ಗುರುವಾರ , ಮಾರ್ಚ್ 4, 2021
29 °C

ಕುಂದು ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದು ಕೊರತೆ

ಕುಡಿಯುವ ನೀರು ಕೊಡಿ

ಪಂತರಪಾಳ್ಯದದಲ್ಲಿ ಕುಡಿಯುವ ನೀರಿನ  ಸಮಸ್ಯೆ ವಿಪರೀತವಾಗಿದೆ. ಅಶುದ್ಧ ನೀರನ್ನೇ ಜನರು ಕುಡಿಯುತ್ತಿದ್ದಾರೆ. ಒಳಚರಂಡಿ– ಕಸದ ವಿಲೇವಾರಿಯೂ ಕನಸಿನ ಮಾತು. ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯದ ರಾಶಿಯ ಬಳಿಯೇ ಗಾಡಿಗಳನ್ನು ನಿಲ್ಲಿಸಿ ಆಹಾರ ತಯಾರಿಸುತ್ತಿದ್ದಾರೆ. ಇದನ್ನೇ ಶಾಲಾ ಮಕ್ಕಳಾದಿಯಾಗಿ ಎಲ್ಲರೂ ಸೇವಿಸುತ್ತಿದ್ದಾರೆ. ಮಳೆಗಾಲದ ಈ ದಿನಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

–ಉಷಾ ನಾಯಕ್‌, ಪಂತರಪಾಳ್ಯಒಳಚರಂಡಿ ಸೌಲಭ್ಯ ಕಲ್ಪಿಸಿ

ಜಲಮಂಡಳಿಯು ಬಿ.ಬಿ.ಎಂ.ಪಿ. ವ್ಯಾಪ್ತಿಗೆ  ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತಿರುವುದು ಸಂತಸದ ಸಂಗತಿ. ಆದರೆ, ರಾಮಮೂರ್ತಿನಗರದ ಅನೇಕ ನಾಗರಿಕರು ತಮ್ಮ  ಮನೆಗಳ ಬಚ್ಚಲ ನೀರು, ಅಡಿಗೆ ಮನೆಗಳ ನೀರನ್ನು  ಚರಂಡಿಗಳಿಗೆ ಬಿಟ್ಟಿದ್ದಾರೆ.  ಕೆಲವು ಕಡೆಗಳಲ್ಲಿ  ಚರಂಡಿ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ.

ಜಲಮಂಡಳಿ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಈ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿಲ್ಲ. ಈಗಾಗಲೇ ಕಾಮಗಾರಿ ಆರಂಭಿಸಿರುವ ಕಡೆ ಪೂರ್ಣ ಕಾಮಗಾರಿಯನ್ನು ಸಮರ್ಪಕವಾಗಿ ಮುಗಿಸಿ ಮುಂದಿನ ಯೋಜನೆಗೆ ಕೈ ಹಾಕಿದರೆ ಹಿತ.

–ಎ.ವಿ.ಶಾಮರಾವ್‌, ರಾಮಮೂರ್ತಿನಗರಮೆಟ್ರೊ ನಿಲ್ದಾಣಕ್ಕೆ ಬಸ್‌ ಕಲ್ಪಿಸಿ

ಶ್ರೀನಗರ, ಹನುಮಂತನಗರ, ಶ್ರೀನಿವಾಸನಗರ, ಬ್ಯಾಂಕ್‌ ಕಾಲೊನಿ, ಸೀತಾವೃತ್ತ, ಹೊಸಕೆರೆಹಳ್ಳಿಯ ರಿಂಗ್‌ರಸ್ತೆಯ ಮೂಲಕ ಬಿಎಂಟಿಸಿ  ಬಸ್ಸುಗಳ ಸಂಚಾರವಿಲ್ಲದ ಕಾರಣ ಈ ಬಡಾವಣೆಯ ನಾಗರಿಕರಿಗೆ ನಾಯಂಡಹಳ್ಳಿಯ ಮೆಟ್ರೊ  ನಿಲ್ದಾಣ ತಲುಪಲು ಅನಾನುಕೂಲವಾಗಿದೆ. ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ  ನಾಯಂಡಹಳ್ಳಿ ಮೆಟ್ರೊ ರೈಲ್ವೆ ನಿಲ್ದಾಣಕ್ಕೆ ನಗರ ಸಾರಿಗೆ ಬಸ್ಸುಗಳ ಸಂಚಾರದ ವ್ಯವಸ್ಥೆ ಮಾಡಿಕೊಡಬೇಕಾಗಿ ಸಾರಿಗೆ ಅಧಿಕಾರಿಗಳಲ್ಲಿ ಮನವಿ.

– ಎ. ಕೆ. ಅನಂತಮೂರ್ತಿ, ನಾಗೇಂದ್ರ ಬ್ಲಾಕ್‌ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿ

ಬನ್ನೇರುಘಟ್ಟ  ರಸ್ತೆಯ ಲೊಯೊಲ ಬಸ್‌ ನಿಲ್ದಾಣದಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಬೇಕಿದೆ. ಈ ನಿಲ್ದಾಣದಿಂದ ಲೊಯೊಲ ಶಾಲೆಯ ಮುಖ್ಯರಸ್ತೆ ಕಡೆ ಪಾದಚಾರಿಗಳು ಹೋಗುವಾಗ, ವಾಹನ ಚಲಿಸುತ್ತಲೇ ಇರುತ್ತವೆ.  ಪಾದಚಾರಿಗಳು ರಸ್ತೆ ದಾಟಲು ಕಾಯುತ್ತಿರುವುದನ್ನು ಗಮನಿಸಿದರೂ ಸವಾರರು ವಾಹನಗಳನ್ನು ನಿಲ್ಲಿಸುವುದಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಗಳು ಶೀಘ್ರ ಇತ್ತ ಗಮನ ಹರಿಸಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿದರೆ ಪಾದಚಾರಿಗಳು ನಿರಾಳವಾಗಿ ಸಂಚರಿಸಬಹುದು. ಇಲ್ಲವಾದಲ್ಲಿ ಸದಾ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಮುಂದುವರಿಯಲಿದೆ.

– ವಿ.ಹೇಮಂತ್‌ ಕುಮಾರ್‌ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಿ

ಕೆಂಚನಪುರ ಗ್ರಾಮಕ್ಕೆ 241 ಸಂಖ್ಯೆಯ 5 ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಸಾರ್ವಜನಿಕರಿಗಾಗಿ ಇರುವ ಬಸ್ ಕೇವಲ ಚಾಲಕ ಹಾಗೂ ನಿರ್ವಾಹಕರ ಓಡಾಟಕ್ಕೆ ಸೀಮಿತವಾದಂತೆ ಕಾಣುತ್ತದೆ.ಬಸ್‌ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಒಟ್ಟೊಟ್ಟಿಗೇ ಬಂದು ಗ್ರಾಮದಲ್ಲಿ ಗಂಟೆಗಟ್ಟಲೆ  ನಿಂತಿರುತ್ತವೆ. ಬಸ್‌ಪಾಸ್ ಇದ್ದರೂ ಜನರು ಆಟೊಗಳಲ್ಲಿ ಓಡಾಡಬೇಕಾದ ಸ್ಥಿತಿ ಇದೆ.ಈ ಬಗ್ಗೆ ಡಿಪೊದಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಮಗಿಷ್ಟ ಬಂದಂತೆ ಬೋರ್ಡ್ ಬದಲಿಸಿ ಎಲ್ಲೆಂದರಲ್ಲಿ ಬಸ್ ತಿರುಗಿಸುವುದು, ಮಾರ್ಗ ಮಧ್ಯ ಪ್ರಯಾಣಿಕರನ್ನು ಇಳಿಸಿ ಡಿಪೊಗೆ ಹೋಗುವ ಪ್ರವೃತ್ತಿಯನ್ನೂ ಸಿಬ್ಬಂದಿ ರೂಢಿಸಿಕೊಂಡಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಬೇಕಾಗಿ ವಿನಂತಿ.

-ಕೆ.ಎ.ದೀಪುರಾವ್, ಕೆಂಚನಪುರ ತ್ಯಾಜ್ಯ ವಿಲೇವಾರಿ ಮಾಡಿ

ಮಾಗಡಿ ಮುಖ್ಯರಸ್ತೆಯ ತುಂಗಾನಗರದಲ್ಲಿರುವ ಶ್ರೀನಿಲಯಂ ವಸತಿ ಸಂಕೀರ್ಣದ ಮುಂದೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ದುರ್ನಾತ ಬರುತ್ತಿದೆ. ಸೊಳ್ಳೆಯ ಕಾಟವೂ  ಹೆಚ್ಚಾಗಿದೆ. ತಕ್ಷಣ ಕಸ ವಿಲೇವಾರಿ ಮಾಡಬೇಕಾಗಿ ವಿನಂತಿ.

–ಜಯಶ್ರೀ ಸಿ.ಕೆ. ತುಂಗಾನಗರ

ಒಳಚರಂಡಿ ಸಮಸ್ಯೆ ನಿವಾರಿಸಿ

ಬನಶಂಕರಿ 2ನೇ ಹಂತದ 6ನೇ ತಿರುವು ರಸ್ತೆಯ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಒಂದು ವರ್ಷದ ಹಿಂದೆ  ಎಂಜಿನಿಯರ್‌ಗೆ ದೂರು ನೀಡಿದಾಗ ತಾತ್ಕಾಲಿಕವಾಗಿ ಬೈಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಅದಾಗಿ ಒಂದು ವರ್ಷವಾದರೂ ಶಾಶ್ವತ ಪರಿಹಾರ ಮಾಡಿಲ್ಲ. ಕುಡಿಯುವ ನೀರಿನ ಪೈಪ್‌ ಮೂಲಕ ಚರಂಡಿ ನೀರು ಮನೆಗಳಿಗೆ ಬರುತ್ತಿದೆ. ಈ ಸಮಸ್ಯೆಯನ್ನು ತಕ್ಷಣ  ನಿವಾರಿಸಲು ಅಧಿಕಾರಿಗಳು ಗಮನ ಹರಿಸಬೇಕು.

-ಡಿ.ಎಂ.ಶಂಭು, ಬನಶಂಕರಿ 2ನೇ ಹಂತರಸ್ತೆಯ ಮೇಲೆ ಒಳಚರಂಡಿ ನೀರು

ಮಹಾದೇವಪುರದ ಸರಸ್ವತಿನಗರ 6ನೇ ತಿರುವು ರಸ್ತೆಯಲ್ಲಿ ಮಳೆ ಬಂದಾಗ ಒಳಚರಂಡಿ ತುಂಬಿ ಕೊಚ್ಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಮನೆ ಮುಂದೆ ತ್ಯಾಜ್ಯ ನೀರು ನಿಲ್ಲುತ್ತಿದೆ. ಇದರಿಂದಾಗಿ ದುರ್ನಾತದ ಜೊತೆಗೆ ಸೊಳ್ಳೆಕಾಟವೂ ಹೆಚ್ಚಾಗಿದೆ. ಒಂದು ವರ್ಷದಿಂದ ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ತಕ್ಷಣ ಚರಂಡಿಯ ಹೂಳೆತ್ತಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡಬೇಕಿದೆ.

-ಶಿರಿನ್‌, ಸರಸ್ವತಿನಗರಒಳಚರಂಡಿ ಸರಿಪಡಿಸಿ

ಮೈಸೂರು ರಸ್ತೆಯ ಗಾಳಿ ಆಂಜನೇಯ  ದೇವಸ್ಥಾನ ಸಮೀಪ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ಬಂದಾಗ ನೀರು ರಸ್ತೆಗೆ ಹರಿದು ಡಾಂಬರು ಕಿತ್ತು ಹೋಗಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೂ ಕಷ್ಟವಾಗಿದೆ. ಕುಡಿಯುವ ನೀರಿನ ಪೈಪ್‌ ಮತ್ತು ಒಳಚರಂಡಿ ಪೈಪ್‌ ಒಂದೇ ಕಡೆ ಹಾದು ಹೋಗಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

–ಚೇತನ್‌ ದೇವರಾಜಯ್ಯ, ಕಸ್ತೂರಬಾ ನಗರಒಳಚರಂಡಿ ಸರಿಪಡಿಸಿ

ರಾಜರಾಜೇಶ್ವರಿ ನಗರದ ಬೆಮೆಲ್ ಬಡಾವಣೆಯಲ್ಲಿ ಒಳಚರಂಡಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಒಂದು ತಿಂಗಳ ಹಿಂದೆ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಒಳಿತು.

–ಮಮತಾ, ಬೆಮೆಲ್‌ ಬಡಾವಣೆಚರಂಡಿ ನೀರು ಕಟ್ಟಿದೆ

ನಾವು ಎಚ್‌.ಎಸ್.ಆರ್ ಲೇಔಟ್ 3ನೇ ಸೆಕ್ಟರ್‌ನಲ್ಲಿ ವಾಸವಿದ್ದೇವೆ. ಪ್ರತಿದಿನ ನಮ್ಮ ಮನೆ ಎದುರು ಚರಂಡಿ ನೀರು ನಿಲ್ಲುತ್ತದೆ. ಈ ಕುರಿತು ಸಾಕಷ್ಟು ಬಾರಿ ದೂರು ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ.  ಪೌರ ಕಾರ್ಮಿಕರು ಈ ಹಿಂದೆ ಒಂದು ಬಾರಿ ಕಟ್ಟಿಕೊಂಡಿದ್ದ ನೀರನ್ನು ತೆರವುಗೊಳಿಸಿದ್ದರು. ಆದರೆ ಇದೀಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ.

–ಓಬಪ್ಪ ಬಿ.ಡಿ, ಎಚ್‌ಎಸ್‌ಆರ್‌ ಲೇಔಟ್‌ರಸ್ತೆಯ ಮೇಲೆ ನೀರು ಹರಿಯುತಿದೆ

ಕುಮಾರಸ್ವಾಮಿ ಬಡಾವಣೆಯ 2ನೇ ಹಂತದ 7ನೇ ಮುಖ್ಯರಸ್ತೆಯಲ್ಲಿರುವ ಬಸ್ ನಿಲ್ದಾಣದ ಬಳಿ ಎರಡು ತಿಂಗಳಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅಧಿಕಾರಿಗಳು ಸ್ಪಂದಿಸುವಂತೆ ಮನವಿ.

–ಹೇಮಂತ್‌, ಕುಮಾರಸ್ವಾಮಿ ಬಡಾವಣೆಅಪಾಯಕಾರಿ ಕಾಂಪೌಂಡ್

ಪಿಇಎಸ್‌ ಕಾಲೇಜಿನ ಎದುರಿಗೆ ಇರುವ  ಖಾಸಗಿ ಶಾಲೆಯೊಂದರ ಕಾಂಪೌಂಡ್ ಈಗಲೋ– ಆಗಲೋ ಬೀಳುವಂತಿದೆ. ಅಡಿಪಾಯ ಇಲ್ಲದೆ 18 ಅಡಿ ಎತ್ತರಕ್ಕೆ ಕಾಂಪೌಂಡ್ ಕಟ್ಟಿದ್ದಾರೆ. ಇದು ಮುಖ್ಯರಸ್ತೆ ಆಗಿದ್ದು, ಶಾಲೆಗೆ ಹೋಗುವ ಮಕ್ಕಳು, ನಡೆದು ಹೋಗುವ ಜನರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ.

ಮಳೆ ಬರುತ್ತಿರುವ ಕಾರಣ ಕಾಂಪೌಂಡ್ ಈಗಾಗಲೇ ಒಂದು ಕಡೆ ಬಿದ್ದು ಹೋಗಿದೆ. ಆದರೂ ಶಾಲೆಯವರು ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ನಾಗರಿಕರ ಮನವಿಗೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಶಾಲೆಯ ಆಡಳಿತ ಮಂಡಳಿಗೆ ಈ ಕುರಿತು ಎಚ್ಚರಿಕೆ ನೀಡಬೇಕು.

–ನಾಗೇಶ್‌, ವೀರಭದ್ರನಗರರಸ್ತೆಗೆ ಕಸ ಸುರಿಯುವ ಪೌರಕಾರ್ಮಿಕರು

ನಾಗರಬಾವಿ ಸರ್ಕಲ್‌ನಿಂದ ಮದ್ದೂರಮ್ಮ ದೇವಸ್ಥಾನ ಮಾರ್ಗದಲ್ಲಿ ಸಂಚರಿಸಿದರೆ ಕೆಟ್ಟ ವಾಸನೆಗೆ ವಾಂತಿ ಬರುವಂತೆ ಆಗುತ್ತದೆ. ಕೊಕನಟ್‌ ಗಾರ್ಡನ್ ಎದುರಿನ ಮುಖ್ಯರಸ್ತೆ ಅದು.

ಸುತ್ತಮುತ್ತಲಿನ ಮನೆಗಳಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರು ಸಂಗ್ರಹಿಸಿದ ತ್ಯಾಜ್ಯವನ್ನು ರಸ್ತೆಗೆ ತಂದು ಸುರಿಯುತ್ತಿದ್ದಾರೆ. ಅಲ್ಲೇ ವಿಜಯನಗರಕ್ಕೆ ಹೋಗುವ ಬಸ್‌ಗಳು ಬರುತ್ತವೆ. ಬಸ್‌ಗಾಗಿ ಕಾಯುವ ಶಾಲಾ ಮಕ್ಕಳು, ಉದ್ಯೋಗಸ್ಥರು ಈ ವಾಸನೆ ಸಹಿಸಿಕೊಂಡು ನಿಲ್ಲಬೇಕಾದ ಸ್ಥಿತಿ ಇದೆ.ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವುದು ಯಾವ ನಾಗರಿಕತೆ ಎಂದು ತಿಳಿಯುತ್ತಿಲ್ಲ. ಮುಖ್ಯರಸ್ತೆಯ ತುಂಬಾ ಕಸದ ರಾಶಿ ಚೆಲ್ಲಾಡಿದೆ. ವಾಹನದಲ್ಲಿ ಓಡಾಡುವವರ ಮುಖಕ್ಕೆ ಪ್ಲಾಸ್ಟಿಕ್ ಕವರ್‌ಗಳು ತೂರಿಕೊಂಡು ಬರುತ್ತವೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.

–ಅನಸೂಯ, ಕೊಕನಟ್‌ ಗಾರ್ಡನ್, ನಾಗರಬಾವಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.