ಸೋಮವಾರ, ಜೂನ್ 14, 2021
23 °C

ಕಿರುತೆರೆಗೆ ಹೆಬ್ಬಾಗಿಲು ನಟನೆಯ ಪಾಠ ಶಾಲೆ

ಅಮಿತ್‌ ಎಂ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಸಿನಿಮಾ ಚಿತ್ರೀಕರಣವೊಂದು ಸಾಗುತ್ತಿತ್ತು. ದೂರದ ಊರಿಂದ ಭರವಸೆಗಳನ್ನು ಹೊತ್ತುಕೊಂಡು ಬಂದಿದ್ದ ಯುವಕನ ಮುಖ ಬಾಡಿತ್ತು. ಕಣ್ಣುಗಳಲ್ಲಿ ವಿನೀತ ಭಾವ. ಸೋಲನ್ನೊಪ್ಪಿಕೊಳ್ಳಲು ಸಿದ್ಧನಿಲ್ಲದೆ ಮತ್ತೆ ಮತ್ತೆ ಅಂಗಲಾಚುತ್ತಿದ್ದ ಆತನ ಮೇಲೆ ಕೆಲವರು ಅನುಕಂಪ ಸೂಸುತ್ತಿದ್ದರೆ, ಇನ್ನು ಕೆಲವು ಮಂದಿ ಅಸಡ್ಡೆಯಿಂದ ಅವನ್ನು ನೋಡಿ ತಮ್ಮ ಕೆಲಸದಲ್ಲಿ ಮುಳುಗಿದ್ದರು.ಸ್ಟುಡಿಯೊದ ಒಳಗೆ ನಡೆಯುತ್ತಿದ್ದ ಹತ್ತಾರು ಸಿನಿಮಾ, ಧಾರಾವಾಹಿ ಚಿತ್ರೀಕರಣದಲ್ಲಿ ತನಗೆ ಒಂದಾದರೂ ಪುಟ್ಟ ಅವಕಾಶ ಸಿಗುತ್ತದೆಯೇನೋ ಎಂದು ಕಾದುಕುಳಿತ. ಆದರೆ ಆತನ ನಿರೀಕ್ಷೆಗಳು ಹುಸಿಯಾದವು.  ಆತನ ಪರದಾಟ ನೋಡುತ್ತಿದ್ದವರಾರೋ ‘ಹೀಗೆ ಬಂದು ಕೇಳಿದರೆ ಅಷ್ಟು ಸುಲಭವಾಗಿ ಪಾತ್ರ ಸಿಗುವುದಿಲ್ಲ. ಪ್ರತಿಭೆ ಇದ್ದರೂ ಇಲ್ಲಿ ಹೆಸರು–ಹಿನ್ನೆಲೆ ಮುಖ್ಯ. ಅದೃಷ್ಟವೂ ಜೊತೆಗಿರಬೇಕು. ಸಿನಿಮಾದಲ್ಲಿ ನಟಿಸುವುದು ಕಲಿತುಕೊಂಡು ಬಾ. ಕಲಿಸಲು ಸಾಕಷ್ಟು ಜಾಗಗಳಿವೆ’ ಎಂದರು.ಊರಿಗೆ ಮರಳಿದ ಯುವಕ  ಹಣಹೊಂದಿಸಿಕೊಂಡು ಬಂದು ಅಭಿನಯ ಶಾಲೆ ಸೇರಿದ. ಐದಾರು ತಿಂಗಳಲ್ಲಿ ಮೈಗೂಡಿಸಿಕೊಂಡಿದ್ದ ಪ್ರತಿಭೆಯನ್ನು ಸಾಣೆಗೆ ಒಡ್ಡಿಕೊಂಡ. ಸರ್ಟಿಫಿಕೆಟ್‌ ಹಿಡಿದು ಹೊರಬಂದ ಆತನಲ್ಲಿ ಆತ್ಮವಿಶ್ವಾಸವಿತ್ತು, ಇಂಥವರ ಬಳಿ ಕಲಿತು ಬಂದೆ ಎಂದು ಹೇಳಿಕೊಳ್ಳಲು ಹಿನ್ನೆಲೆಯೂ ಇತ್ತು. ನಿಧಾನವಾಗಿ ಕಿರುತೆರೆಯಲ್ಲಿ ಪುಟ್ಟ ಪಾತ್ರದ ಮೂಲಕ ಜಾಗ ಪಡೆದುಕೊಂಡ ಆತ ಈಗ ಸಿನಿಮಾ ನಟನಾಗಿ ಗುರುತಿಸಿಕೊಂಡಿದ್ದಾನೆ. ಕಂಠೀರವ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಸುವಾಗ ಆತನನ್ನು ಆರಂಭದ ದಿನಗಳು ಆಗಾಗ ಕಾಡುತ್ತಿರುತ್ತವೆ.ಗಾಂಧಿನಗರದ ಒಳಹೊಕ್ಕರೆ ಇಂಥ ನೂರಾರು ಕಲಾವಿದರು ಸಿಗುತ್ತಾರೆ. ನಟಿಸಬೇಕು, ಕ್ಯಾಮೆರಾ ಹಿಡಿಯಬೇಕು, ಆ್ಯಕ್ಷನ್‌ ಕಟ್‌ ಹೇಳಬೇಕು ಎಂಬ ಆಸೆ ಹೊತ್ತು ಬಂದ ಇಂಥ ಅನೇಕರಿಗೆ ದಾರಿ ತೋರಿಸಿದ್ದು ನಗರದಲ್ಲಿನ ಕಲಿಕಾ ಸಂಸ್ಥೆಗಳು. ಹಿನ್ನೆಲೆ, ಹಣ ಇಲ್ಲದಿದ್ದರೂ ಲೈಟ್‌ಬಾಯ್‌ಗಳಾಗಿ, ಜೂನಿಯರ್‌ ಆರ್ಟಿಸ್ಟ್‌ ಆಗಿ ನುಸುಳಿ  ಮುಂದೆ ನಿರ್ದೇಶಕ, ನಾಯಕನಟರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅದೃಷ್ಟದೊಂದಿಗೆ ಗುದ್ದಾಟ ನಡೆಸುವ, ಪಾತ್ರಕ್ಕಾಗಿ ಪರಿತಪಿಸಿ ಕಾಯುವ ಸಂಯಮ ಇಲ್ಲದವರಿಗೆ ದಾರಿ ತೋರಿಸುತ್ತಿರುವುದು ಸಿನಿಮಾ ತರಬೇತಿ ಸಂಸ್ಥೆಗಳು.ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟಿದ್ದ ಇಂಥ ತರಬೇತಿ ಸಂಸ್ಥೆಗಳ ಸಂಖ್ಯೆ ಈಗ ಲೆಕ್ಕ ಮೀರಿಸುವಷ್ಟರ ಮಟ್ಟಿಗೆ ಬೆಳೆದಿದೆ. ನಾಯಿಕೊಡೆಗಳಂತೆ ತರಬೇತಿ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಕಿರುತೆರೆ, ಚಲನಚಿತ್ರರಂಗದ ವಿಸ್ತರಣೆ ಮುಖ್ಯ ಕಾರಣ. ಅದರಲ್ಲಿಯೂ ಕಿರುತೆರೆ ಉದ್ಯೋಗ ಸೃಷ್ಟಿಯ ಬಹುದೊಡ್ಡ ಉದ್ದಿಮೆಯಾಗಿ ಹೊರಹೊಮ್ಮಿದೆ. ಹತ್ತಾರು ಚಾನೆಲ್‌ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು, ರಿಯಾಲಿಟಿ ಷೋಗಳು ಸಾವಿರಾರು ಜನರಿಗೆ ಉದ್ಯೋಗದ ಬಾಗಿಲು ತೆರೆಯುತ್ತಿವೆ.ಈ ಅಭಯವನ್ನು ನೆಚ್ಚಿಕೊಂಡೇ ನೂರಾರು ಉತ್ಸಾಹಿಗಳು ಬಣ್ಣದ ಲೋಕದ ಕದ ತಟ್ಟುತ್ತಿದ್ದಾರೆ. ಅವರೆಲ್ಲರಿಗೂ ಭರವಸೆ ನೀಡುವುದು ತರಬೇತಿ ಸಂಸ್ಥೆಗಳಲ್ಲಿ ಕಲಿತ ಕೋರ್ಸ್‌ನ ಪ್ರಮಾಣಪತ್ರ. ಈ ಸಂಸ್ಥೆಗಳು ತಮ್ಮ ಮಿತಿಯೊಳಗೇ ಕಲಾವಿದರು, ತಂತ್ರಜ್ಞರನ್ನು ತಯಾರುಮಾಡುತ್ತಿವೆ.ವರ್ಷಕ್ಕೆ ನೂರಕ್ಕೂ ಅಧಿಕ ಸಿನಿಮಾಗಳನ್ನು, ಸಾವಿರಾರು ಕಂತುಗಳ ಧಾರಾವಾಹಿಗಳನ್ನು ತಯಾರಿಸುತ್ತಿರುವ ರಾಜ್ಯದಲ್ಲಿ ಇಂದಿಗೂ ಅಭಿನಯ ಮತ್ತು ತಂತ್ರಜ್ಞಾನದಲ್ಲಿ ಅತ್ಯುನ್ನತ ಗುಣಮಟ್ಟದ ತರಬೇತಿ ನೀಡುವಂಥ ಸಂಸ್ಥೆ ಸ್ಥಾಪನೆಯಾಗಿಲ್ಲ. ಸರ್ಕಾರಿ  ಸಂಸ್ಥೆಯಾಗಲೀ, ಸಿನಿಮಾ ಮತ್ತು ಕಿರುತೆರೆರಂಗದಲ್ಲಿ ದುಡಿದು ಅನುಭವವುಳ್ಳವರು ನಡೆಸುತ್ತಿರುವ ಸಂಸ್ಥೆಯಾಗಲೀ ಪರಿಪೂರ್ಣ ಗುಣಮಟ್ಟದ ತರಬೇತಿ ನೀಡಲಾರವು. ಹಣವಿದ್ದವರು ಚೆನ್ನೈ, ಪೂನಾಗಳತ್ತ ಮುಖಮಾಡುತ್ತಾರೆ. ಆದರೆ ಹಳ್ಳಿಗಾಡಿನಿಂದ ಬರುವ ಆಕಾಂಕ್ಷಿಗಳಿಗೆ ಈ ಸಂಸ್ಥೆಗಳೇ ಆಶ್ರಯತಾಣ.ಬೆಳೆಯುತ್ತಿವೆ ಸಂಸ್ಥೆಗಳು

ಬೆಂಗಳೂರು ನಗರದಲ್ಲಿ 25ಕ್ಕೂ ಅಧಿಕ ತರಬೇತಿ ಸಂಸ್ಥೆಗಳಿವೆ. ಕೆಲವು ಅಭಿನಯದ ಪಟ್ಟುಗಳನ್ನು ಮಾತ್ರ ಹೇಳಿಕೊಡುತ್ತಿದ್ದರೆ, ಇನ್ನು ಕೆಲವು ತಾಂತ್ರಿಕ ಶಿಕ್ಷಣವನ್ನೂ ನೀಡುತ್ತಿವೆ. ಪೈಪೋಟಿ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ಈ ತರಬೇತಿ ಸಂಸ್ಥೆಗಳು ಆಧುನೀಕರಣಗೊಳ್ಳುತ್ತಿವೆ.ಆರಂಭದ ದಿನಗಳಲ್ಲಿ ನಟನೆಯ ಬಗೆಗಿನ ಥಿಯರಿ ಪಾಠಗಳೇ ಹೆಚ್ಚಿದ್ದವು. ಅಭಿನಯ ಎಂದರೇನು? ರಸಗ್ರಹಣದ ಸೂಕ್ಷ್ಮತೆಗಳೇನು? ಇತ್ಯಾದಿ ಪಠ್ಯಗಳನ್ನು ತುಂಬಿಕೊಂಡಿದ್ದ ಸಂಸ್ಥೆಗಳು ಅನಿವಾರ್ಯವಾಗಿ ಅವುಗಳನ್ನು ಬದಲಿಸಿಕೊಳ್ಳುತ್ತಿವೆ. ಪ್ರಾಕ್ಟಿಕಲ್‌ ಕಲಿಕೆಯತ್ತ ಒಲವು ತೋರಿಸುತ್ತಿವೆ. ಕಲಾವಿದನಿಗೆ ಅಭಿನಯ ಎಷ್ಟು ಮುಖ್ಯವೋ ದೈಹಿಕ ಸ್ಥಿರತೆ, ನೃತ್ಯ ಮತ್ತು ಸಂಗೀತ ಜ್ಞಾನವೂ ಅಷ್ಟೇ ಮುಖ್ಯ. ಈಗಿನ ಬಣ್ಣದ ಲೋಕ ಹೊಸ ತಲೆಮಾರಿನ ಕಲಾವಿದರಲ್ಲಿ ಇಂಥ ಬಹುಮುಖಿ ಪ್ರತಿಭೆಗಳನ್ನು ಬಯಸುತ್ತಿವೆ. ಈ ಕಾರಣಕ್ಕಾಗಿಯೇ ಸಿನಿಮಾ ಶಾಲೆಗಳು ಒಂದೇ ಸೂರಿನಲ್ಲಿ ಥಿಯರಿ, ಪ್ರಾಕ್ಟಿಕಲ್‌, ಫಿಟ್‌ನೆಸ್‌ ಕೇಂದ್ರ, ಸಂಗೀತ, ನೃತ್ಯ ಕಲಿಕೆಯ ವಿಭಾಗಗಳನ್ನೂ ತೆರೆಯುತ್ತಿವೆ. ಕೋರ್ಸ್‌ನತ್ತ ಸೆಳೆಯಲು ಈ ಶಾಲೆಗಳು ಅನುಸರಿಸುತ್ತಿರುವ ಹೊಸ ತಂತ್ರಗಳಾದರೂ ಈ ನೆಪದಲ್ಲಿ ಕಲಿಕೆಯ ಗುಣಮಟ್ಟ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ.ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳೇ ತರಬೇತಿ ಶಾಲೆಗಳ ಚುಕ್ಕಾಣಿ ಹಿಡಿದಿರುವುದರಿಂದ ಲಾಭವೂ ಇದೆ. ಈ ಸಂಸ್ಥೆಗಳೇ ಕೆಲವು ಕಿರುಚಿತ್ರಗಳನ್ನು, ಧಾರಾವಾಹಿಗಳನ್ನು ನಿರ್ಮಿಸುವುದರಿಂದ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಭಾಗವಾಗಿಯೇ ನಟಿಸುವ ಅವಕಾಶಗಳು ದೊರಕುತ್ತವೆ. ಅಭಿನಯ ಪಕ್ವತೆಯನ್ನು ಗುರುತಿಸಲು ಅವರು ಕ್ಯಾಮೆರಾ ಎದುರಿಸಿದಾಗಲೇ ಸಾಧ್ಯ. ಪ್ರಾಥಮಿಕ ತರಬೇತಿ ಬಳಿಕ ನೇರವಾಗಿ ಅವರನ್ನು ಧಾರಾವಾಹಿ ಅಥವಾ ಕಿರುಚಿತ್ರಗಳಲ್ಲಿ ತೊಡಗಿಸಿದಾಗ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇದರಿಂದ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಛಲವೂ ಬೆಳೆಯುತ್ತದೆ.ಅಭಿನಯದಷ್ಟೇ ಬೇಡಿಕೆ ಪಡೆಯುತ್ತಿರುವುದು ನಿರೂಪಣಾಕ್ಷೇತ್ರ. ಟೀವಿ ವಾಹಿನಿ ಹೆಚ್ಚಿದಂತೆ ನಿರೂಪಕರಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಹೀಗಾಗಿ ನಿಧಾನಗತಿಯಲ್ಲಿ ನಿರೂಪಕರ ತರಬೇತಿ ಕೋರ್ಸ್‌ಗಳೂ ಮನ್ನಣೆ ಪಡೆದುಕೊಳ್ಳುತ್ತಿವೆ. ಆದರೆ ಕೆಲವು ಸಂಸ್ಥೆಗಳು ನಟನೆಯ ಕಲಿಕಾಸಕ್ತರೆಲ್ಲರಿಗೂ ತೆರೆದುಕೊಳ್ಳುತ್ತಿಲ್ಲ. ನೋಡಲು ಆಕರ್ಷಕವಾಗಿರಬೇಕು ಎಂಬ ನಿಯಮಗಳು ಅನೇಕ ಪ್ರತಿಭಾನ್ವಿತರ ಉತ್ಸಾಹಕ್ಕೆ ತಣ್ಣೀರು ಎರಚುತ್ತವೆ. ಬಾಹ್ಯ ಸೌಂದರ್ಯವೊಂದೇ ಉತ್ತಮ ಕಲಾವಿದನೆಂದು ಪರಿಗಣಿಸುವ ಮಾನದಂಡವಾಗಲಾರದು. ಈ ನಿಟ್ಟಿನಲ್ಲಿ ತರಬೇತಿ ಶಾಲೆಗಳು ಮುಕ್ತವಾಗಿ ತೆರೆದುಕೊಳ್ಳುತ್ತಿಲ್ಲ. ಕೆಲವು ಸಂಸ್ಥೆಗಳು ಸಿನಿಮಾ, ಟೀವಿ, ರಂಗಭೂಮಿಗಳಿಗೆ ಪ್ರತ್ಯೇಕ ಕಲಿಕೆಯ ವಿಧಾನಗಳನ್ನು ಅನುಸರಿಸುತ್ತಿವೆ. ಛಾಯಾಗ್ರಹಣ, ಸಂಕಲನ, ಸೌಂಡ್‌ ರೆಕಾರ್ಡಿಂಗ್‌ನಂಥ ಕೋರ್ಸ್‌ಗಳು ತಾಂತ್ರಿಕ ವಿಭಾಗದಲ್ಲಿ ಬೇಡಿಕೆ ಇರುವ ಪರಿಣತರನ್ನು ಸೃಷ್ಟಿಸುತ್ತಿವೆ.ಥರಾವರಿ ಕೋರ್ಸ್‌ಗಳು

ನಟನೆ, ನಿರೂಪಣೆ, ಸಂಕಲನ, ಛಾಯಾಗ್ರಹಣ, ಸಂಗೀತ ಮತ್ತು ನೃತ್ಯ, ಗಾಯನ, ನಿರ್ದೇಶನ, ಕಥೆ-–ಚಿತ್ರಕಥೆ-–ಸಂಭಾಷಣೆಗಳ ರಚನೆ, ಹೀಗೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಕಲಿಕೆಯ ಕೋರ್ಸ್‌ಗಳಿವೆ. ಒಂದು ತಿಂಗಳಿನಿಂದ ಎರಡು ವರ್ಷದವರೆಗಿನ ಅವಧಿಯ ಕೋರ್ಸ್‌ಗಳು ಆಯಾ ಸಂಸ್ಥೆಯ ನಿಯಮಗಳಿಗನುಗುಣವಾಗಿ ಲಭ್ಯ. ಹಲವು ಸಾವಿರ ರೂಪಾಯಿ ಶುಲ್ಕದ ಕೋರ್ಸ್‌ಗಳು ಅವುಗಳ ಮಹತ್ವ, ಅವಧಿಗೆ ಅನುಗುಣವಾಗಿ ಲಭ್ಯ. ಫಿಲ್ಮ್‌ ಟೆಕ್ನಾಲಜಿಗೆ ಸಂಬಂಧಿಸಿದ ಸೆಮೆಸ್ಟರ್‌ ಪದ್ಧತಿ ಆಧಾರಿತ ಪಿಜಿ ಕೋರ್ಸ್‌ಗಳು ತೆರೆ ಹಿಂದಿನ ಚಟುವಟಿಕೆಗಳ ಬೋಧನೆಗೆಂದು ಮೀಸಲಿರಿಸಿಕೊಂಡ ಶಾಲೆಗಳಿವೆ.ಹೀಗಿದ್ದೂ ಇಲ್ಲಿಂದ ಹೊರಬರುವ ಎಲ್ಲರಿಗೂ ಸುಲಭವಾಗಿ ಅವಕಾಶ ಸಿಗುತ್ತದೆ ಎಂಬ ಭರವಸೆ ನೀಡುವಂತಿಲ್ಲ. ಅಂತಿಮವಾಗಿ ಇಲ್ಲಿಯೂ ಪ್ರತಿಭೆಯೇ ಮುಖ್ಯವಾಗುತ್ತದೆ, ಜೊತೆಗೆ ಅದೃಷ್ಟವೂ!ಬದಲಾವಣೆಯ ಗಾಳಿ

ಬೇಡಿಕೆ ಹೆಚ್ಚಿದಂತೆ ತರಬೇತಿ ಸಂಸ್ಥೆಗಳ ಗುಣಮಟ್ಟ ಮತ್ತು ಬೋಧನಾ ಕ್ರಮದಲ್ಲಿ ಸುಧಾರಣೆಯಾಗಬೇಕಿದೆ. ಅಭಿನಯ ಪಾಠ ಎಂದರೆ ತರಗತಿ ಒಳಗೆ ಕೂರಿಸಿ ಹೇಳುವಂಥದ್ದಲ್ಲ. ಅವರಿಗೆ ಬೆಳಕು, ಕ್ಯಾಮೆರಾ, ಭಾವನೆಗಳ ಅಭಿವ್ಯಕ್ತಿ, ರಸಗ್ರಹಣ ಮುಂತಾದವುಗಳನ್ನು ಪಾಠ ಹೇಳುತ್ತ ಕಲಿಸಲು ಸಾಧ್ಯವಿಲ್ಲ. ಅದು ವಿಶ್ವ ಸಿನಿಮಾಗಳನ್ನು ತೋರಿಸುವ ಮತ್ತು ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ, ತಿದ್ದಿ ತೀಡುವ ಮೂಲಕವೇ ಸಾಧ್ಯ.ವೈಯಕ್ತಿಕವಾಗಿ ಕಲಾವಿದನನ್ನು, ಆತನ ಪ್ರತಿಭೆ ಮತ್ತು ಕೊರತೆಗಳನ್ನು ಗುರುತಿಸಿ ಅವುಗಳ ಸುಧಾರಣೆಗೆ ಆದ್ಯತೆ ನೀಡುತ್ತೇವೆ. ಆತ ಪರಿಣತಿ ಪಡೆದರೆ ಮಾತ್ರ ಪ್ರಬುದ್ಧ ಕಲಾವಿದನಾಗಲು ಸಾಧ್ಯ. ಈಗಿನ ಅಗತ್ಯಕ್ಕೆ ತಕ್ಕಂತೆ ನಾವೂ ಬದಲಾಗುತ್ತಿದ್ದೇವೆ. ಸುಸಜ್ಜಿತ ಜಿಮ್‌, ಅರಂಭ ಕಾಲದಿಂದ ಈಗ ಬಳಸುತ್ತಿರುವ ಅತ್ಯಾಧುನಿಕ ಕ್ಯಾಮೆರಾದವರೆಗಿನ ಎಲ್ಲಾ ಪ್ರಕಾರದ ಕ್ಯಾಮೆರಾಗಳ ಪರಿಚಯ, ಹಿರಿಯ ಕಲಾವಿದರಿಂದ ಪಾಠ, ಅಭಿನಯದ ಜೊತೆಗೇ ಅವರಲ್ಲಿ ತೆರೆಹಿಂದಿನ ಕೆಲವು ಚಟುವಟಿಕೆಗಳ ಜ್ಞಾನ ತುಂಬುವುದು ಇತ್ಯಾದಿಗಳನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಸೆಂಚುರಿ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ನ ಮಾಲೀಕ ಬುಕ್ಕಾಪಟ್ಟಣ ವಾಸು.

ಭಾಷೆಗೂ ಆದ್ಯತೆ

ಇಲ್ಲಿ 100ಕ್ಕೆ 98 ಅಂಕ ಪಡೆದರೆ ಉತ್ತೀರ್ಣರಲ್ಲ. ನೂರಕ್ಕೆ ನೂರು ತೆಗೆದರೆ ಮಾತ್ರ ಆತ ಉತ್ತೀರ್ಣ. ಅಂದರೆ ಪರಿಪೂರ್ಣತೆ ಪಡೆಯದೆ ಹೊರ ಹೋಗುವ ಕಲಾವಿದ ಪಾತ್ರಕ್ಕೆ ನ್ಯಾಯ ಒದಗಿಸಲಾರ. ನವರಸಗಳನ್ನು ತುಳುಕಿಸಬೇಕು ಎನ್ನುವ ಪದ ಈಗ ಹಳೆಯದು. ಈಗಿನ ಸಿನಿಮಾ ಪಾತ್ರಗಳು ಬೇರೆಯದ್ದನ್ನು ಬಯಸುತ್ತವೆ. ನಿರ್ದೇಶಕ ಒಂದು ಪಾತ್ರವನ್ನು ಹೇಗೆ ಕಡೆದಿರುತ್ತಾನೋ ಅದರ ಮೇಲೆ ಅಭಿನಯ ನಿಲ್ಲುತ್ತದೆ. ಒಂದು ರೀತಿಯಲ್ಲಿ ಅವರಲ್ಲಿನ ಸಾಮರ್ಥ್ಯವನ್ನು ಗುರುತಿಸಿ ಅದಕ್ಕೆ ಪೂರಕವಾಗಿ ರೂಪಿಸಬಹುದು.

ಅಶೋಕ್‌ ನಿಟ್ಟೂರು, ಸಂಕುಲ ಥಿಯೇಟರ್ ಇನ್ಸ್‌ಟಿಟ್ಯೂಟ್‌

ಬೆಂಗಳೂರಿನಲ್ಲಿರುವ ಕೆಲವು ಪ್ರಮುಖ ಅಭಿನಯ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಗಳು:

*ಆದರ್ಶ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ – ದೂ.ಸಂ: 080–2342 0886, ವೆಬ್‌ಸೈಟ್‌: afti.co.in

*ಅಭಿನಯ ತರಂಗ– ದೂ.ಸಂ: 080– 2242 4253*ಇನ್ಸ್‌ಟಿಟ್ಯೂಟ್‌ ಆಫ್‌ ಫಿಲ್ಮ್‌ ಟೆಕ್ನಾಲಜಿ ದೂ.ಸಂ: 080– 2220 1959*ಗೌರ್ನಮೆಂಟ್‌ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್ಸ್‌ಟಿಟ್ಯೂಟ್‌ (ಹೆಸರಘಟ್ಟ)– ದೂ.ಸಂ: 080– 2846 6788*ನ್ಯಾಷನಲ್‌ ಅಕಾಡೆಮಿ ಆಫ್‌ ಸಿನಿಮಾ ಆ್ಯಂಡ್‌ ಟೆಲಿವಿಷನ್‌ ದೂ.ಸಂ: 080– 3246 9070*ಸಂಕುಲ ಥಿಯೇಟರ್‌ ಇನ್ಸ್‌ಟಿಟ್ಯೂಟ್‌-ಮೊ.ಸಂ: 93412 13345, www.sankulatheatremirror.com*ವಿಜಯ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ ದೂ.ಸಂ: 080– 3294 7115*ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫಿಲ್ಮ್‌ ಟೆಕ್ನಾಲಜಿ ದೂ.ಸಂ: 080–23490314*ಸ್ಯಾಂಡಲ್‌ವುಡ್‌ ಫಿಲ್ಮ್‌ ಇನ್ಸ್‌ಟಿಟ್ಯೂಟ್‌-– ದೂ.ಸಂ: 080– 2340 6166, www.sandalwoodfilm@gmail.com*ಸೆಂಚುರಿ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ ಮೊ.ಸಂ: 98450 14698*ಬಣ್ಣ ಆ್ಯಕ್ಟಿಂಗ್‌ ಸ್ಕೂಲ್‌– ಮೊ.ಸಂ: 98805 95500*ನಟನ: 0821– 2562 208*ಸ್ಟಾರ್‌ ಕ್ರಿಯೇಟರ್ಸ್‌– ಮೊ.ಸಂ: 97414 99708*ಎಸ್‌.ಆರ್. ಫಿಲ್ಮ್‌ ಇನ್ಸ್‌ಟಿಟ್ಯೂಟ್‌ ಮೊ.ಸಂ: 99729 28935*ಶಂಕರ್‌ನಾಗ್‌ ಫಿಲ್ಮ್‌ ಸ್ಕೂಲ್‌ ದೂ.ಸಂ: 080– 2341 4302*ನಕ್ಷತ್ರ ಕ್ರಿಯೇಟರ್ಸ್‌– ಮೊ.ಸಂ: 98458 26282

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.