ಸೋಮವಾರ, ಮೇ 25, 2020
27 °C

ಕಾದಿರುವಳು ನಿಶಿತಾ...

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ಪಟಪಟ ಮಾತನಾಡುವ ನಿಶಿತಾ ಗೌಡ ಧಾರಾವಾಹಿ ಪ್ರೇಕ್ಷಕರಿಗೆ ಅಪರಿಚಿತರೇನೂ ಅಲ್ಲ. ‘ಸೀತಾ’, ‘ರಂಗೋಲಿ’, ‘ಗೆಜ್ಜೆಪೂಜೆ’, ‘ಗೋಕುಲಾಷ್ಟಮಿ’ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಿತಾ ನೋಡಿದರೆ ಜೋರು; ಮಾತಿಗೆ ಕುಳಿತರೆ ನಗು ಶುರು.ಆರಂಭದಲ್ಲಿ ನಟನೆಯನ್ನು ಗಂಭೀರವಾಗಿ ಪರಿಗಣಿಸದ ಅವರು ನಂತರ ಸಿಕ್ಕಿದ ಅವಕಾಶಗಳು ಮತ್ತು ಅನುಭವಗಳಿಂದ ಕಲಿಯುತ್ತಾ ಹೋದ ಬಗೆಯನ್ನು ವಿವರಿಸುತ್ತಾರೆ. ಚಿಕ್ಕಮಗಳೂರಿನವರಾದ ನಿಶಿತಾ ಕಾನೂನು ಪದವಿ ಪಡೆಯಲು ನಿರ್ಧರಿಸಿದರು. ನಂತರ ಅವರ ಬದುಕು ನಟಿಯಾಗಿ ಕವಲೊಡೆಯಿತು.ತಮ್ಮ ಊರಿನ ಸ್ಥಳೀಯ ಚಾನೆಲ್‌ನಲ್ಲಿ ವಾರ್ತಾವಾಚಕಿಯಾಗಿ ಕ್ಯಾಮೆರಾ ಎದುರಿಸಿದ ಅವರು, ನಂತರ ನಟಿಯಾಗಲು ಸಿಕ್ಕಿದ ಅವಕಾಶಗಳನ್ನು ನಿರಾಕರಿಸಲಿಲ್ಲ.ದೂರದರ್ಶನದಲ್ಲಿ ಪ್ರಸಾರವಾದ ‘ಬಣ್ಣ’ ಅವರ ಮೊದಲ ಧಾರಾವಾಹಿ. ನಂತರ ‘ಚಿತ್ರಲೇಖಾ’, ‘ಕಾವ್ಯಾಂಜಲಿ’, ‘ಜೋಗುಳ’, ‘ಗುಪ್ತಗಾಮಿನಿ’, ‘ಯಾವ ಜನ್ಮದ ಮೈತ್ರಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ಅವರು ‘ಹೆಣ್ಣೇ ನೀ ಜಾಣೆ’ ಕಾರ್ಯಕ್ರಮ ಮತ್ತು ಅಡುಗೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದರು. ಇದರ ಜೊತೆಜೊತೆಗೆ ‘ಗಜ’, ‘ಹೀಗೂ ಉಂಟೆ’, ‘ಜನುಮದ ಗೆಳತಿ’, ‘ಹೌಸ್‌ಫುಲ್’, ‘ಅನು’ ಸಿನಿಮಾಗಳಲ್ಲೂ ನಟಿಸಿದರು. ‘ಸಕಾರಾತ್ಮಕವಾದ ಯೋಚನೆ ಇದ್ದರೆ ಕಿರುತೆರೆ, ಬೆಳ್ಳಿತೆರೆ ಎರಡೂ ಕಡೆ ಸಂತೋಷವಾಗಿರಬಹುದು’ ಎನ್ನುವ ನಿಶಿತಾಗೆ ಸಿನಿಮಾಗಳಲ್ಲಿ ಔಟ್‌ಡೋರ್ ಮತ್ತು ರಾತ್ರಿವೇಳೆ ಶೂಟಿಂಗ್ ಇರುವ ಕಾರಣ ಧಾರಾವಾಹಿಗಳೇ ಹೆಚ್ಚು ಕಂಫರ್ಟಬಲ್ ಎನಿಸಿವೆ.

ಆದರೆ ಗ್ಲಾಮರಸ್ ಪಾತ್ರಗಳ ಬಗ್ಗೆ ತಕರಾರಿನ ಮಾತನಾಡದ ಅವರು, ‘ಎಕ್ಸ್‌ಪೋಸ್ ಒಲ್ಲೆ’ ಎನ್ನುತ್ತಾರೆ.ನೋಡಲು ಬೋಲ್ಡ್ ಹುಡುಗಿ ಎನಿಸಿದರೂ ನಿಶಿತಾ, ‘ಪೊರ್ಕಿ’ ಚಿತ್ರದ ಖಳನಾಯಕಿ ಪಾತ್ರವನ್ನು ತುಂಡುಡುಗೆ ತೊಡಬೇಕೆಂಬ ಕಾರಣಕ್ಕೆ ನಿರಾಕರಿಸಿದರಂತೆ.‘ನಾವು ಮಾಡುವ ಪಾತ್ರಗಳಿಂದ ವೈಯಕ್ತಿಕ ಬದುಕಿಗೆ ತೊಂದರೆಯಾಗಬಾರದು’ ಎನ್ನುವ ನಿಶಿತಾಗೆ ಖಳನಾಯಕಿ ಪಾತ್ರಗಳೇ ಜಾಸ್ತಿಯಾದವು ಎನ್ನಿಸಿದೆ.ಅಳೋದು ನಗೋದು ಯಾರು ಬೇಕಾದ್ರೂ ಮಾಡ್ತಾರೆ. ಖಳನಾಯಕಿ ಪಾತ್ರ ಮಾಡುವುದು ಕಷ್ಟ ಎಂದು ಎಲ್ಲರೂ ಸಮಾಧಾನ ಪಡಿಸಿದ್ದರೂ, ಖಳನಾಯಕಿಯ ಪಾತ್ರದ ವಿವಿಧ ಆಯಾಮಗಳು ಖುಷಿ ನೀಡುತ್ತಿದ್ದರೂ, ಪ್ರಧಾನ ಪಾತ್ರ ಮಾಡುವಾಸೆ ಮಾತ್ರ ಅವರಿಂದ ದೂರವಾಗಿಲ್ಲ.‘ಸೀತೆ’ ಧಾರಾವಾಹಿಯ ಅವರ ಕೈಕೇಯಿ ಪಾತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಖುಷಿಯಾಗಿರುವ ನಿಶಿತಾ, ಇದುವರೆಗೂ ಹಳ್ಳಿಹುಡುಗಿ, ಸ್ಲಂ ಹುಡುಗಿ, ಹುಚ್ಚಿ, ಗ್ಲಾಮರಸ್, ಖಳನಾಯಕಿ ಶೇಡ್ ಇರುವ ಪಾತ್ರಗಳನ್ನು ನಿರ್ವಹಿಸಿದ್ದಾರೆ.‘ನನಗೆ ಯಾವುದೇ ತರಬೇತಿ ಹಿನ್ನೆಲೆ ಇಲ್ಲ. ಆದರೂ ಒಂಚೂರು ಹೇಳಿಕೊಟ್ಟರೆ ಸಾಕು, ಕಷ್ಟಪಟ್ಟು ಮಾಡ್ತೀನಿ. ಯಾರಾದರೂ ನನ್ನ ತಪ್ಪನ್ನು ಎತ್ತಿ ತೋರಿಸಿದರೆ ಅದನ್ನು ಸರಿ ಮಾಡಿಕೊಳ್ಳುವ ತನಕ ಬಿಡುವುದಿಲ್ಲ. 3-4 ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸುತ್ತಿರುವುದರಿಂದ ಒಂದೇ ರೀತಿ ಅನಿಸಬಾರದು ಎಂದುಕೊಂಡು ತುಂಬಾ ಹೋಂವರ್ಕ್ ಮಾಡುತ್ತೇನೆ’ ಎನ್ನುವ ಅವರಿಗೆ ರಾಜ್‌ಕುಮಾರ್, ಜಯಂತಿ ನಟನೆ ಇಷ್ಟ.ಆರಂಭದಲ್ಲಿ ತಮ್ಮ ಮಾವ ಚಂದ್ರಶೇಖರ್ ಅವರಿಂದ ಸಿಕ್ಕ ಬೆಂಬಲವನ್ನು ಸ್ಮರಿಸುವ ನಿಶಿತಾಗೆ ನಟನೆಯ ಜೊತೆಗೆ ನಿರ್ದೇಶನ, ಸ್ಕ್ರಿಪ್ಟ್ ಕೆಲಸ ಇಷ್ಟವಂತೆ. ಅಧ್ಯಾತ್ಮ ಮತ್ತು ಮಾನಸಿಕ ವಿಷಯಗಳ ಪುಸ್ತಕಗಳನ್ನು ಓದುವ ಅವರು ಆ ಬಗ್ಗೆ ಕತೆ, ಲೇಖನಗಳನ್ನು ಬರೆದಿದ್ದಾರಂತೆ.ಹವ್ಯಾಸ ಎಂದು ಆರಂಭಿಸಿದ ನಟನೆ ಇಂದು ವೃತ್ತಿಯಾಗಿ ಆದಾಯದೊಂದಿಗೆ ತೃಪ್ತಿಯನ್ನೂ ನೀಡಿದೆ ಎನ್ನುವ ನಿಶಿತಾಗೆ ರಂಗಭೂಮಿಯ ನಂಟು ಬೆಳೆಸಿಕೊಳ್ಳಬೇಕೆಂಬಾಸೆಯೂ ಇದೆ.ಆರಂಭದಲ್ಲಿಯೇ ಮಾಡೆಲಿಂಗ್ ಕ್ಷೇತ್ರವನ್ನೂ ಸುತ್ತಿ ಬಂದ ನಿಶಿತಾ, 2004ರಲ್ಲಿ ‘ಮಿಸ್ ಬೆಂಗಳೂರು’ ಆಗಿದ್ದವರು. ಸಾಕಷ್ಟು ಫ್ಯಾಶನ್ ಶೋಗಳಲ್ಲಿ ಬಳುಕಿದ್ದ ಅವರಿಗೆ ನಂತರ ಆ ಕ್ಷೇತ್ರ ಇಷ್ಟವಾಗಲಿಲ್ಲವಂತೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.