ಸೋಮವಾರ, ಜೂನ್ 21, 2021
29 °C

ಕಾರು ಕೊಳ್ಳಲು ಇದು ಸೂಕ್ತ ಕಾಲ

– ಇ.ಎಸ್‌. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

ಸತತ ಸೋಲಿನಿಂದ ಸೋತು ಸುಣ್ಣವಾಗಿದ್ದ ಭಾರತದ ವಾಹನ ಪ್ರಪಂಚಕ್ಕೆ ಮಧ್ಯಂತರ ಬಜೆಟ್‌ನಿಂದ ಕೊಂಚ ಮಟ್ಟಿನ ನಿರಾಳ ಸಿಕ್ಕಂತಾಗಿದೆ. ಸಣ್ಣ ಕಾರುಗಳು, ದ್ವಿಚಕ್ರ ವಾಹನ ಹಾಗೂ ವಾಣಿಜ್ಯ ಬಳಕೆಯ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಶೇ 12ರಿಂದ ಶೇ 8ಕ್ಕೆ, ಸಲೂನ್‌ ಕಾರುಗಳ ಮೇಲಿನ ಸುಂಕವನ್ನು ಶೇ 24ರಿಂದ ಶೇ 20ಕ್ಕೆ ಇಳಿಸಲಾಗಿದೆ. ಅದರಲ್ಲೂ ಭಾರತೀಯರ ಇತ್ತೀಚಿನ ಅತಿ ಬೇಡಿಕೆಯ ಎಸ್‌ಯುವಿ ಮೇಲೆ ಶೇ 6ರಷ್ಟು ಸುಂಕ (ಈ ಮೊದಲು ಶೇ 30 ಇತ್ತು) ಕಡಿತಗೊಳಿಸಿರುವುದರಿಂದ ವಾಹನಗಳ ಮಾರಾಟ ಭರಾಟೆ ಜೋರಾಗಿದೆ. ಸರ್ಕಾರದ ಈ ಕ್ರಮದಿಂದ ಉತ್ತೇಜನಗೊಂಡಿರುವ ವಾಹನ ತಯಾರಕರು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಗೆ ತಡ ಮಾಡಲಿಲ್ಲ. 

ಮಾರುತಿ ಅಗ್ಗ

ಭಾರತದ ಅಗ್ರಪಂಕ್ತಿಯ ಕಾರು ಮಾರಾಟ ಕಂಪೆನಿ ಮಾರುತಿ ತನ್ನ ಕಾರುಗಳ ಬೆಲೆಗಳನ್ನು ಇಳಿಸಿದೆ. ಆಲ್ಟೊ 800 ಬೆಲೆ ರೂ. 7ರಿಂದ 10 ಸಾವಿರದಷ್ಟು ಇಳಿಸಿದೆ. ಆಲ್ಟೋ ಕೆ10 ಬೆಲೆ ಈಗ ರೂ. 9 ಸಾವಿರದಷ್ಟು ಕಡಿಮೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸೆಲೆರಿಯೋ ಕಾರು ಕೂಡಾ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಹೀಗಾಗಿ ಈ ಕಾರಿನ ವಿಎಕ್ಸ್‌ಐ ಮಾದರಿಯ ಬೆಲೆ ರೂ. 4.95 ಲಕ್ಷ (ದೆಹಲಿಯಲ್ಲಿ ಎಕ್ಸ್‌ ಶೋರೂಂ ಬೆಲೆ).ಉಳಿದಂತೆ ಮಾರುತಿ ಎರ್ಟಿಗಾ ರೂ. 20 ರಿಂದ 30 ಸಾವಿರದಷ್ಟು ಅಗ್ಗವಾಗಿದೆ. ರಿಟ್ಜ್‌ ಪೆಟ್ರೋಲ್‌ ಕಾರಿನ ಬೆಲೆ ರೂ. 16ರಿಂದ 20 ಸಾವಿರದಷ್ಟು ಅಗ್ಗವಾಗಿದೆ. ಇನ್ನು ಡೀಸೆಲ್‌ ರಿಟ್ಜ್‌ನ ಬೆಲೆ ರೂ. 20ರಿಂದ 25 ಸಾವಿರದಷ್ಟು ಬೆಲೆ ಕಡಿಮೆಯಾಗಿದೆ. ವ್ಯಾಗನ್‌ ಆರ್‌ ಕಾರಿನ ಬೆಲೆ ರೂ. 9ರಿಂದ 13 ಸಾವಿರದಷ್ಟು ಕಡಿಮೆಯಾಗಿದೆ. ಮಾರುತಿ ಕಂಪೆನಿಯ ಅತಿ ಬೇಡಿಕೆಯ ಸಣ್ಣ ಕಾರು ಸ್ವಿಫ್ಟ್‌ ಕೂಡಾ ಈಗ ಅಗ್ಗದ ಬೆಲೆಗೆ ಲಭ್ಯ. ಸ್ವಿಫ್ಟ್‌ ಝಡ್‌ಡಿಐ ಈಗ ರೂ. 27 ಸಾವಿದರದಷ್ಟು ಕಡಿಮೆಗೆ ಲಭ್ಯ. ಡಿಸೈರ್‌ ಕಾರಿನ ಬೆಲೆ ರೂ. 19ರಿಂದ 30 ಸಾವಿರದಷ್ಟು ಕಡಿತ ಮಾಡಲಾಗಿದೆ.

ಹ್ಯುಂಡೈ ಕಡಿತ

ಬೆಲೆ ಇಳಿಕೆಯಲ್ಲಿ ಹ್ಯುಂಡೈ ಕಂಪೆನಿ ಕೂಡಾ ಹಿಂದೆ ಬಿದ್ದಿಲ್ಲ. ತನ್ನ ನೂತನ ಸಂಗ್ರಹಗಳಾದ ಗ್ರ್ಯಾಂಡ್‌ ಐ10 ಪೆಟ್ರೋಲ್‌ ಎಂಜಿನ್‌ ಶ್ರೇಣಿಯಲ್ಲಿ ಹಲವು ಮಾದರಿಗಳ ಬೆಲೆಯನ್ನು ರೂ. 7ರಿಂದ 13 ಸಾವಿರದವರೆಗೆ ಕಡಿತ ಮಾಡಿದೆ. ಡೀಸೆಲ್‌ ಗ್ರ್ಯಾಂಡ್‌ ಐ10 ಬೆಲೆ ಕೂಡಾ ರೂ. 16 ಸಾವಿರದಷ್ಟು ಕಡಿಮೆಯಾಗಿದೆ. ಐ20 ಕಾರು ರೂ. 19ರಿಂದ 23 ಸಾವಿರದಷ್ಟು ಕಡಿತಗೊಂಡಿರುವುದು ಅದರ ಅಭಿಮಾನಿಗಳ ಬಳಗದಲ್ಲಿ ಹರ್ಷ ಮೂಡಿಸಿದೆ. ಎಲೆಂಟ್ರಾ ಬೆಲೆ ರೂ. 10ರಿಂದ 18 ಸಾವಿರದಷ್ಟು ಕಡಿಮೆಯಾಗಿದೆ. ಸೊನಾಟಾ ಕಾರು ಈಗ ರೂ. 28 ರಿಂದ 35 ಸಾವಿರದಷ್ಟು ಅಗ್ಗವಾಗಿದೆ.

ಟೊಯೊಟಾ ಕೊಡುಗೆ

ಇಂಥದ್ದೊಂದು ಅವಕಾಶವನ್ನು ಲಾಭವಾಗಿ ಪರಿವರ್ತಿಸುವಲ್ಲಿ ಟೊಯೊಟಾ ಕೂಡಾ ಹಿಂದೆ ಬಿದ್ದಿಲ್ಲ. ಆಲ್ಟಿಸ್‌ ಕಾರುಗಳ ಬೆಲೆಯನ್ನು ರೂ. 12ರಿಂದ 14 ಸಾವಿರದಷ್ಟು ಇಳಿಸಿದೆ. ಇನ್ನು ವಿಲಾಸಿ ಕ್ಯಾಮ್ರಿಯ ಬೆಲೆಯನ್ನು ರೂ. 58 ಸಾವಿರದಷ್ಟು ಕಡಿಮೆ ಮಾಡಿದೆ. ಅತಿ ಬೇಡಿಕೆಯ ಇನ್ನೊವಾ ಕಾರಿನ ಬೆಲೆ ಇಳಿಸಲು ಟೊಯೊಟಾ ಹಿಂದೆಮುಂದೆ ನೋಡಲಿಲ್ಲ. ಇನ್ನೊವಾ ಈಗ ರೂ. 40 ಸಾವಿರದಷ್ಟು ಅಗ್ಗ. ರಾಜಕಾರಿಣಿಗಳು, ರಿಯಲ್ ಎಸ್ಟೇಟ್‌ ಉದ್ಯಮಿಗಳ ಅಚ್ಚುಮೆಚ್ಚಿನ ಫಾರ್ಚೂನರ್‌ ಬೆಲೆ ರೂ. 1 ಲಕ್ಷದಷ್ಟು ಕಡಿಮೆಯಾಗಿದೆ. ಆದರೆ 4X4 ಎಂಟಿ ಬೆಲೆಯನ್ನು ಮಾತ್ರ ರೂ. 18 ಸಾವಿರದಷ್ಟು ಮಾತ್ರ ಕಡಿಮೆ ಮಾಡಲಾಗಿದೆ.

ಹೋಂಡಾ

ಡೀಸೆಲ್‌ ಎಂಜಿನ್‌ ಕಾರುಗಳನ್ನು ಬಿಡುಗಡೆ ಮಾಡಿದ ಬಳಿಕ ಕಾರು ಮಾರಾಟದಲ್ಲಿ ಪ್ರಗತಿ ಕಂಡ ಹೋಂಡಾ ಕಂಪೆನಿ ಕೂಡಾ ತನ್ನ ಕಾರುಗಳ ಬೆಲೆಯನ್ನು ಇಳಿಸಿದೆ. ಹೋಂಡಾ ಬ್ರಿಯೊ ಬೆಲೆ ರೂ. 20 ಸಾವಿರದಷ್ಟು ಕಡಿಮೆಯಾಗಿದ್ದರೆ, ಇದೇ ಮಾದರಿಯ ಆಟೊಮ್ಯಾಟಿಕ್‌ ಕಾರಿನ ಬೆಲೆಯನ್ನು ರೂ. 39 ಸಾವಿರದಷ್ಟು ಕಡಿತಗೊಳಿಸಲಾಗಿದೆ.ಹೋಂಡಾ ಸಿಟಿ ಪೆಟ್ರೋಲ್‌ನ ಬೆಲೆ ರೂ. 25 ಸಾವಿರ ಹಾಗೂ ಡೀಸೆಲ್‌ ಸಿಟಿಯ ಬೆಲೆಯನ್ನು ರೂ. 30 ಸಾವಿರದಷ್ಟು ಕಡಿತಗೊಳಸಲಾಗಿದೆ. ಉಳಿದಂತೆ ಹೋಂಡಾ ಸಿಆರ್‌ವಿ ಈಗ ರೂ. 34 ಸಾವಿರದಷ್ಟು ಅಗ್ಗ. ಅತಿ ಬೇಡಿಕೆಯ ಅಮೇಜ್‌ ಕಾರಿನ ಪೆಟ್ರೋಲ್‌ ಮಾದರಿಯ ಬೆಲೆ ರೂ. 20 ಸಾವಿರ ಹಾಗೂ ಡೀಸೆಲ್ ಮಾದರಿಯ ಅಮೇಜ್‌ ಬೆಲೆ ರೂ. 52 ಸಾವಿರದಷ್ಟು ಕಡಿತಗೊಳಿಸಿರುವುದರಿಂದ ಈಗ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳಬಹುದು ಎಂದು ಅಂದಾಜು ಮಾಡಲಾಗಿದೆ.ಮರ್ಸಿಡೀಸ್‌ ಬೆಂಜ್‌

ಸಣ್ಣ ಕಾರುಗಳನ್ನು ಪರಿಚಯಿಸಿದ ಬಳಿಕ ವಿಲಾಸಿ ಕಾರುಗಳ ಶ್ರೇಣಿಯಲ್ಲಿ ಮೊದಲ ಸ್ಥಾನಕ್ಕೇರಿದ ಮರ್ಸಿಡೀಸ್‌ ಬೆಂಜ್‌ ತನ್ನ ಕಾರುಗಳ ಬೆಲೆಯನ್ನು ಇಳಿಸಿದೆ. ಎ ಕ್ಲಾಸ್‌ ಕಾರಿನ ಮೇಲೆ ರೂ. 7ರಿಂದ 8 ಸಾವಿರದಷ್ಟು ಹಾಗೂ ಇ–ಕ್ಲಾಸ್‌ನ ಮೇಲೆ ರೂ. 1 ಲಕ್ಷದಷ್ಟು ಬೆಲೆ ಕಡಿತ ಮಾಡಿದೆ. ಜಿಎಲ್‌ 350 ಕಾರಿನ ಬೆಲೆಯನ್ನು ರೂ. 2.51ಲಕ್ಷ ಹಾಗೂ ಎಂಎಲ್‌ ಕ್ಲಾಸ್‌ನ ಬೆಲೆಯನ್ನು ರೂ. 1.36 ಲಕ್ಷದಷ್ಟು ಕಡಿಮೆ ಮಾಡಿದೆ.

ಫೋರ್ಡ್‌

ಎಕೋಸ್ಪೋರ್ಟ್ಸ್‌ ಮೂಲಕ ಕಾಂಪಾಕ್ಟ್‌ ಎಸ್‌ಯುವಿ ಎಂಬ ಹೊಸ ವಿಭಾಗವನ್ನು ಪರಿಚಯಿಸಿದ ಫೋರ್ಡ್‌ ತನ್ನ ಕಾರುಗಳ ಬೆಲೆ ಇಳಿಸಿಕೊಂಡಿದೆ. ತನ್ನ ಶಕ್ತಿಶಾಲಿ ಎಂಡವರ್‌ ಎಸ್‌ಯುವಿ ಬೆಲೆಯಲ್ಲಿ ರೂ. 1 ಲಕ್ಷದಷ್ಟು ಕಡಿಮೆ ಬೆಲೆಗೆ ನೀಡಲು ಅದು ನಿರ್ಧರಿಸಿದೆ.ಫೋರ್ಡ್‌ ಫಿಯೆಸ್ಟಾ ಕ್ಲಾಸಿಕ್‌ ಬೆಲೆಯನ್ನು ರೂ. 15ರಿಂದ 24 ಸಾವಿರದಷ್ಟು ಕಡಿಮೆ ಬೆಲೆಗೆ ನೀಡಲು ಅದು ಮುಂದಾಗಿದೆ. ಬಹು ಬೇಡಿಕೆಯ ಎಕೊಸ್ಪೋರ್ಟ್ಸ್‌ ಬೆಲೆ ಈಗ ರೂ. 20 ಸಾವಿರದಷ್ಟು ಅಗ್ಗ. ಫಿಗೋ ಪೆಟ್ರೋಲ್‌ ಮಾದರಿಯ ಕಾರಿನ ಬೆಲೆಯನ್ನು ರೂ. 11ರಿಂದ 16 ಸಾವಿರದಷ್ಟು ಹಾಗೂ ಡೀಸೆಲ್‌ ಮಾದರಿಯ ಕಾರನ್ನು ರೂ. 21 ಸಾವಿರದಷ್ಟು ಕಡಿಮೆ ಮಾಡಿದೆ.ಫೋಕ್ಸ್‌ವ್ಯಾಗನ್‌

ತನ್ನ ಸಣ್ಣ ಕಾರು ಪೊಲೊ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಿರುವ ಫೋಕ್ಸ್‌ವ್ಯಾಗನ್‌, ಅದರ ಬೆಲೆಯನ್ನು ರೂ. 8ರಿಂದ 21 ಸಾವಿರದಷ್ಟು ಕಡಿಮೆ ಮಾಡಿದೆ. ಅದರಂತೆಯೇ ಇದೇ ಮಾದರಿಯ ಡೀಸೆಲ್‌ ಬೆಲೆಯನ್ನು ರೂ. 22ರಿಂದ 25 ಸಾವಿರದಷ್ಟು ಕಡಿಮೆ ಮಾಡಿ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಬಯಸಿದೆ.ಸೆಡಾನ್‌ ಮಾದರಿಯ ವೆಂಟೋ ಪೆಟ್ರೋಲ್‌ ಮಾದರಿಯ ಕಾರಿನ ಬೆಲೆಯನ್ನು ರೂ. 61 ಸಾವಿರದಷ್ಟು ಕಡಿಮೆ ಮಾಡಿದೆ. ಇದೇ ಕಾರಿನ ಹೈಲೈನ್ ಮಾದರಿಯ ಬೆಲೆಯನ್ನು ರೂ. 68 ಸಾವಿರದಷ್ಟು ಕಡಿತಗೊಳಿಸಲಾಗಿದೆ. ಜೆಟ್ಟಾ ಕಾರಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾದರಿಯ ಬೆಲೆ ರೂ. 50 ಸಾವಿರದಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಬರಲಿರುವ ಹೊಸ ಸರ್ಕಾರದ ಮಂಡಿಸುವ ಬಜೆಟ್‌ವರೆಗೂ ಕಾರು ಖರೀದಿಸುವವರಿಗೆ ಬೆಲೆ ಕಡಿತದ ಅವಕಾಶ ಹಾಗೂ ಕಾರು ಮಾರಾಟಗಾರರಿಗೆ ದುಪ್ಪಟ್ಟು ಮಾರಾಟದ ಅವಕಾಶವನ್ನು ಮಧ್ಯಂತರ ಬಜೆಟ್‌ ನೀಡಿದ್ದರಿಂದ ಈಗ ಕಾರು ಮಾರುಕಟ್ಟೆಯಲ್ಲಿ ಎಡಬಿಡದ ಚಟುವಟಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.