ಸೋಮವಾರ, ಮಾರ್ಚ್ 1, 2021
30 °C
ಕುಡಿಯುವ ಉದ್ದೇಶಕ್ಕೆ ಜಲಾಶಯಗಳ ನೀರು ಬಳಕೆ: ಸರ್ಕಾರ ತೀರ್ಮಾನ

ಕೃಷಿಗೆ ನೀರು ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಗೆ ನೀರು ಖೋತಾ

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಮತ್ತೊಮ್ಮೆ ಭೀಕರ ಬರಗಾಲ ಕಾಣಿಸಿಕೊಳ್ಳಬಹುದೆಂಬ ಮುನ್ಸೂಚನೆ ಇರುವುದರಿಂದ ಕಾವೇರಿ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು  ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸರ್ಕಾರ ತೀರ್ಮಾನಿಸಿದೆ.ಭತ್ತ, ಕಬ್ಬು ಸೇರಿದಂತೆ ಯಾವುದೇ ಬೆಳೆಗಳಿಗೂ ನೀರು ಬಿಡುಗಡೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟದ ಸಭೆ ತೀರ್ಮಾನಿಸಿದೆ.ಎರಡೂ ನದಿಪಾತ್ರದ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಿಟ್ಟು  ಕೃಷಿ ಉದ್ದೇಶಕ್ಕೆ ಬಳಸಬಾರದು ಎಂದು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಂಪುಟ ಸಭೆ ನಿರ್ಧರಿಸಿದೆ.ಕೃಷ್ಣರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ತುಂಗಭದ್ರಾ, ಭದ್ರಾ ಮತ್ತು ತುಂಗಾ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆ ಇದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ನೀರಿದೆ. ಈ ಕಾರಣದಿಂದ ತುಂಗಭದ್ರಾ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ಬಿಡದೇ ಇರಲು ತೀರ್ಮಾನಿಸಲಾಗಿದೆ  ಎಂದು  ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಭತ್ತ ಬಿತ್ತನೆ ಮಾಡುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಬರದೇ  ಇದ್ದರೆ  ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಹೊಣೆಯನ್ನು ನೀರಾವರಿ ಸಲಹಾ ಸಮಿತಿಗೆ ವಹಿಸಲು ಸಭೆ ನಿರ್ಣಯಿಸಿದೆ ಎಂದರು.ಬಿತ್ತನೆಯಾಗದೆ ಇರುವ ಕೃಷಿ ಭೂಮಿಯಲ್ಲಿ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಹಾಗೂ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ, ಜಿಲ್ಲಾಡಳಿತಕ್ಕೆ ಸೂಚಿಸಲು ಸಭೆ ತೀರ್ಮಾನಿಸಿತು ಎಂದರು.ಮಳೆ ಕೊರತೆ: ತೀವ್ರ ಮಳೆ ಕೊರತೆ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 8 ರ ವರೆಗೆ ವಾಡಿಕೆಯಂತೆ ಇಡೀ ರಾಜ್ಯದಲ್ಲಿ 537 ಮಿಲಿ ಮೀಟರ್‌ ಮಳೆ ಬೀಳಬೇಕಾಗಿತ್ತು. ಆದರೆ, 503 ಮಿಲಿ ಮೀಟರ್‌(ಮಿ.ಮೀ) ಮಳೆಯಾಗಿದ್ದು, ಶೇ 6 ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ ಎಂದರು.ದಕ್ಷಿಣ ಒಳನಾಡಿನಲ್ಲಿ  ವಾಡಿಕೆ ಮಳೆ 245 ಮಿ.ಮೀ ಬದಲು 160 ಮಿ.ಮೀ., ಮಲೆನಾಡಿನಲ್ಲಿ 1084 ಮಿ.ಮೀ. ಬದಲು 826 ಮಿ.ಮೀ., ಕರಾವಳಿಯಲ್ಲಿ 2713 ಮಿ.ಮೀ. ಬದಲು 1851 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ 264 ಮಿ.ಮೀ.ಗೆ ಹೋಲಿಸಿದರೆ 293 ಮಿ.ಮೀ. ಮಳೆಯಾಗಿದೆ ಎಂದು ಜಯಚಂದ್ರ ವಿವರಿಸಿದರು.ಮಳೆ ಕೊರತೆಯಾಗಿರುವುದರಿಂದ ಜಲವಿದ್ಯುತ್‌ ಉತ್ಪಾದನೆಗೆ ಮೀಸಲಾದ ಲಿಂಗನಮಕ್ಕಿ, ಸೂಪಾ, ವರಾಹಿ ಜಲಾಶಯಗಳಲ್ಲೂ ನೀರಿಲ್ಲ. ಇದರಿಂದ ವಿದ್ಯುತ್  ಉತ್ಪಾದನೆಗೂ ಸಮಸ್ಯೆಯಾಗಲಿದೆ ಎಂದು ಅವರು ಹೇಳಿದರು.ಮೋಡ ಬಿತ್ತನೆ: ಮೋಡ ಬಿತ್ತನೆಯ ಸಾಧಕ–ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು, ಮಳೆ ಸುರಿಸುವ ಮೋಡಗಳು ಇದ್ದರೆ ಮಾತ್ರ ಮೋಡಬಿತ್ತನೆ ಮಾಡಲು ಸಭೆ ಒಪ್ಪಿಗೆ ಸೂಚಿಸಿತು ಎಂದು ಸಚಿವ ಜಯಚಂದ್ರ ಹೇಳಿದರು.ರಾಡಾರ್‌ ಮೂಲಕ ಮಳೆ ಮೋಡ ಇರುವುದನ್ನು ಪತ್ತೆ ಹಚ್ಚಿ, ಅತ್ಯಾಧುನಿಕ ಮಾದರಿಯಲ್ಲಿ ಮೋಡ ಬಿತ್ತನೆ ಮಾಡಲು ₹30 ಕೋಟಿ ಅನುದಾನ ಒದಗಿಸಲು ಸಭೆ ಅನುಮೋದನೆ ನೀಡಿದೆ. ಜಲಸಂಪನ್ಮೂಲ ಇಲಾಖೆ ಈ ಖರ್ಚು ಭರಿಸಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.