ಮಂಗಳವಾರ, ಮಾರ್ಚ್ 9, 2021
18 °C
ಸಾಧಕಿ

ಕುಂಬಾರಿಕೆ ಕಲೆಯ ಅರಸಿ...

ಎಸ್. ರುದ್ರೇಶ್ವರ,ರಾಮನಗರ Updated:

ಅಕ್ಷರ ಗಾತ್ರ : | |

ಕುಂಬಾರಿಕೆ ಕಲೆಯ ಅರಸಿ...

ಒಂಬತ್ತು ವರ್ಷದ ಹುಡುಗಿ ತನ್ನ ಕೈಯಲ್ಲಿದ್ದ ಒಂದಿಷ್ಟು ಚಿಲ್ಲರೆ ಕಾಸನ್ನು ಕೂಡಿಡಬೇಕು ಎಂಬ ಆಸೆಯಿಂದ ಮಣ್ಣಿನ ಹುಂಡಿ ತರಲು ಮೂರು ಮೈಲಿ ನೆಡದುಕೊಂಡು ರಾಮನಗರದ ಕರಕುಶಲ ವಸ್ತುವಿನ ಕುಂಬಾರಿಕೆ ವಿಭಾಗಕ್ಕೆ ಬಂದಳು. ಅಲ್ಲಿ ಮಣ್ಣಿನಿಂದ ವಿವಿಧ ರೀತಿಯ ಬೊಂಬೆಗಳ ತಯಾರಿಕೆಯನ್ನು ನೋಡುತ್ತಾ ನಿಂತ ಹುಡುಗಿಗೆ ತಾನು ಏಕೆ ಇಲ್ಲಿಗೆ ಬಂದೆ ಎಂಬುದೇ ಮರೆತು ಹೋಯಿತು. ಅಲ್ಲಿದ್ದ ಕಲಾವಿದ ಅಗಸರ ಕರಿಯಪ್ಪ ಈಕೆಯ ಕುತೂಹಲವನ್ನು ಗುರುತಿಸಿ ಬೊಂಬೆ ಮಾಡುವುದನ್ನು ಕಲಿ ಯುತ್ತಿಯಾ ಮಗು ಎಂದು ಕೇಳಿದರು.ಅಂದಿನಿಂದ ಹುಡುಗಿ ಮಣ್ಣಿನ ಗೀಳು ಹತ್ತಿಸಿಕೊಂಡಳು. ಇದಕ್ಕೆ ಮನೆಯವರು ಮೂಗು ಮುರಿದರು. ಬರೀ ಗಂಡಸರೇ ಇರುವ ಜಾಗಕ್ಕೆ ಏಕೆ ಹೋಗುತ್ತಿಯಾ ಎಂದು ಅಕ್ಕಪಕ್ಕದವರು ಪ್ರಶ್ನಿಸಿದರು. ಆ ಹುಡುಗಿ ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ.  ಶಾಲೆಗೆ ಹೋಗಲಿಲ್ಲ. ಕುಂಬಾರಿಕೆಯ ತರಬೇತಿ ಪಡೆದಳು. ದಿನ ಕಳೆದಂತೆ ಈ ಹುಡುಗಿಯ ಕೈಯಲ್ಲಿ ಮಣ್ಣು ರೂಪುಗೊಳ್ಳುವುದನ್ನು ನೋಡಿ ಅವರಿಗೆ ತರಬೇತಿ ಕೊಟ್ಟವರೂ ಅಚ್ಚರಿಗೊಂಡರು. ಹೀಗೆ ಮಣ್ಣಿನ ಜತೆ ನಂಟು ಬೆಳೆಸಿಕೊಂಡ ಹುಡುಗಿಗೆ ಮಣ್ಣೇ ಎಲ್ಲವೂ ಆದದ್ದು ಮುಂದಿನ ಕತೆ. ದಿನವೊಂದಕ್ಕೆ ಹತ್ತು ಗಂಟೆ ಈ ಮಣ್ಣಿನ ಕೆಲಸದೊಳಗೆ ಮುಳುಗಿ ಹೋಗಿ ದಿನಕ್ಕೆ ರೂಪಾಯಿ ಹತ್ತು-ಇಪ್ಪತ್ತು ಸಂಪಾದನೆ ಮಾಡುತ್ತಿದ್ದ ದಿನಗಳಿದ್ದವು. ನಂತರ ಅನುಭವ ಹೆಚ್ಚುತ್ತಿದ್ದಂತೆ ಸಂಪಾದನೆ ದಿನಕ್ಕೆ ರೂಪಾಯಿ 100 ರಿಂದ 200 ಅನ್ನು ದಾಟಿತು. ಈ ಮಹಿಳೆ ತನ್ನ ಈ ಕಲೆಯಿಂದಲೇ ಇದೀಗ ತಿಂಗಳಿಗೆ ಐವತ್ತು ಸಾವಿರ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅಂದ ಹಾಗೆ ಅವರ ಹೆಸರು ರಾಮನಗರದ ಆರ್.ವಿ. ಅನುಸೂಯಬಾಯಿ.ರಾಮನಗರದ ಜಾನಪದ ಲೋಕದ ಕುಂಬಾರಿಕೆಯ ವಿಭಾಗದಲ್ಲಿ ಅನುಸೂಯಬಾಯಿ ತಯಾರಿಸುವ ಕರಕುಶಲ ವಸ್ತುಗಳಿಗೆ ಅಪಾರ ಬೇಡಿಕೆ ಇದೆ. ಚೆನ್ನೈ, ಸೇಲಂ, ಹೈದರಾಬಾದ್, ಮುಂಬೈ ಮತ್ತಿತರ ನಗರಗಳಿಂದ ಬರುವ ಸಗಟು ವ್ಯಾಪಾರಿಗಳು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ಸಣ್ಣಸಣ್ಣ ಆನೆಗಳಿಂದ ಹಿಡಿದು ದೊಡ್ಡ ಹೂವಿನ ಕುಂಡಗಳು, ಕುದುರೆ, ಬಸವಣ್ಣ, ಗಣಪತಿ, ವಿವಿಧ ರೀತಿಯ ದೀಪಗಳು, ಹೂಬಳ್ಳಿಗಳು, ಹಣ್ಣು ಕಾಯಿಗಳು ಹೀಗೆ ವಿವಿಧ ಕಲಾಕೃತಿಗಳು ಅನುಸೂಯಬಾಯಿ ಕೈಯಲ್ಲಿ ರೂಪು ಪಡೆದಿವೆ.ಅನಕ್ಷರಸ್ಥೆಯಾದ,ಇವರು ಒಂಬತ್ತನೇ ವಯಸ್ಸಿಗೆ ಕರಕುಶಲ ಕಲೆಯನ್ನು ಕಲಿತರು. 20 ವರ್ಷ ಕಾವೇರಿ ಕರಕುಶಲ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ನಾಗೇಗೌಡ ಅವರು ಜಾನಪದ ಲೋಕದಲ್ಲಿ ಸ್ಥಳವನ್ನು ಕೊಟ್ಟ ಮೇಲೆ ಕಳೆದ 20 ವರ್ಷಗಳಿಂದ ಕುಂಬಾರಿಕೆ ಕೆಲಸ ಮಾಡುವುದನ್ನೇ ಕೆಲಸ ಮಾಡಿಕೊಂಡು, ಆರು ಮಂದಿಗೆ ಕೆಲಸವನ್ನು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.