ಗುರುವಾರ , ಮಾರ್ಚ್ 4, 2021
22 °C

ಕಿವಿಗಿಂಪು ನೀಡಿದ ಸಂಗೀತ ಸುಧೆ

ರೂಪಶ್ರೀ ಕಲ್ಲಿಗನೂರ್ Updated:

ಅಕ್ಷರ ಗಾತ್ರ : | |

ಕಿವಿಗಿಂಪು ನೀಡಿದ ಸಂಗೀತ ಸುಧೆ

ಕಲಾರಸವೆಂಬ ಪುಟ್ಟ ಸಭಾಂಗಣದಲ್ಲಿ ನೆರೆದಿದ್ದ ಶ್ರೋತೃಗಳು ಧಾರವಾಡದ ಹುಡುಗ, ಕೊಲ್ಕತ್ತಾದಲ್ಲಿ ನೆಲೆಸಿರುವ ಕುಮಾರ್ ಮರಡೂರ ಅವರ ಸಂಗೀತ ಕೇಳಲು ಕಾತರರಾಗಿದ್ದರು. ಬೆಂಗಳೂರಿನ ಶ್ರೋತೃಗಳಿಗಾಗಿ ಅಂದು ಶ್ರೀರಾಗದೊಂದಿಗೆ ಬೈಠಕ್ ಆರಂಭಿಸಿದ್ದ ಮರಡೂರರು ಎರಡೂವರೆ ಗಂಟೆ ಕಾಲ ಟ್ರಾಫಿಕ್ಕಿನ ದ್ವೀಪದಲ್ಲಿ ವಾಸಿಸುತ್ತಿರುವ ಬೆಂಗಳೂರಿನ ಸಂಗೀತಾಸಕ್ತರಿಗೆ ಯಾವುದೇ ಕೆಲಸಗಳು ನೆನಪಾಗದ ರೀತಿಯಲ್ಲಿ ವಿಹರಿಸುವಂತೆ ಮಾಡಿದರು.ಕಳೆದ ವಾರ ಜಯನಗರದ ‘ದಿ ಹೈ ಸ್ಟ್ರೀಟ್ ಮಾಲ್‌’ನ ಕಲಾರಸ ಗ್ಯಾಲರಿಯಲ್ಲಿ ಒಂದಷ್ಟು ಸಂಗೀತ ಕಲಾವಿದ ಗೆಳೆಯರು ಕೂಡಿ ಕುಮಾರ್ ಮರಡೂರರ ಬೈಠಕ್ ಆಯೋಜಿಸಿದ್ದರು. ಧಾರವಾಡ ಮೂಲದ ಕುಮಾರ್, ತಮ್ಮ ತಂದೆ ಸೋಮನಾಥ್ ಮರಡೂರರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತವರು. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಮರಡೂರರ ಗಾಯನ ಪ್ರತಿಭೆಯನ್ನು ಗುರುತಿಸಿದ ಕೊಲ್ಕತ್ತಾದ ಖ್ಯಾತ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯು ಅವರನ್ನು ಸಂಗೀತ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಲು ಆಹ್ವಾನಿಸಿದ್ದರಿಂದ ಕಳೆದೆರೆಡು ವರ್ಷಗಳಿಂದ ಅಲ್ಲಿಯೇ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.ಮೊದಲಿಗೆ ಹಿಂದೂಸ್ತಾನಿ ಸಂಗೀತ ಪ್ರಕಾರದ ಪುರಾತನ ರಾಗಗಳಲ್ಲೊಂದಾದ ಶ್ರೀ ರಾಗದಿಂದ (ಪೂರ್ವಿ ಥಾಟ್) ಗಾಯನವನ್ನು ಆರಂಭಿಸಿದರು. ಕೆಲ ಹೊತ್ತು ಬಹಳ ಹಿತವೆನ್ನಿಸುವಂತಿದ್ದ ಆಲಾಪ್ ಗಾಯನದಲ್ಲಿ ಮುಳುಗಿದವರು, ಮುಂದೆ ಕುಳಿತಿದ್ದ ಕೇಳುಗರನ್ನೂ ಅದರ ಮೂಲಕ ಬಹಳ ಸುಲಭವಾಗಿ ಆವರಿಸಿಬಿಟ್ಟರು. ಸತೀಶ್ ಕೊಳ್ಳಿಯವರ ಹಾರ್ಮೋನಿಯಂನ ಅತೀ ಸೂಕ್ಷ್ಮ ಸಾಥ್‌ನೊಂದಿಗೆ ಮೂಡಲಾರಂಭಿಸಿದ ಆಲಾಪ್, ದಟ್ಟ ಕಾಡಿನಲ್ಲಿ ತನ್ನಷ್ಟಕ್ಕೆ ತಾನು ನಿರಂತರ ಹರಿಯುತ್ತಿರುವ ಝರಿಯ ಸುತ್ತ ಮುತ್ತಣ ವಾತಾವರಣವನ್ನು ನೆನಪಿಸುತ್ತಿತ್ತು. ತನ್ಮೂಲಕ ರಾಗದ ಸಾರಾಂಶವನ್ನು ಶ್ರೋತೃಗಳ ಮುಂದೆ ಇಟ್ಟರು.ಆಲಾಪ್ ಗಾಯನದ ನಂತರ ‘ಗಜರವಾ ಬಾಜೆ...’ ಎಂಬ ಬಂದಿಶ್‌ನ ಮೂಲಕ ರಾಗವನ್ನು ವಿಸ್ತರಣೆಗಿಳಿದರು. ಆ ಚೀಸ್‌ನ ಸಾಲುಗಳಲ್ಲಿದ್ದ ಭಾವಗಳನ್ನು ಹೀರಿಕೊಂಡು, ಶ್ರೀಯ ರಸದಲ್ಲಿ ಮಿಳಿತಗೊಳಿಸುತ್ತಿದ್ದ ರೀತಿ ಕೇಳುಗರನ್ನು ಬಹುವಾಗಿ ಸೆಳೆಯಿತು. ಬಂದಿಶ್‌ನ ಸಹಕಾರದಲ್ಲಿ ರಾಗದ ಅರಿವು ವಿಸ್ತಾರಗೊಂಡಂತೆ, ಕುಮಾರರ ಗಾಯನ ಮತ್ತಷ್ಟು ತನ್ಮಯತೆಯಿಂದ ಹರಿಯಲಾರಂಭಿಸಿತು.

ನಂತರದಲ್ಲಿ ಮತ್ತೊಮ್ಮೆ ಮಧ್ಯಲಯದಲ್ಲಿ ‘ಬಾವತ್ ಸುಂದರ್ ಸಾವರ್ ಜಿತ’ ಎಂಬ ಮತ್ತೊಂದು ಚೀಸ್‌ನ ಹಾಡುಗಾರಿಕೆಯಲ್ಲಿ ತೊಡಗಿದಾಗ, ಆಲಾಪ್, ಸರ್ಗಂಗಳ ಮಾಲೆಗಳೂ ಹೆಣೆಯುತ್ತಾ ಹೋದವು. ವಿಶೇಷವಾಗಿ ಸುಲಲಿತವಾಗಿ ಹರಿದು ಬರುತ್ತಿದ್ದ ಆಲಾಪ್‌ನ ಗಮಕಗಳು, ಸರ್ಗಂಗಳು ರಸಿಕರನ್ನು ಕುತೂಹಲಿಗಳನ್ನಾಗಿ ಮಾಡಿದ್ದವು. ಮಧ್ಯಗತಿಯಲ್ಲಿ ಸಾಗುತ್ತಿರುವಾಗ ಒಮ್ಮೊಮ್ಮೆ ತಾರಸಪ್ತಕದಲ್ಲಿ ಕುಸುರಿ ಕೆಲಸ ಮಾಡುವ ರೀತಿಯಲ್ಲೊಂದು ಸೌಂದರ್ಯ ಕಾಣುತ್ತಿತ್ತು.ಕೊನೆಗೆ ಕೆಲ ನಿಮಿಷಗಳ ಹೊತ್ತು ಧೃತ್ ತೀನ್ ತಾಳದಲ್ಲಿ ತರಾನ ಹಾಡುವ ಮೂಲಕ ಶ್ರೀ ರಾಗದ ಗಾಯನವನ್ನು ಮುಗಿಸಿದರು. ಅಷ್ಟು ಹೊತ್ತು ತಬಲಾ ವಾದನದಲ್ಲಿ ಸಹಕರಿಸಿದ್ದ ತ್ರಿಲೋಚನ್ ಕಂಪ್ಲಿ, ಭಿನ್ನ ಮಟ್ಟುಗಳ ನುಡಿಸಾಣೆಕೆಯ ಮೂಲಕ ಶ್ರೋತೃಗಳನ್ನು ಸೆಳೆದರು. ಮೂಲತಃ ಕಿರಾಣಾ ಘರಾಣೆಯ ಮಟ್ಟುಗಳನ್ನು ಕಲಿತಿರುವ ಕುಮಾರರಿಗೆ ಬೇರಾವುದೇ ಘರಾಣೆಯ ಉತ್ತಮ ಅಂಶಗಳನ್ನು ಆಸ್ವಾದಿಸಿ, ತಮ್ಮ ಸಂಗೀತಕ್ಕೆ ಅಳವಡಿಸಿಕೊಳ್ಳುವುದು ಅತ್ಯಂತ ಸಂತೋಷಕರ ವಿಷಯವಂತೆ.ಅದರ ನಂತರ ಉಸ್ತಾದ್ ಬಡೇ ಗುಲಾಮ್ ಅಲೀ ಖಾನರ ಠುಮ್ರಿಯೊಂದನ್ನು ಹಾಡಿ, ಕೊನೆಗೆ ಕಬೀರ್ ದಾಸರ ‘ಮನ್ ಪೂಲೋ... ಏ ಜಗತ್ ಮೇ’ ಎಂಬ ಭಜನೆಯೊಂದನ್ನು ಹಾಡಿದರು. ಭಜನ್ ಠೇಕಾದಲ್ಲಿದ್ದ ಗೀತೆಯ ಮುಖಡಾವನ್ನು (ಮೊದಲ ಸಾಲು) ಮತ್ತೆ ಮತ್ತೆ ಹಲವು ಬಾರಿ ಹಾಡಿದ್ದೇ ಕೇಳುಗರಿಗೆ ವಿಶೇಷ ಅನುಭೂತಿಯನ್ನು ನೀಡಿತು. ಈ ಗೀತೆಯನ್ನು ಹಲವು ವರ್ಷಗಳ ಹಿಂದೆ ಸ್ವತಃ ಕುಮಾರರೇ ಸಂಯೋಜಿಸಿದ್ದರು. ಹೂವಿನ ಘಮ ಸುತ್ತಮುತ್ತಣವನ್ನು ಆಹ್ಲಾದಕರಗೊಳಿಸಿದಂತೆ ‘ಮನ್ ಫೂಲ್’ ಗೀತೆಯ ಸಾಹಿತ್ಯ ಗಂಧ ಕುಮಾರರ ಕಂಠದಿಂದ ಪುಟ್ಟ ಸಭಾಂಗಣವನ್ನು ಆವರಿಸಿತ್ತು. ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ ಹಾಗೂ ತ್ರಿಲೋಚನ್ ಕಂಪ್ಲಿ ಅವರ ತಬಲಾ ವಾದನಕ್ಕೂ ಪ್ರಾಮುಖ್ಯ ಸಿಕ್ಕಿತ್ತು. ಶ್ರುತಿಯಲ್ಲಿ ವಿಜಯೇಂದ್ರ ಅಥಣಿಕರ್ ಹಾಗೂ ರಾಜೇಶ್ ಕುಲಕರ್ಣಿ ಸಹಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.