ಶುಕ್ರವಾರ, ಜನವರಿ 17, 2020
20 °C

ಕೃಷಿ ನಿರಾಶ್ರಿತರ ಮತ್ತೊಂದು ಸಮಸ್ಯೆ ಸೃಷ್ಟಿ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ನಿರಾಶ್ರಿತರ ಮತ್ತೊಂದು ಸಮಸ್ಯೆ ಸೃಷ್ಟಿ: ಕಳವಳ

ಹಗರಿಬೊಮ್ಮನಹಳ್ಳಿ: ಈಗಾಗಲೇ ಶೇ 40ರಷ್ಟು ರೈತರು ಕೃಷಿಯಿಂದ ರೋಸಿ ಹೋಗಿದ್ದಾರೆ. 2015ರ ವೇಳೆಗೆ ದೇಶದ 40ಕೋಟಿ ರೈತರು ಕೃಷಿ ತ್ಯಜಿಸಿ ಬೇರೆ ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗಲಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ನಿರಾಶ್ರಿತರ ಹೊಸದೊಂದು ಪಂಗಡವೇ ನಿರ್ಮಾಣವಾಗಿ ಹೊಸ ಸಾಮಾಜಿಕ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಕಳವಳ ವ್ಯಕ್ತಪಡಿಸಿದರು.ರೈತ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ಪಟ್ಟಣದ ಹಗರಿ ಆಂಜನೇಯ ಬಯಲು ರಂಗಮಂದಿರಲ್ಲಿ ಸೋಮವಾರ ತಾಲ್ಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.ನೀರಾವರಿ ಉದ್ದೇಶದ 280 ಟಿಎಂಸಿ ಅಡಿ ನೀರು ಬಳಕೆಯ ಕೃಷ್ಣಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ ಮೂರು ದಶಕಗಳ ನಂತರವೂ ಯೋಜನೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಮಳೆಗಾಲದಲ್ಲಿ ತುಂಗಭದ್ರ ಜಲಾಶಯದಿಂದ 120 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ನೀರಿನ ಸದ್ಬಳಕೆಯ ಚಿಂತಿಸದ ಜನಪ್ರತಿನಿಧಿಗಳ ಇಚ್ಛಾಶಕ್ತಿಯನ್ನು ರೈತರು ಪ್ರಶ್ನಿಸಬೇಕು ಎಂದರು.ಯೋಜನೆಯ ಪ್ರಸ್ತಾವ ಮಾತ್ರ ಸಲ್ಲಿಸಿ ಹಣ ಬಿಡುಗಡೆಗೊಳಿಸದೇ ಚಿಲವಾರಬಂಡಿ ಯೋಜನೆಗೆ ಈ ಹಿಂದಿನ ಶಾಸಕ ನೇಮರಾಜ್‌ ನಾಯ್ಕ ಭೂಮಿಪೂಜೆ ನೆರವೇರಿಸಿದರೆ, ಹಾಲಿ ಶಾಸಕ ಭಿೀಮಾನಾಯ್ಕ ಸಮೀಕ್ಷೆ ನೆಪದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರನ್ನು ವಂಚಿಸುತ್ತಿದ್ದಾರೆ. ನಿರಂತರವಾಗಿ ಹೋರಾಟ ಮಾಡಿದರೂ  ಈ ಯೋಜನೆ ಪೂರ್ಣವಾಗಲು ಐದು ವರ್ಷ ಬೇಕು ಎಂದು ಹೇಳಿದರು.ಉದ್ದಿಮೆದಾರರಿಗೆ ಕೊಡುವ ಕನಿಷ್ಠ ಸೌಲಭ್ಯಗಳನ್ನು ಕೃಷಿ ವಲಯಕ್ಕೆ ಕೊಡುತ್ತಿಲ್ಲ,  ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸಹಿತ ಕೃಷಿಕರ ರಕ್ಷಣೆಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರದಿದ್ದರೆ ದೇಶದ ಜನಸಂಖ್ಯೆಯಲ್ಲಿನ ಶೇ 69ರಷ್ಟು ರೈತರಿಗೆ ಉಳಿಗಾಲವಿಲ್ಲ. ಇದರಿಂದ ಕೃಷಿ ಕ್ಷೇತ್ರ ನಾಶವಾಗುತ್ತದೆ ಎಂದು ಎಚ್ಚರಿಸಿದರು. ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ವರ ಸ್ವಾಮಿ, ರೈತ ಮುಖಂಡ ಅಂಗಡಿ ಗವಿಸಿದ್ದಪ್ಪ  ಸಮಿತಿಯ ಪ್ರಧಾನ ಸಂಚಾಲಕ  ಎ.ಅಡಿವೆಪ್ಪ ಮತ್ತಿತರರು ಮಾತನಾಡಿದರು.ಸಮಿತಿಯ ಅಧ್ಯಕ್ಷ ನಂದೀಪುರ ಮಹೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಡೋಣೂರು ಚಾನುಕೋಟಿ ಸಿದ್ಧಲಿಂಗ ಶಿವಾಚಾರ್ಯ, ಶಂಕರ ಸ್ವಾಮೀಜಿ, ಹಾಲಶಂಕರ ಸ್ವಾಮೀಜಿ, ಪಂಚಾಕ್ಷರಿ ಶಿವಾಚಾರ್ಯ, ಕಲ್ಯಾಣ ಸ್ವಾಮೀಜಿ ಹಾಗೂ ಐನಳ್ಳಿ ಮಹೇಶ್ವರ ಶಿವಾ­ಚಾರ್ಯ ಸತ್ಯಾಗ್ರಹದ ನೇತೃತ್ವ ವಹಿಸಿ­ದ್ದರು.ನಂತರ  ತಾಲ್ಲೂಕಿನ ಅಗತ್ಯ ನೀರಾವರಿ ಯೋಜ­ನೆ­ಗ­ಳನ್ನು ಜಾರಿಗೊಳಿಸುವಂತೆ ಒತ್ತಾಯಿ­ಸುವ ಮನ­ವಿಯನ್ನು ತಹಶೀಲ್ದಾರ್‌ ಏಜಾಜ್‌­ಬೇಗ್‌ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.ಧರಣಿ ಸತ್ಯಾಗ್ರಹದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಿಲ ಭಾರತ ಕಿಸಾನ್‌ ಸಭಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಅಸಂಖ್ಯಾತ ರೈತರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)