ಶನಿವಾರ, ಮೇ 15, 2021
24 °C

ಕಿತ್ತೂರು ಸ್ಮಾರಕ ಸ್ಥಳ ನಿಗದಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: `ಐತಿಹಾಸಿಕ ಕಿತ್ತೂರು ಸ್ಮಾರಕದಿಂದ ನೂರು ಮೀಟರ್ ನಿಷೇಧ ಹಾಗೂ ಮುಂದಿನ ಇನ್ನೂರು ಮೀಟರ್ ನಿರ್ಬಂಧಿತ ಪ್ರದೇಶ ಎಲ್ಲಿಯವರೆಗೆ ಬರುತ್ತದೆ ಎಂಬುದನ್ನು  ಪ್ರಾಚ್ಯವಸ್ತು ಹಾಗೂ ಸಂಗ್ರಹಾಲಯ ಇಲಾಖೆಯ ಅಧಿಕಾರಿಗಳು ಮೊದಲು ಸ್ಪಷ್ಟಪಡಿಸಲಿ~ ಎಂದು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧೀಶ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕೋರಿದರು.ಕಲ್ಮಠದ ಸಭಾಭವನದಲ್ಲಿ  ಪ್ರಾಚ್ಯವಸ್ತು ಇಲಾಖೆಯ ನಿಯಮದ ಬಗ್ಗೆ ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಚಿಂತನೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.`ಅತಿಕ್ರಮಣ ಹಾಗೂ ನಿಯಮ ಬಾಹಿರವಾಗಿ ಕಟ್ಟಡ ಕಟ್ಟಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರ ಜೊತೆಗೆ, ಯಾವುದು ನಿಯಮ ಬಾಹಿರ~ ಎಂಬ ಸಂಗತಿ ಕುರಿತು ಚರ್ಚಿಸಲು ತಾವು ಹಾಗೂ ಕೆಲವು ಮುಖಂಡರು ಸಿದ್ಧರಿರುವುದಾಗಿ ತಿಳಿಸಿದರು.`ಅತಿಕ್ರಮಣ ಹಾಗೂ ನಿಯಮ ಬಾಹಿರ ಕಟ್ಟಡ ನಿರ್ಮಾಣ ವಿರುದ್ಧ ಪ್ರತಿಭಟಿಸಲು, ಅತಿ ಹೆಚ್ಚು ಜನರನ್ನಾಕರ್ಷಿಸುತ್ತಿರುವ ಐತಿಹಾಸಿಕ ಕಿತ್ತೂರು ಉತ್ಸವ ಬಹಿಷ್ಕರಿಸುವ ಬೆದರಿಕೆ ಒಡ್ಡಲಾಗುತ್ತಿದೆ. ಉತ್ಸವ ಆಚರಣೆ ಸಂದರ್ಭದಲ್ಲಿ ಇಂತಹ ಹೋರಾಟ ಮಾಡುವುದು ಬೇಡ~ ಎಂದು ಅವರು ಕಿವಿಮಾತು ಹೇಳಿದರು.`ಕಲ್ಲು ಹೊಡೆಯುವುದೇ ಹೋರಾಟವೆಂದು ತಿಳಿದಿದ್ದೇವೆ.  ವಿರೋಧಿಗಳಿಗೆ ಸವಾಲ್ ಹಾಕುವುದೂ ಹೋರಾಟದ ರೀತಿಯಲ್ಲ. ಆರೋಪದ ವಿರುದ್ಧ ಜಾಗೃತರಾಗಿ ಚಿಂತನೆಯ ಮೂಲಕ ಉತ್ತರಿಸುವುದೇ ಹೋರಾಟವಾಗಿದೆ~ ಎಂದು ವ್ಯಾಖ್ಯಾನಿಸಿದರು.`ಸಂರಕ್ಷಿತ ಐತಿಹಾಸಿಕ ಕೋಟೆಯ ಅವಶೇಷ ಹಾಳು ಮಾಡಿ ಬದುಕುವ ಉದ್ದೇಶ ಇಲ್ಲಿಯ ಜನಕ್ಕಿಲ್ಲ. ಕಿತ್ತೂರಿನ  ಸ್ಮಾರಕಗಳು ಯಾವುವು ಎಂಬುದನ್ನು ಮೊದಲು ತಿಳಿವಳಿಕೆ ಮಾಡಬೇಕು. ಅದರ ನಿಯಮದಡಿ ಕಟ್ಟಡಗಳು ಬಂದರೆ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡುವುದಕ್ಕೋಸ್ಕರ ಈ ಸಭೆ ಆಯೋಜಿಸಲಾಗಿದೆ. ಇದು ಯಾರ ಪರ ಅಥವಾ ವಿರೋಧಿ ಸಭೆಯಲ್ಲ~ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.ಸ್ಥಳೀಯ ರಾಣಿ ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಚನ್ನಪ್ಪ ಮಾರಿಹಾಳ ಮಾತನಾಡಿ, `ಚನ್ನಮ್ಮ ರಾಣಿಗೆ ಸಂಬಂಧಿಸಿದ ಕುರುಹುಗಳನ್ನು ಮೊದಲು ಉಳಿಸಬೇಕು. ಅಭಿವೃದ್ಧಿಗೆ ಯಾರೂ ವಿರೋಧಿಗಳಲ್ಲ. ಬೇಕಾದರೆ ಜಮೀನು ಬಿಟ್ಟು ಕೊಡಲು ಸಿದ್ಧ. ಅದಕ್ಕೆ ತಕ್ಕ ಪರಿಹಾರ ಸರಕಾರ ನೀಡಲಿ~ ಎಂದು ಹೇಳಿದರು.`ಕಳಪೆ ಮಟ್ಟದ ಕಾಮಗಾರಿ ಕೋಟೆಯ ಒಳಗಡೆ ನಡೆಯುತ್ತಿದೆ. ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸುವ ಹೊಣೆ ಪ್ರಾಧಿಕಾರದ ಸದಸ್ಯರಿಗೆ ಮಾತ್ರವಿಲ್ಲ, ನಾಗರಿಕರ ಮೇಲೂ ಅದರ ಜವಾಬ್ದಾರಿ ಇದೆ~ ಎಂದು ನುಡಿದರು.

ಬಿಜೆಪಿ ಬ್ಲಾಕ್ ಅಧ್ಯಕ್ಷ ಅಖಂಡಪ್ಪ ಪತ್ತಾರ, ರುದ್ರಪ್ಪ ತಟ್ಟೀಮನಿ, ನಜೀರಸಾಬ್ ಹವಾಲ್ದಾರ, ಮಲ್ಲಣ್ಣ ಸಾಣಿಕೊಪ್ಪ, ಗುಂಡಣ್ಣ ನಾಯಕ  ಇನ್ನಿತರರು ಮಾತನಾಡಿದರು.ಗ್ರಾ. ಪಂ. ಅಧ್ಯಕ್ಷೆ ಸುವರ್ಣ ಹಣಜಿ, ಉಪಾಧ್ಯಕ್ಷ ಅಶೋಕ ಮಡಿವಾಳರ,  ಜಿ. ಪಂ. ಸದಸ್ಯ ಯಲ್ಲಪ್ಪ ವಕ್ಕುಂದ, ತಾ. ಪಂ. ಸದಸ್ಯ ದಿನೇಶ ವಳಸಂಗ, ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಈರಣ್ಣ ಮಾರಿಹಾಳ, ಉಪಾಧ್ಯಕ್ಷ ಸೋಮಶೇಖರ ಬಿಕ್ಕಣ್ಣವರ, ನಿರ್ದೇಶಕರಾದ ಜಗದೀಶ ವಸ್ತ್ರದ, ನಿಜಲಿಂಗಯ್ಯ ಹಿರೇಮಠ, ಶಂಕರ ವಳಸಂಗ, ಜಗದೀಶ ಬಿಕ್ಕಣ್ಣವರ, ಚಂದ್ರಶೇಖರ ದಳವಾಯಿ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.