ಶನಿವಾರ, ಮೇ 8, 2021
26 °C

ಕುಡಿಯುವ ನೀರಿಗೆ ಆಗ್ರಹ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿನ ಕೊಳವೆಬಾವಿಗಳು ಬತ್ತಿಹೋಗಿ ಜನ ನೀರಿಗಾಗಿ ಪರದಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಪ್ರಜಾ ವಿಮೋಚನಾ ಚಳುವಳಿಯ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಸರ್ಕಾರವು ಬರಗಾಲ ನಿವಾರಣೆಗಾಗಿ ಸಾವಿರಾರು ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿದ್ದರೂ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ನಿವಾರಣೆಯಾಗಿಲ್ಲವೆಂದು ಆರೋಪಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿ ಆಂಜನಪ್ಪ ಅಧಿಕಾರಿಗಳ ವಿಳಂಬ ಧೋರಣೆಗೆ ಕಿಡಿಕಾರಿದರು.ಇಂಡ್ಲುವಾಡಿ ಬಸವರಾಜು ಮತ್ತು ಎಸ್.ಸೋಮಸುಂದರ್ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಬದಲು ವರ್ಷದ ಕೊನೆ ತಿಂಗಳು ಮಾರ್ಚಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅನುದಾನ ವಾಪಸ್ಸು ಹೋಗುತ್ತದೆ ಎಂಬ ಹಿನ್ನಲೆಯಲ್ಲಿ ಅಧಿಕಾರಿಗಳು ಕಾರ್ಯಗತವಾಗದೇ ಇರುವ ಕೆಲಸಗಳಿಗೆ ದಾಖಲೆಗಳನ್ನು ಸೃಷ್ಟಿಯ ಭಾರಿ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.   ರುದ್ರೇಶ್ ಮಾತನಾಡಿ,  ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟವು 1000 ಅಡಿಗಳಷ್ಟು ಕುಸಿದಿದ್ದು ಹೊಸದಾಗಿ ಬೋರ್ ಕೊರೆಯುವುದನ್ನು ನಿಲ್ಲಿಸಬೇಕು, ಹಳೇ ಬೋರ್‌ವೆಲ್‌ಗಳಲ್ಲಿ ದೊರೆಯುವ ನೀರನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ನೀರು ಪೂರೈಕೆಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರು ಅರ್ಧಗಂಟೆಗೂ ಹೆಚ್ಚಿನ ಕಾಲ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಧರಣಿ ಕುಳಿತಿದ್ದರು. ನಂತರ ಕಾರ್ಯ ನಿರ್ವಾಹಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಇ.ಒ. ಜೆ.ಜಿ.ನಾಯಕ್ ಮನವಿ ಸ್ವೀಕರಿಸಿ ನೀರಿನ ಸಮಸ್ಯೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  ಪ್ರವೀಣ್‌ಕುಮಾರ್, ಮಹದೇವ್, ನವೀನ್‌ಕುಮಾರ್, ಮಹೇಶ್, ಮಲ್ಲಿಕಾರ್ಜುನ್, ಪ್ರವೀಣ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.