ಸೋಮವಾರ, ಏಪ್ರಿಲ್ 12, 2021
26 °C

ಕಾಯಿದೆ ಬಗ್ಗೆ ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮಲ್ಲಿ  ಕಾಯಿದೆಗಳೇನೋ ಇವೆ. ಆದರೆ ಅವುಗಳ ಬಗೆಗೆ ಎಷ್ಟು ಜನಕ್ಕೆ ತಿಳಿದಿದೆ? ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಹೇಗೆ ಎಂಬುದರ ಕುರಿತು ಯಾರೂ ಯೋಚಿಸುವುದಿಲ್ಲ. ಅದರಲ್ಲಿ ಕೃತಿಸ್ವಾಮ್ಯ (ಕಾಪಿರೈಟ್‌) ಕಾಯಿದೆಯೂ ಒಂದು. ಆ ಕಾಯಿದೆಯ ಬಗ್ಗೆ ಆಸಕ್ತಿಗಿಂತ  ಅನಾದರಣೆಯೇ ಹೆಚ್ಚು.ಈ ಕಾಯಿದೆ ಕನ್ನಡದಲ್ಲಿ ಓದಲು ಕೂಡ ಲಭ್ಯವಿಲ್ಲ.  ಈ ಕಾಯಿದೆ ಕುರಿತು ಲೇಖಕ, ಪ್ರಕಾಶಕರ ಸಂಬಂಧಕ್ಕೆ ಮಾತ್ರವಲ್ಲ, ಪುಸ್ತಕೋದ್ಯಮದ ಬೆಳವಣಿಗೆಯ ದೃಷ್ಟಿಯಿಂದಲೂ  ತಿಳಿದುಕೊಳ್ಳುವುದು ಬಹಳ ಮುಖ್ಯ.ನಮ್ಮಲ್ಲಿ ಈ ಕಾಯಿದೆಯನ್ನು ಯೋಜನಾಬದ್ಧವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಈ ಕಾಯಿದೆಯ ಪ್ರಕಾರ ಒಬ್ಬ ವ್ಯಕ್ತಿ ಮರಣಹೊಂದಿದ 50 ವರ್ಷಗಳ ತರುವಾಯ ಆ ಕೃತಿ ಮೇಲೆ ಹಕ್ಕು ಇರುವುದಿಲ್ಲ (ರವೀಂದ್ರನಾಥ ಟ್ಯಾಗೋರ್‌ ಅವರ ಕೃತಿಗಳ ಸಲುವಾಗಿ ಆ ಅವಧಿಯನ್ನು ಈಗ 60 ವರ್ಷಗಳಿಗೆ ಹೆಚ್ಚಿಸಲಾಗಿದೆ). ಹಾಗೆಯೇ ಲೇಖಕನಲ್ಲದವನಿಗೆ ಹಕ್ಕನ್ನು ಬಿಟ್ಟುಕೊಟ್ಟ ಸಂದರ್ಭದಲ್ಲಿ ಪುಸ್ತಕ ಪ್ರಕಟವಾದ 50 ವರ್ಷಗಳ ನಂತರ ಆ ಕೃತಿಯ ಮೇಲಿನ ಅಧಿಕಾರ ಹೊರಟು ಹೋಗುತ್ತದೆ. ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ ಮೊದಲು ಲೇಖಕ ಮತ್ತು ಪ್ರಕಾಶಕರ ನಡುವೆ ಲಿಖಿತ ಒಪ್ಪಂದ ಆಗಿರಬೇಕು.ಒಂದು ವೇಳೆ ಲೇಖಕನಾಗಲೀ, ಪ್ರಕಾಶಕನಾಗಲೀ ಅನ್ಯಾಯಕ್ಕೊಳಗಾದಲ್ಲಿ ನೇರವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ನ್ಯಾಯ ದೊರಕಿಸಿಕೊಳ್ಳಬಹುದು. ನಮ್ಮಲ್ಲಿ ಒಪ್ಪಂದ ಮಾಡಿಕೊಳ್ಳದೆ ಹಲವು ಬಗೆಗಳಲ್ಲಿ ನೊಂದ ಲೇಖಕರೂ, ಪ್ರಕಾಶಕರೂ ಇದ್ದಾರೆ.ರಾಜ್ಯದ  ಪ್ರಕಾಶಕರ ಸಂಘ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಅನೇಕ ಬಗೆಯ ಲೇಖಕ - ಪ್ರಕಾಶಕರ ಒಪ್ಪಂದ ಪತ್ರಗಳನ್ನು ಅಧ್ಯಯನ ಮಾಡಿ ಮಾದರಿ ಒಪ್ಪಂದ ಪತ್ರವನ್ನು ಸಿದ್ಧಪಡಿಸಿದೆ. ಈ ಪತ್ರವನ್ನು ತಮ್ಮ ಅನುಕೂಲತೆಗಳಿಗನುಸಾರವಾಗಿ ಲೇಖಕರು ಪ್ರಕಾಶಕರು ಬಳಸಿಕೊಳ್ಳಲು ಸಾಧ್ಯವಿದೆ.ಕರ್ನಾಟಕದಲ್ಲಿ ಮೂವತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ `ಕರ್ನಾಟಕ ಪ್ರಕಾಶಕರ ಸಂಘ~ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಬಂದಿದೆ. ಕವಿ ಗೋಪಾಲಕೃಷ್ಣ ಅಡಿಗರು ಹಿಂದೆ ಈ ಸಂಘಟನೆಯಲ್ಲಿದ್ದರು ಎಂಬುದು ಇಂಥ ಸಂಘಟನೆಯನ್ನು ಲೇಖಕರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದರ ಸೂಚನೆಯಷ್ಟೆ.

 

ಶಿಕ್ಷಣ ತಜ್ಞರಾದ ಎ. ಮಂಚಯ್ಯ, ಎಚ್‌.ಆರ್‌. ದಾಸೇಗೌಡ, ಎಸ್‌. ವಿ. ಶ್ರೀನಿವಾಸರಾವ್‌ ಮುಂತಾದವರ ನೇತೃತ್ವ ಸಂಘಕ್ಕೆ ಸಿಕ್ಕಿತ್ತು. ಈಗ  `ಮನೋಹರ ಗ್ರಂಥಮಾಲೆ~ಯ ರಮಾಕಾಂತ ಜೋಶಿ ಅಧ್ಯಕ್ಷರು. ಹತ್ತು ವರ್ಷಗಳ ಹಿಂದೆ `ಕರ್ನಾಟಕ ಪ್ರಕಾಶಕರ ಸಂಘ~ವು ದೆಹಲಿಯ ಪ್ರಕಾಶಕರ ಒಕ್ಕೂಟದ ಸಹಾಯದಿಂದ ಕೃತಿಸ್ವಾಮ್ಯ ಕಾಯಿದೆ ಬಗೆಗೆ ಎರಡು ದಿನಗಳ ಕಮ್ಮಟವನ್ನು ಏರ್ಪಡಿಸಿತ್ತು. ಆದಾದ ನಂತರ ಈಚೆಗೆ ಬೆಂಗಳೂರಿನಲ್ಲಿ ಇನ್ನೊಂದು ಶಿಬಿರವನ್ನು ಏರ್ಪಡಿಸಲಾಯಿತು. ಆದರೂ ಕೃತಿಸ್ವಾಮ್ಯ ಕಾನೂನು ಬಗ್ಗೆ ರಾಜ್ಯದ ವಿವಿಧ ಕಡೆ ಲೇಖಕರು ಮತ್ತು ಪ್ರಕಾಶಕರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.