ಶನಿವಾರ, ಮೇ 15, 2021
24 °C

ಕುಸ್ತಿ: ಸುಶೀಲ್‌ಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸ್ತಿ: ಸುಶೀಲ್‌ಗೆ ಆಘಾತ

ನವದೆಹಲಿ (ಪಿಟಿಐ): ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ಸುಶೀಲ್ ಕುಮಾರ್ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು.ಭಾನುವಾರ ನಡೆದ 66 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ ಉಕ್ರೇನ್‌ನ ಆಂಡ್ರಿ ಸ್ಟಾಡ್ನಿಕ್ 5-3 ರಲ್ಲಿ ಸುಶೀಲ್ ವಿರುದ್ಧ ಅಚ್ಚರಿಯ ಗೆಲುವು ಪಡೆದರು. ಸುಶೀಲ್ ನಿರ್ಗಮನದೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.ಕಳೆದ ವರ್ಷ ಮಾಸ್ಕೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸುಶೀಲ್ ಚಿನ್ನ ಜಯಿಸಿದ್ದರು. ಮಾತ್ರವಲ್ಲ ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎನಿಸಿದ್ದರು.ಸುಶೀಲ್ ಮೊದಲ ಸುತ್ತಿನಲ್ಲಿ ಜೋಸೆಫ್ ಲೋಪೆಜ್ ಅವರನ್ನು ಸೋಲಿಸಿದ್ದರು. ಸ್ಟಾಡ್ನಿಕ್ ವಿರುದ್ಧದ ಹಣಾಹಣಿಯಲ್ಲಿ ಮೊದಲ ಅವಧಿಯ ಕೊನೆಯಲ್ಲಿ ಭಾರತದ ಸ್ಪರ್ಧಿ 2-0 ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ತಿರುಗೇಟು ನೀಡಿದ ಉಕ್ರೇನ್ ಸ್ಪರ್ಧಿ 4-2 ರಲ್ಲಿ ಮೇಲುಗೈ ಪಡೆದರು.ಈ ಬಾರಿ ಭಾರತದ ಯಾವುದೇ ಸ್ಪರ್ಧಿ ಪ್ರಭಾವಿ ಪ್ರದರ್ಶನ ನೀಡಿಲ್ಲ. ಸುಶೀಲ್ ಅವರನ್ನು ಹೊರತುಪಡಿಸಿದರೆ, ಅಲ್ಪ ಚೇತರಿಕೆಯ ಪ್ರದರ್ಶನ ನೀಡಿದ್ದು ಮೌಸಮ್ ಖತ್ರಿ ಮಾತ್ರ. ಅವರು 96 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

 

ಆದರೆ ಸ್ಲೊವೇಕಿಯದ ಜೋಸೆಫ್ ಜಾಲೊವಿಯರ್ ಎದುರು ಪರಾಭವಗೊಂಡಿದ್ದರು. ಮೌಸಮ್ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಲಿಯೊನ್ ಗ್ರೆಗೊರಿ ಅವರನ್ನು ಮಣಿಸಿದ್ದರೆ, ಎರಡನೇ ಸುತ್ತಿನಲ್ಲಿ ಅರ್ಮೆನಿಯದ ಹರುತ್ಯುನ್ ಯೆನೊಕ್ಯಾನ್ ವಿರುದ್ಧ ಜಯ ಸಾಧಿಸಿದ್ದರು.ಭಾರತದ ಇತರ ಫ್ರೀಸ್ಟೈಲ್ ಸ್ಪರ್ಧಿಗಳಾದ ಯೋಗೇಶ್ವರ್ ದತ್ತ್ (60 ಕೆ.ಜಿ. ವಿಭಾಗ), ನರಸಿಂಗ್ ಪಂಚಮ್ ಯಾದವ್ (74 ಕೆ.ಜಿ.) ಮತ್ತು ಪವನ್ ಕುಮಾರ್ (84 ಕೆ.ಜಿ) ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇವರು ಕ್ರಮವಾಗಿ ಇರಾನ್‌ನ ಮುಸ್ತಫಾ ಗಾದಿರ್, ಕೆನಡಾದ ಮ್ಯಾಥ್ಯೂ ಜುಡಾ ಹಾಗೂ ಕಜಕಸ್ತಾನದ ಯೆರ್ಮೆಕ್ ಬೈದುಶೋವ್ ಎದುರು ಸೋಲು ಅನುಭವಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.