ಗುರುವಾರ , ಮೇ 13, 2021
39 °C

ಕಿವಿಯಲ್ಲಿ ಹೇಳೋದಕ್ಕೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ನಿಮ್ಮದೇ ಪಕ್ಷದ ಸರ್ಕಾರ. ನೀವು ಸೂಚಿಸಿದವರೇ ಮುಖ್ಯಮಂತ್ರಿ. ಆದರೂ ಬರಪೀಡಿತ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಲು ಸುದ್ದಿಗೋಷ್ಠಿ ನಡೆಸುವ ಅಗತ್ಯ ಇತ್ತೆ?

ಕಿವಿಯಲ್ಲಿ ಹೇಳೋದಕ್ಕೂ ಮಾಧ್ಯಮದ ಮುಂದೆ ಹೇಳೋದಕ್ಕೂ ವ್ಯತ್ಯಾಸ ಇದೆ. ರಾಜ್ಯದಲ್ಲಿ ಬರ ಸ್ಥಿತಿ ಗಂಭೀರವಾಗಿದೆ. ಅದನ್ನು ಎದುರಿಸುವುದು ಆದ್ಯತೆ ಆಗಬೇಕು. ಆದರೆ, ಬವಣೆ ಕೇಳಲು ಜನರ ಬಳಿಗೆ ಪ್ರತಿಪಕ್ಷಗಳ ಮುಖಂಡರು ಹೋಗಿಲ್ಲ. ಅಧಿಕಾರಿಗಳು ಹೋಗಿಲ್ಲ. ಮುಖ್ಯಮಂತ್ರಿಯವರೂ ಒಂದು ಸುತ್ತು ಹೊಡೆದಿಲ್ಲ. ಜನರಿಂದ ಒತ್ತಡ ಬಂತು. ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡಿದೆ. ಶಿವನೇ ಅಂತ ಹೊರಟಿದ್ದೀನಿ.* ಬರ ಇರುವಾಗ ಸನ್ಮಾನ-ಸಮಾವೇಶಗಳು ಸಮಂಜಸವಲ್ಲ ಅಂತ ಮುಖ್ಯಮಂತ್ರಿ ಹೇಳಿದ್ದಾರೆ. ನೀವು ಸನ್ಮಾನ ಮಾಡಿಸಿಕೊಂಡು ಅಡ್ಡಾಡಿದ್ದು ನಿಜ. ಅವರು ಮೂದಲಿಸಿದರೂ ಅಂತ...?

ನಾನಾಗಿಯೇ ಬಯಸಿ ಸನ್ಮಾನಗಳನ್ನು ಎಂದೂ ಮಾಡಿಸಿಕೊಂಡಿಲ್ಲ. ಹುಬ್ಬಳ್ಳಿ ಭಾಗದ ಜನರು ಒತ್ತಾಯ ಮಾಡಿದರು. 3-4 ಜಿಲ್ಲೆಗಳ ಜನರು ಒಟ್ಟಾಗಿ ಬಂದು ಒತ್ತಡ ಹೇರಿದಾಗ ಬೇಡ ಅನ್ನಲಿಕ್ಕೆ ಆಗಲಿಲ್ಲ.* ಅಧಿಕಾರವೂ ಇಲ್ಲದಿದ್ದ ಈ ಏಳು-ಎಂಟು ತಿಂಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುವಂತಹ ಸಾಧನೆ ಏನು ಮಾಡಿದ್ದೀರಿ?

ಒಳ್ಳೆಯ ಪ್ರಶ್ನೆ. ಹೋರಾಟ ಮಾಡಿ ಮೇಲೇರಿದ ನಾಯಕನನ್ನು ಜನರು ಮತ್ತು ಜನಪ್ರತಿನಿಧಿಗಳು ಮರೆಯುದಿಲ್ಲ ಎಂಬುದಕ್ಕೆ ಇದು ನಿದರ್ಶನ. ನಾನು ಗದ್ದುಗೆ ಇಳಿದು ಎಂಟು ತಿಂಗಳಾಗಿದೆ. ಮತ್ತೆ ಏರಬಹುದು ಎಂಬ ಖಚಿತ ಭರವಸೆಯೂ ಇಲ್ಲ. ಆದರೂ ಜನರ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಸಾಧನೆಯನ್ನು ನೆನಪಿಸಿಕೊಂಡು ನನ್ನ ಬಳಿ ಬರುತ್ತಾರೆ.ನಾನು ರಾಜೀನಾಮೆ ನೀಡಲು ಹೋದಾಗ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ 70 ಶಾಸಕರು ಬಂದಿದ್ದರು. ಮೊನ್ನೆ ರೆಸಾರ್ಟ್‌ನಲ್ಲಿ ಇದ್ದಾಗಲೂ 70 ಮಂದಿ ಇದ್ದರು. ನೀವು ಮಾಡಿದ ಕೆಲಸವನ್ನು ಮೆಚ್ಚಿ ನಿಮ್ಮ ಜತೆ ಇದ್ದೇವೆ ಅಂತ ಅವೊತ್ತೂ ಹೇಳಿದರು. ಇವತ್ತೂ ಹೇಳ್ತಿದಾರೆ. ಅಧಿಕಾರ ಹೋದ ಮೇಲೂ ಇಷ್ಟೊಂದು ಶಾಸಕರು ಜತೆಗಿರುವುದು ಅಚ್ಚರಿ ಸಂಗತಿ ಅಲ್ಲವೆ? ಹಿಂದೆ ಮುಖ್ಯಮಂತ್ರಿಗಳಾಗಿದ್ದವರು ಕುರ್ಚಿ ಬಿಡುತ್ತಾರೆ ಅಂತ ಗೊತ್ತಾಗುತ್ತಲೇ ಬೆಂಬಲಿಗ ಶಾಸಕರು ಅವರಿಂದ ದೂರ ಜಿಗಿಯುತ್ತಿದ್ದರು. ಶಾಸಕರ ಅಚಲ ವಿಶ್ವಾಸವೇ ನನ್ನ ಪ್ರವಾಸಕ್ಕೆ ಪ್ರೇರಣೆ.* `ನನ್ನ ಜನಪ್ರಿಯತೆಯನ್ನು ನಮ್ಮ ಪಕ್ಷದವರೇ ಸಹಿಸುತ್ತಿಲ್ಲ~ ಎಂದು ನೀವು ಪದೇ ಪದೇ ಹೇಳುತ್ತೀರಿ....?

ನೋಡಿ, ಇದು ಸತ್ಯಾಂಶ. ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಏನು ಹೇಳಿದರು?
ಯಡಿಯೂರಪ್ಪನವರ ದೆಹಲಿ ಯಾತ್ರೆಯಿಂದ ವಿಮಾನಯಾನ ಕಂಪೆನಿಗಳ ಆದಾಯ ಹೆಚ್ಚಾಗುವುದೇ ಹೊರತು ಅದರಿಂದ ಇನ್ನೇನೂ ಲಾಭ ಆಗಲ್ಲ ಎಂದರು. `ಒಂದು ಪ್ರಕರಣದಲ್ಲಿ ಖುಲಾಸೆ ಆಗಿರಬಹುದು. ಗುರುತರವಾದ ಇನ್ನೂ ಎಂಟು ಕೇಸುಗಳಿವೆ~ ಅಂತ ನಮ್ಮ ಮುಖ್ಯಮಂತ್ರಿಯವರೇ ಹೇಳಿದರು- ಮುಂಬೈನ ರೋಡ್ ಶೋದಲ್ಲಿ.ಪ್ರತಿಪಕ್ಷಗಳನ್ನು ಬಿಟ್ಟುಬಿಡಿ, ಗಟ್ಟಿಯಾಗಿ ನನ್ನ ಪರವಾಗಿ ನಿಲ್ಲಬೇಕಾಗಿದ್ದ ನಮ್ಮವರೇ ಹೀಗೆ ಚುಚ್ಚಿದರೆ ಏನು ಅನ್ನಿಸುತ್ತೆ? ಬರ ಇದೆ. ಸನ್ಮಾನ ಬೇಡ ಅಂತ ಸದಾನಂದ ಗೌಡರು ಹೇಳಿದ್ದಾರೆ. ಹಾಗಿದ್ದರೆ ಯಡಿಯೂರಪ್ಪ ಜೈಲಿನಲ್ಲಿದ್ದಾಗ ಇವರು ಗಂಡ-ಹೆಂಡತಿ ಪುತ್ತೂರಿನಲ್ಲಿ ಸನ್ಮಾನ ಮಾಡಿಸಿಕೊಂಡರಲ್ಲ; ಅದು ಸರಿಯೇ?`ನಮ್ಮ ಮೆಟ್ರೊ~ ಯೋಜನೆ ಸಾಕಾರಕ್ಕೆ ಹಗಲು-ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಅದರ ಉದ್ಘಾಟನೆಗೆ ನಾನು ಬಿಡುಗಡೆ ಆಗುವವರೆಗೂ ಕಾಯಬಹುದಿತ್ತು. ನನ್ನನ್ನೂ ಜತೆಗೆ ಕರೆದೊಯ್ದು ನಾಲ್ಕು ಒಳ್ಳೆಯ ಮಾತು ಆಡಲು ಅವಕಾಶ ಕೊಟ್ಟಿದ್ದಿದ್ದರೆ ಗೌರವ ಕೊಟ್ಟಂತೆ ಆಗುತ್ತಿತ್ತಲ್ಲ. ಇವರೆಲ್ಲ ನನ್ನ ಜತೆ ಹೇಗೆ ನಡೆದುಕೊಂಡರು!ಮುಖ್ಯಮಂತ್ರಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಬಿಟ್ಟ ಮೇಲೂ ಅವರು ಈ ರೀತಿ ಮಾತುಗಳನ್ನಾಡಿದ್ದು ಎಷ್ಟು ಸರಿ? ಬಾಡಿಗೆ ಜನರನ್ನು ಕರೆಸಿ ಸಮಾವೇಶ ಆಯೋಜಿಸುವುದರಿಂದ ಪ್ರಯೋಜನ ಇಲ್ಲ ಎಂದಿದ್ದಾರೆ. ಇದು ಅವರು ಆಡುವಂತಹ ಮಾತೆ?* ಪುನಃ ಸರಿಹೋಗಬಹುದು. ನಿಮ್ಮ ಮಧ್ಯೆ ಸೌಹಾರ್ದ ವಾತಾವರಣ ಮೂಡಬಹುದು ಅಂತ ಅನ್ನಿಸುತ್ತಾ?

ಸೌಹಾರ್ದ ವಾತಾವರಣ ಮೂಡಿಸಬೇಕು. ಪಕ್ಷದ ನಾಯಕನಾಗಿ ಅದು ನನ್ನ ಕರ್ತವ್ಯ. ಇಷ್ಟು ವರ್ಷ ಈ ಗಾಡಿ ತಳ್ಳಿಕೊಂಡು ಬಂದವನು ನಾನು. ರಾಜ್ಯದ ಹಿತದೃಷ್ಟಿಯಿಂದ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.