ಸೋಮವಾರ, ಮೇ 17, 2021
22 °C

ಕಾಡಾನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ವಿರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದ ಬಳಿಯಲ್ಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಗುರುವಾರದಿಂದ ಹರ ಸಾಹಸ ನಡೆಸಿದೆ.ಕಾಡಾನೆಗಳ ಹಿಂಡಿನಲ್ಲಿ ಒಂದು ಸಣ್ಣ ಮರಿ, ಒಂದು ಮರಿಯಾನೆ ಹಾಗೂ ಇತರ 7 ಭಾರಿ ಗಾತ್ರದ ಆನೆಗಳಿದ್ದು, 10ದಿನಗಳಿಂದಲೂ ಈ ಹಿಂಡು ಮಲೆತಿರಿಕೆ ಬೆಟ್ಟ, ಕಾವಾಡಿ, ಬಿಳುಗುಂದ ಗ್ರಾಮಗಳಲ್ಲಿ ಸಂಚರಿಸಿ ಚೆಂಬೆಬೆಳ್ಳೂರು ಬಳಿಯ ಭೂತನ ಕಾಡಿನ ಬಳಿಯ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದೆ.ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಾತ್ರಿಯ ತನಕ ಕಾರ್ಯಾಚರಣೆಯಲ್ಲಿ ತೊಡಗಿ ಹಿಂತಿರುಗಿದ ನಂತರ ಶುಕ್ರವಾರ ಬೆಳಿಗ್ಗೆ ಗದ್ದೆಯಲ್ಲಿ ಪ್ರತ್ಯಕ್ಷಗೊಂಡಿವೆ. ತಮಟೆ, ಪಟಾಕಿ ಹಾಗೂ ಆಕಾಶಕ್ಕೆ ಬೆದರು ಗುಂಡು ಹಾರಿಸಿ ಆನೆಗಳನ್ನು ಓಡಿಸಲಾಗುತ್ತಿದೆ. ಅರಣ್ಯ ವಲಯಾಧಿಕಾರಿ ಗೋಪಾಲ್ ನೇತೃತ್ವದಲ್ಲಿ ಕೋವಿ ಹಿಡಿದು 8ಮಂದಿ, 32 ಇತರ ಸಿಬ್ಬಂದಿ  ಹಾಗೂ 20 ಮಂದಿ ಆನೆಯಲ್ಲಿ ಪಳಗಿರುವ ತಜ್ಞ ಕುರುಬರು, ಜೊತೆಗೆ ಗ್ರಾಮಸ್ಥರ ಪರವಾಗಿಯೂ ಅನೇಕ ಮಂದಿ ಕೂಲಿ ಆಳುಗಳು ಕಾರ್ಯ ನಿರತರಾಗಿದ್ದಾರೆ.ಕಾಡಾನೆ ಓಡಿಸುವ ಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನ ವಿರಾಜಪೇಟೆಯ ವಿಭಾಗ ಅರಣ್ಯ ಅಧಿಕಾರಿ ಕಾಂತರಾಜು ಭೇಟಿ ನೀಡಿ ಆನೆ ಅಟ್ಟಿಸಲು ಗ್ರಾಮಸ್ಥರ ಸಹಕಾರವನ್ನು ಕೋರಿದರು. 7ದಿನಗಳ ಅವಧಿಯಲ್ಲಿ ಚೆಂಬೆಬೆಳ್ಳೂರು, ಕುಕ್ಲೂರು, ಮಲೆತಿರಿಕೆ ಬೆಟ್ಟ ಸೇರಿದಂತೆ ಕಾಫಿ ತೋಟದ ದಾಳಿಯಿಂದ ಈವರೆಗೆ ರೂ 10ಲಕ್ಷ ನಷ್ಟ ಸಂಭವಿಸಿದೆ ಎಂದು ಕಾಫಿ ಬೆಳೆಗಾರರಾದ ಪ್ರಭು ಮೊಣ್ಣಯ್ಯ, ತಾಲ್ಲೂಕು ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಕುಶಾಲಪ್ಪ, ಕೆ.ಟಿ.ಪ್ರಭು ಮತ್ತಿತರರು ದೂರಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂತರಾಜು ಆನೆ ದಾಳಿಯಿಂದ ನಷ್ಟಗೊಂಡವರಿಗೆ ಕಾನೂನು ಬದ್ಧವಾಗಿ ಪರಿಹಾರ ನೀಡಲಾಗುವುದು. ಈಗಾಗಲೇ ಇದಕ್ಕಾಗಿ ಸರ್ಕಾರ ರೂ 16ಲಕ್ಷ ಮಂಜೂರು ಮಾಡಿದೆ. ಎಲ್ಲ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಪರಿಹಾರ ವಿತರಿಸಲಾಗುವುದು ಎಂದರು.

ಅರಣ್ಯ ವಲಯಾಧಿಕಾರಿ ಗೋಪಾಲ್, ಗ್ರಾಮಗಳಿಂದ ಕಾಡಾನೆಗಳು ಹಿಂತಿರುಗುವ ತನಕ ಕಾರ್ಯಚರಣೆ ಮುಂದುವರೆಯಲಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.