ಗುರುವಾರ , ಮೇ 13, 2021
39 °C

ಕಿಟೆಲ್ ಸಾಹಿತ್ಯ: 7 ಸಂಪುಟ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮಂಗಳೂರು: ಜರ್ಮನಿ ಮೂಲದ ಮತಪ್ರಚಾರಕ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರು ಮಂಗಳೂರಿಗೆ ಆಗಮಿಸಿದ್ದು ಧರ್ಮಪ್ರಚಾರ ಉದ್ದೇಶದಿಂದ. ಆದರೆ ಅವರು ಇಲ್ಲಿ ಸಲ್ಲಿಸಿದ ಅಚ್ಚಳಿಯದ ಸೇವೆ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ.ಕಿಟೆಲ್ ಅವರ ವ್ಯಾಕರಣ ಶಾಸ್ತ್ರ ಮತ್ತು ಕನ್ನಡ ನಿಘಂಟು, ಭಾಷಾ ಕ್ಷೇತ್ರಕ್ಕೆ ಅವರ ಗಣನೀಯ ಕೊಡುಗೆ. ಏಪ್ರಿಲ್ 7 ಈ ವಿದ್ವಾಂಸನ ಹುಟ್ಟುಹಬ್ಬ. ಈ ವರ್ಷ 180ನೇ ಹುಟ್ಟುಹಬ್ಬವಾಗಲಿದೆ.ಕರ್ನಾಟಕ ಥಿಯೋಲಾಜಿಕಲ್ ಕಾಲೇಜು (ಕೆಟಿಸಿ) ಕಿಟೆಲ್ ಅವರ ಸಾಹಿತ್ಯ ಕೃತಿಗಳನ್ನು `ಕಿಟೆಲ್ ಸಂಪೂರ್ಣ ಸಾಹಿತ್ಯ~ ಹೆಸರಿನಡಿ ಏಳು ಸಂಪುಟಗಳಲ್ಲಿ ಹೊರತರಲು ನಿರ್ಧರಿಸಿದೆ.`ಈ ಏಳು ಸಂಪುಟಗಳಲ್ಲಿ ಮೊದಲನೆಯದು ಕಿಟೆಲ್ ಸಾಹಿತ್ಯಕ್ಕೆ ಸಂಬಂಧಿಸಿದ್ದು ಇಂಗ್ಲಿಷ್‌ನಲ್ಲಿರುತ್ತದೆ. ಉಳಿದ ಸಂಪುಟಗಳು ಕನ್ನಡದಲ್ಲಿರುತ್ತವೆ~ ಎಂದು ಕರ್ನಾಟಕ ಥಿಯಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ರತ್ನಾಕರ ಸದಾನಂದ `ಪ್ರಜಾವಾಣಿ~ಗೆ ತಿಳಿಸಿದರು. ಮೊದಲ ಸಂಪುಟ ಸಿದ್ಧವಾಗುತ್ತಿದ್ದು, ಮುದ್ರಣದ ಹಂತದಲ್ಲಿದೆ. ಜೂನ್‌ನಲ್ಲಿ ಈ ಸಂಪುಟ ಹೊರತರುವ ನಿರೀಕ್ಷೆ ಕೆಟಿಸಿಯದ್ದು.ಎರಡನೇ ಸಂಪುಟ ಗದ್ಯ ಮತ್ತು ಛಂದಶ್ಶಾಸ್ತ್ರ ಕ್ಷೇತ್ರದಲ್ಲಿ ಕಿಟೆಲ್ ನಡೆಸಿದ ಅಧ್ಯಯನ ಒಳಗೊಂಡಿದೆ. ನಾಗವರ್ಮನ ಛಂದಸ್ಸು ಮತ್ತು ಕೇಶಿರಾಜನ ಶಬ್ದಮಣಿದರ್ಪಣದ ಮೇಲೆ ಮಾಡಿರುವ ಅಧ್ಯಯನದ ವಿವರ ಒಳಗೊಳ್ಳಲಿದೆ. ಮೂರನೇ ಸಂಪುಟವು ಕಿಟೆಲ್‌ನ ಸೃಜನಶೀಲ ಕೃತಿ `ಕಥಾಮಾಲೆ~ ಮತ್ತು ಪಠ್ಯಪುಸ್ತಕಗಳಲ್ಲಿ ಪ್ರಕಟವಾಗಿದ್ದ ಸಣ್ಣ ಕವಿತೆಗಳನ್ನು ಹೊಂದಲಿದೆ. ನಾಲ್ಕನೇ ಸಂಪುಟ, ಕಿಟೆಲ್ ಅನುವಾದಿಸಿದ್ದ ಕ್ರಿಸ್ತ ಸಭಾ ಚರಿತ್ರೆ ಮತ್ತು ಇತಿಹಾಸಕಾರ ಎಂ.ಮಾರಿಸ್ ಅವರ ಭಾರತದ ಇತಿಹಾಸ ಮತ್ತು ಇಂಗ್ಲೆಂಡ್‌ನ ಇತಿಹಾಸ ಕೃತಿಗಳ ಅನುವಾದ ಹೊಂದಲಿದೆ.ಕಿಟೆಲ್ ಅವರ ಮಹತ್ವಾಕಾಂಕ್ಷೆಯ ಕೃತಿ `ಕನ್ನಡ ವ್ಯಾಕರಣ~ ಐದನೇ ಸಂಪುಟದಲ್ಲಿರುತ್ತದೆ. ಕವಿತೆಗಳ ಸಂಗ್ರಹ ಕಾವ್ಯಮಾಲೆ ಆರನೇ ಸಂಪುಟದಲ್ಲಿ ಒಳಗೊಳ್ಳಲಿದೆ. ಕೊನೆಯ ಸಂಪುಟವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತ್ಯ ಒಳಗೊಳ್ಳಲಿದೆ. ಈ ಕ್ಷೇತ್ರದಲ್ಲಿ ಕಿಟೆಲ್ ಬರೆದಿರುವುದು ಕಡಿಮೆ ಎನ್ನಲಾಗುತ್ತಿದೆ.ಕಿಟೆಲ್ ಅವರ ವ್ಯಾಕರಣ ಕೃತಿ ಪ್ರೇರಣಾಶೀಲ ಎನ್ನುತ್ತಾರೆ ಕರ್ನಾಟಕ ಥಿಯಾಲಜಿಕಲ್ ರಿಸರ್ಚ್ ಸೆಂಟರ್‌ನ ಪ್ರೊ.ಎ.ವಿ.ನಾವಡ ಅವರು. ಕನ್ನಡದಲ್ಲಿ ಮಹತ್ವಪೂರ್ಣ ಎನಿಸಿದ್ದ ಈ ಕೃತಿ 1901ರಲ್ಲಿ ಪ್ರಕಟವಾಗಿತ್ತು.

ಸಂಪುಟದಲ್ಲಿ ನಾವು ಕಿಟೆಲ್ ಅವರ ನಿಘಂಟು ಸೇರಿಸಿಲ್ಲ. ಬರೇ ನಿಘಂಟೇ 600 ರಿಂದ 700 ಪುಟಗಳಷ್ಟು ಬೃಹತ್ ಗಾತ್ರದ್ದಾಗಿರುವ ಕಾರಣ ಅದನ್ನು ಯಾವುದೇ ಸಂಪುಟದಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.