ಶನಿವಾರ, ಮೇ 8, 2021
26 °C

ಕೃಷಿ ತ್ಯಾಜ್ಯಕ್ಕೆ ಇಂಧನದ ರೂಪ

-ಸುರೇಖಾ ಹೆಗಡೆ . Updated:

ಅಕ್ಷರ ಗಾತ್ರ : | |

ಟ್ಟಿಗೆ, ತೆಂಗಿನ ಸಿಪ್ಪೆ, ಕರಟ ಹೀಗೆ ಸಿಕ್ಕಿದ್ದೆಲ್ಲವನ್ನೂ ಬಚ್ಚಲ ಒಲೆಗೆ ತುರುಕಿ ಬೆಂಕಿ ಹೊತ್ತಿಸಿ ನೀರು ಕಾಯಿಸಿಕೊಳ್ಳುವ ಪರಿಪಾಠ ಎಲ್ಲರಿಗೂ ಗೊತ್ತು. ಆದರೆ ಆ ಉರುವಲಿನ ಸಾಮರ್ಥ್ಯವನ್ನು ಸಮಪ್ರಮಾಣದಲ್ಲಿ ನಾವು ಬಳಸಿಕೊಳ್ಳುತ್ತಿಲ್ಲ. ಹಾಗಾದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲು ಇರುವ ಬದಲಿ ಮಾರ್ಗಗಳು ಯಾವುವು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ.ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ. ಏರುತ್ತಿರುವ ಬೆಲೆ, ನಾಶವಾಗುತ್ತಿರುವ ಕಾಡು, ಸಮಪ್ರಮಾಣದಲ್ಲಿ ಬಳಕೆಯಾಗದೆ ಹಾಳಾಗುತ್ತಿರುವ ಉರುವಲು, ಅಡುಗೆಗೆ ಬೇಕಾದ ಗ್ಯಾಸ್ ಕೊರತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಡೆಸಿರುವ ಸಂಶೋಧನೆಯ ಫಲವೇ `ಊರ್ಜಾ ಸ್ಟೌ'. ಸಂಸ್ಥೆಯು `ಫಸ್ಟ್ ಎನರ್ಜಿ' ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡು ಮೂರು ನಾಲ್ಕು ತಿಂಗಳು ಪರೀಕ್ಷಾರ್ಥ ಬಳಕೆ ನಡೆಸಿದ ನಂತರ ಈಗ ಈ ಸ್ಟೌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಶೇಂಗಾ ಸಿಪ್ಪೆ, ಕಬ್ಬಿನ ಎಲೆ, ಹತ್ತಿ ತ್ಯಾಜ್ಯ, ಕಾಫಿ ತ್ಯಾಜ್ಯ, ಬೂಸಾ ಮುಂತಾದ ಕೃಷಿ ತ್ಯಾಜ್ಯ ಬಳಸಿ ಪ್ಯಾಲೆಟ್ ರೂಪದ ಇಂಧನ ತಯಾರಿಸಲಾಗುತ್ತದೆ. ಅವಶ್ಯಕತೆ ಮೇರೆಗೆ ಆ ಪ್ಯಾಲೆಟ್‌ಗಳನ್ನು ಬಳಸಿ ಅಡುಗೆ ಮಾಡಬಹುದು. ತಾಪಮಾನವನ್ನು ಬೇಕಾದಂತೆ ನಿಯಂತ್ರಣ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿರುವುದು ಈ ಸ್ಟೌ ವಿಶೇಷ. ಕಡಿಮೆ ವೆಚ್ಚ, ರುಚಿಯಾದ ಅಡುಗೆ, ಬಳಕೆ ಸುಲಭ, ಸುರಕ್ಷಿತ, ಲಭ್ಯತೆ, ಪರಿಸರ ಸ್ನೇಹಿ ಹಾಗೂ ಅರಣ್ಯ ನಾಶವಾಗುವುದನ್ನು ನಿಯಂತ್ರಿಸುವಲ್ಲಿ ಈ ಸ್ಟೌ ಅತ್ಯಂತ ಸಹಕಾರಿ. ತಾವು ಬೆಳೆದ ಬೆಳೆಯ ತ್ಯಾಜ್ಯಕ್ಕೂ ಉತ್ತಮ ರೂಪ ಸಿಗುವುದರಿಂದ ಕೃಷಿಕರ ಮೊಗದಲ್ಲಿ ನಗು ಮೂಡಿದೆ.ಪ್ರಾರಂಭದಲ್ಲಿ ಮನೆ ಬಳಕೆಗೆ ಉಪಯುಕ್ತವಾಗುವಂಥ ಸ್ಟೌಗಳನ್ನು ನಿರ್ಮಾಣ ಮಾಡಲಾಯಿತು. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಗೃಹ ಬಳಕೆಯ ಸ್ಟೌಗಳನ್ನು ಅನಾವರಣಗೊಳಿಸಲಾಯಿತು. ಬೇಡಿಕೆ ಹೆಚ್ಚಿದಂತೆ ಆಂಧ್ರ, ತಮಿಳುನಾಡು, ಕೇರಳ ಮುಂತಾದ ಕಡೆ ಊರ್ಜಾ ಪ್ರಖ್ಯಾತವಾಯಿತು. ಸದ್ಯ ಸ್ಟೌ ತಯಾರಿಸುವ ಘಟಕ ಮಹಾರಾಷ್ಟ್ರದ ನಾಸಿಕ್‌ನಲ್ಲಿದ್ದರೆ, ಇಂಧನ ಪ್ಯಾಲೆಟ್ ತಯಾರಿಸುವ ಘಟಕ ಧಾರವಾಡದಲ್ಲಿದೆ.ಇದಕ್ಕೆ ಬೇಕಾಗುವ ಸರಕು ಸಾಮಗ್ರಿಗಳು ಸುತ್ತಮುತ್ತಲ ಕೃಷಿ ಪ್ರದೇಶಗಳಿಂದ ಪೂರೈಕೆಯಾಗುತ್ತವೆ. ಅವಶ್ಯಕತೆ ಇರುವಷ್ಟು ಇಂಧನವನ್ನು ಸ್ಟೌಗೆ ಹಾಕಿ ಉರಿಸಿದರಾಯಿತು. ತಾಪಮಾನವನ್ನು ನಿಯಂತ್ರಿಸುವ ಆಯ್ಕೆ ಇರುವುದರಿಂದ ಯಾವ ಅಡುಗೆ ಮಾಡಲು ಎಷ್ಟು ಪ್ರಮಾಣದಲ್ಲಿ ಉರಿಯಬೇಕು ಎಂದು ನಿರ್ಧರಿಸಿಕೊಳ್ಳಬಹುದು.

ಆದರೆ ಒಮ್ಮೆ ಇಂಧನ ಹಾಕಿ ಸ್ಟೌ ಉರಿಸಲು ಪ್ರಾರಂಭಿಸಿದರೆ ಮಧ್ಯದಲ್ಲಿ ಅದನ್ನು ನಂದಿಸಲು ಆಗದಿರುವುದು ಇದರ ಕೊರತೆ.ಹೀಗಾಗಿಯೇ ಸಂಸ್ಥೆ ತಮ್ಮ ಉತ್ಪಾದನೆಯನ್ನು ವಾಣಿಜ್ಯೋದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ನಿರ್ಧರಿಸಿತು. ಅಲ್ಲದೆ ಪ್ಯಾಲೆಟ್‌ಗಳನ್ನು ಗಂಟೆಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಸ್ಟೌ ಬಳಸಿ ಮಾಡಿದ ದಕ್ಷಿಣ ಭಾರತದ ಆಹಾರ ಪದಾರ್ಥಗಳು ಇನ್ನಷ್ಟು ರುಚಿಕರವಾಗಿರುತ್ತದೆ.

ಕಡಿಮೆ ಹಣ ಖರ್ಚಾಗುವುದು, ಎಲ್‌ಪಿಜಿ ಕೊರತೆ ಹಾಗೂ ಇದರಿಂದ ಅಪಘಾತ ಉಂಟಾಗುವ ಸಾಧ್ಯತೆ ಇಲ್ಲದಿರುವುದರಿಂದ ಹೆಚ್ಚಿನ ರೆಸ್ಟೊರೆಂಟ್ ಹಾಗೂ ಹೋಟೆಲ್‌ಗಳು ಆಸಕ್ತಿ ತೋರಿದವು.ರಾಸಾಯನಿಕ ಬಳಕೆ ಇಲ್ಲ

ರಾಸಾಯನಿಕಗಳನ್ನು ಬಳಸದೆ ಈ ಇಂಧನ ಪ್ಯಾಲೆಟ್ ಅನ್ನು ತಯಾರಿಸುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ಅದನ್ನು ಮಕ್ಕಳು ತಿನ್ನದಂತೆ ಕಾಳಜಿ ವಹಿಸಬೇಕು ಎಂಬುದಷ್ಟೇ ಎಚ್ಚರಿಕೆ. ಭಾರಿ ಪ್ರಮಾಣದ ಅಡುಗೆ ಕೆಲಸಕ್ಕೆ ಉಪಯುಕ್ತವಾಗುವ ಊರ್ಜಾ ಸ್ಟೌ ಅನ್ನು ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳ ಪ್ರಸಿದ್ಧ ಹೊಟೆಲ್‌ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.`ಆಧುನಿಕ ಯುಗದಲ್ಲಿ ಅರಣ್ಯವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಹೀಗಾಗಿ ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ಅದನ್ನು ಇಂಧನವನ್ನಾಗಿ ಬಳಸಿಕೊಳ್ಳುವ ಅನಿವಾರ್ಯತೆ ನಮಗೆ ತೋರಿತು. ಊರ್ಜಾ ಸ್ಟೌ ಹಾಗೂ ಇಂಧನ ಪ್ಯಾಲೆಟ್‌ಗಳು ಪರಿಸರ ಸ್ನೇಹಿಯಾಗಿ ಕಂಡವು.ಹೀಗಾಗಿ ಭಾರತೀಯ ವಿಜ್ಞಾನ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಪ್ರವೇಶಿಸಿದೆವು. ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿ ಇದೆ. ಮೊದಲಿಗೆ ಕೇವಲ ಮನೆಗಳಲ್ಲಿ ಬಳಸುವ ಸ್ಟೌ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದೆವು. ಇತ್ತೀಚಿನ ದಿನಗಳಲ್ಲಿ ಎಲ್ಲದರ ಬೆಲೆ ಏರಿಕೆ ಆಗಿದೆ. ಹೀಗಾಗಿ ನಾವು ಮಾರುಕಟ್ಟೆಯನ್ನು ವಿಸ್ತರಿಸಲೇಬೇಕಾದ ಅನಿವಾರ್ಯತೆ ಬಂತು.

ರೆಸ್ಟೊರೆಂಟ್, ಹೋಟೆಲ್‌ಗಳಿಗೆ ಅವಶ್ಯಕವಾಗಿರುವ ಸ್ಟೌಗಳನ್ನು ತಯಾರಿಸಿದೆವು. ಉತ್ತಮ ಬೇಡಿಕೆ ಸಿಕ್ಕಿತು. ಪ್ರತಿಕ್ರಿಯೆ ಮೇರೆಗೆ `ವಂಡರ್ ತವಾ' ಎಂಬ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆವು. ಬೇರೆ ಬೇರೆ ರೀತಿಯ ಅಡುಗೆ ಮಾಡಲು ಸಾಧ್ಯವಾಗುವಂಥ ಚಿಕ್ಕ ಚಿಕ್ಕ ಸ್ಟೌಗಳನ್ನೂ ಸದ್ಯದಲ್ಲೇ ಅನಾವರಣಗೊಳಿಸಲಿದ್ದೇವೆ' ಎನ್ನುತ್ತಾರೆ `ಫಸ್ಟ್ ಎನರ್ಜಿ ಸಂಸ್ಥೆ'ಯ ಸಹ ಸಂಸ್ಥಾಪಕ ಮಹೇಶ್ ಯಜ್ಞರಾಮನ್.`ಕರ್ನಾಟಕ ಒಂದರಲ್ಲೇ ಸುಮಾರು 2-3 ಸಾವಿರ ಸ್ಟೌಗಳನ್ನು ಮಾರಾಟ ಮಾಡಿದ್ದೇವೆ. ಗೃಹ ಬಳಕೆ ಸ್ಟೌ ಒಂದಕ್ಕೆ 2-3 ಸಾವಿರ ವೆಚ್ಚವಾಗುತ್ತದೆ. ಇಂಧನ ಪ್ಯಾಲೆಟ್ ಕೆ.ಜಿಯೊಂದಕ್ಕೆ ರೂ 17ರಿಂದ 18ರಷ್ಟು ವೆಚ್ಚವಾಗುತ್ತದೆ. ಕಮರ್ಷಿಯಲ್ ಉದ್ದೇಶಕ್ಕೆ ಬಳಕೆಯಾಗುವ ಸ್ಟೌ ಬೆಲೆ ರೂ 750ರಿಂದ 1250. ಅದೂ ಅಲ್ಲದೆ ಇಂಧನ ಪ್ಯಾಲೆಟ್‌ಗಳನ್ನು ನಾವು ಸಮಯಕ್ಕೆ ಸರಿಯಾಗಿ ತಲುಪಿಸುತ್ತೇವೆ' ಎಂದು ಮಾಹಿತಿ ನೀಡಿದರು ಮಹೇಶ್.`ಉರುವಲುಗಳನ್ನು ಅತ್ಯಂತ ನಾಜೂಕಿನಿಂದ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಅರ್ಥವಾಗಿತ್ತು. ಹೀಗಾಗಿ ಕೃಷಿ ತ್ಯಾಜ್ಯಗಳನ್ನು ಕಟ್ಟಿಗೆಯ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿದೆವು. ಇದರಿಂದ ಇಂಧನ ಸಮರ್ಪಕವಾಗಿ ಬಳಕೆಯಾಗುತ್ತದೆ. ಇತ್ತೀಚೆಗೆ ಎಲ್ಲಾ ವಸ್ತುಗಳ ಬೆಲೆ ತಾರಕಕ್ಕೇರಿದೆ. ಆದರೆ ನಾವು ನೀಡುವ ಉತ್ಪನ್ನ ಜನಸಾಮಾನ್ಯರನ್ನೂ ಮುಟ್ಟಬೇಕು ಎಂಬುದು ಸಂಸ್ಥೆಯ ಕಾಳಜಿ' ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಎಚ್.ಎಸ್. ಮುಕುಂದ್.

ಸಂಪರ್ಕಕ್ಕೆ: 9742273000.

-ಸುರೇಖಾ ಹೆಗಡೆ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.