ಭಾನುವಾರ, ಜನವರಿ 19, 2020
28 °C

ಕಾರ್ಮಿಕರ ನೋಂದಣಿಗೆ ಸಚಿವರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವ­ಹಿಸುವ ಎಲ್ಲ ಕ್ಷೇತ್ರಗಳ ಕಾರ್ಮಿಕರನ್ನು  ಇಲಾಖೆ ಅಡಿ ನೋಂದಣಿ ಮಾಡಿಕೊಂಡು, ವಿವಿಧ ಯೋಜನೆಗಳ ನೆರವು ದೊರಕಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2014ರ ಫೆಬ್ರುವರಿ ಅಂತ್ಯಕ್ಕೆ ಜಿಲ್ಲೆಯ 10 ಸಾವಿರ ಜನ ಕಾರ್ಮಿಕರ ನೋಂದಣಿ ಗುರಿ ತಲುಪುವಂತೆ ಆದೇಶಿಸಿದರು.ಗಣಿ, ಹೋಟೆಲ್‌, ಇಟ್ಟಿಗೆ ಭಟ್ಟಿ, ಮಂಡಕ್ಕಿ ಭಟ್ಟಿ, ಗ್ಯಾರಜ್, ಕಾರ್ಖಾ­ನೆಗಳು, ಕಟ್ಟಡ ನಿರ್ಮಾಣ, ಕೃಷಿ ಕ್ಷೇತ್ರದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ನೋಂದಣಿ ಮಾಡಿ, ಯೋಜನೆಗಳ ನೆರವು ನೀಡ­ಬೇಕು. ಅಲ್ಲದೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸ­ಬೇಕು ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಕಾರ್ಮಿಕರ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸುವ ಮೂಲಕ  ಜಾಗೃತಿ ಮೂಡಿಸಿ, ವಿಮೆ, ಆರೋಗ್ಯ ಸೌಲಭ್ಯ ಮತ್ತಿತರ ಯೋಜನೆ­ಗಳ ನೆರವು ನೀಡುವ ಮೂಲಕ ರಾಜ್ಯ­ದಲ್ಲೇ ಮಾದರಿಯಾಗಿ ಹೊರ­ಹೊಮ್ಮ­ಬೇಕು ಎಂದು ಅವರು ಹೇಳಿದರು.ಗಣಿಗಾರಿಕೆ ಸ್ಥಗಿತಗೊಂಡ ಹಿನ್ನೆಲೆ­ಯಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರ ಕುಟುಂಬ ಸದಸ್ಯರನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ನೋಂದಣಿ ಮಾಡಿಸಿ, ಉದ್ಯೋಗ ನೀಡಬೇಕು ಎಂದು ಅವರು ಹೇಳಿದರು.ಕಾರ್ಮಿಕರ ಭದ್ರತೆ ಕುರಿತು ನೂತನ ಕಾನೂನು ಜಾರಿಗೆ ಸರ್ಕಾರ ಚಿಂತನೆ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಕಾನೂನು ಜಾರಿಯಾಗಲಿದೆ ಎಂದು ಸಚಿವ ನಾಯ್ಕ ತಿಳಿಸಿದರು.ಅಧಿಕಾರಿಗಳು ತರಾಟೆಗೆ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾ­­ಗುವಂತೆ ಸಚಿವರು ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಜಿಲ್ಲಾ ಮಟ್ಟದ ಹಿರಿಯ ಅಧಿಕಾ­ರಿಗಳು ಸಭೆಗೆ ಹಾಜರಾಗದೆ, ಸಾಮಾನ್ಯ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದರಿಂದ ಕುಪಿತರಾದ ಸಚಿ­ವರು, ಆ ಸಿಬ್ಬಂದಿಯನ್ನು ಸಭೆಯಿಂದ ಹೊರಗೆ ಕಳುಹಿಸಿದರಲ್ಲದೆ, ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಸೂಚಿಸಿದರು.ಮೇಲಧಿಕಾರಿಗಳ ಸೂಚನೆ ಮೇರೆಗೆ ಸಭೆಗೆ ಆಗಮಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ಕೆಎಸ್ಎಫ್‌ಸಿ, ಸಣ್ಣ ಉಳಿತಾಯ, ತೂಕ ಮತ್ತು ಅಳತೆ ಇಲಾಖೆಯ ಕೆಳ ಹಂತದ ಸಿಬ್ಬಂದಿಯನ್ನು ಸಭೆಯಿಂದ ಹೊರ ಕಳುಹಿಸಲಾಯಿತು.ನೀರಾವರಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು ಮತ್ತು ಶಾಸಕರು,   ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಯೋಜನೆ ಜಾರಿಗೆ ನಿರ್ಲಕ್ಷ್ಯ ವಹಿಸಲಾಗಿದೆ. ಬೇಸಿಗೆ ಅವ­ಧಿಗೆ ನೀರಿನ ಸಮಸ್ಯೆ ಎದುರಾಗ­ದಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.ಸಭೆಯಲ್ಲಿ ಮಾತನಾಡಿದ ಸಂಡೂರು ಶಾಸಕ ಈ.ತುಕಾರಾಂ, ‘ಸತತ ಎರಡು ಬಾರಿ ಶಾಸಕನಾಗಿ ಆಯ್ಕೆಯಾದರೂ ಕ್ಷೇತ್ರದ ಜನರ ಸಮಸ್ಯೆಗಳ ನಿವಾರಣೆ ಸಾಧ್ಯವಾ­ಗುತ್ತಿಲ್ಲ. ಕುರೇಕುಪ್ಪ ಬಳಿ ತುಂಗಭದ್ರಾ ಕಾಲುವೆಯ ಸೇತುವೆ ಕುಸಿದ ಪರಿ­ಣಾಮ ಜನ ಪರದಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಆಡಳಿತಾರೂಢ ಪಕ್ಷ­ದಿಂದ ಆಯ್ಕೆಯಾದರೂ ನಾನೇ ಪ್ರತಿ­ಭ­ಟನೆಗೆ ಇಳಿಯುವ ಸ್ಥಿತಿ ನಿರ್ಮಾ­ಣ­ವಾಗಿದೆ’ ಎಂದು ಅಳಲು ತೋಡಿಕೊಂಡರು.ನಿಗದಿತ ಅವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ಉಪನಾಯಕನ­ಹಳ್ಳಿಯಲ್ಲಿ ಪೂರ್ಣಗೊಂಡಿರುವ ಕುಡಿಯುವ ನೀರು ಕಾಮಗಾರಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಆಗ್ರಹಿಸಿದರು.ಸಿರುಗುಪ್ಪ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗೆ ಕೆರೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅಗತ್ಯ ಭೂಮಿ ಗುರುತಿಸಿ, ಕಾಮಗಾರಿ ಆರಂಭಿ­ಸಬೇಕು ಎಂದು ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಕೋರಿದರು.ಬಳ್ಳಾರಿ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ ವಿಧಾನ ಪರಿಷತ್‌ ಸದಸ್ಯ ಮೃತ್ಯುಂಜಯ ಜಿನಗಾ, ಜಿಲ್ಲೆಯ­ಲ್ಲಿರುವ  ಕೆರೆಗಳ ಅಭಿವೃದ್ಧಿ ಕುರಿತು ಗಮನ ಹರಿಸಬೇಕು ಒತ್ತಾಯಿಸಿದರು.ಸಿರುಗುಪ್ಪ, ಕಂಪ್ಲಿ ಬಳ್ಳಾರಿಗಳಲ್ಲಿ ಬೆಂಬಲ ಬೆಲೆ ಆಧಾರದ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಸಂಡೂರು, ಕೊಟ್ಟೂರು, ಕೂಡ್ಲಿಗಿಗಳಲ್ಲಿ ಮೆಕ್ಕೆ­ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗೆ ಸೂಚಿಸ­ಲಾಯಿತು. ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌, ಜಿ.ಪಂ. ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ, ಸಿಇಒ ಮಂಜುನಾಥ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಹಾಗು ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)