ಗುರುವಾರ , ಫೆಬ್ರವರಿ 25, 2021
27 °C
ಸಿರವಾರ ಬಂದ್‌: ಹೆದ್ದಾರಿಯಲ್ಲಿ ಎರಡು ತಾಸು ಸಂಚಾರ ಸ್ಥಗಿತ

ಕಾಲುವೆಗೆ ನೀರು ಬಿಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆಗೆ ನೀರು ಬಿಡಲು ಒತ್ತಾಯ

ಸಿರವಾರ: ಕೆಳಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬಂದ್‌ ಆಚರಿಸಲಾಯಿತು. ಅಂಗಡಿ– ಮುಂಗಟ್ಟುಗಳು ಸ್ವಪ್ರೇರಣೆಯಿಂದ ಮುಚ್ಚಿದ್ದವು. ಶಾಲಾ– ಕಾಲೇಜು, ಕಚೇರಿಗಳು, ಬಸ್‌ಗಳ ಸಂಚಾರ ಎಂದಿನಂತೆ ನಡೆದವು.ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ  ಕಾರಣ ರಾಯಚೂರು– ಲಿಂಗಸುಗೂರು ಹೆದ್ದಾರಿಯಲ್ಲಿ ಎರಡು ತಾಸು ಸಂಚಾರ ಸ್ಥಗಿತಗೊಂಡಿತು

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಶರಣಪ್ಪಗೌಡ ಮಾತನಾಡಿ, ಈಗಾಗಲೇ ಭತ್ತ ನಾಟಿ ಮಾಡಿರುವ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಇಲ್ಲಿಯವರೆಗೆ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ.ತುಂಗಾಭದ್ರಾ ಅಣೆಕಟ್ಟೆ 52 ಟಿ.ಎಂ.ಸಿ. ನೀರು ಸಂಗ್ರಹವಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಭತ್ತದ ಬೆಳೆಗೆ ನೀರನ್ನು ಒದಗಿಸಬಹುದು. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಮೇಲ್ಭಾಗದ ನೀರುಗಳ್ಳರಿಗೆ ಅನುಕೂಲ ಮಾಡಿಕೊಟ್ಟು ಕೆಳ ಭಾಗದ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅಧಿಕಾರಿಗಳು  ಬರೀ ಭರವಸೆಯಲ್ಲಿಯೇ ರೈತರನ್ನು ಸಮಾಧಾನ ಪಡಿಸುತ್ತಿದ್ದಾರೆ. ಈಗಲಾದರೂ ಕಾಲುವೆಗಳಿಗೆ ಸಮರ್ಪಕ ನೀರು  ಹರಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಸಿದರು.ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ  ಶಿವುಕುಮಾರ, ಸಿರವಾರ ವಿಭಾಗದ ಮುಖ್ಯ ಎಂಜಿನಿಯರ್ ಗುಪ್ತ, ಮಾನ್ವಿ ತಹಶೀಲ್ದಾರ್ ಎಂಪೂರೆ ಧರಣಿ ನಿರತರ ಜೊತೆ ಮಾತನಾಡಿ, ಕಾಲುವೆಗಳ ಮೇಲೆ 144 ನಿಷೇಧಾಜ್ಞೆ  ಜಾರಿ ಮಾಡಿ ಎರಡು ದಿನಗಳಲ್ಲಿ ಈ ಭಾಗಕ್ಕೆ ನೀರು ಹರಿಸುವುದಾಗಿ ಭರವಸೆ ನೀಡಿದ ನಂತರ ಬಂದ್ ಕೊನೆಗೊಳಿಸಲಾಯಿತು.ಬಿಜೆಪಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶಂಕ್ರಪ್ಪ, ಜಿಲ್ಲಾ ಬಿಜೆಪಿ ಮುಖಂಡರಾದ ಗಂಗಾಧರ ನಾಯಕ, ಬಸವನಗೌಡ ಬ್ಯಾಗವಾಟ, ಆರ್.ತಿಮ್ಮಯ್ಯ, ದೊಡ್ಡ ಬಸಪ್ಪಗೌಡ, ಹರವಿ ಶಂಕರಗೌಡ, ಆರ್.ಕೆ ಚನ್ನಬಸವ, ಶಿವಶರಣಗೌಡ ಲಕ್ಕಂದಿನ್ನಿ, ವೈ ಅಮರೇಶಪ್ಪಗೌಡ, ರಾಜಪ್ಪಗೌಡ ಗಣದಿನ್ನಿ, ಚನ್ನಬಸವ ಚನ್ನೂರು ಸೇರಿದಂತೆ ಕೆಳಭಾಗದ ನೂರಾರು  ರೈತರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.