ಸೋಮವಾರ, ಜನವರಿ 20, 2020
21 °C

ಕಾಫಿಗೆ ಪರ್ಯಾಯ ಬೆಳೆ ಕೈಗೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕಾಫಿ ಬೆಳೆಗಾರರು ಕೇವಲ ಒಂದೇ ಬೆಳೆಯನ್ನು ನಂಬಿಕೊಂಡು ಕೂರದೇ ಆರ್ಥಿಕ ಚೈತನ್ಯ ತುಂಬುವ ಇತರ ಕೃಷಿಗಳನ್ನು ಕೈಗೊಳ್ಳಬೇಕು ಎಂದು  ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಎನ್‌. ಬೋಸ್‌ ಮದಣ್ಣ ಹೇಳಿದರು.ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 4 ದಿನಗಳ ಕಾಲ ನಡೆಯಲಿರುವ ಕೃಷಿ ತಂತ್ರಜ್ಞಾನ ಸಪ್ತಾಹ –2013 ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂದು 80 ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ದೇಶ 6ನೇ ಸ್ಥಾನದಲ್ಲಿದೆ.  ಬ್ರೆಜಿಲ್‌, ವಿಯೆಟ್ನಾಂ ಮುಂತಾದ ರಾಷ್ಟ್ರಗಳಲ್ಲಿ ಕಾಫಿ ಬೆಳೆ ಹೋದರೆ ಪರ್ಯಾಯವಾಗಿ ಅನಾನಸ್‌, ಕಿತ್ತಳೆ, ಮತ್ತಿತರ ಪರ್ಯಾಯ ಬೆಳೆ ಬೆಳೆಯುತ್ತಾರೆ.  ಇಲ್ಲಿನ ಕೃಷಿಕರು ಕೂಡ ದನಕರು, ಆಡುಕುರಿ, ಮೀನು, ಹಂದಿ ಮುಂತಾದ ಪ್ರಾಣಿಗಳನ್ನು ಸಾಕುವ ಮೂಲಕ ಪರ್ಯಾಯ ಆರ್ಥಿಕ  ಮಾರ್ಗವನ್ನು ಕಂಡುಕೊಳ್ಳಬೇಕು ಎಂದರು.ಕೊಡಗಿನಲ್ಲಿ ಸುಮಾರು 30 ವರ್ಷಗಳಿಂದ  ಕರಿಮೆಣಸು ಬೆಳೆಯಲಾಗುತ್ತಿದೆ. ಅದೂ ಈ ಬಾರಿ ಫಸಲು ಬಿಡದೆ ಕೈಕೊಟ್ಟಿದೆ. ಕೃಷಿಕರು ಕೇವಲ ಕರಿಮೆಣಸು ಹಾಗೂ ಕಾಫಿಯನ್ನು ನಂಬದೇ ಇತರ ತರಕಾರಿ, ಬಾಳೆ ಮುಂತಾದ ಕೃಷಿ ಕೈಗೊಳ್ಳಲು ಮುಂದಾಗಬೇಕು ಎಂದರು. ತಾವು ಒಂದು ಎಕರೆಯಲ್ಲಿ ತರಕಾರಿ ಬೆಳೆದು 5 ಎಕರೆಯಲ್ಲಿ ಕಾಫಿಯಿಂದ ಸಿಗುವ ಲಾಭವನ್ನು ಕಂಡು ಕೊಂಡದ್ದಾಗಿ ಹೇಳಿದರು. 

ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ ಮಾತನಾಡಿ  ರೈತರು ವೈಜ್ಞಾನಿಕ ಸಲಹೆ ಪಡೆದು ಮುಂದುವರಿಯಬೇಕು ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಭಾರತ ತೋಟಗಾರಿಕಾ ಸಂಸ್ಥೆ ಹಣ್ಣುಗಳ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಆರ್. ಚಿತಿರೈಚಲುವನ್ ಮಾತನಾಡಿ ಸುಮಾರು 20 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಹತ್ತು ಸಾವಿರ ಹೆಕ್ಟೇರ್‌ನಲ್ಲಿ ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು.

2013ರಲ್ಲಿ ಜಿಲ್ಲೆಯಲ್ಲಿ ಬರಿ 3,500 ಹೆಕ್ಟೇರ್‌ನಷ್ಟು ಜಾಗದಲ್ಲಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಪಶ್ಚಿಮಘಟ್ಟದ ಪ್ರದೇಶಕ್ಕೆ ಒಳಪಡುವ ಈ ಜಿಲ್ಲೆಯಲ್ಲಿ ಎಲ್ಲ ಬೆಳೆಗಳಿಗೂ ಸೂಕ್ತ ವಾತಾವರಣವಿದೆ. ರೈತರು ತಮ್ಮ ಪಾರಂಪರಿಕ ಕಾಫಿ ಹಾಗೂ ಕರಿಮೆಣಸು ಜೊತೆ ಇತರ ಹಣ್ಣುಗಳ ಗಿಡಗಳನ್ನು ಬೆಳೆಯಬಹುದು ಎಂದು ತಿಳಿಸಿದರು.ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಕೊಡಗು ಜಿಲ್ಲೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ತೋಟಗಾರಿಕಾ ಇಲಾಖೆ, ಆತ್ಮ ಯೋಜನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ತಾಲ್ಲೂಕು ಇವರ ಸಹಯೋಗದಲ್ಲಿ ಈ ಸಪ್ತಾಹ ನಡೆಯುತ್ತಿದೆ. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಪ್ರತಿಕ್ರಿಯಿಸಿ (+)