ಭಾನುವಾರ, ಜನವರಿ 19, 2020
19 °C

ಕಾಲ ಮಾಗಿದ್ಹಂಗ ಪ್ರೀತಿ ಗಟ್ಟಿ ಆದ್ಹಂಗ

ಮೃದುಲಾ Updated:

ಅಕ್ಷರ ಗಾತ್ರ : | |

‘ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಃಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿ­ಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬.ಬ್ಯಾಸಗಿ ಝಳ ತಾಕಲಾರ್ದ ಹಂಗ ಅಪ್ಪ ಹಿತ್ತಲದಾಗ ತೋಟ ಮಾಡ್ಯಾರ. ಅಲ್ಲಿ ತಣ್ಣಗೆ ಕುತ್ಗೊಂಡು ಕಷ್ಟ ಸುಖ ಮಾತಾಡೂ ಮುಂದ ನಾವು ಮಕ್ಕಳು ಇಬ್ಬರ ಮುಖ ಮಿಕಮಿಕ ನೋಡ್ಕೊಂತ ಸುಮ್ನಾಗಿದ್ವಿ. ಮೈ ಇಡೀ ಕಣ್ಣಾಗಿದ್ವು. ಕಿವಿಯಾಗಿದ್ವು. ಅಕ್ಕ–ತಂಗಿ ಇಬ್ರೂ ಕಷ್ಟ ಉಂಡು ಗಟ್ಟಿಯಾದೋರು. ಅಮ್ಮ ಅತ್ತು ಹಗುರಾಗ್ತೀನಿ ಅಂತಂದ್ರ, ಅತ್ರ ಮಂದಿಮುಂದ ಹಗುರಾಗ್ತೀವಿ ಅನ್ನೂ ನಂಬಿಕಿ ತಂಗೀದು. ಭಾಳ ತ್ರಾಸ ಆದ್ರ ಕಣ್ಣೀರಿನ ಮುತ್ತು ಗಲ್ಲಗುಂಟ ಇಳೀತಾವ. ಮುತ್ತಿನ ಮಣಿಯಂಥ ಬಣ್ಣ ನಮ್ಮ ಚಿಗ್ಗವ್ವಂದು. ಹಾಲಿನ ಕೆನಿ ಮ್ಯಾಲೆ ಹಬೆ ಇಬ್ಬನಿ ಕುಂತಂಗ ಕಾಣ್ತದ ಅವಾಗ.ಚಿಕ್ಕಮ್ಮ ಮಾತು ಮುಂದುವರಿಸಿದ್ರು. ‘ಅಳೂದಂದ್ರ ಏನು? ನಾವು ನಮ್ಮ ದೌರ್ಬಲ್ಯವನ್ನು ತೋರಸೂದು. ನಾವು ನಂಬಿದ್ದು ಎಲ್ಲೊ ಖೊಟ್ಟಿ ಆಗೇದ ಅಂತ ತ್ರಾಸ ಮಾಡ್ಕೊಳ್ಳೂದು. ನಂಬಿದೆದಿಗೆ ಕಾಲ ನೀಡೂ ಪೆಟ್ಟು. ಅದು ಯಾವಾಗಲೂ ಎದಿ ಮುರದು ಬಿರದು ಬರೂ­ಹಂಗ ಇರ್ತದ. ಈ ದುಃಖ್ಖದ್ದ ಕಟ್ಟಿ ಮುರದು ಬರೂವ ನೀರೇ ಕಣ್ಣೀರು. ಅವಕ್ಕೂ ಗಟ್ಟಿಯಾಗಬೇಕು. ಕಲ್ಲಾಗಬೇಕು. ಮನಸು ಹೂ ಕಲ್ಲಾಗಬೇಕು. ಅಂದ್ರ ಸಂತೋಷ ಆದಾಗ ಹೂವಿನ್ಹಂಗ ಅರಳೂದು. ನೋವು ಬಂದ್ರ ಕಲ್ಲಿನ್ಹಂಗ ಗಟ್ಟಿಯಾಗೂದು ಅಷ್ಟೆ.ನಾವು ಅಳೂದ್ರಿಂದ ಏನಾಗ್ತದ? ಇಷ್ಟಕ್ಕೂ ನಮ್ಮ ತ್ರಾಸೇ ದೊಡ್ದು ಅಂದ್ಕೊಂಡಾಗ ಅಳ್ತೀವಿ. ನಮಗ ಎದುರಸಾಕ ಆಗ್ದೇ ಇರೂದು ಯಾವುದೂ ನಮ್ಮ ಜೀವನದಾಗ ಘಟಿಸಾಕ ಸಾಧ್ಯನೇ ಇಲ್ಲ. ಇದು ನಮ್ಮ ಜೀವನದೊಳಗ ಆಗೇದ ಅಂದ್ರ, ಅದಕ್ಕ ನಾವು ಲಾಯಕ್ಕದೀವಿ. ಅದನ್ನು ಎದುರಿಸುವ, ನಿಭಾಯಿಸುವ ಛಾತಿ ನಮಗದ ಅಂತನೇ ಅರ್ಥ. ಹಂಗಿದ್ದಾಗ ಕಣ್ಣೀರು ಸುರಿಸಿ, ಸ್ವಮರುಕದ ಬಾವಿಯೊಳಗ ನಮ್ಮನ್ನೇ ನಾವು ದೂಡಬೇಕು ಯಾಕ?’

ಇಬ್ಬರೂ ಅಕ್ಕಾ ತಂಗೇರು ಹತ್ತು ವರ್ಷದ ನಂತರ ಮಾತಾಡಾಕ ಕುಂತಿದ್ರು. ಅಳಾಕ, ನಗಾಕ ಎರಡಕ್ಕೂ ರಾಶಿ ರಾಶಿ ಮಾತುಗಳಿದ್ವು. ಇವರ ಸಾಲಿಗೆ ದೊಡ್ಡಮ್ಮನೂ ಸೇರ್ಕೊಂಡರ ಅಲ್ಲೊಂದು ಬದುಕಿನ ಪಡಸಾಲಿನ ಬಿಚ್ಕೊಂತದ.ಅವರು ಸೀರಿ ತೊಗೊಂಡ ಲೆಕ್ಕದಿಂದ ಶುರು ಆಗುವ ಮಾತು, ದೇವರಿಗೆ ಒಂದು ಕೈ ನೋಡ್ಕೊಳ್ಳೂತನಾನೂ ಹೋಗ್ತದ. ಅವರಿಬ್ಬರ ನಡು ನಾನು ಬಾಯಿ ಹಾಕಿದ್ದೆ. ‘ಯಾರರೆ ಅನುಮಾನಿಸ್ದಾಗ, ಅವಮಾನ ಮಾಡ್ದಾಗ, ನಿರ್ಲಕ್ಷ್ಯ ಮಾಡ್ದಾಗ, ನಮ್ಮ ಇರುವನ್ನು ಅಲ್ಲಗಳೆದಾಗ ಮಾತ್ರ ಅಳು ಉಕ್ಕಿ ಬರ್ತದ. ಅದನ್ನು ತಡ್ಯಾಕ ಆಗಾಂಗಿಲ್ಲ. ನೀನೂ ಕಾಕಾರೂ ೩೫ ವರ್ಷಾ ಸಂಸಾರ ಮಾಡೇರಿ. ಈಗ ಹಿಂಗ ಹೇಳ್ತಿ. ನೀ ಖರೆ ಹೇಳು ಮದಿವಿಯಾದ ಹೊಸತರೊಳಗ ಅತ್ತಿಲ್ಲೇನು?’ಚಿಕ್ಕಮ್ಮ ಸುಮ್ಮನಾಗಿದ್ಲು. ಅಳು ಬರ್ತಿತ್ತೇನೋ? ಇಲ್ಲ. ಒಮ್ಮೆ ನಮ್ಮನಿ ಮಾವಿನ ಗಿಡ ದಿಟ್ಟಿಸಿ ನೋಡ್ದಕ್ಕಿನ, ‘ನೋಡಲ್ಲೆ, ಆ ದೊಡ್ಡ ಮಾವಿನ ಕಾಯಿನ ಎಲಿ ಹೆಂಗ ಮರೀ ಮಾಡ್ಯಾವು ನೋಡು... ಎಷ್ಟು ಮಂಗ್ಯಾ ಬಂದ್ರೂ ಕಂಡಿಲ್ಲದು’ ಅಂದ್ರು. ಅಂಗಳದಾಗ ನಿಂತು ಹಿಸಿಕಿ ಕೊಟ್ಟ ಹಣ್ಣು, ಕಣ್ಮುಚ್ಚಿ ಹೀರ್‌ಕೊಂತ ನಿಂತ ನನಗ ಆ ಕಾಯಿ, ಎಲಿ, ಮಂಗ್ಯಾ ಯಾವೂ ಕಾಣವಲ್ದಾಗಿತ್ತು. ನಾನು ಚಿಕ್ಕಮ್ಮನಿಗೆ ಸವಾಲು ಹಾಕೇನಿ ಅನ್ನೂ ಮದದೊಳಗ ರಸ ಹೀರ್ತಿದ್ದೆ.‘ಮನಸು ಹಂಗೆ. ಕೆಲವೊಮ್ಮೆ ಹುಡುಕಿ ಹೆಕ್ಕಿ, ಹಣ್ಣು ಕಿತ್ತೊಗಿಯೂ ಮಂಗ್ಯಾನ್ಹಂಗ. ಇನ್ನೂ ಕೆಲವೊಮ್ಮೆ ಯಾರ ಕಣ್ಣಿಗೂ ಕಾಣದೇ ಇರೂಹಂಗ ಬೆಚ್ಚಗೆ ಕಾಪಿಡುವ ಎಲಿ ಇದ್ಹಂಗ. ಇದು ಕಡೀಕ ಕೇಳೂದು ನಮ್ಮ ಮಾತು ಮಾತ್ರ. ಎಲ್ಲಿ ಮಂಗ್ಯಾ ಆಗಬೇಕು? ಎಲ್ಲಿ ಮನಶಾ ಆಗಬೇಕು ಅನ್ನೂ ನಿರ್ಧಾರ ನಮ್ಮದೇ ಆಗಿರ್ಬೇಕು. ಅಳ್ತಿದ್ದೆ. ನಮ್ಮತ್ತಿ ಎಲ್ಲಾ ಹೆಣ್ಣ ಹಡದಿಯಲ್ಲಬೇ ಅಂತ ಹಂಗಿಸಿದಾಗೆಲ್ಲ ಅಳ್ತಿದ್ದೆ.ಹಿಂಗೆ ಒಮ್ಮೆ ಅತ್ತು ಅತ್ತು ಹೈರಾಣಾದಾಗ ಅನಿಸಿದ್ದು ಅತ್ರೇನು ಮಕ್ಕಳು ಗಂಡಾಗ್ತಾವ? ಇಲ್ಲ. ಅತ್ತೇನು ಪ್ರಯೋಜನ? ದೇವರು ಹೆಣ್ಣು ಕೊಟ್ಟಾನ. ನಮಗೂ ಅಂಥಾ ಹೆಣ್ಣು ಕೊಡಲಿಲ್ಲ ಅಲ್ಲ ಅಂತ ಮಂದಿ ಕರಬೂಹಂಗ ಮಕ್ಕಳನ್ನ ಬೆಳಸ್ತೀನಿ ಅಂತ ನಿರ್ಧಾರ ಮಾಡ್ದೆ. ಯಾವ ಕಾರಣಕ್ಕೂ ಅಳೂದಿಲ್ಲ. ದೇವರು ನಾ ಅತ್ತೂ ಕರದು ಮಾಡ್ಲಿ ಅನ್ನೂವಂಥ ಸಂದರ್ಭ ತಂದಾಗೂ ಕಲ್ಲಾಗಿದ್ದೆ. ಇದು ಜಿದ್ದು. ದೇವರ ಮ್ಯಾಲಿನ ಜಿದ್ದು. ಈ ಜಿದ್ದಿನಿಂದ ಇನ್ನೊಬ್ಬರಿಗೆ ತ್ರಾಸಂತೂ ಇಲ್ಲಲ್ಲ.  ಆಮೇಲೆ ನಿಮ್ಮಣ್ಣ ಹುಟ್ದಾ. ಆ ಮಾತು ಬ್ಯಾರೆ. ಆದ್ರ ಇವೊತ್ತಿಗೂ ಅಳಬಾರದು ಅನ್ನೂ ನಿರ್ಧಾರ ಗಟ್ಟಿಯಾಗಿಯೇ ಉಳದದ.ಇದು ನಮ್ಮೊಳಗಿನ ಬೆಳಕು. ಅದು ನಮಗೇ ಕಾಣಬೇಕು. ನಮ್ಮ ಜೀವನಾನ ತೋರಬೇಕು. ಮುಂದ ಅಳಬೇಕು ಅನ್ನಸ್ದಾಗಲೆಲ್ಲ ಬೇಂದ್ರೆ ಅಜ್ಜನ ಪದಗಳು ನನಗ ಗಟ್ಟಿಯಾದ್ವು. ರೊಟ್ಟಿ ಬಡ್ಕೊಂತ ‘ನನ್ನ ಕೈ ಹಿಡಿದಾಕೆ ಅಳುನುಂಗಿ ನಗು ಒಮ್ಮೆ, ನಾನೂನು ನಕ್ಕೇನ’ ಹಾಡು ಹಾಡ್ತಿದ್ರ ರೊಟ್ಟಿ ತೆಳು ಆಗ್ತಿದ್ವು. ಮನಸೂ ತಿಳಿ ಆಗ್ತಿತ್ತು.ತೀರ ಅಂಥ ಸಂದರ್ಭ ಬಂದ್ರ, ನೀನು ಇದನ್ನ ಮನನ ಮಾಡ್ಕೊ. ‘ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ’ ‘ಬಡತನ ಗಿಡತನ ಕಡೆತನಕುಳಿದಾವೇನ, ಎದೆಹಿಗ್ಗು ಕಡೆ ಮಟ್ಟ, ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ, ಕಡೆಗೋಲು ಹಿಡಿ ಹುಟ್ಟ’ ಅಂತ ಹಾಡಾಕ ಸುರು ಮಾಡಿದ್ರು.ಮೊದಲಾದ್ರ ಇವರ ಚಿತ್ರಹಾರ್ ಮುಗಿಯೂದಿಲ್ಲ ಅಂತ ಮೂಗುಮುರಿಯೂ ಮಕ್ಕಳು ಅವೊತ್ತು ಸುಮ್ನ ಕೇಳಿರಲಿಲ್ಲ. ಕೇಳಿ ಸುಮ್ನ ಆಗಲೂ ಇಲ್ಲ. ‘ಗಂಡ ಅಂತಾನಂತ ಅತ್ಗೊಂತ ಕುಂತ್ರ, ಸಿಟ್ಟಿಗೆದ್ರ ಬದುಕು ಮೂರಾಬಟ್ಟಿ ಆಗ್ತದ. ಕಟ್ಗೊಂಡ ಗಂಡ ಪೂರ್ವಜನ್ಮದ ಮಗಾ ಅಂತ ತಿಳ್ಕೊಂಡು ಕ್ಷಮಿಸ್ಕೊಂತ ಹೋಗಬೇಕು. ಅವರೂ ಅಷ್ಟೆ.

ಕಟ್ಗೊಂಡು ಹೆಂಡ್ತಿ, ಮಗಳಿದ್ಹಂಗ ಅನ್ನೂ ಮಮಕಾರ ಬೆಳಸ್ಕೊಂಡ್ರ ಜಗಳ ಕಡಿಮಿ ಆಗ್ತಾವ. ಎದಿಹಿಗ್ಗು ಉಳದೇ ಉಳೀತದ... ಇವೆಲ್ಲ ಕಾಲ ಮಾಗಿದ್ಹಂಗ, ಪ್ರೀತಿ ಗಟ್ಟಿ ಆದ್ಹಂಗ ಬರ್ತದ. ಈಗೀಗ ನೀವು ಪ್ರೀತಿ ಬಲಿಯಾಕೆ ಬಿಡೂದಿಲ್ಲ. ಪ್ರೇಮದ ಕಾವು ಇಳಿಯೂ ಮುನ್ನ, ಪ್ರೇಮದ ಪೂರ ಕಡಿಮಿ ಆಗಿ, ನದಿ ಹೊಳಿ ಹರಿಯೂ ಮೊದಲೇ ದಾರಿ ಬ್ಯಾರೆ ಅನ್ನೂಹಂಗ ಜಗಳಾಡ್ತೀರಿ. ಕಾದು ನೋಡ್ರಿ. ‘ಜಗಳ ಕಾಯ್ದು’ ಅಲ್ಲ’ ಅಂತಹೇಳಿ ಸುಮ್ನಾಗಿದ್ರು.ಈ ‘ಎದಿಹಿಗ್ಗು ಕಡೆತನಕ’ ಅನ್ನೂ ಪದ, ಹಸಿ ಗೋಡಿಯೊಳಗ ಹಳ್ಳ ನೆಟ್ಟಂಗ ಗುರಿ ಮುಟ್ಟಿತ್ತು. ಅನ್ನೋರು ಅಂತಾರ. ಆಡ್ಕೊಳ್ಳೋರು ಆಡ್ಕೊಂತಾರ. ನಮ್ಮ ಎದಿ ಹಿಗ್ಗು ನಮಗಿದ್ರ ಯಾವ ನೋವು ಎಷ್ಟು ಹೊತ್ತಿನ ಅತಿಥಿ? ಸದಾ ಕಣ್ಣೀರೊಳಗ ತೇಲೂ ನನಗ ಇದು ಪಾಠ ಆಗಿತ್ತು. ಆದ್ರ ಗಟ್ಟಿಯಾ­ಗೂದು, ಗಟ್ಟಿ ಮಾಡೂದು ಅವರಿವರ ಮಾತಲ್ಲ. ನಮ್ಮ ಬದುಕು.

ಪ್ರತಿಕ್ರಿಯಿಸಿ (+)