ಮಂಗಳವಾರ, ಮೇ 11, 2021
20 °C

ಕೂಲಿ ಮಕ್ಕಳಿಗೆ ಪೌಷ್ಟಿಕ ಆಹಾರ: ಸದಸ್ಯರ ಕಿತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಇರುವ ಕೂಲಿ ಕಾರ್ಮಿಕರ ಮಕ್ಕಳ ಖಾಸಗಿ ಪಾಲನಾ ಕೇಂದ್ರಕ್ಕೆ ಪೌಷ್ಟಿಕ ಆಹಾರ ಪೂರೈಸುವ ವಿಷಯವು ಮಂಗಳವಾರ ಇಲ್ಲಿ ನಡೆದ ಮಡಿಕೇರಿ ತಾ.ಪಂ. ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.ಮೊದಲು ವಿಷಯ ಪ್ರಸ್ತಾಪಿಸಿದ ಸದಸ್ಯ ಮಂಞರ ಸಾಬು ತಿಮ್ಮಯ್ಯ, ಈ ಕೇಂದ್ರದಲ್ಲಿ 35 ಮಕ್ಕಳಿದ್ದು, ಶಿಶು ಪಾಲನಾ ಕಾರ್ಯಕ್ರಮದಡಿ ನೀಡಲಾಗುವ ಪೌಷ್ಟಿಕ ಆಹಾರವನ್ನು ಈ ಮಕ್ಕಳಿಗೆ ನೀಡಲು ನಿರಾಕರಿಸಲಾಗುತ್ತಿದೆ. ಈ ಮಕ್ಕಳು ದೇಶದ ಪ್ರಜೆಗಳಲ್ಲವೇ? ಇವರಿಗೆ ಪೌಷ್ಟಿಕ ಆಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಸತ್ಯನಾರಾಯಣ ಅವರು, `ಈ  ಸ್ಥಳದಲ್ಲಿ (ಪೈಸಾರಿ) ಈ ಕುಟುಂಬಗಳು ಅಕ್ರಮವಾಗಿ ವಾಸವಿದ್ದಾರೆ. ಇವರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬಾರದು~ ಎಂದು ಸ್ಥಳೀಯ ಹೊದ್ದೂರು ಗ್ರಾಮ ಪಂಚಾಯಿತಿಯು ಕೈಗೊಂಡ ಠರಾವುನ್ನು ಓದಿ ಹೇಳಿದರು.ಈ ಉತ್ತರದಿಂದ ಕೆಂಡಾಮಂಡಲರಾದ ಸದಸ್ಯ ನೆರವಂಡ ಉಮೇಶ್ ಮಾತನಾಡಿ, `ಹಾಗಿದ್ದರೆ ತಕ್ಷಣವೇ ಅವರಿಂದ ಕಂದಾಯ ಕಟ್ಟಿಸಿಕೊಂಡು ಜಾಗವನ್ನು ಸಕ್ರಮವಾಗಿ ಮಾಡಿಕೊಡಿ. ಕಂದಾಯ ಕಟ್ಟುವಂತೆ ಹಾಗೂ ಕಂದಾಯ ಕಟ್ಟಲು ಬರುವವರನ್ನು ವಾಪಸ್ ಕಳುಹಿಸದೇ ಕಟ್ಟಿಸಿಕೊಳ್ಳುವಂತೆ ಗ್ರಾ.ಪಂ.ಗೆ ಸೂಚನೆ ನೀಡಿ. ಈ ವಿಷಯದಲ್ಲಿ ಪಕ್ಷಭೇದ ಮರೆತು ತಾ.ಪಂ. ಎಲ್ಲ ಸದಸ್ಯರೂ ಸರ್ವಾನುಮತದಿಂದ ಈ ನಿರ್ಣಯವನ್ನು ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.ಅವರ ಈ ಪ್ರಸ್ತಾವನೆಗೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಿರ್ಣಯದ ವಿರುದ್ಧ ಹೋಗುವುದು ಬೇಡ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ್, `ಗ್ರಾ.ಪಂ. ಕೈಗೊಂಡಿರುವ ಈ ನಿರ್ಧಾರವನ್ನು ತಾ.ಪಂ. ಪ್ರಶ್ನಿಸಬಹುದು. ಇದಲ್ಲದೇ, ಮಕ್ಕಳಿಗೆ ಆಹಾರ ಪೂರೈಸುವ ಸಂಬಂಧ ನಿರ್ದೇಶನವನ್ನೂ ಕೊಡಬಹುದು~ ಎಂದರು.`ಸ್ಥಳೀಯ ಮಟ್ಟದಲ್ಲಿ ರಾಜಕೀಯ ಒತ್ತಡ ಸಾಕಷ್ಟಿದೆ. ನಾನೊಂದು ಪಕ್ಷದ ಗುಲಾಮ, ಮತ್ತೊಬ್ಬ ಇನ್ನೊಂದು ಪಕ್ಷದ ಗುಲಾಮ ಹೀಗಾಗಿ ಅಲ್ಲಿ ನಿರ್ಣಯಗೊಳ್ಳಲು ಸಾಧ್ಯವಾಗದು~ ಎಂದು ಹತಾಶದಿಂದ ನುಡಿದರು.ಬಡವರಿಗೆ ನಿವೇಶನ ನೀಡಲು ಸರ್ಕಾರವು ಆಶ್ರಯ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಇಂತಹದೊಂದು ಯೋಜನೆಯಡಿ ಏಕೆ ಈ ಬಡವರಿಗೆ ಅವರ ಜಾಗವನ್ನು ಅವರ ಹೆಸರಿಗೆ ಮಾಡಿಕೊಡಬಾರದು ಎಂದು ಸಾಬು ತಿಮ್ಮಯ್ಯ ಪ್ರಶ್ನಿಸಿದರು.ಅಲ್ಲಿ ವಾಸವಿರುವ ಬಹಳಷ್ಟು ಜನರಲ್ಲಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾಗಿದ್ದಾರೆ. ಸುಮಾರು 310 ಕುಟುಂಬಗಳು ವಾಸ ಇವೆ. ಇವರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.ಮಧ್ಯೆಪ್ರವೇಶಿಸಿದ ನೆರವಂಡ ಉಮೇಶ್, ಮಕ್ಕಳಿಗೆ ಒಂದುಹೊತ್ತಿನ ಊಟ ನೀಡಲು ನಾವು ಇಷ್ಟೊಂದು ಚರ್ಚೆ ನಡೆಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು.ಮಕ್ಕಳಿಗೆ ಆಹಾರ ಒದಗಿಸುವುದರ ಜೊತೆಗೆ ಪಾಲೆಮಾಡು ಪೈಸಾರಿಗೆ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.ಇದರ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಆ ಕುಟುಂಬಗಳು ಹಾಗೂ ಅವರ ಮಕ್ಕಳು ಜಿ.ಪಂ. ಹಾಗೂ ಜಿಲ್ಲಾಧಿಕಾರಿ ಎದುರು ಉಪವಾಸ ಪ್ರತಿಭಟನೆ ನಡೆಸಲಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಲಿದ್ದೇವೆ. ಇದಕ್ಕೆ ಅವಕಾಶ ಕೊಡಬೇಡಿ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸವಾಲೆಸೆದರು.ಸಾಬು ತಿಮ್ಮಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ಜಿ.ಪಂ.ಅಧ್ಯಕ್ಷರು ಈ ಪೈಸಾರಿಯಲ್ಲಿರುವವರೆಲ್ಲ ಕೇರಳದಿಂದ ವಲಸೆ ಬಂದಿರುವವರೆಂಬ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಇವರೆಲ್ಲ ಸ್ಥಳೀಯರೆ ಎಂಬುದಕ್ಕೆ ಪೂರಕವಾದ ಅಲ್ಲಿನ ನಿವಾಸಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.`ಇಲ್ಲಿರುವವರೆಲ್ಲ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ವಾಸವಿದ್ದು, ಇದೀಗ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕೂಡ ಸೇರ್ಪಡೆಗೊಂಡಿದೆ~ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾದಪ್ಪ ಮಾತನಾಡಿ, ತಾ.ಪಂ. ವತಿಯಿಂದ ಸೂಕ್ತ ನಿರ್ದೇಶನ ದೊರೆತರೆ ಪಾಲೇಮಾಡು ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.ಕಾರ್ಯನಿರ್ವಾಹಕ ಅಧಿಕಾರಿ ಎಂ. ಸತ್ಯನಾರಾಯಣ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕೈಗೊಳ್ಳೋಣ ಎಂದು ಚರ್ಚೆಗೆ ತೆರೆ ಎಳೆದರು.ಸದಸ್ಯರಾದ ಬೊಳ್ಳಚೆಟ್ಟಿರ ಸುರೇಶ್, ಕೆ.ಡಿ.ಅನಿತಾ (ಬೇಬಿ), ವಿ.ವಿ.ಹರೀಶ್‌ಕುಮಾರ್  ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತೀಜಾ ಅಚ್ಚಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.