ಗುರುವಾರ , ಮೇ 6, 2021
23 °C

`ಕಾರ್ಯಕರ್ತರ ತಂಟೆಗೆ ಬಂದರೆ ಸಹಿಸುವುದಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸೇಡಿನ ರಾಜಕಾರಣಕ್ಕೆ ಕಾಂಗ್ರೆಸ್ ಆದ್ಯತೆ ನೀಡುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರ ತಂಟೆಗೆ ಬಂದರೆ ಸಹಿಸುವುದು ಅಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.ಸ್ಥಳೀಯ ರಾಘವ ಕಲಾ ಮಂದಿರದಲ್ಲಿ ಭಾನುವಾರ ಪಕ್ಷದ ನಗರ ಹಾಗೂ ಗ್ರಾಮೀಣ ಜಿಲ್ಲಾ ಘಟಕಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

`ನಾನು ಸಚಿವನಾಗುವ ಕನಸನ್ನೇ ಕಂಡಿರಲಿಲ್ಲ. ಹೂವಿನ ಹಡಗಲಿ ಕ್ಷೇತ್ರದ ಜನರ ಬೆಂಬಲದಿಂದ ಇದೀಗ ಸಚಿವನಾಗಿ ಆಯ್ಕೆಯಾಗಿದ್ದೇನೆ. ಜನರ ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ' ಎಂದು ಅವರು ಘೋಷಿಸಿದರು.`ನಾನು ಬಳ್ಳಾರಿ ಜಿಲ್ಲೆಯವನಲ್ಲ. ಬದಲಿಗೆ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯವನು ಎಂಬ ಭಾವನೆ ಬೇಡ. ಈ ಕುರಿತ ಅಪಪ್ರಚಾರಕ್ಕೆ ಕಿವಿಗೊಡುವದ ಬೇಡ. ಮುಕ್ಯಮಂತ್ರಿಯವರ ಮಾರ್ಗದರ್ಶನದಂತೆ ವಾರಕ್ಕೆ ಎರಡು ದಿನ ವಿಧಾನಸಭೆಯಲ್ಲಿದ್ದು, ಐದು ದಿನ ಜಿಲ್ಲೆಯಲ್ಲಿ ಇರಲು  ಪ್ರಯತ್ನಿಸುತ್ತೇನೆ' ಎಂದು ಅವರು ಸ್ಪಷ್ಟಪಡಿಸಿದರು.ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಪಕ್ಷದ ಹಿರಿಯರು ತಾರತಮ್ಯರಹಿತವಾಗಿ ಪಕ್ಷ ಮುನ್ನಡೆಸಿದ್ದಾರೆ. ಪಕ್ಷ ಸಂಘಟನೆಯ ಕೆಲಸವೇ ಎಲ್ಲರ ಗುರಿಯಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವೇ ಎಲ್ಲರ ಉದ್ದೇಶವಾಗಿದೆ ಎಂದು ಅವರು ಹೇಳಿದರು.ಐದು ವರ್ಷಗಳ ಹಿಂದೆ ಅವಿವೇಕಿಗಳ ಕೈಗೆ ಅಧಿಕಾರ ಕೊಟ್ಟಿದ್ದ ರಾಜ್ಯದ ಜನತೆ ಅದರಿಂದ ಬೇಸತ್ತು ಇದೀಗ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವುದೊಂದೇ ಜನಪ್ರತಿನಿಧಿಗಳ ಗುರಿ ಎಂದು ಹರಪನಹಳ್ಳಿ ಶಾಸಕ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ರವೀಂದ್ರ ತಿಳಿಸಿದರು.ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯುಲು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ  ಮಾತನಾಡಿದರು.ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಸಂಡೂರು ಶಾಸಕ ಈ. ತುಕಾರಾಂ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಹಾಗೂ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಬಳ್ಳಾರಿ ಮಹಾನಗರಪಾಲಿಕೆಯ 26 ಜನ ಕಾಂಗ್ರೆಸ್ ಸದಸ್ಯರನ್ನು ಇದೇ ಸಂದರ್ಭ ಸತ್ಕರಿಸಲಾಯಿತು.ಮಾಜಿ ಸಚಿವ ಎಂ. ದಿವಾಕರಬಾಬು, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ, ಅಬ್ದುಲ್ ವಹಾಬ್, ನಾಸಿರ್ ಹುಸೇನ್, ಮಾಜಿ ಸಂಸದ ಕೋಳೂರು ಬಸವನಗೌಡ, ಎನ್.ಎಂ. ನಬಿ, ಸಾಹುಕಾರ್ ಸತೀಶಬಾಬು ಮತ್ತಿತರರು  ಉಪಸ್ಥಿತರಿದ್ದರು. ಬಳ್ಳಾರಿ ನಗರ ಕ್ಷೇತ್ರದ ಶಾಸಕ ಅನಿಲ್ ಲಾಡ್ ಗೈರು ಹಾಜರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.