ಶನಿವಾರ, ಜುಲೈ 24, 2021
26 °C

ಕೃತಕ ಬೆಳಕಿನ ಹಿಂದೆ ಅಡಗಿದೆ ವಾಯು ಮಾಲಿನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾತ್ರಿಯಲ್ಲಿ ಬೃಹತ್ ನಗರಗಳು, ಪಟ್ಟಣಗಳು ಹೇಗಿರುತ್ತವೆ ಎಂಬುದನ್ನು ಕಲ್ಪಿಸಿಕೊಳ್ಳಿ... ರಸ್ತೆ, ಮಳಿಗೆ, ಅಂಗಡಿ,ಅಪಾರ್ಟ್‌ಮೆಂಟ್‌ಗಳು ಹೀಗೆ.. ಎಲ್ಲೆಲ್ಲೂ ಜಗಮಗಿಸುವ, ಕಣ್ಣುಕೋರೈಸುವ ಬೆಳಕು. ನಗರಕ್ಕೆ ನಗರವೇ ಬಣ್ಣ ಬಣ್ಣದ ಕೃತಕ ಬೆಳಕಿನಲ್ಲಿ ಮುಳುಗೇಳುತ್ತದೆ.ನೋಡುಗರ ಕಣ್ಣಿಗೆ ಈ ದೃಶ್ಯವಂತೂ ಮನೋಹರ. ಆದರೆ ಈ ಸುಂದರತೆಯ ಹಿಂದೆ ಪರಿಸರಕ್ಕೆ ಹಾನಿಯಾಗುವ ಸಂಗತಿಯೂ ಇದೆ.ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತದ ಅಧ್ಯಯಯನಕಾರರು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಅಮೆರಿಕದ ಭೂಭೌತ ಒಕ್ಕೂಟಕ್ಕೆ (ಅಮೆರಿಕನ್ ಜಿಯೋಫಿಸಿಕಲ್ ಯೂನಿಯನ್) ಇತ್ತೀಚೆಗೆ ವರದಿಯೊಂದನ್ನು ಸಲ್ಲಿಸಿದ್ದಾರೆ.ರಾತ್ರಿ ವೇಳೆ, ನಗರ, ಪಟ್ಟಣಗಳಲ್ಲಿ ಕಲ್ಪಿಸಲಾಗಿರುವ  ಕೃತಕ ಬೆಳಕಿನ ವ್ಯವಸ್ಥೆ ವಾಯುಮಾಲಿನ್ಯವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂಬ ಹೊಸ ಮಾಹಿತಿಯನ್ನು ಅಧ್ಯಯನಕಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ಹಗಲಿನಲ್ಲಿ ಕಲುಷಿತಗೊಂಡ ವಾತಾವರಣವನ್ನು ಬೆಳಕು ಸಂವೇದಿ ಅಣುಗಳು ಶುಚಿಗೊಳಿಸುವ ಕೆಲಸವನ್ನು ರಾತ್ರಿಯಲ್ಲಿ ಮಾಡುತ್ತವೆ.ಈ ಬೆಳಕು ಸಂವೇದಿ ಅಣುಗಳನ್ನು ನೈಟ್ರೇಟ್ ರಾಡಿಕಲ್ ಎಂದು ಕರೆಯಲಾಗುತ್ತದೆ. ನಿರ್ದಿಷ್ಟ ಬಗೆಯ ಸಾರಜನಕ ಆಕ್ಸೈಡ್‌ನ ಅಣುವಾಗಿರುವ ಇವುಗಳು,  ವಾತಾವರಣದಲ್ಲಿರುವ ಸಾರಜನಕ ಡೈ ಆಕ್ಸೈಡ್ ಹಾಗೂ  ಓಜೋನ್ ನಡುವೆ ನಡೆಯುವ ರಾಸಾಯನಿಕ ಕ್ರಿಯೆಯಿಂದಾಗಿ ಸೃಷ್ಟಿಯಾಗುತ್ತವೆ. ವಾತಾವರಣ ಮಲಿನ ಮಾಡುವ ವಸ್ತುಗಳೊಂದಿಗೆ ಬೆರೆತು ಅವುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಈ ಬೆಳಕು ಸಂವೇದಿ  ಅಣುಗಳು ಹೊಂದಿವೆ.ಆದರೆ, ಕೃತಕ ಬೆಳಕು ಈ ಅಣುಗಳನ್ನು ನಾಶಮಾಡುತ್ತವೆ. ಇದರಿಂದಾಗಿ ಮಾಯು ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ ಎಂಬುದು ಅಮೆರಿಕದ ‘ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ’ದ ಅಧ್ಯಯನಕಾರರು ನಡೆಸಿರುವ ಅಧ್ಯಯನದ ಸಾರ.ಅಮೆರಿಕದ ಲಾಸ್‌ಏಂಜಲೀಸ್ ನಗರವನ್ನು ಕೇಂದ್ರೀಕರಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಲಾಸ್ ಏಂಜಲೀಸ್ ನಗರದಲ್ಲಿರುವ ಬೆಳಕಿನ ಸಾಂದ್ರತೆ ಅಳೆಯುವುದಕ್ಕಾಗಿ ತಜ್ಞರ ತಂಡವು ನಾಲ್ಕು ಬಾರಿ ವಿಮಾನದಲ್ಲಿ  ನಗರದ ಸುತ್ತ ಹಾರಾಡಿ ಈ ಕುರಿತ ಮಾಹಿತಿಯನ್ನು ಸಂಗ್ರಹಿಸಿದೆ.ಸೂರ್ಯನ ಬೆಳಕಿಗೆ ಹೋಲಿಸಿದರೆ ರಾತ್ರಿ ವೇಳೆ ಲಾಸ್ ಏಂಜಲೀಸ್‌ನಲ್ಲಿರುವ ಕೃತಕ ಬೆಳಕಿನ ಪ್ರಮಾಣ ಹತ್ತು ಸಾವಿರ ಪಟ್ಟು ಕಡಿಮೆಯಾದರೂ, ಈ ಬೆಳಕು ವಾತಾವರಣ ಶುಚಿಗೊಳಿಸುವ ಪ್ರಕ್ರಿಯೆಯನ್ನು ಶೇಕಡ 7ರಷ್ಟು ಕಡಿಮೆಗೊಳಿಸುತ್ತದೆ ಎಂಬ ಅಧ್ಯಯನಕಾರರ ಹೇಳಿಕೆಯನ್ನು ಡಿಸ್ಕವರಿ ನ್ಯೂಸ್ ಉಲ್ಲೇಖಿಸಿದೆ. ಈ ನಗರದಲ್ಲಿ ರಾತ್ರಿ ವೇಳೆ ಎಷ್ಟು ಬೆಳಕಿರುತ್ತದೆ ಗೊತ್ತೆ? ಹುಣ್ಣಿಮೆ ಚಂದ್ರನ ಬೆಳಕಿನ ಇಪ್ಪತ್ತೈದು ಪಟ್ಟು ಹೆಚ್ಚು!ಇಲ್ಲಿ ಅಳವಡಿಸಲಾಗಿರುವ ಅಧಿಕ ಒತ್ತಡದ ಸೋಡಿಯಂ ಬೆಳಕು ಮತ್ತು ಲೋಹಗಳ ಹ್ಯಾಲೈಡ್‌ಗಳ ಬೆಳಕಿನಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಶೇ 5ರಷ್ಟು ಹೆಚ್ಚಿರುವುದು ಅಧ್ಯಯನದಿಂದ ತಿಳಿದುಬಂದಿದೆ. ‘ಬೆಳಕು ಸಂವೇದಿ ಅಣುಗಳು ಹಗಲಿನಲ್ಲಿ ಇರುವುದಿಲ್ಲ.ರಾತ್ರಿ ವೇಳೆಯಲ್ಲಿ ಅವುಗಳು ಉತ್ಪತ್ತಿಯಾಗುತ್ತವೆ. ಆದರೆ, ಕೃತಕ ಬೆಳಕು ಅವುಗಳನ್ನು ನಾಶ ಪಡಿಸುತ್ತದೆ. ಇದರಿಂದಾಗಿ ರಾತ್ರಿಯಲ್ಲಿ ನಡೆಯುವ ವಾತಾವರಣ ಶುಚಿಗೊಳ್ಳುವ ಪ್ರಕ್ರಿಯೆ ನಿಧಾನವಾಗುವುದಲ್ಲದೇ, ಆಕಾಶದಲ್ಲಿ ಮಲಿನಕಾರಿ ವಸ್ತುಗಳು ಹೆಚ್ಚುತ್ತವೆ.ಇವುಗಳು ವಾಯುಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ’ ಎಂದು ಅಧ್ಯಯನ ತಂಡದ ಸದಸ್ಯರಾದ  ಸ್ಟಾರ್ಕ್ ಹೇಳುತ್ತಾರೆ.ಇದಕ್ಕೆ ಪರಿಹಾರ ಏನು? ಈ ಕುರಿತು ವಿಜ್ಞಾನಿಗಳು ಸ್ಪಷ್ಟವಾದ ಉತ್ತರ ಹೊಂದಿಲ್ಲ.  ಆದರೆ ನೈಟ್ರೇಟ್ ರಾಡಿಕಲ್‌ಗಳ ಉತ್ಪತ್ತಿ ಮೇಲೆ ಪರಿಣಾಮ ಬೀರದ ಕೆಂಪು ಬೆಳಕಿನ ವ್ಯವಸ್ಥೆ ಈ ಸಮಸ್ಯೆಗೆ ಪರಿಹಾರವಾಗಬಲ್ಲುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

      

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.