ಶನಿವಾರ, ಜುಲೈ 24, 2021
26 °C

ಕಿಮ್ಸ್-ಸಿಮ್ಸ್: ಅವ್ಯವಹಾರ ತನಿಖೆಗೆ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)   ಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಏಕಸದಸ್ಯ ತನಿಖಾ ಆಯೋಗದ ಅಧಿಕಾರಿ ಶೀಘ್ರ ಸಂಸ್ಥೆಗೆ ಆಗಮಿಸಲಿದ್ದಾರೆ.ಆಯೋಗದ ಅಧಿಕಾರಿಯಾಗಿ ಬೆಂಗಳೂರಿನ ನಿವೃತ್ತ ನ್ಯಾಯಾಧೀಶರಾದ ನಾರಾಯಣ ಅವರು ನೇಮಕವಾಗುವ ಸಾಧ್ಯತೆಗಳಿದ್ದು ಒಂದೆರಡು ದಿನಗಳಲ್ಲಿ ಅವರು ಕಿಮ್ಸ್‌ಗೆ ಆಗಮಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಏ. 11ರಂದು ಕಿಮ್ಸ್‌ಗೆ ದಿಢೀರ್ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ದಿನವಿಡೀ ಸಂಸ್ಥೆಯಲ್ಲಿದ್ದು ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಮಾಹಿತಿ ಹಾಗೂ ದಾಖಲೆಗಳನ್ನು ಪಡೆದುಕೊಂಡ ಅವರು ಅವ್ಯವಹಾರ ತನಿಖೆಗೆ ಏಕ ಸದಸ್ಯ ತನಿಖಾ ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದರು.ಎರಡು ದಿನಗಳ ಹಿಂದೆ ಶಿವಮೊಗ್ಗದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್)ಗೆ ಭೇಟಿ ನೀಡಿದ ಅವರು ಅಲ್ಲಿಗೂ ತನಿಖಾ ಆಯೋಗವನ್ನು ಕಳುಹಿಸುವುದಾಗಿ ತಿಳಿಸಿದ್ದರು. ನಾರಾಯಣ ಅವರೇ ‘ಸಿಮ್ಸ್’ಗೂ ತನಿಖಾಧಿಕಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಚಿವ ರಾಮದಾಸ್, ‘ಆಯೋಗದ ತನಿಖಾಧಿಕಾರಿಯ ಹೆಸರನ್ನು ಸೋಮವಾರ ಅಂತಿಮಗೊಳಿಸಲಾಗುವುದು. ನಂತರ ಒಂದೆರಡು ದಿನಗಳಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.ತನಿಖಾಧಿಕಾರಿ ಹುಬ್ಬಳ್ಳಿಯಲ್ಲೇ ಉಳಿದುಕೊಂಡು ತನಿಖೆ ನಡೆಸಲಿದ್ದಾರೆ. ತನಿಖೆಗೆ ಬೇಕಾದ ಪೂರಕ ಮಾಹಿತಿಗಳನ್ನು ಅವರಿಗೆ ಒದಗಿಸಲಾಗುವುದು. 15 ದಿನಗಳ ಒಳಗೆ ವರದಿ ನೀಡಬೇಕೆಂದು ಅವರನ್ನು ಕೋರಲಾಗುವುದು ಎಂದು ರಾಮದಾಸ್ ತಿಳಿಸಿದರು.ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ಕಿಮ್ಸ್‌ಗೆ ದಿಢೀರ್  ಭೇಟಿ ನೀಡಿದ ಸಚಿವರು ಒಟ್ಟು ಆರು ಮಂದಿ ವೈದ್ಯೇತರ ಸಿಬ್ಬಂದಿಯನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದರು.ಜನನ ಪ್ರಮಾಣ ಪತ್ರ ನೀಡಲು, ಪ್ರಸೂತಿ ಆದ ಮೇಲೆ ಮಗುವನ್ನು ತೋರಿಸಲು ಹಾಗೂ ಮಗುವನ್ನು ಮನೆಗೆ ತೆಗೆದುಕೊಂಡು ಹೋಗುವ ಮುನ್ನ ವಿಳಂಬ ಮಾಡುವ ಅಥವಾ ಲಂಚ ಪಡೆಯುವ ಆರೋಪ ಹೆಚ್ಚಾಗಿ ಕೇಳಿ ಬಂದಿತ್ತು.ಹಾಜರಾತಿಯ ವಿಷಯದಲ್ಲೂ ಸಾಕಷ್ಟು ಗೊಂದಲಗಳು ಕಂಡು ಬಂದಿದ್ದವು. ಇಂದಿನ ಸಹಿಯನ್ನು ನಿನ್ನೆಯೇ ಮಾಡುವುದು, ಅನೇಕ ದಿನಗಳ ಸಹಿಯನ್ನು ಒಂದೇ ದಿನ ಮಾಡುವುದು, ಕೆಲಸಕ್ಕೆ ಹಾಜರಾಗದಿದ್ದರೂ ಸಹಿ ಮಾಡುವುದು ಇತ್ಯಾದಿ ‘ಅಕ್ರಮ’ಗಳನ್ನು ಸಚಿವರು ಪತ್ತೆ ಹಚ್ಚಿದ್ದರು.ಹೊರಗುತ್ತಿಗೆಗೆ ಸಂಬಂಧಿಸಿಯೂ ಸಮಸ್ಯೆಗಳನ್ನು ಪತ್ತೆ ಹಚ್ಚಿದ ಸಚಿವರು ಸಂಸ್ಥೆಗೆ ಖರೀದಿಸುವ ಔಷಧಿಯ ಗುಣಮಟ್ಟದ ಬಗ್ಗೆ ಹಾಗೂ ಔಷಧಿ ಖರೀದಿಗೆ ಸಂಬಂಧಿಸಿದ ಟೆಂಡರ್ ಬಗ್ಗೆಯೂ ದೂರುಗಳು ಬಂದಿವೆ ಎಂದು ತಿಳಿಸಿ ಇದಕ್ಕೆ ಸಂಬಂಧಿಸಿ ಕೂಡ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು.ಸದ್ಯದಲ್ಲೇ ಹೊಸ ನಿರ್ದೇಶಕರು

ಕಿಮ್ಸ್‌ಗೆ ಹೊಸ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸೋಮವಾರ ಅಥವಾ ಮಂಗಳವಾರ ಹೊಸ ನಿರ್ದೇಶಕರ ಹೆಸರನ್ನು ಘೋಷಿಸಲಾಗುವುದು ಎಂದು ರಾಮದಾಸ್ ತಿಳಿಸಿದರು.ಏ. 28ರಂದು ನಿರ್ದೇಶಕರ ಹುದ್ದೆಗೆ ಸಂಬಂಧಿಸಿ ಸಂದರ್ಶನ ನಡೆಸಲಾಗಿತ್ತು. ಒಟ್ಟು ಹದಿನಾಲ್ಕು ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು. ಸೋಮವಾರ (ಮೇ 2) ಆಡಳಿತ ಮಂಡಳಿ ಸಭೆ ನಡೆಯಲಿದ್ದು ಅಲ್ಲಿ ಹೊಸ ನಿರ್ದೇಶಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.