ಕಿಮ್ಸ್ ಭದ್ರತೆಯ ‘ಸಾಮರ್ಥ್ಯ’ ಹೆಚ್ಚಳ

ಹುಬ್ಬಳ್ಳಿ: ಮಗು ಅಪಹರಣ, ‘ಪ್ರಸಾದ’ದಲ್ಲಿ ವಿಷ ಹಾಕಿ ರೋಗಿಯ ಸಂಬಂಧಿಕರಿಂದ ನಗ–ನಗದು ಕಳವು ಯತ್ನ ಮುಂತಾದ ಪ್ರಕರಣಗಳಿಂದ ಬೆಚ್ಚಿರುವ ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ.
ಜನವರಿ ತಿಂಗಳಲ್ಲಿ ಕಿಮ್ಸ್ನಲ್ಲಿ ನವಜಾತ ಶಿಶುವೊಂದನ್ನು ಮಹಿಳೆಯೊಬ್ಬರು ಅಪಹರಿಸಿದ ಘಟನೆ ನಡೆದಿತ್ತು. ಇದರ ಹಿನ್ನೆಲೆಯಲ್ಲಿ ಭದ್ರತಾ ಸಲಹೆಗಾರರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಭದ್ರತೆ ಬಲಪಡಿಸಿದ ನಂತರ ಸಲಹೆಗಾರರನ್ನು ನೇಮಕ ಮಾಡುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಸಂಸ್ಥೆಯ ಆಡಳಿತ ನಿರ್ಧರಿಸಿದೆ.
ಇದಕ್ಕಾಗಿ ಹೆಚ್ಚು ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಇವುಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲು ನಿರ್ಧರಿಸಲಾಗಿದೆ. ಭದ್ರತಾ ಸಲಹೆಗಾರರ ನೇಮಕವಾದ ನಂತರ ಈ ಏಜೆನ್ಸಿಯ ಉಸ್ತುವಾರಿ ಕೂಡ ಅವರ ಹೆಗಲಿಗೆ ಹೊರಿಸುವುದು ಆಡಳಿತದ ಉದ್ದೇಶ.
‘ಆರು ತಿಂಗಳಿಂದ ಕಿಮ್ಸ್ನಲ್ಲಿ ಕಾನೂನು ಸಲಹೆಗಾರರು ಇದ್ದಾರೆ. ಕಾನೂನಾತ್ಮಕ ಅಂಶಗಳಿಗೆ ಸಂಬಂಧಿಸಿದ ವಿಷಯಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುವುದಕ್ಕೂ ಸಲಹೆಗಾರರ ನೇಮಕ ಆಗಬೇಕಿದೆ.
ಈ ಕುರಿತು ಪ್ರಯತ್ನ ನಡೆಯುತ್ತಿದೆ. ಅದಕ್ಕೂ ಮುನ್ನ ಭದ್ರತೆಗೆ ಸಂಬಂಧಿಸಿ ಏಜೆನ್ಸಿಯೊಂದನ್ನು ನಿಗದಿ ಮಾಡಲಾಗುವುದು’ ಎಂದು ಕಿಮ್ಸ್ ನಿರ್ದೇಶಕ ಡಾ.ಡಿ.ಡಿ.ಬಂಟ್ ‘ಪ್ರಜಾವಾಣಿ’ಗೆ ತಿಳಿಸಿದರು.
ಭದ್ರತೆ ಹೆಚ್ಚಿಸುವ ಕಾರ್ಯದ ಅಂಗವಾಗಿ ಕಿಮ್ಸ್ನಲ್ಲಿ ಹೆಚ್ಚು ಸಾಮರ್ಥ್ಯದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಇದ್ದ ಟಿವಿಎಲ್ (ಟೆಲಿವಿಷನ್ ವರ್ಟಿಕಲ್ ಲೈನ್ಸ್) ಕ್ಯಾಮೆರಾಗಳನ್ನು ತೆಗೆದು ಇದೀಗ ನಾಲ್ಕು ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೊದಲ ಹಂತವಾಗಿ ವಿವಿಧ ಭಾಗಗಳ ಏಳು ಗೇಟ್ಗಳಿಗೆ ಇಂಥ ಕ್ಯಾಮೆರಾ ಅಳವಡಿಸಲಾಗಿದೆ. ಆಸ್ಪತ್ರೆ, ಹೊರರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕಗಳ ಬಾಗಿಲ ಬಳಿಯ ದೃಶ್ಯಾವಳಿಗಳನ್ನು ಸೆರೆ ಹಿಡಿಯಲಿರುವ ಈ ಕ್ಯಾಮೆರಾಗಳು ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ಆಡಳಿತ ಅಧಿಕಾರಿ ಕಚೇರಿಯಲ್ಲಿರುವ ಕಂಪ್ಯೂಟರ್ ಪರದೆಯ ಮೇಲೆ ಮೂಡಿಸುತ್ತವೆ.
‘ಸಂಸ್ಥೆಯಲ್ಲಿ ಮೊದಲು 600ರಿಂದ 700 ಟಿವಿಎಲ್ ಸಾಮರ್ಥ್ಯದ ಕ್ಯಾಮೆರಾಗಳಿದ್ದವು. ನಂತರ ಅವುಗಳನ್ನು 1,000 ಟಿ.ವಿ.ಎಲ್. ಸಾಮರ್ಥ್ಯಕ್ಕೆ ಏರಿಸಲಾಯಿತು. ಇದೇ ಮೊದಲ ಬಾರಿ ಮೆಗಾಪಿಕ್ಸೆಲ್ ಕ್ಯಾಮೆರಾಗಳು ಸಂಸ್ಥೆಯ ಪ್ರಮುಖ ಗೇಟ್ಗಳಲ್ಲಿನ ಚಿತ್ರಾವಳಿಗಳನ್ನು ಸೆರೆಹಿಡಿಯಲಿವೆ’ ಎಂದು ಕಿಮ್ಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಎ.ವಿ.ಪಾಟೀಲ ತಿಳಿಸಿದರು.
ಸದ್ಯ ಕ್ಯಾಮೆರಾಗಳು ಮತ್ತು ಅವುಗಳ ಉಸ್ತುವಾರಿಯನ್ನು ಮಾಹಿತಿ ತಂತ್ರಜ್ಞಾನ ವಿಭಾಗದವರೇ ನೋಡಿಕೊಳ್ಳುತ್ತಿದ್ದಾರೆ. ಏಜೆನ್ಸಿ ನಿರ್ಧಾರವಾದ ನಂತರ ಈ ಕಾರ್ಯವನ್ನು ಅವರೇ ನೋಡಿಕೊಳ್ಳಲಿದ್ದಾರೆ. ‘ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆ, ಹೊಸ ಕ್ಯಾಮೆರಾಗಳ ಅಳವಡಿಕೆ, ದುರಸ್ತಿ ಇತ್ಯಾದಿ ಕಾರ್ಯಗಳನ್ನು ಏಜೆನ್ಸಿಯವರು ನೋಡಿಕೊಳ್ಳಲಿದ್ದಾರೆ’ ಎಂದು ಬಂಟ್ ವಿವರಿಸಿದರು.
‘ಟಿವಿಎಲ್ ಕ್ಯಾಮೆರಾಗಳಲ್ಲಿ ದೃಶ್ಯಾವಳಿಗಳು ಸ್ಪಷ್ಟವಾಗಿ ಮೂಡುವುದಿಲ್ಲ. ಮೆಗಾಪಿಕ್ಸೆಲ್ನಲ್ಲಿ ವ್ಯಕ್ತಿಯ ಮುಖ, ತೊಟ್ಟಿರುವ ಬಟ್ಟೆಯ ಬಣ್ಣ ಇತ್ಯಾದಿ ಸ್ಪಷ್ಟವಾಗಿ ದಾಖಲಾಗುತ್ತದೆ. ಇದರಿಂದಾಗಿ ವ್ಯಕ್ತಿಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ’ ಎದರು.
ಮುಖ್ಯ ರಸ್ತೆಗೂ ಬರಲಿದೆ ಕ್ಯಾಮೆರಾ: ಸಂಸ್ಥೆಗೆ ಬರುವ ಮುಖ್ಯರಸ್ತೆಯ ದೃಶ್ಯಾವಳಿಗಳನ್ನು ದಾಖಲಿಸುವುದಕ್ಕೂ ಕಿಮ್ಸ್ ಮುಂದಾಗಿದೆ. ರಾತ್ರಿ ಕೆಲಸ ಮುಗಿಸಿ ವಸತಿ ನಿಲಯಗಳಿಗೆ ಹೋಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ವಸತಿ ನಿಲಯಗಳ ದಾರಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆದಿದೆ. ವಿದ್ಯಾರ್ಥಿಗಳು ರಾತ್ರಿ 1 ಗಂಟೆ ವರೆಗೆ ವಾಚನಾಲಯದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಯೂ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಯುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.