ಶನಿವಾರ, ಮೇ 15, 2021
22 °C
ರಾಜ್ಯಪಾಲ ಭಾರದ್ವಾಜ್ ಸಲಹೆ

ಕೃಷಿ ತಾಂತ್ರಿಕತೆಗೆ ಒತ್ತು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: `ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿ ಪಠ್ಯಕ್ರಮವನ್ನು ಅಳವಡಿಸಬೇಕಾದ ಅಗತ್ಯವಿದೆ' ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸಲಹೆ ನೀಡಿದರು.ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಯಲಯದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ರೈತರು ಕೃಷಿ ಕ್ಷೇತ್ರದಲ್ಲಿ ಉಳಿಯಬೇಕಾದರೆ ಪ್ರಾದೇಶಿಕ ಆಧಾರಿತ ಕೃಷಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಬೇಕು. ಹವಾಮಾನ ವೈಪರೀತ್ಯದಂತಹ ಸವಾಲುಗಳನ್ನು ಎದುರಿಸಲು ಸುಧಾರಿತ ತಂತ್ರಜ್ಞಾನಗಳನ್ನುಅಭಿವೃದ್ಧಿಪಡಿಸಬೇಕಾದ ಅಗತ್ಯ ಇದೆ. ಈ ಮೂಲಕ ದೇಶದ ಆಹಾರ ಭದ್ರತೆಯನ್ನು ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು' ಎಂದರು.ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, `ದೇಶದಲ್ಲಿ ಕೃಷಿಕನ ಬಾಳು ನಿರೀಕ್ಷಿಸಿದ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಉತ್ಪಾದಕತೆಯಲ್ಲಿ ಕೆಳಮಟ್ಟದಲ್ಲಿದ್ದ ನಾವು, ಸುಧಾರಣೆ ಕಂಡಿದ್ದೇವೆ. ಆದರೆ, ಚೀನಾ ಮತ್ತಿತರ ದೇಶಗಳಿಗೆ ಹೋಲಿಸಿದಾಗ ಅನೇಕ ಆಹಾರ ಪದಾರ್ಥಗಳಲ್ಲಿ ನಮ್ಮ ಉತ್ಪಾದನೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸುವ ಅಗತ್ಯವಿದೆ' ಎಂದರು.`ನಮ್ಮ ದೇಶದ ಹಸಿರು ಕ್ರಾಂತಿಯ ಲಾಭ ನೀರಾವರಿ ಪ್ರದೇಶಕ್ಕೆ ದೊರಕಿದೆ. ಮಳೆಯಾಧಾರಿತ ಪ್ರದೇಶ ಹಾಗೂ ಒಣ ಬೇಸಾಯ ಪ್ರದೇಶಗಳಲ್ಲಿ ಇಂದಿಗೂ ಸುಧಾರಣೆ ಕಾಣಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುಧಾರಣೆ ತರುವಂತಹ ಎರಡನೇ ಹಸಿರು ಕ್ರಾಂತಿಯ ಅಗತ್ಯ ಇದೆ' ಎಂದು ಪ್ರತಿಪಾದಿಸಿದರು.ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ, `ವಿವಿಯು ಮುಂಬರುವ ದಿನಗಳಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ವಿದ್ಯಾರ್ಥಿ ಹಾಗೂ ರೈತಸ್ನೇಹಿಯಾಗಿ ರೂಪಿಸಲಿದೆ' ಎಂದರು.ಸಂಸದ ಡಿ.ಬಿ.ಚಂದ್ರೇಗೌಡ, ವಿಧಾನಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ದಯಾನಂದ್, ಮಮ್ತಾಜ್ ಆಲಿ ಖಾನ್, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.