ಗುರುವಾರ , ಮೇ 19, 2022
23 °C

ಕುದುರೆಮುಖದಲ್ಲಿ ಪ್ರವಾಸೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕುದುರೆಮುಖ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಜಿಲ್ಲಾಡಳಿತ ಗಂಭೀರ ಆಲೋಚನೆ ನಡೆಸಿದೆ.

ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಕಾರ್ಯದರ್ಶಿಗಳು, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಚನ್ನಪ್ಪಗೌಡ ಹೇಳಿದರು.ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಿಲಿಟರಿ ಸಿಬ್ಬಂದಿಗಾಗಿ ತರಬೇತಿ ಕೇಂದ್ರವನ್ನು ಕುದುರೆಮುಖದಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಈಗಾಗಲೇ ಕೆಲವು ಮಿಲಿಟರಿ ಅಧಿಕಾರಿಗಳು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದರು.ಕುದುರೆಮುಖ ಕಂಪೆನಿಯವರು ಯಂತ್ರೋಪಕರಣಗಳನ್ನು ಮಂಗಳೂರಿಗೆ ಸಾಗಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆ. ಭಾರೀ ಯಂತ್ರೋಪಕರಣಗಳ ಸಾಗಣೆಯಿಂದ ಸೇತುವೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸೇತುವೆಗಳು ಹಾಳಾದರೆ ಅವನ್ನು ದುರಸ್ತಿಪಡಿಸಬೇಕೆಂಬ ಷರತ್ತು ವಿಧಿಸಿ ಯಂತ್ರ ಸಾಗಾಣಿಕೆಗೆ ಅನುಮತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಸುಮಾರು 7000 ಹೆಕ್ಟೇರ್ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದೆ. 1000 ಹೆಕ್ಟೇರ್ ಪ್ರದೇಶ ಗಣಿಗಾರಿಕೆಗೆ ಒಳಪಟ್ಟಿತ್ತು. ಉಳಿದ 4000 ಹೆಕ್ಟೇರ್ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.ಕುದುರೆಮುಖ ಕಂಪೆನಿ ಅಲ್ಲಿಂದ ಕಾಲ್ತೆಗೆದ ನಂತರ ಊರು ನಶಿಸಿ ಹೋಗುತ್ತದೆ. ಹೀಗಾಗಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕೊಟ್ಟರೆ ಸ್ಥಳೀಯರಿಗೆ ಉದ್ಯೋಗವಾಕಾಶ ಸಿಕ್ಕಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.ಕುಡಿಯುವ ನೀರು: ಕಡೂರು ಮತ್ತು ಸಖರಾಯಪಟ್ಟಣಗಳಲ್ಲಿ ಕುಡಿಯುವ ಸಮಸ್ಯೆ ಸ್ವಲ್ಪಮಟ್ಟಿಗೆ ತಲೆದೋರಿದೆ. ವಿದ್ಯುತ್ ಸಮಸ್ಯೆಯ ಜತೆಗೆ ಪಂಪ್‌ಸೆಟ್‌ಗಳು ಕೈಕೊಟ್ಟಿರುವುದು ಇದಕ್ಕೆ ಮುಖ್ಯ ಕಾರಣ. ನೀರು ಸರಬರಾಜು ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಗಮನಹರಿಸಲು ಮೆಸ್ಕಾಂಗೆ ಸೂಚಿಸಲಾಗಿದೆ.ಕಡೂರು ಸುತ್ತಮುತ್ತಲ ಪ್ರದೇಶದ ಅಂತರ್ಜಲ ಕ್ಷೀಣಿಸುತ್ತಿದೆ. ಹೀಗಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಅಂತರ್ಜಲ ವೃದ್ಧಿಗೆ ಅಗತ್ಯಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಕಂಟ್ರೋಲ್ ರೂಂ ಪ್ರಾರಂಭಿಸಲಾಗುವುದು. ಕುಡಿಯುವ ಸಮಸ್ಯೆಯ ಮಾಹಿತಿಯನ್ನು ಸಾರ್ವಜನಿಕರು ಕಂಟ್ರೋಲ್ ರೂಂಗೆ ನೀಡಬಹುದು ಎಂದು ಅವರು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.