ ಇಂತಹ ಕೆಲಸ ಮಾಡಿದೆ ಎಂದು ಸ್ವಾಮಿ ಆಪಾದಿಸಿದ್ದಾರೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ಅವರ ಪುತ್ರ ರಾಹುಲ್ ಅವರು `ಅಸೋಸಿಯೇಟೆಡ್ ಜರ್ನಲ್ಸ್~ ಸಂಸ್ಥೆಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದ ಬೆನ್ನಹಿಂದೆಯೇ ಅವರು ಚುನಾವಣಾ ಆಯೋಗಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ.ಚುನಾವಣಾ ಆಯೋಗಕ್ಕೆ ಸುಬ್ರಮಣಿಯನ್ ಸ್ವಾಮಿ ಬರೆದಿರುವ ದೂರು ಅರ್ಜಿಯಲ್ಲಿ, `ಚುನಾವಣಾ ಕಾನೂನು ಮತ್ತು ಆದಾಯ ತೆರಿಗೆ ನಿಯಮಗಳ ಅನ್ವಯ ಕಾಂಗ್ರೆಸ್ ಮೇಲ್ನೋಟಕ್ಕೆ ತಪ್ಪು ಮಾಡಿರುವುದು ಗೋಚರಿಸುತ್ತದೆ. ಆದ್ದರಿಂದ ಆ ಪಕ್ಷಕ್ಕೆ ನೀಡಿರುವ ಮಾನ್ಯತೆ ರದ್ದು ಮಾಡಲು ವಿಚಾರಣೆ ನಡೆಸುವ ಅಗತ್ಯವಿದೆ~ ಎಂದಿದ್ದಾರೆ.`ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಲಿಖಿತವಾಗಿ ನೀಡಿರುವ ಹೇಳಿಕೆಯಲ್ಲಿ ಕಾಂಗ್ರೆಸ್ 90 ಕೋಟಿ ರೂಪಾಯಿಯನ್ನು, 1956ರ ಕಂಪೆನಿ ಕಾಯ್ದೆಯ ಅಧಿನಿಯಮ 3ರ ಅಡಿಯಲ್ಲಿ ನೋಂದಾಯಿಸಿಕೊಂಡಿರುವ `ಅಸೋಸಿಯೇಟೆಡ್ ಜರ್ನಲ್ಸ್ ಪ್ರೈವೇಟ್ ಲಿಮಿಟೆಡ್~ಗೆ ಸಾಲವಾಗಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ~ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.`ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳು ಜನಪ್ರತಿನಿಧಿ ಕಾಯ್ದೆಯ 29ಎ ಇಂದ ಸಿ ವರೆಗಿನ ಅಧಿನಿಯಮ ಮತ್ತು ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಡ್ಡಿ ಸಹಿತ ಇಲ್ಲವೇ ಬಡ್ಡಿ ರಹಿತ ಸಾಲ ನೀಡುವುದು ಕಾನೂನು ಬಾಹಿರ~ ಎಂದು ಸ್ವಾಮಿವಿವರಿಸಿದ್ದಾರೆ.ಕಾಂಗ್ರೆಸ್ ಮಾರುತ್ತರ

ಕಾಂಗ್ರೆಸ್ ಕೂಡ ಸ್ವಾಮಿ ಅವರಿಗೆ ತೀಕ್ಷ್ಣ ಮಾರುತ್ತರ ನೀಡಿದೆ. `ಅಸೋಸಿಯೇಟೆಡ್ ಜರ್ನಲ್ಸ್~ ವಿಚಾರದಲ್ಲಿ `ರಾಜಕೀಯ ಧರ್ಮ~ವನ್ನು ಅನುಸರಿಸಿರುವುದಾಗಿ ಸಮರ್ಥಿಸಿಕೊಂಡಿರುವ ಪಕ್ಷವು, ಈ ವಿಚಾರದಲ್ಲಿ ಯಾವುದೇ ಸವಾಲು ಸ್ವೀಕರಿಸಲು ಸಿದ್ಧ ಎಂದಿದೆ.`ಸ್ವಾಮಿ ಮತ್ತು ಬಿಜೆಪಿ ಮುಖಂಡರು ಸುಳ್ಳು     ಆರೋಪಗಳನ್ನು ಪ್ರಚಾರ ಮಾಡುತ್ತಿದ್ದಾರೆ~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದ್ವಿವೇದಿ ಕಿಡಿಕಾರಿದ್ದಾರೆ.`ಬಡ್ಡಿ ರಹಿತವಾಗಿ ಸಾಲ ನೀಡಿದ ಮೇಲೆ ಅದರಲ್ಲಿ ವಾಣಿಜ್ಯ ಉದ್ದೇಶ ಇರಲು ಹೇಗೆ ಸಾಧ್ಯ~ ಎಂದು ಪ್ರಶ್ನಿಸಿದ್ದಾರೆ.`ಪಕ್ಷದ ರಾಜಕೀಯ ಕಾರ್ಯಗಳನ್ನು ಪಕ್ಷಕ್ಕೆ ಸೇರದವರು ನಿರ್ಧರಿಸಲಾಗದು~ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಹೇಳಿಕೆಗೆ ದ್ವಿವೇದಿ ತಿರುಗೇಟು ನೀಡಿದ್ದಾರೆ.ನಿಧಿ ಅಕ್ರಮ ವರ್ಗಾವಣೆ: ಬಿಜೆಪಿ

ಸ್ವಾಮಿ ಅವರ ಅರ್ಜಿ ಬಗ್ಗೆ ಚುನಾವಣಾ ಆಯೋಗವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಪತ್ರಿಕಾ  ಸಂಸ್ಥೆಗೆ ಕಾಂಗ್ರೆಸ್ ಸಾಲ ನೀಡಿರುವುದನ್ನು ನೋಡಿದರೆ, ರಿಯಲ್ ಎಸ್ಟೇಟ್ ಹಿತಾಸಕ್ತಿ ಇದರ ಹಿಂದೆ ಇದೆ ಎಂದೇ ತೋರುತ್ತದೆ. ಕಾಂಗ್ರೆಸ್ ತನ್ನ ನಿಧಿಯನ್ನು ಅಕ್ರಮವಾಗಿ ವರ್ಗಾಯಿಸಿರುವ ವಾಸನೆಯೂ ಇದೆ ಎಂದು ಆರೋಪಿಸಿದೆ.`ರಾಜಕೀಯ ಪಕ್ಷವು ತನ್ನ ನಿಧಿಯನ್ನು ರಾಜಕೀಯ  ಉದ್ದೇಶಕ್ಕೆ ಬಳಸಬೇಕೇ ಹೊರತು ವ್ಯಾಪಾರ ಅಥವಾ ಹಣಕಾಸು ವ್ಯವಹಾರಕ್ಕೆ ಅಲ್ಲ~ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಹೇಳಿದ್ದಾರೆ.ಕೇಜ್ರಿವಾಲ್ ಒತ್ತಾಯ


ಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.ಸ್ವಾಮಿ ಅವರು ಹೇಳಿರುವಂತೆ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಗಳ ಅನ್ವಯ ರಾಜಕೀಯ ಪಕ್ಷಗಳು ನಿಯಮಾವಳಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಕಡ್ಡಾಯ. ಈ ವಿಚಾರದಲ್ಲಿ ಕಾಂಗ್ರೆಸ್ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.