ಶನಿವಾರ, ಮೇ 28, 2022
30 °C

ಕಾರ್ಪೊರೇಟ್ ದುರಾಸೆ ವಿರುದ್ಧ ಚಳವಳಿ: 80 ರಾಷ್ಟ್ರಗಳಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಕಾರ್ಪೊರೇಟ್ ದುರಾಸೆ ಪ್ರವೃತ್ತಿ ಮತ್ತು ಬಂಡವಾಳಶಾಹಿ ಧೋರಣೆಗಳ ವಿರುದ್ಧ ಆರಂಭಗೊಂಡಿರುವ `ವಾಲ್ ಸ್ಟ್ರೀಟ್ ಮುತ್ತಿಗೆ~ (ಆಕ್ಯುಪೈ ವಾಲ್ ಸ್ಟ್ರೀಟ್) ಚಳವಳಿಗೆ ವಿಶ್ವದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದ್ದು, ಅಮೆರಿಕ, ಯೂರೋಪ್, ಏಷ್ಯಾದ ಕೆಲವು ಭಾಗಗಳೂ ಸೇರಿದಂತೆ 80 ರಾಷ್ಟ್ರಗಳ 900ಕ್ಕೂ ಅಧಿಕ ನಗರಗಳಲ್ಲಿ ಸಾವಿರಾರು ಜನರು ಭಾನುವಾರ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ನ್ಯೂಯಾರ್ಕ್‌ನಲ್ಲಿರುವ ಟೈಮ್ಸ ಪ್ರತಿಷ್ಠಿತ ಟೈಮ್ಸ ಸ್ಕ್ವೇರ್‌ವರೆಗೆ ವಾಲ್ ಸ್ಟ್ರೀಟ್ ವಿರೋಧಿ ಚಳವಳಿಗಾರರು ಬೃಹತ್ ಜಾಥಾ ನಡೆಸಿದರು. ಜಾಥಾದಿಂದಾಗಿ ಮ್ಯಾನ್‌ಹಟ್ಟನ್ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. 

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು. ಕನಿಷ್ಠ 88 ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿದ್ದಾರೆ.

`ನೂರಾರು ಪ್ರತಿಭಟನಾಕಾರರು ಝುಕ್ಕೋಟ್ಟಿ ಉದ್ಯಾನದಿಂದ ವಾಷಿಂಗ್ಟನ್ ಸ್ಕ್ವೇರ್‌ವರೆಗೆ ಜಾಥಾ ನಡೆಸಿದ ನಂತರ ಸಣ್ಣ ಗುಂಪೊಂದು ವಾಷಿಂಗ್ಟನ್ ಸ್ಕ್ವೇರ್‌ನಿಂದ ಸಿಟಿಬ್ಯಾಂಕ್‌ನ ಶಾಖೆಯನ್ನು ಪ್ರವೇಶಿಸಿತು~ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ವಕ್ತಾರ ಪೌಲ್ ಬ್ರೌನೆ ಹೇಳಿದ್ದಾರೆ.

ಪ್ರತಿಭಟನಾಕಾರರೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಅವರು ಹೇಳಿದ್ದಾರೆ.

`ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರ ತಂಡವೊಂದು ಬ್ಯಾಂಕಿನ ಒಳಕ್ಕೆ ನುಗ್ಗಿತು. ಹಲವು ಬಾರಿ ಮನವಿ ಮಾಡಿದರೂ ಅವರು ಅಲ್ಲಿಂದ ಜಾಗ ಬಿಟ್ಟು ಕದಲಲಿಲ್ಲ. ಕೊನೆಗೆ ಬ್ಯಾಂಕ್ ಸಿಬ್ಬಂದಿ 911 ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಬೇಕಾಯಿತು~ ಎಂದು ಸಿಟಿ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಭಟನಾಕಾರರನ್ನು ಕಳುಹಿಸುವ ವರೆಗೆ ಬ್ಯಾಂಕಿನ ಶಾಖೆಯನ್ನು ಮುಚ್ಚುವಂತೆ ಪೊಲೀಸರು ಕೇಳಿಕೊಂಡರು ಎಂದೂ ಹೇಳಿಕೆ ತಿಳಿಸಿದೆ.

ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ತಡೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊತ್ತಿದ್ದಂತೆಯೇ, ಪ್ರತಿಭಟನಾ ಕಾರರು, `ನಾವು ಶಾಂತಿಯುತ ಪ್ರತಿಭಟನಾಕಾರರು, ಇಡೀ ವಿಶ್ವ ಇದನ್ನು ಗಮನಿಸುತ್ತಿದೆ~ ಮುಂತಾದ ಘೋಷಣೆಗಳನ್ನು ಕೂಗಿದರು.

ಟೈಮ್ಸ ಸ್ಕ್ವೇರ್ ಒಂದರಲ್ಲೇ ಪೊಲೀಸರು 45 ಪ್ರತಿಭಟನಾಕಾರರನ್ನು ಬಂಧಿಸಿದರು. 24 ಜನರನ್ನು ಸಿಟಿಬ್ಯಾಂಕ್‌ನ ಶಾಖೆಯಲ್ಲಿ ಬಂಧಿಲಾಗಿದೆ. ಇವರ ವಿರುದ್ಧ ಅತಿಕ್ರಮ ಪ್ರವೇಶ ಮಾಡಿದ ಆರೋಪವನ್ನು ಹೊರಿಸಲಾಗಿದೆ.

ಸಾಮಾನ್ಯವಾಗಿ ಪ್ರತಿಭಟನೆಗಳು ನಡೆಯದ ಮಿಯಾಮಿ ನಗರ ಸೇರಿದಂತೆ, ವಾಷಿಂಗ್ಟನ್, ಲಾಸ್ ಏಂಜಲೀಸ್ ನಗರಗಳಲ್ಲೂ ಕಾರ್ಪೊರೇಟ್ ದುರಾಸೆ ಮತ್ತು ಕೈಗಾರಿಕೆಗಳು ಪರಿಹಾರ ನೀಡದಿರುವುದರ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ವಿಶ್ವದೆಲ್ಲೆಡೆ ಬೆಂಬಲ: ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಕಾರ್ಪೊರೇಟ್ ಸಂಸ್ಥೆಗಳ ಲೋಭ ಮತ್ತು ಸರ್ಕಾರಗಳ ಮೇಲೆ ಕಾರ್ಪೊರೇಟ್ ಸಂಸ್ಥೆಗಳು, ಲಾಬಿದಾರರು ಬೀರುವ ಪ್ರಭಾವದ ವಿರುದ್ಧ ಹಲವು ವಾರಗಳಿಂದ `ವಾಲ್ ಸ್ಟ್ರೀಟ್ ಮುತ್ತಿಗೆ~ ಎಂಬ ಚಳವಳಿ ಅಮೆರಿಕದಲ್ಲಿ ನಡೆಯುತ್ತಿದೆ.

ನ್ಯೂಯಾರ್ಕ್‌ನಲ್ಲಿ ಆರಂಭವಾಗಿರುವ ಈ ಚಳವಳಿಯು ಅಮೆರಿಕ ಮತ್ತು ವಿಶ್ವದಾದ್ಯಂತ ಹರಡಿದೆ. ನ್ಯೂಯಾರ್ಕ್‌ನಲ್ಲಿ ನಡೆದಂತಹ ಪ್ರತಿಭಟನಾ ರ‌್ಯಾಲಿಗಳು 80 ರಾಷ್ಟ್ರಗಳ 950 ನಗರಗಳಲ್ಲಿ ನಡೆಯುತ್ತಿವೆ. ಈ ಚಳವಳಿಯಿಂದ ಪ್ರಭಾವಿತರಾಗಿ ಲಂಡನ್, ರೋಮ್ ಮತ್ತಿತರ ನಗರಗಳಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಲಂಡನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಕೂಡ ಭಾಗವಹಿಸಿದ್ದರು. 

ಆರ್ಥಿಕ ಹಿಂಜರಿತ, ಸಾಲ, ಉದ್ಯೋಗ ನಷ್ಟಗಳಿಂದಾಗಿ ಯೂರೋಪ್‌ನಲ್ಲಿ ಲಕ್ಷಾಂತರ ಜನರು ಬಾಧಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗ್ರೀಕ್, ಸ್ಪೇನ್, ಇಟಲಿ ಮತ್ತು ಇಂಗ್ಲೆಂಡ್ ಕೂಡ ಆರ್ಥಿಕ ಹಿಂಜರಿತದಿಂದ ನರಳುತ್ತಿದೆ. 

ಇಟಲಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ರೋಮ್ (ಎಎಫ್‌ಪಿ): ಇಟಲಿಯ ಐತಿಹಾಸಿಕ ರೋಮ್ ಚೌಕ ಭಾನುವಾರ ಅಕ್ಷರಶಃ ರಣರಂಗವಾಗಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುಗಳನ್ನು, ಬಾಟಲಿಗಳನ್ನು ತೂರಿದರು. ಅಲ್ಲದೇ ವಾಹನಗಳಿಗೆ ಬೆಂಕಿ ಹಚ್ಚಿದರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಶೆಲ್‌ಗಳನ್ನು ಸಿಡಿಸಿದರು ಮತ್ತು ಜಲ ಫಿರಂಗಿ ಪ್ರಯೋಗ ಮಾಡಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಗುಂಪು ಗುಂಪಾಗಿ ಸೇಂಟ್ ಜಾನ್ ಲಾಟೆರನ್ ಬೆಸಿಲಿಕಾದ ಮೆಟ್ಟಿಲುಗಳಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಹಿಂಸಾಚಾರ ಭುಗಿಲೆದ್ದಿತು.

ಇದೇ ಸಂದರ್ಭದಲ್ಲಿ, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ರೋಮ್ ಚೌಕದಲ್ಲಿ ಈ ಪ್ರದೇಶದಲ್ಲಿ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸಲು ಆರಂಭಿಸಿದವು. ಇದರಿಂದಾಗಿ ಅಲ್ಲಿ ಮತ್ತಷ್ಟು ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

ಈ ಸಂದರ್ಭದಲ್ಲಿ ಕೆಲವರು ಕಾರುಗಳತ್ತ, ಕಟ್ಟಡಗಳತ್ತ ಕಲ್ಲು ತೂರಲು ಆರಂಭಿಸಿದರು. ಹಲವು ಕಾರುಗಳ, ಕಟ್ಟಡಗಳ ಗಾಜುಗಳು ಪುಡಿಪುಡಿಯಾದವು. ಉದ್ರಿಕ್ತರು ವಾಹನಗಳಿಗೂ ಬೆಂಕಿ ಹಚ್ಚಿದರು.

ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಪರಿಸ್ಥಿತಿ ಕೈ ಮೀರಿ ಹೋದಾಗ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. 

ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರೆಯೊಬ್ಬರು ಹೇಳಿದ್ದಾರೆ. ಆದರೆ ಇಟಲಿ ಸುದ್ದಿ ಸಂಸ್ಥೆ ಎಎನ್‌ಎಸ್‌ಎಯು 20 ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.