ಸೋಮವಾರ, ಮೇ 10, 2021
21 °C

ಕಾರ್ನಾಡರು ಕಂಡ ನಮ್ಮ ಬೆಂಗಳೂರು

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ಕಾರ್ನಾಡರ ಕನ್ನಡದ ಧಾಟಿಯೇ ಬೇರೆ. ಆಕ್ಸ್‌ಫರ್ಡ್‌ನ ವಿದ್ಯಾರ್ಥಿಗಳು ಲಾರೆನ್ಸ್ ಡುರೆಲ್‌ನ ಪುಸ್ತಕವನ್ನು `ನಾಗೊಂದಿಗೆ~ಯಲ್ಲಿ ತಪ್ಪದೆ ಇಡುತ್ತಿದ್ದರು ಎಂಬಂಥ ಬಳಕೆಗಳು ಬಂದಾಗ, `ನಾಗೊಂದಿಗೆ~ ಪದವನ್ನು ಮತ್ತು `ಲಾರೆನ್ಸ್ ಡುರೆಲ್~ ಹೆಸರನ್ನು ಎಂದೂ ಕೇಳಿರದ ಬೆಂಗಳೂರಿನ ಕಿವಿ ಆಶ್ಚರ್ಯದಿಂದ ನಿಮಿರುವುದು ಖಚಿತ.ಮಧ್ಯಮವರ್ಗದ ಲೆಕ್ಕಾಚಾರದ ಜೊತೆಗೆ ಬೌದ್ಧಿಕ ಕುತೂಹಲ, ಸಾಹಸಗಳನ್ನು ಮೈಗೂಡಿಸಿಕೊಂಡ ಕಾರ್ನಾಡರ ಕತೆ ವೈವಿಧ್ಯ ಮತ್ತು ಸ್ವಾರಸ್ಯದಿಂದ ಕೂಡಿದೆ. ವಿದೇಶಕ್ಕೆ ಹೋಗುವ ಆಸೆಯಿಂದ ಗಣಿತಾಭ್ಯಾಸ ಮಾಡುವ ಹದಿನಾರು ವರ್ಷದ ಕಾರ್ನಾಡರು ಆಕ್ಸ್‌ಫರ್ಡ್ ತಲುಪಿದ ಮೇಲೂ ವಿದ್ಯಾರ್ಥಿ ಸಂಘದ ನಾಯಕನಾಗುವುದು ಆ ಹುದ್ದೆ ಏರಿದವರಿಗೆ ಪ್ರತ್ಯೇಕ ಬಾತ್ ರೂಂ ಸಿಗುತ್ತದೆ ಎಂಬ ಕಾರಣಕ್ಕಾಗಿ!ಗಿರೀಶ್ ಕಾರ್ನಾಡರ ಆತ್ಮಕಥೆ `ಆಡಾಡತ ಆಯುಷ್ಯ~ ಓದಿ ಮುಗಿಸಿದೆ. ಬೆಂಗಳೂರಿಗೆ ಅದರಲ್ಲಿ ಅಂಥ ದೊಡ್ಡ ಪಾತ್ರವೇನಿಲ್ಲ. ಶಿರಸಿ, ಧಾರವಾಡ, ಮುಂಬೈ, ಆಕ್ಸ್‌ಫರ್ಡ್, ಪುಣೆ  ಮತ್ತು ಮದರಾಸಿಗೆ ಬೆಂಗಳೂರಿಗಿಂತ ಹೆಚ್ಚಿನ ಪ್ರಾಮುಖ್ಯ ಈ 330 ಪುಟದ ಪುಸ್ತಕದಲ್ಲಿ ಸಿಕ್ಕಿದೆ. ಬೆಂಗಳೂರು ಈಗ ಕಾರ್ನಾಡರ ವಾಸದ ಊರು. ಅವರನ್ನು ಬೆಳೆಸಿದ ಇತರ ಊರುಗಳ ಬಗ್ಗೆ ಅವರಿಗೆ ಸಹಜವಾಗಿ ಅಭಿಮಾನ ಹೆಚ್ಚು.ಒಮ್ಮೆ ಅವರು ಮದರಾಸಿನಿಂದ ಬೆಂಗಳೂರಿಗೆ ಒಬ್ಬ ಸ್ನೇಹಿತನ ಮದುವೆಗೆ ಬರುತ್ತಾರೆ. ಆ ಕಾಲಕ್ಕೆ ಸ್ಟೈಲಿಶ್ ಎಂದು ಹೆಸರಾಗಿದ್ದ ಅವರ ಹೆರಾಲ್ಡ್ ಕಾರು ಮಲ್ಲೇಶ್ವರದ ಹತ್ತಿರ ಬಂದು ತಲುಪುವ ಹೊತ್ತಿಗೆ ಪಂಚರ್ ಆಗಿ, ಎಲ್ಲಿ ಹೋಗುವುದು ತೋಚದೆ ಸುತ್ತಮುತ್ತ ನೋಡುತ್ತಾರೆ.ದಿಕ್ಕು ತೋಚದೆ ಅಲೆದಾಡಿ ಕೊನೆಗೆ ಯಾವುದೋ ಒಂದು ಮನೆಯ ಬಾಗಿಲು ತಟ್ಟಿ ಮದುವೆ ಮಂಟಪದ ವಿಳಾಸ ಕೇಳುತ್ತಾರೆ. ಇಂಥ ಅವೇಳೆಯಲ್ಲಿ ಎಲ್ಲಿ ಹೋಗುತ್ತೀರಿ ಎಂದು ಮನೆಯವರು ಒಳಗೆ ಕರೆದು ಅಲ್ಲೇ ತಂಗಲು ಅನುಕೂಲ ಮಾಡಿಕೊಡುತ್ತಾರೆ. ಸುಮಾರು ನಲವತ್ತು ವರ್ಷಗಳ ಹಿಂದೆ ಬೆಂಗಳೂರು ಎಷ್ಟು ಭಿನ್ನವಾಗಿತ್ತು ಎಂದು ಕಾರ್ನಾಡರು ನೆನೆಯುವುದಕ್ಕೆ ಈ ಸಂದರ್ಭ ಎಡೆಮಾಡಿಕೊಡುತ್ತದೆ.1970ರ ವೇಳೆಗೆ `ಸಂಸ್ಕಾರ~ ಚಿತ್ರ ತೆಗೆಯಹೊರಟಾಗ ಕಾರ್ನಾಡರಿಗೆ ಬೆಂಗಳೂರಿನ ರಂಗ ಕಲಾವಿದರು ನೆರವಿಗೆ ಬರುತ್ತಾರೆ. ಕ್ರಿಯಾತ್ಮಕವಾಗಿ ತೊಳಲಾಡುತ್ತಿರುವ ಸಮಯದಲ್ಲಿ ಪತ್ರಿಕಾ ಸಂಪಾದಕರಾದ ವೈ.ಎನ್.ಕೆ. ಸಲಹೆಗಳಿಂದ ಯಾವ ದಿಕ್ಕಿನಲ್ಲಿ ಮುಂದುವರಿಯಬೇಕು ಎಂದು ಕಾರ್ನಾಡರಿಗೆ ಮನನವಾಗುತ್ತದೆ.

 

ಮತ್ತೊಂದು ಸಂದರ್ಭದಲ್ಲಿ ಕಾರ್ನಾಡರು ಪಾಲ್ಗೊಂಡ ನಾಟಕಗಳಿಗೆ ಬೆಂಗಳೂರಿನಲ್ಲಿ ಉತ್ಸಾಹದ ಸ್ವಾಗತ ದೊರಕಿ, ಅವರನ್ನು ಆರಾಧಿಸುವ ಹುಡುಗರ ಬಳಗ ಬೆಳೆಯುತ್ತದೆ. ಇಂಥ ಯಶಸ್ಸಿನಿಂದ ಭುಗಿಲೆದ್ದ ಹೊಟ್ಟೆಕಿಚ್ಚಿನಿಂದ ಸೋತು ಧಾರವಾಡಕ್ಕೆ ಅವರು ಮರಳಿದುದಾಗಿ ಹೇಳಿಕೊಳ್ಳುತ್ತಾರೆ.ಈ ಊರಿನ ಗಣ್ಯರನೇಕರ ಜೊತೆಗಿದ್ದ ಮುನಿಸು, ಜಗಳಗಳ ಬಗ್ಗೆ ಬರೆಯುತ್ತ, ಲಂಕೇಶ್, ಬಿ.ವಿ. ಕಾರಂತ, ಉದಯ ಕುಮಾರ್, ಜಿ.ವಿ. ಅಯ್ಯರ್, ಪಟ್ಟಾಭಿರಾಮ ರೆಡ್ಡಿ ಮತ್ತು ಅವರ ಹೆಂಡತಿ ಸ್ನೇಹಲತಾ ಮತ್ತು ಗಿರೀಶ್ ಕಾಸರವಳ್ಳಿ ಜೊತೆಗಿನ ಅವರ ಏರುಪೇರಿನ ಸಂಬಂಧವನ್ನು ದಾಖಲಿಸಿದ್ದಾರೆ. ಮಧ್ಯಮವರ್ಗದ ಲೆಕ್ಕಾಚಾರದ ಜೊತೆಗೆ ಬೌದ್ಧಿಕ ಕುತೂಹಲ, ಸಾಹಸಗಳನ್ನು ಮೈಗೂಡಿಸಿಕೊಂಡ ಕಾರ್ನಾಡರ ಕತೆ ವೈವಿಧ್ಯ ಮತ್ತು ಸ್ವಾರಸ್ಯದಿಂದ ಕೂಡಿದೆ. ವಿದೇಶಕ್ಕೆ ಹೋಗುವ ಆಸೆಯಿಂದ ಗಣಿತಾಭ್ಯಾಸ ಮಾಡುವ ಹದಿನಾರು ವರ್ಷದ ಕಾರ್ನಾಡರು ಆಕ್ಸ್‌ಫರ್ಡ್ ತಲುಪಿದ ಮೇಲೂ ವಿದ್ಯಾರ್ಥಿ ಸಂಘದ ನಾಯಕನಾಗುವುದು ಆ ಹುದ್ದೆ ಏರಿದವರಿಗೆ ಪ್ರತ್ಯೇಕ ಬಾತ್ ರೂಂ ಸಿಗುತ್ತದೆ ಎಂಬ ಕಾರಣಕ್ಕಾಗಿ!ಬುಕರ್ ಪ್ರಶಸ್ತಿ ಬರೆದು ಪ್ರಸಿದ್ಧರಾಗಿರುವ ಕನ್ನಡಿಗ ಅರವಿಂದ ಅಡಿಗರ ಪ್ರಕಾರ ಕಾರ್ನಾಡರ ಪ್ರತಿಭೆ ಬೆಳಗುವುದಕ್ಕೆ ಅನುವು ಮಾಡಿಕೊಟ್ಟ ಶ್ರೇಯಸ್ಸು ಪುಟ್ಟ ನಗರವಾದ ಧಾರವಾಡಕ್ಕೆ ಸಲ್ಲುತ್ತದೆ. ದೇಶ ವಿದೇಶದಲ್ಲಿ ಅವಕಾಶ ಕೈಬೀಸಿ ಕರೆದರೂ ಕನ್ನಡದಲ್ಲಿ ಬರೆಯುವ, ಮನೋಹರ ಗ್ರಂಥಮಾಲೆಯಲ್ಲೇ ಪ್ರಕಟಿಸುವ ಕಾರ್ನಾಡರ ನಿಷ್ಠೆ ವಿಸ್ಮಯ ಹುಟ್ಟಿಸಬಹುದು.ಮುಂಬೈಯಲ್ಲಿ ನಟನಾಗಿ ಮೆರೆಯುತ್ತಿದ್ದ ಅವರು ಹೇಮಾಮಾಲಿನಿಯನ್ನು ಮದುವೆಯಾಗಿ ಸೆಲೆಬ್ರಿಟಿ ಜೀವನವನ್ನು ನಡೆಸಬಹುದಾಗಿದ್ದ ಸಾಧ್ಯತೆ ಇದ್ದರೂ, ಕನ್ನಡ ಸಾರಸ್ವತ ಲೋಕದ ನಂಟನ್ನೇ ಗಟ್ಟಿ ಮಾಡಿಕೊಳ್ಳುವುದರಲ್ಲಿ ಸಾರ್ಥಕ್ಯ ಕಂಡಿದ್ದಾರೆ.ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ಕಾರ್ನಾಡರ ಕನ್ನಡದ ಧಾಟಿಯೇ ಬೇರೆ. ಆಕ್ಸ್‌ಫರ್ಡ್‌ನ ವಿದ್ಯಾರ್ಥಿಗಳು ಲಾರೆನ್ಸ್ ಡುರೆಲ್‌ನ ಪುಸ್ತಕವನ್ನು `ನಾಗೊಂದಿಗೆ~ಯಲ್ಲಿ ತಪ್ಪದೆ ಇಡುತ್ತಿದ್ದರು ಎಂಬಂಥ ಬಳಕೆಗಳು ಬಂದಾಗ, `ನಾಗೊಂದಿಗೆ~ ಪದವನ್ನು ಮತ್ತು `ಲಾರೆನ್ಸ್ ಡುರೆಲ್~ ಹೆಸರನ್ನು ಎಂದೂ ಕೇಳಿರದ ಬೆಂಗಳೂರಿನ ಕಿವಿ ಆಶ್ಚರ್ಯದಿಂದ ನಿಮಿರುವುದು ಖಚಿತ.

 

ಇಂಥ ಬಳಕೆಗಳು ಚೆಲುವಾಗಿ ಕಂಡರೂ, ಗಾಂಧೀಜಿ ಅಂತ್ಯವಾಗುವ ರೀತಿಯನ್ನು `ವಧೆ~ ಎಂದು ಬರೆದಾಗ ಕಾರ್ನಾಡರ ಶೈಲಿಯಲ್ಲಿ ತೊಡಕಿದೆಯೇ ಎಂಬ ಅನುಮಾನ ಸುಳಿಯುವ ಸಂಭವವಿದೆ. (ರಾಕ್ಷಸರು ವಧೆಯಾಗುತ್ತಾರೆ, ಒಳ್ಳೆಯವರು ಹತ್ಯೆಯಾಗುತ್ತಾರೆ ಎಂದು ಓದಿದ ನೆನಪು). `ಆಕ್ಸೆಂಟ್~ ಅನ್ನುವುದಕ್ಕೆ ಅವರು ಬಳಸುವ `ಪಲುಕು~ಗಿಂತ ಸೂಕ್ತ ಪದ ಸಿಗಲಾರದು ಎಂದೂ ಅನಿಸುತ್ತದೆ .ಈ ಕಂಪ್ಯೂಟರ್ ಯುಗದ ಹೀರೋ ಸ್ಟೀವ್ ಜಾಬ್ಸ್ ಕ್ಯಾಲಿಗ್ರಫಿ ಕಲಿತಿದ್ದನಂತೆ. ಆಪಲ್ ಮ್ಯೋಕ್ ಕಂಪ್ಯೂಟರ್ ವಿನ್ಯಾಸ ಮಾಡಹೊರಟಾಗ ಆ ಕೈಬರಹದ ಕಲೆ ಅವನಿಗೆ ತುಂಬ ಸಹಾಯವಾಯಿತಂತೆ. ಕಾರ್ನಾಡರು ಗಣಿತವನ್ನು ಅರ್ಧ ಮನಸಿನಿಂದ, ಬರಿ ಅಂಕಿಗಳಿಗಾಗಿ ಕಲಿಯುತ್ತಿರುವಾಗ ಆ ಶಾಸ್ತ್ರದ ಅಮೂರ್ತ ಸೌಂದರ್ಯ ಅವರಿಗೆ ಭಾಸವಾಗುತ್ತದೆ.ಗಣಿತ ಮತ್ತು ಸಂಖ್ಯಾಶಾಸ್ತ್ರದ ನಿಯಮಗಳು ಮುಂದೆ ಎಂದೋ ಅವರ ನಾಟಕಗಳ ರಚನೆಯನ್ನು ರೂಪಿಸುತ್ತವೆ. ಹಾಗೆ ಅವರು ಶಾಲಾ ದಿನಗಳಲ್ಲಿ ಕಲಿತ ಕುಣಿತದ ಹೆಜ್ಜೆಗಳು ಸುಮಾರು ನಾಲ್ಕು ದಶಕಗಳ ನಂತರ `ಆನಂದ ಭೈರವಿ~ ಎಂಬ ತೆಲುಗು-ಕನ್ನಡ ಚಿತ್ರದಲ್ಲಿ ಅವರು ನರ್ತಿಸಬೇಕಾದಾಗ ಇದ್ದಕ್ಕಿದ್ದಂತೆ ನೆರವಿಗೆ ಬರುತ್ತವೆ.ಹೀಗೆ ಸಂಬಂಧವೇ ಇಲ್ಲ ಎಂದು ನಂಬಲಾದ ಕಲೆ-ವಿದ್ಯೆಗಳ ಬೆನ್ನುಹತ್ತುವುದು ಕಾಲಹರಣವಲ್ಲ ಎಂದು ತೋರಿಸುವ ಅವರ ಯಾತ್ರೆ ರೋಮಾಂಚಕವಾಗಿ ಸಾಗುತ್ತಲೇ ಹುರಿದುಂಬಿಸುವ, ಸಾಹಸ ಪ್ರವೃತ್ತಿಯನ್ನು ಉದ್ದೀಪಿಸುವ ಗುಣವನ್ನು ಹೊಂದಿದೆ.ಸಿಇಟಿ ಪ್ರಮಾಣ ಪತ್ರದ ಬಿಕರಿಹೊರನಾಡ ಕನ್ನಡಿಗರ ಮಕ್ಕಳಿಗೆ ವೃತ್ತಿಪರ ಕಾಲೇಜುಗಳಲ್ಲಿ ಕರ್ನಾಟಕ ಸರ್ಕಾರ ಕೆಲವು ಸೀಟುಗಳನ್ನು ಮೀಸಲಾಗಿರಿಸಿದೆ. ಇಂಥ ಸೀಟುಗಳಿಗೆ ಅರ್ಜಿ ಹಾಕಬೇಕಾದರೆ ಪ್ರವೇಶ ಪರೀಕ್ಷೆ ಬರೆಯುವ ಮುನ್ನವೇ ದೊಮಿಸೈಲ್ ಪ್ರಮಾಣ ಪತ್ರವನ್ನು (ಅಂದರೆ ಅಪ್ಪ ಅಮ್ಮಂದಿರು ಕರ್ನಾಟಕದಲ್ಲಿ ಕನಿಷ್ಠ ಹತ್ತು ವರ್ಷ ಕಳೆದಿದ್ದಾರೆ ಎಂದು ಸಾಬೀತು ಪಡಿಸುವ ದಾಖಲೆ) ಅಧಿಕಾರಿಗಳು ಕೇಳುತ್ತಿದ್ದಾರೆ.ರೇಶನ್ ಕಾರ್ಡ್ ಅಥವಾ ಮತಹಾಕಲು ಬೇಕಾದ ಗುರುತು ಚೀಟಿ ಇರಬೇಕು ಎಂದು ನಮೂದಿಸಿದ್ದಾರೆ. ಹತ್ತಾರು ವರ್ಷ ಬೇರೆ ರಾಜ್ಯಗಳಲ್ಲಿ ನೆಲೆಸಿದ ಕನ್ನಡಿಗರು ಇಲ್ಲಿಯ ರೇಶನ್ ಕಾರ್ಡ್ ಮತ್ತು ಚುನಾವಣಾ ಚೀಟಿಯನ್ನು ಹೊಂದಿರುವುದು ಸಾಧ್ಯವೇ? ಶಾಲಾ ದಾಖಲೆಗಳು ಅಥವಾ ಮನೆಯ ಮಾಲೀಕತ್ವದ ಪತ್ರಗಳನ್ನು ತೋರಿಸಿದಾಗಲೂ ದೊಮಿಸೈಲ್ ಪತ್ರ ಕೊಡದೆ ಅಮಾಯಕ ಅಪ್ಪ-ಅಮ್ಮಂದಿರನ್ನು ಅಧಿಕಾರಿಗಳು ಕಾಡುತ್ತಿದ್ದಾರೆ.

 

ತಹಶೀಲ್ದಾರರ ಕಚೇರಿಯಲ್ಲಿ ದೊಮಿಸೈಲ್ ಪತ್ರ ಕೇಳಿಕೊಂಡು ಹೋದವರನ್ನು ಸುಲಿಗೆ ಮಾಡುತ್ತಿದ್ದಾರೆ. ಮಾವಿನ ಹಣ್ಣಿನ ಸೀಸನಲ್ ವ್ಯಾಪಾರದಂತೆ ಇದೂ ಒಂದು ಅವಕಾಶ ಅನ್ನುವ ರೀತಿಯಲ್ಲಿ ಅಧಿಕಾರಿಗಳು ವ್ಯವಹಾರಕ್ಕಿಳಿದ್ದಿದ್ದಾರೆ. ಇದು ಇನ್ನೂ ಪ್ರಾರಂಭ. ಸೀಟು ವಿತರಣೆಯ ವಿಷಯದಲ್ಲಿ ಇನ್ನೂ ಎಷ್ಟು ಮೋಸ, ಕಳ್ಳತನ ಕಾದಿದೆಯೋ ಎಂದು ನೀವೇ ಊಹಿಸಿಕೊಳ್ಳಬಹುದು.ಪ್ರತಿಭಾ ಪಾಟೀಲರ ಹೊಸ ಮನೆರಾಷ್ಟ್ರಪತಿ ಪ್ರತಿಭಾ ಪಾಟೀಲರು ನಿಯಮಗಳನ್ನು ಉಲ್ಲಂಘಿಸಿ ಪುಣೆಯ ರಕ್ಷಣಾ ಪ್ರದೇಶದಲ್ಲಿ ದೊಡ್ಡ ಮನೆಯನ್ನು ಕಟ್ಟಿಸುತ್ತಿದ್ದಾರೆ ಎಂದು ನೀವು ಓದಿರಬಹುದು.ದೇಶಭಕ್ತಿ ದಿನಾಚರಣೆಗಳು ಬಂದ ಕೂಡಲೇ ರೇಡಿಯೋದಲ್ಲಿ ಒಂದು ಹಾಡು ಹಾಕುತ್ತಾರೆ ಗಮನಿಸಿದ್ದೀರಾ? `ಮೇರೆ ದೇಶ್ ಕಿ ಧರ್ತಿ....~ ಇಂಥ ಕೊಳಕು ರಾಜಕೀಯ ಇರುವ ದೇಶದಲ್ಲಿ ಈ ಹಾಡನ್ನು ಸ್ವಲ್ಪ ಮಾರ್ಪಾಡು ಮಾಡಿಕೊಳ್ಳಬಹುದು ಅಲ್ಲವೇ? `ಮೇರೆ ದೇಶ್ ಕಿ ಡರ್ಟೀ~ ಅಂತ ಹಾಡಿದರೆ ಹೇಗೆ?srramakrishna@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.