ಕಾಡುಗೊಲ್ಲರ ಭವನಕ್ಕೆ ₨ 1 ಕೋಟಿ

ಚಿತ್ರದುರ್ಗ: ನಗರದಲ್ಲಿ ಕಾಡುಗೊಲ್ಲ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ₨ 1 ಕೋಟಿ ಅನುದಾನದ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.
ನಗರದ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲಾ ಸಭಾಂಗಣದಲ್ಲಿ ಭಾನುವಾರ ರಾಜ್ಯ ಕಾಡುಗೊಲ್ಲರ ಹಿತ ರಕ್ಷಣಾ ಸಮಿತಿ ವತಿಯಿಂದ
ಹಮ್ಮಿಕೊಂಡಿದ್ದ ಸಮಿತಿಯ ನೂತನ ಕಚೇರಿ ಉದ್ಘಾಟನೆ, ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ, ಜಿಲ್ಲಾ ಸಮಿತಿ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ: ಈ ಸಮುದಾಯದ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಈ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಸರ್ಕಾರ ಬದ್ಧವಿದೆ. ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆದಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.
ಸ್ವಚ್ಛತೆಗಾಗಿ ಅನುದಾನ ಮೀಸಲು: ಗೊಲ್ಲರಹಟ್ಟಿಗಳಲ್ಲಿ ಶೌಚಾಲಯ, ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ಅಲ್ಲಿನ ಸ್ವಚ್ಛತೆಗಾಗಿ ಈ ಬಾರಿಯ ಬಜೆಟ್ನಲ್ಲಿ ₨ 50 ಕೋಟಿ ಅನುದಾನ ಮೀಸಲಿಡಲಾಗಿದೆ. ಅಲ್ಲದೆ, ಈ ಸಮುದಾಯದಲ್ಲಿ ಕುರಿ ಸಾಕುವವರು ಕೂಡ ಇದ್ದು, ಆಕಸ್ಮಿಕ, ಅಪಘಾತ, ಪ್ರಕೃತಿ ವಿಕೋಪದಿಂದ ಕುರಿಗಳು ಮೃತಪಟ್ಟಲ್ಲಿ ಒಂದು ಕುರಿಗೆ ₨ 5 ಸಾವಿರ ಪರಿಹಾರ ನೀಡಲಾಗುವುದು ಎಂದರು.
ಅಭಿವೃದ್ಧಿಗೆ ಕಟ್ಟಡ ಅನಿವಾರ್ಯ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ನಂತರ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಒಂದು ಸುಂದರ ಕಟ್ಟಡ ನಿರ್ಮಾಣದ ಅಗತ್ಯವಿದೆ. ಅದರಿಂದ ಆದಾಯ ಸಿಗುವುದರ ಜತೆಗೆ ಅಭಿವೃದ್ಧಿ ಹೊಂದಬೇಕು. ಅದಕ್ಕಾಗಿ ನಿವೇಶನದ ಅನಿವಾರ್ಯತೆ ಇದ್ದು, ಸರ್ಕಾರಿ ಬೆಲೆಯಲ್ಲಿ ಜಾಗ ಖರೀದಿಸಲು ಸರ್ಕಾರದ ಮಟ್ಟದಲ್ಲಿ ಕೆಲಸವಾಗಬೇಕು. ಆದ್ದರಿಂದ ಸಚಿವರ ಸಹಾಯದಿಂದ ನಿವೇಶನ ಪಡೆಯಲು ಮುಂದಾಗಿ ಎಂದು ಸಲಹೆ ನೀಡಿದರು.
ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ಯಾದವ್ ಪ್ರಾಸ್ತವಿಕವಾಗಿ ಮಾತನಾಡಿ, ಸಮಿತಿ ಹುಟ್ಟುಕೊಂಡಿದ್ದು, ಮೀಸಲಾತಿಗಲ್ಲ. ರಾಜ್ಯದಲ್ಲಿ ಪ್ರಸ್ತುತ ಕಾಡುಗೊಲ್ಲರ ಸ್ಥಿತಿ ಗತಿ ಹೇಗಿದೆ ಎಂಬುದನ್ನು ಕೂಲಂಕಷ ವಾಗಿ ತಿಳಿದು ಅದಕ್ಕೆ ಪರಿಹಾರ ಕೊಂಡು ಕೊಳ್ಳಲು ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಸಮುದಾಯದವರನ್ನು ಬೆಳೆಸಲಿಕ್ಕಾಗಿ ಅಸ್ತಿತ್ವಕ್ಕೆ ಬಂದಿದೆ ಎಂದರು.
ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಕೇಂದ್ರದ ಮೇಲೆ ಒತ್ತಡ ಹಾಕುವ ಮೂಲಕ ಅಂಗೀಕಾರವಾಗುವಂತೆ ಮಾಡಬೇಕು ಎಂದು ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ರಾಜ್ಯ ಘಟಕದ ಗೌರವಾಧ್ಯಕ್ಷ ಬಿ.ಶಿವಲಿಂಗಪ್ಪ, ನಿವೃತ್ತ ಐಎಫ್ಎಸ್ ಅಧಿಕಾರಿ ಬಿ.ಚಿಕ್ಕಪ್ಪಯ್ಯ, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಮಾಜಿ ಶಾಸಕ ಎ.ವಿ.ಉಮಾಪತಿ, ಡಿ.ಬಿ.ಚಿತ್ತಪ್ಪ, ಜಿ.ಪಂ.ಸದಸ್ಯರಾದ ಇಂದಿರಾ ಕಿರಣ್, ಸಿ.ಮಹಾಲಿಂಗಪ್ಪ, ಜಿಲ್ಲಾಸ್ಪತ್ರೆ ಶುಶ್ರೂಷಕ ಮಲ್ಲಣ್ಣ, ನಗರಸಭೆ ಸದಸ್ಯ ಗರಡಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.
ಮೋಹನ್ಕುಮಾರ್ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು. ದೊಡ್ಡಣ್ಣ ಕಾರ್ಯಕ್ರಮ ನಿರೂಪಿಸಿದರು.
***
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ ಎಂದು ಬಿಜೆಪಿ ಸುಳ್ಳುಹೇಳುತ್ತಿದೆ.
–ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.