ಮಂಗಳವಾರ, ಜೂನ್ 22, 2021
28 °C

ಕಿಸೆಗಳ್ಳರಿಗಿಂತ ದರೋಡೆಕೋರರೆ ಹೆಚ್ಚಾಗಿದ್ದಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ತ, ಮಾಂಸ ಇಲ್ಲದ ಅಸ್ಥಿಪಂಜರದಂತಾಗಿದೆ ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ  ಸ್ವಾಮೀಜಿ ಹೇಳಿದರು. 

 ನಗರದ ಪುರಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಬಂಡವಾಳ ಶಾಹಿಗಳ ಪರವಾಗಿದೆ.  ಉಗ್ರವಾದ, ಕೋಮುವಾದ ಪ್ರಬಲವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಆಡಳಿತ ಮೂಲೆಗುಂಪಾಗುತ್ತಿದೆ. ಪ್ರಧಾನ ಮಂತ್ರಿಗಳು ತಾವು ಮಾತ್ರ ಪ್ರಾಮಾಣಿಕರು ಎಂದು ಹೇಳಿಕೊಂಡು ತಿರುಗಾಡಿದರೆ ಪ್ರಯೋಜನ ಇಲ್ಲ.ಸಂಪೂರ್ಣ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗವ ರೀತಿ ಕ್ರಮಕೈಗೊಳ್ಳಬೇಕು ಎಂದರು.

ನಮ್ಮಲ್ಲಿ ಕಿಸೆಗಳ್ಳರಿಗಿಂತ ದರೋಡೆಕೋರರೇ ಹೆಚ್ಚಾಗಿದ್ದಾರೆ. ಸ್ವಜನ ಪಕ್ಷಪಾತ, ಜಾತಿವಾದದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ವಿಕೃತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವತ್ತಿಗೂ ವಂಶಪರಂಪರೆ ಆಡಳಿತವೆ ನಡೆಯುತ್ತಿದೆ. ಜಾತಿವಾದ ಇಂದಿಗೂ ಮೇರೆ ಮೀರಿ ಬೆಳೆಯುತ್ತಿದೆ.ಸ್ವಾತಂತ್ರ್ಯ ಬಂದು 60 ದಶಕಗಳು ಕಳೆದಿದ್ದರು ಬಹುಸಂಖ್ಯಾತ ಜನರ ಆಸೆಗಳು ಈಡೇರುವ ಕಾಲ ಬಂದಿಲ್ಲ. ನಮ್ಮ ಆಡಳಿತಗಾರರಿಗೆ ಜನರ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಆಸಕ್ತಿ ಇಲ್ಲದಾಗಿದೆ ಎಂದರು.

ಯುವ ಜನತೆಯಲ್ಲಿ ದೇಶವನ್ನು ಬದಲಾವಣೆಯ ದಿಕ್ಕಿನಡೆಗೆ ಕೊಂಡೊಯ್ಯುವ ಶಕ್ತಿ ಇದೆ.   ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.  ಅಭಿಮಾನಿ ಬಳಗವನ್ನು ಕಟ್ಟುವುದು ಹಣಕ್ಕಾಗಿ ಎನ್ನುವ ಇವತ್ತಿನ ದಿನಗಳಲ್ಲೂ ಸ್ವಾತಂತ್ರ್ಯ ಸೇನಾನಿಯೊಬ್ಬರ ಅಭಿಮಾನಿ ಬಳಗ ಇರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಾಸಕ ಸು.ರಂ.ರಾಮಯ್ಯ ಮಾತನಾಡಿ,  ಇವತ್ತಿನ ಆಡಳಿತ ನೋಡಿದರೆ. ಭ್ರಷ್ಟಾಚಾರದಿಂದಾಗಿ ವಿಶ್ವ ಮಟ್ಟದಲ್ಲಿ ದೇಶದ ಹಿರಿಮೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.  ವಿಚಾರ ಸಂಕಿರಣದಲ್ಲಿ ಸಿಪಿಐ(ಎಂ) ರಾಜ್ಯ  ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ , ಪ್ರಜಾಪ್ರಭುತ್ವ ಬಿಕ್ಕಟ್ಟು ಮತ್ತು ಮೌಲ್ಯಗಳು ಕುರಿತು ಮಾತನಾಡಿದರು. ಮುಖ್ಯಅತಿಥಿಗಳಾಗಿ ಕೊಂಗಾಡಿಯಪ್ಪ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಚಂದ್ರಪ್ಪ, ಹಿರಿಯ ನ್ಯಾಯವಾದಿ ಪಿ.ಶಂಕರಪ್ಪ, ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ಸಂಚಾಲಕ ಎಸ್.ರುದ್ರಾರಾಧ್ಯ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.