ಮಂಗಳವಾರ, ಜೂನ್ 22, 2021
23 °C
ಸ್ಥಳೀಯರಿಗೆ ಟಿಕೆಟ್ ನೀಡಲು ಒತ್ತಾಯ; 58 ಮಂದಿ ಬಂಧನ, ಬಿಡುಗಡೆ

ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸಿಗರ ಪ್ರತಿಭಟನೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಧೋರಣೆ ಖಂಡಿಸಿ ಮಾದಿಗ ಯುವ ಸೇನೆ ಕಾರ್ಯಕರ್ತರು  ಮಂಗಳವಾರ ಕರೆ ನೀಡಿದ್ದ ಚಿತ್ರದುರ್ಗ ಜಿಲ್ಲಾ ಬಂದ್ ಸಂಪೂರ್ಣ ವಿಫಲವಾಯಿತು.ಸ್ಥಳೀಯರಿಗೆ ಟಿಕೆಟ್ ನೀಡಬೇಕು, ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಾದಿಗ ಯುವ ಸೇನೆ ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿ ನಿಯಂತ್ರಿಸಲು ಮಾದಿಗ ಯುವ ಸೇನೆ ಮುಖಂಡ ಹನುಮಂತಪ್ಪ ದುರ್ಗ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸೈಯದ್ ಮೊಯಿದ್ದೀನ್ (ಚೋಟು), ಕಾಂಗ್ರೆಸ್ ಕಾರ್ಯಕರ್ತರಾದ ಪ್ರಕಾಶ್, ರಮೇಶ್, ತಾರಕೇಶ್, ರಾಜಶೇಖರ್ ಸೇರಿದಂತೆ  ೫೮ ಮಂದಿ ಬಂಧಿಸಿ ನಂತರ ಬಿಡುಗಡೆ ಮಾಡಿದರು.ಒಂದು ಗಂಟೆ ಧರಣಿಗೆ ಅನುಮತಿ: ಬಂದ್, ಮೆರವಣಿಗೆ ಹಾಗೂ ಧ್ವನಿವರ್ಧಕ ಬಳಕೆಗೆ ಸೋಮವಾರ ಸಂಜೆ ಅನುಮತಿ ಕೋರಿದ್ದ ಮಾದಿಗ ಯುವ ಸೇನೆ ಕಾರ್ಯಕರ್ತರಿಗೆ, ಜಿಲ್ಲಾಡಳಿತ ಚುನಾವಣಾ ನೀತಿ ಸಂಹಿತೆ ಕಾರಣ ಅನುಮತಿ ನಿರಾಕರಿಸಿತ್ತು.  ಇದರ ನಡುವೆಯೂ ಮಂಗಳವಾರ ಪ್ರತಿಭಟನಾ ಕಾರರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕಾದರೂ ಅನುಮತಿ ನೀಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಕಾಂತರಾಜು ಅವರು ಉನ್ನತಾಧಿಕಾರಿಗಳ ಅನುಮತಿ ಮೇರೆಗೆ ಒಂದು ಗಂಟೆ ಕಾಲ ಪೊಲೀಸರ ಕಣ್ಗಾವಲಿನಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿದರು.ಜಿಲ್ಲಾಡಳಿತದ ಅನುಮತಿ ಬಳಸಿಕೊಂಡು ಪ್ರತಿಭಟನಾಕಾರರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಘೋಷಣೆಗಳು ಮೊಳಗಿದವು. ಕ್ರಮೇಣ ಆ ಘೋಷಣೆಗಳು ಸಚಿವ ಆಂಜನೇಯ, ಹಾಲಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ವಿರುದ್ಧ ಹಾಗೂ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆ.ಜೆಹಟ್ಟಿ ತಿಪ್ಪೇಸ್ವಾಮಿ ಪರ ಘೋಷಣೆಗಳಾಗಿ ಪರಿವರ್ತನೆಗೊಂಡವು !ತಮಟೆಗೂ ನಿಷೇಧ: ಪ್ರತಿಭಟನೆಗೆ ಹಂತ ಹಂತವಾಗಿ ಜನರು ಜಮಾಯಿಸುತ್ತಿದ್ದರು. ಜೆಜೆ ಹಟ್ಟಿ ತಿಪ್ಪೇಸ್ವಾಮಿ ಚಿತ್ರವಿರುವ ಫ್ಲೆಕ್ಸ್, ಬ್ಯಾನರ್ ಗಳನ್ನು ಹಿಡಿದ ಕಾರ್ಯಕರ್ತರು, ವಿಶೇಷವಾಗಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಒಂದು ಹಂತದಲ್ಲಿ ಹಳ್ಳಿಯಿಂದ ತಮಟೆ ವಾದ್ಯದವರು, ತಮಟೆ ಬಡಿಯುತ್ತಾ ಪ್ರತಿಭಟನೆ ಆರಂಭಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು, ನೀತಿ ಸಂಹಿತೆ ಪ್ರಕಾರ ತಮಟೆ ಬಡಿಯದಂತೆ ಎಚ್ಚರಿಕೆ ನೀಡಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕ್ಷಣ ಕಾಲ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪ್ರತಿಭಟನಾಕಾರರು ಪೊಲೀಸರ ಎಚ್ಚರಿಕೆಗೆ ಮಣಿಯಬೇಕಾಯಿತು.ಬಂದ್ ಮಾಡಲಿಲ್ಲ!: ಜಿಲ್ಲಾಡಳಿತ ಪ್ರತಿಭಟನೆ ನಡೆಸಲು ಅನುಮತಿ ನೀಡಲಿಲ್ಲವಾದ್ದರಿಂದ, ಪೊಲೀಸ್ ಇಲಾಖೆ ನಗರದಲ್ಲಿ ಬಂದ್ ಜಾರಿಗೆ ಬಾರದಂತೆ ಎಚ್ಚರವಹಿಸಿತು. ಮುಂಜಾನೆಯಿಂದಲೇ ಪೊಲೀಸರು ಗಾಂಧಿ ವೃತ್ತದಲ್ಲಿ ಮಳಿಗೆಗಳನ್ನು ತೆರೆದು ವ್ಯಾಪಾರ ಆರಂಭಿಸುವಂತೆ ಸೂಚಿಸುತ್ತಿದ್ದರು. ಆಟೊ, ಬಸ್ ಮತ್ತು ಇತರ ವಾಹನ ಸಂಚಾರ ಎಂದಿನಂತೆ ಸಹಜವಾಗಿತ್ತು. ಬಸ್ ನಿಲ್ದಾಣ, ಬ್ಯಾಂಕ್, ಶಾಲಾ ಕಾಲೇಜು, ಹೊಟೇಲ್ ಸೇರಿದಂತೆ ಜನನಿಬಿಡವಾದ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.’ಸ್ಥಳೀಯರಿಗೆ ಟಿಕೆಟ್ ನೀಡದಿರುವುದು ಪಕ್ಷದ ವಿಚಾರ ಮತ್ತು ಟಿಕೆಟ್ ತರುವಲ್ಲಿ ಸೋತಿರುವುದು ಅವರವರ ಸಾಮರ್ಥ್ಯಕ್ಕೆ ಬಿಟ್ಟದ್ದು. ಇದು ಪಕ್ಷದ ಆಂತರಿಕ ವಿಚಾರ. ಇವರ ವಿಚಾರಕ್ಕೆ ನಾವೇಕೆ ಬಂದ್ ಮಾಡಬೇಕು’ ಎಂದು ನಾಗರಿಕರು ಮಾತನಾಡಿಕೊಳ್ಳುತ್ತಿದ್ದರು. 

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು, ಮಾನವಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಹರೀಶ್,  ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಆರ್.ಮಂಜುನಾಥ್, ಹಿರಿಯೂರು, ಮರಡಿಹಳ್ಳಿ, ಹಾಯ್ಕಲ್, ಬೆಳಗಟ್ಟ, ಸೇರಿದಂತೆ ಹಲವೆಡೆಯಿಂದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಡಾ.ಬಿ.ತಿಪ್ಪೇಸ್ವಾಮಿ ಅವರ ನೂರಾರು ಅಭಿಮಾನಿಗಳು ಕಾಂಗ್ರೆಸ್ ಕಚೇರಿಯ ಮುಂಭಾಗ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮನವೊಲಿಸಲು ಯತ್ನಿಸಿ ಕೊನೆಗೆ ಧರಣಿನಿರತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.