ಗುರುವಾರ , ಜೂನ್ 17, 2021
27 °C

ಕಾಡಿನ ಬೆಂಕಿ ಮತ್ಸರದ ಕಿಚ್ಚಿಗೆ ಬಲಿ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ನಾಗರಹೊಳೆ, ಬಂಡೀಪುರ, ಬ್ರಹ್ಮಗಿರಿ, ಮಂಡಗದ್ದೆ, ಶೆಟ್ಟಿಹಳ್ಳಿ ಸೇರಿದಂತೆ ರಾಜ್ಯದ ಬಹುತೇಕ ಪ್ರಮುಖ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಧಾಮಗಳಲ್ಲಿ ಈ ವರ್ಷ ಬೆಂಕಿ ಬಿದ್ದಿದೆ.

 

ಬೇಸಿಗೆ ಆರಂಭದ ಒಂದು ವಾರದಲ್ಲಿಯೇ ಸಾವಿರಾರು ಎಕರೆ ಕಾಡು ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಮರಗಳು ಸುಟ್ಟು ಕರಕಲಾಗಿವೆ.  ಅತ್ಯಂತ ಅಮೂಲ್ಯ ಜೀವ ವೈವಿಧ್ಯಗಳು ನಾಶವಾಗಿವೆ.642 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೃದಯ ಭಾಗದಲ್ಲಿಯೇ ಬೆಂಕಿ ಭುಗಿಲೆದ್ದಿದ್ದು ಅರಣ್ಯ ಇಲಾಖೆಯ ಜೊತೆಗೆ ಇಡೀ ರಾಜ್ಯದ ಜನರನ್ನೂ ಆತಂಕಕ್ಕೀಡು ಮಾಡಿದೆ.

 

ಸುಮಾರು ಒಂದು ವಾರಗಳ ಕಾಲ ರುದ್ರ ನರ್ತನ ನಡೆಸಿದ ಬೆಂಕಿ ಈಗ ಆರುವ ಹಂತಕ್ಕೆ ಬಂದಿದ್ದರೂ ಪರಿಸರದ ಬಗ್ಗೆ ಕೊಂಚ ಕಾಳಜಿಯನ್ನು ಹೊಂದಿರುವ ಜನರ ಮನದಲ್ಲಿ ಬಿದ್ದ ಬೆಂಕಿ ಇನ್ನೂ ಆರುವ ಲಕ್ಷಣ ಕಾಣುತ್ತಿಲ್ಲ.ನಾಗರಹೊಳೆ ಪ್ರದೇಶದಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ಭಸ್ಮವಾದ ನಂತರ ಈಗ ಅದಕ್ಕೆ ಕಾರಣವನ್ನು ಹುಡುಕುವ ಕೆಲಸ ನಡೆಯುತ್ತಿದೆ. ಇದು `ಗಡ್ಡಕ್ಕೆ ಬೆಂಕಿ ಬಿದ್ದ ನಂತರ ಬಾವಿ ತೆರೆಯುವ ಕೆಲಸ~ದಂತಾಗಿದೆ. ಆರೋಪ ಪ್ರತ್ಯಾರೋಪಗಳೂ ನಡೆಯುತ್ತಿವೆ. ಅರಣ್ಯ ಇಲಾಖೆಯವರು ಅರಣ್ಯವಾಸಿಗಳಾದ ಆದಿವಾಸಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದರೆ ಆದಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿಯತ್ತ ಕೈ ತೋರಿಸುತ್ತಿದ್ದಾರೆ.ರಾಜ್ಯದ ಎಲ್ಲೆಡೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಹೆಚ್ಚಿನ ಅನಾಹುತವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ಈ ಬಾರಿ ಹೆಚ್ಚಿನ ನಷ್ಟಕ್ಕೆ ಒಳಗಾಗಿದೆ.

 

990 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವಾಗಲಿ, 642 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನಾಗಲೀ ರಕ್ಷಿಸಲು ಬೇಕಾದ ಅಗತ್ಯ ಸಿಬ್ಬಂದಿ ಇಲ್ಲವೇ ಇಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು.ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ 104 ಗಾರ್ಡ್‌ಗಳು ಇರಬೇಕು. ಈಗ ಇರುವವರು 74 ಮಂದಿ ಮಾತ್ರ. ಇವರಲ್ಲಿಯೂ ಮೂರನೇ ಒಂದರಷ್ಟು ಮಂದಿ ತರಬೇತಿಗೆ ಹೋಗಿದ್ದಾರೆ. 33 ಮಂದಿ ಫಾರೆಸ್ಟರ್ ಇರಬೇಕು. ಆದರೆ ಇರುವವರು 24 ಮಾತ್ರ. 35 ವಾಚರ್ಸ್‌ ಇರಬೇಕು. ಇರುವವರು 14 ಮಂದಿ. ನಾಗರಹೊಳೆ ಹೃದಯ ಭಾಗದಲ್ಲಿ 5 ಮಂದಿ ಫಾರೆಸ್ಟರ್ ಇರಬೇಕು.ಇರುವವರು ಕೇವಲ ಒಬ್ಬ ಫಾರೆಸ್ಟರ್. 24 ಮಂದಿ ಗಾರ್ಡ್‌ಗಳ ಪೈಕಿ 8 ಮಂದಿ ಗಾರ್ಡ್‌ಗಳು ಇದ್ದಾರೆ. 4 ಮಂದಿ ವಾಚರ್‌ಗಳ ಪೈಕಿ ಒಬ್ಬ ಇದ್ದಾನೆ. ವೀರನಹೊಸಹಳ್ಳಿ, ಕಲ್ಲಹಳ್ಳಿ, ಆನೆ ಚೌಕೂರು ವಿಭಾಗಕ್ಕೆ ಒಬ್ಬನೇ ಒಬ್ಬ ಆರ್‌ಎಫ್‌ಒ ಇಲ್ಲ. ಸಿಬ್ಬಂದಿಯೇ ಇಲ್ಲದೆ ಅರಣ್ಯ ರಕ್ಷಣೆ ಮಾಡುವವರು ಯಾರು?ಕಾಡುಗಳಲ್ಲಿ ಅಗ್ನಿ ಆಕಸ್ಮಿಕವನ್ನು ಪತ್ತೆ ಮಾಡಲು ಮತ್ತು ಮರಗಳ್ಳತನ ಪತ್ತೆಗಾಗಿ ಉಪಗ್ರಹ ಆಧಾರಿತ ವ್ಯವಸ್ಥೆ ಇದೆ. ಗಸ್ತು ತಿರುಗಲು ವ್ಯವಸ್ಥೆ ಇದೆ. ಅತ್ಯಾಧುನಿಕ ಸೌಲಭ್ಯಗಳನ್ನು ನೀಡುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಆದರೂ ಸಾವಿರಾರು ಎಕರೆ ಅರಣ್ಯ ನಾಶವಾಗಿದೆ.ಪ್ರತಿ 40 ವರ್ಷಗಳಿಗೆ ಒಮ್ಮೆ ಬಿದಿರು ಹೂವು ಬಿಡುತ್ತದೆ. ಕಳೆದ ವರ್ಷ ಮತ್ತು ಅದಕ್ಕೂ ಹಿಂದಿನ ವರ್ಷ ರಾಜ್ಯದಲ್ಲಿ ಬಿದಿರು ಹೂವು ಬಿಟ್ಟಿತ್ತು. ಒಮ್ಮೆ ಹೂವು ಬಿಟ್ಟು ಬಿದಿರಿನ ಬತ್ತವಾದ ನಂತರ ಆ ಬಿದಿರು ನಾಶವಾಗುತ್ತದೆ. ಇದು ಸಾಮಾನ್ಯ ವಿದ್ಯಮಾನ.ಹೀಗೆ ಕಾಡಿನ ತುಂಬಾ ಒಣಗಿದ ಬಿದಿರು ತುಂಬಿಕೊಂಡಿರುವಾಗ ಕಾಡಿಗೆ ಬೆಂಕಿ ಬೀಳುವುದೂ ಸಾಮಾನ್ಯ. ಇಂತಹ ಪ್ರಾಥಮಿಕ ವಿಚಾರ ನಮ್ಮ ಅರಣ್ಯ ಇಲಾಖೆಗೆ ಗೊತ್ತಾಗಲಿಲ್ಲವೇ?`ಎಲ್ಲ ಗೊತ್ತು, ಅದಕ್ಕೇ ನಾವು ತಯಾರಿ ನಡೆಸಿದ್ದೆವು. ಬಂಡೀಪುರದಲ್ಲಿ 2,200 ಕಿ.ಮೀ. ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ 1,543 ಕಿ.ಮೀ. ಪ್ರದೇಶದಲ್ಲಿ ಫೈರ್ ಲೈನ್ ಮಾಡಿದ್ದೇವೆ~ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಅರಣ್ಯದ ಅಂಚಿನಲ್ಲಿರುವ ಜನರ ಅಭಿಪ್ರಾಯ ಇದಕ್ಕೆ ಭಿನ್ನವಾಗಿದೆ.ಡಿಸೆಂಬರ್ ಅಂತ್ಯದೊಳಕ್ಕೇ ಫೈರ್ ಲೈನ್ ಮಾಡಬೇಕಾಗಿತ್ತು. ಅರಣ್ಯದ ಅಂಚಿನಲ್ಲಿ ರಸ್ತೆಯ ಪಕ್ಕ ಆ ಕಡೆ ಮತ್ತು ಈ ಕಡೆ ಫೈರ್ ಲೈನ್ ಮಾಡಲಾಗಿದೆ. `ಆದರೆ ಈ ಬಾರಿ ಬೆಂಕಿ ಬಿದ್ದಿರುವುದು ಅರಣ್ಯದ ಮಧ್ಯಭಾಗಕ್ಕೆ. ಅಲ್ಲಿ ಹೋಗಿ ಬೆಂಕಿ ಹಾಕಿದವರು ಯಾರು? ರಕ್ಷಿತ ಅರಣ್ಯವಾಗಿದ್ದರಿಂದ ಅಲ್ಲಿಗೆ ಯಾರ ಪ್ರವೇಶವೂ ಇಲ್ಲ.

 

ಆದರೆ ಬೆಂಕಿ ಬಿದ್ದಿದ್ದು ಹೇಗೆ? ಇದಕ್ಕೆಲ್ಲಾ ಕಾರಣ ಏನು ಹೇಳಿ~ ಎಂದು ಜನ ಮರು ಪ್ರಶ್ನೆ ಹಾಕುತ್ತಾರೆ. ಅರಣ್ಯದ ಬೆಂಕಿಯ ಭೀಕರತೆಯನ್ನು ಗಮನಿಸಿದರೆ ಈ ಬಾರಿ ಅರಣ್ಯ ಇಲಾಖೆ ಬೆಂಕಿ ನಿಯಂತ್ರಣಕ್ಕೆ ಸೂಕ್ತ ತಯಾರಿ ನಡೆಸಿರಲಿಲ್ಲ ಎನ್ನುವುದು ಸ್ಪಷ್ಟ.ಹೂವು ಬಂದು ಒಣಗಿ ನಿಂತಿದ್ದ ಬಿದಿರು ಎಚ್ಚರಿಕೆಯ ಗಂಟೆಯನ್ನು ನೀಡಿದ್ದರೂ ಆ ಪ್ರದೇಶದಲ್ಲಿ ಫೈರ್ ಲೈನ್ ಮಾಡಿರಲಿಲ್ಲ. ಅಲ್ಲದೆ ಈ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ಮಳೆಯಾಗಿಲ್ಲ. ಬೆಂಕಿ ಬಿದ್ದ ಸಮಯದಲ್ಲಿಯೇ ಗಾಳಿ ಕೂಡ ವಿಪರೀತವಾಗಿತ್ತು.ಈ ಬಗ್ಗೆ ಎಚ್ಚರಿಕೆಯನ್ನೂ ವಹಿಸಲಿಲ್ಲ. ನಾಗರಹೊಳೆ ಅರಣ್ಯದಲ್ಲಿ ಐದರಲ್ಲಿ ಒಂದು ಭಾಗ ತೇಗದ ಮರಗಳಿವೆ. ಇನ್ನು ಕೆಲವು ಭಾಗದಲ್ಲಿ ಅಕೇಶಿಯಾ, ನೀಲಗಿರಿ ಮರಗಳಿವೆ. ಜೊತೆಗೆ ಲಾಂಟಾನಾ ವಿಪರೀತವಾಗಿ ಬೆಳೆದು ನಿಂತಿದೆ. ತೇಗದ ಮರಗಳ ಎಲೆಗಳು ಎಲ್ಲ ಕಡೆ ವ್ಯಾಪಿಸಿವೆ.ಒಣಗಿ ನಿಂತ ಬಿದಿರು ಒಂದಕ್ಕೊಂದು ತಿಕ್ಕಿದಾಗಲೂ ಬೆಂಕಿ ಉತ್ಪತ್ತಿಯಾಗುತ್ತದೆ. ಇವೆಲ್ಲ ಗೊತ್ತಿದ್ದರೂ ಬೆಂಕಿ ರಕ್ಷಣಾ ತಂಡವನ್ನು ಯಾಕೆ ರಚಿಸಲಿಲ್ಲ? ಕಾಡಿನ ಅಂಚಿನಲ್ಲಿರುವ ಗ್ರಾಮದ ಜನರಿಗೆ ಕಾಡಿನ ಬೆಂಕಿಯ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಯಾಕೆ ಏರ್ಪಡಿಸಲಿಲ್ಲ ಎನ್ನುವುದು ಗ್ರಾಮಸ್ಥರ ಪ್ರಶ್ನೆ.ಒಂದು ಹೆಕ್ಟೇರ್ ಅರಣ್ಯವನ್ನು ಸಂರಕ್ಷಿಸಲು ಕೇಂದ್ರ ಸರ್ಕಾರ 4 ಸಾವಿರ ರೂಪಾಯಿ ಹಣ ನೀಡುತ್ತದೆ. ಜೊತೆಗೆ ಫೈರ್ ಲೈನ್‌ಗೆ ಅನುದಾನ ಬರುತ್ತದೆ. ಕಾಡಿನ ಅಂಚಿನಲ್ಲಿಯೇ ಇರುವ ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಲೂ ಅನುದಾನವಿದೆ.ಈ ಎಲ್ಲ ಹಣ ಎಲ್ಲಿ ಹೋಯಿತು? ಫೈರ್ ಲೈನ್ ಮಾಡುವುದಕ್ಕಿಂತ ಮಾರ್ಚ್ 31ರೊಳಕ್ಕೆ ಮುಗಿಯಬೇಕಾದ ರಸ್ತೆ ನಿರ್ವಹಣೆ, ಕೆರೆಗಳ ಪುನಶ್ಚೇತನ, ಹೊಸ ಕೆರೆಗಳ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣದ ಕಡೆಗೇ ಅರಣ್ಯ ಅಧಿಕಾರಿಗಳು ಗಮನ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗಿದೆ.ಕಾಡಿಗೆ ಬೆಂಕಿ ಬೀಳಲು ಹಲವಾರು ಕಾರಣಗಳು ಇವೆ. ಬಿದಿರು ಮರಗಳು ಒಂದಕ್ಕೊಂದು ತಿಕ್ಕಿದಾಗ ಉಂಟಾಗುವ ಬೆಂಕಿ, ಕಾಡು ಪ್ರಾಣಿಗಳ ನಡಿಗೆಯಿಂದ ಬೆಣಚು ಕಲ್ಲುಗಳೂ ತಿಕ್ಕಿಯೂ ಬೆಂಕಿ ಕಾಣಿಸಿಕೊಳ್ಳುತ್ತದೆ. ಪ್ರವಾಸಿಗರು ಅಥವಾ ಕಾಡಂಚಿನ ಗ್ರಾಮಸ್ಥರು ಆಕಸ್ಮಿಕವಾಗಿ ಎಸೆದ ಬೆಂಕಿ ಕೂಡ ಕಾಡಿನ ಒಡಲಿನಲ್ಲಿ ಬೆಂಕಿಯ ಕೆನ್ನಾಲಗೆಯನ್ನು ಸೃಷ್ಟಿಸುತ್ತವೆ.

 

ಮೇಲಧಿಕಾರಿಗಳ ಮೇಲಿನ ವೈಷಮ್ಯ, ಅತೃಪ್ತಿ, ಇಬ್ಬರು ಅಧಿಕಾರಿಗಳ ನಡುವಿನ ವೃತ್ತಿಪರ ವೈಮನಸ್ಯ, ಆದಿವಾಸಿಗಳು ಹಾಗೂ ಗ್ರಾಮಸ್ಥರ ಕುತಂತ್ರ, ಗುತ್ತಿಗೆದಾರರ ಅತೃಪ್ತಿ ಕೂಡ ಇದಕ್ಕೆ ಕಾರಣವಾಗಬಹುದು.

 

ಈಗ ಸಾವಿರಾರು ಎಕರೆ ಅರಣ್ಯ ನಾಶವಾದ ನಂತರವಾದರೂ ಇದರ ಬಗ್ಗೆ ಸೂಕ್ತ ತನಿಖೆ ನಡೆಯಲೇ ಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಕೂಡ ಬೆಂಕಿಗೆ ಕಾರಣವಾಗಬಲ್ಲದು ಎಂದೂ ಆರೋಪಿಸಲಾಗುತ್ತದೆ. ಈ ಬಗ್ಗೆಯೂ ತನಿಖೆ ನಡೆಯಬೇಕು.ಆದಿವಾಸಿಗಳು ಕಾಡಿಗೆ ಬೆಂಕಿ ಹಾಕುವುದು ಅಸಂಭವ. ಆದರೆ ಪ್ರತಿ ಬಾರಿ ಕಾಡಿಗೆ ಬೆಂಕಿ ಬಿದ್ದಾಗಲೂ ಅರಣ್ಯ ವಾಸಿಗಳ ಮೇಲೆಯೇ ಗೂಬೆ ಕೂರಿಸಲಾಗುತ್ತದೆ. ಇದಕ್ಕೆ ಉತ್ತರ ನೀಡುವ ಆದಿವಾಸಿ ಮುಖಂಡರು ಮತ್ತು ಅವರ ಪರವಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು `ಅರಣ್ಯಕ್ಕೆ ನಾವು ಬೆಂಕಿ ಹಾಕಿದರೆ ನಮ್ಮ ಮನೆಗೇ ನಾವು ಬೆಂಕಿ ಹಾಕಿಕೊಂಡ ಹಾಗೆ. ನಮ್ಮ ಮನೆಗಳು ಇರುವುದು ಕಾಡಿನಲ್ಲಿ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಮನೆ ಇರುವುದು ನಾಡಿನಲ್ಲಿ. ಬೆಂಕಿ ಯಾರು ಹಾಕುತ್ತಾರೆ ನೀವೇ ಊಹಿಸಿ~ ಎನ್ನುತ್ತಾರೆ.`ಅರಣ್ಯ ಇಲಾಖೆಯ ಮೇಲೆ ಆದಿವಾಸಿಗಳಿಗೆ ಎಷ್ಟು ಸಿಟ್ಟಿದೆ ಎಂದರೆ ಅವರು ಏನು ಬೇಕಾದರೂ ಮಾಡಿಯಾರು. ಗಂಧದ ಕಡ್ಡಿ, ಬೆಂಕಿಕಡ್ಡಿಯನ್ನು ಕಟ್ಟಿ ಆನೆ ಲದ್ದಿಯಲ್ಲಿ ಇಟ್ಟು ಅವರು ಬೆಂಕಿ ಇಡುತ್ತಾರೆ. ಕಾಡಿನಿಂದ ಅವರನ್ನು ಒಕ್ಕಲೆಬ್ಬಿಸುತ್ತಿರುವುದು ಹಾಗೂ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿದ್ದರೂ ಅವರಿಗೆ ಸೂಕ್ತ ಅವಕಾಶ ಕಲ್ಪಿಸದೇ ಇರುವುದು ಇದಕ್ಕೆಲ್ಲಾ ಕಾರಣ~ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

 

ಈ ನಡುವೆ, `ಆದಿವಾಸಿಗಳೇ ಕಾಡಿಗೆ ಬೆಂಕಿ ಇಟ್ಟಿದ್ದಾರೆ~ ಎಂದು ಅರಣ್ಯ ಇಲಾಖೆ ಆರೋಪಿಸಿದರೂ ಬೆಂಕಿಯನ್ನು ಆರಿಸುವುದಕ್ಕೆ ಮತ್ತು ಬೆಂಕಿ ಬೀಳದೇ ಇರುವಂತೆ ಎಚ್ಚರಿಕೆ ವಹಿಸಲು ನೇಮಿಸಕೊಂಡ ಬಹುತೇಕ ಮಂದಿ ಆದಿವಾಸಿಗಳೇ ಆಗಿರುತ್ತಾರೆ.ಕಾಡಿಗೆ ಯಾರು ಬೆಂಕಿ ಹಾಕಿದ್ದಾರೆ ಎನ್ನುವ ಜಗಳ ಏನಾದರೂ ಇರಲಿ. ಶೇ 5ರಷ್ಟು ಕಾಡು ಬೆಂಕಿಗೆ ಆಹುತಿಯಾಗಿರುವ ಈ ಸಂದರ್ಭದಲ್ಲಿಯಾದರೂ ನಿಜವಾದ ಕಾರಣಗಳನ್ನು ಹುಡುಕಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾಡಿನ ಬೆಂಕಿ ಕೇವಲ ಕಾಡನ್ನು ಮಾತ್ರ ಸುಡುವುದಿಲ್ಲ. ಜೊತೆಗೆ ನಮ್ಮನ್ನೂ ಸುಡುತ್ತದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.