ಶುಕ್ರವಾರ, ಮೇ 20, 2022
19 °C
ಬೇತಮಂಗಲ ಪೊಲೀಸ್ ಠಾಣೆಗೆ ವಿಶಿಷ್ಟ ಗರಿ

ಕೆಜಿಎಫ್‌ಗೂ ಬಂತು ಸಿಸಿಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಕತ್ತಲಲ್ಲಿ ಕೂಡಾ ಕಣ್ಣಿಗೆ ಕಾಣದ ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯವುಳ್ಳ ಸಿಸಿಟಿವಿ ಕ್ಯಾಮೆರಾಗಳನ್ನು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಭಾನುವಾರ ಅಳವಡಿಸಲಾಯಿತು.ಇದರಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲೇ ಮೊದಲ ಸಿಸಿಟಿವಿ ಕ್ಯಾಮೆರಾ ಹೊಂದಿದ ಮೊದಲ ಪೊಲೀಸ್ ಠಾಣೆ ಕೀರ್ತಿಗೆ ಬೇತಮಂಗಲ ಪೊಲೀಸ್ ಠಾಣೆ ಭಾಜನವಾಗಿದೆ.`ಪೊಲೀಸ್ ಠಾಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವುದಕ್ಕೆ ಹಾಗೂ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಬಾಂಧವ್ಯ ವೃದ್ಧಿಗೆ ಇದು ಸಹಕರಿಸಲಿದೆ. ಜನರ ಜತೆ ಕೆಟ್ಟದಾಗಿ ವರ್ತಿಸುವುದನ್ನು ತಡೆಯಲು ನೆರವಿಗೆ ಬರುತ್ತದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಹೇಳಿದ್ದಾರೆ.ಬೇತಮಂಗಲ ಠಾಣೆ ಗ್ರಾಮದ ಬಸ್ ನಿಲ್ದಾಣದಲ್ಲಿದೆ. ಠಾಣೆ ಅತ್ಯಂತ ಜನದಟ್ಟಣೆಯಿರುವ ಸ್ಥಳದಲ್ಲಿರುವುದರಿಂದ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇರಿಸಲು ಇನ್ನು ಮುಂದೆ ಅನುಕೂಲವಾಗಲಿದೆ.ಠಾಣೆಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಮೊದಲ ಹಂತದಲ್ಲಿ ಬಳಸಲಾಗಿದೆ. ಇಡೀ ಠಾಣೆ ಮತ್ತು ಬಸ್ ನಿಲ್ದಾಣದ ಚಲನವಲನಗಳನ್ನು ಕ್ಯಾಮೆರಾಗಳಿಂದ ಗಮನಿಸಲು ಸಾಧ್ಯ ಎಂದು ತಿಳಿಸಿದ್ದಾರೆ.ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಮೈತ್ರಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಂಥ ಕೆಲಸಕ್ಕೆ ದಾನಿಗಳು ಮುಂದೆ ಬಂದಿದ್ದಾರೆ. ಬೇತಮಂಗಲದಲ್ಲಿ ಸಿನಿಮಾ ಥಿಯೇಟರ್ ಮಾಲೀಕರೊಬ್ಬರು ಕ್ಯಾಮೆರಾಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ.ಅದೇ ರೀತಿ ಬಂಗಾರಪೇಟೆ ಮತ್ತು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಗಳಲ್ಲಿ ಶೀಘ್ರದಲ್ಲಿಯೇ ಸಿಸಿಟಿವಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಎರಡೂ ಪೊಲೀಸ್ ಠಾಣೆ  ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಸಹ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಕಟೋಚ್ ತಿಳಿಸಿದ್ದಾರೆ.ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸಿರುವುದು ಪೊಲೀಸರಿಗೂ ಸಹ ಹೊಸ ಅನುಭವ ನೀಡಿದೆ. ಒಟ್ಟು ನಾಲ್ಕು ಕೋನಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ದಿನವಿಡೀ ಚಾಲನೆ ಇರುವುದರಿಂದ ಪೊಲೀಸ್ ಠಾಣೆಯಲ್ಲಿ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ `ಕೆಲವು' ವ್ಯವಹಾರಗಳಿಗೆ ತೆರೆಬೀಳಲಿದೆ. ಇದಲ್ಲದೇ ಸಾರ್ವಜನಿಕರ ಜತೆ ಪೊಲೀಸರು ಸಂಯಮದಿಂದ ವರ್ತಿಸಬೇಕಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.ಬೇತಮಂಗಲ ಪೊಲೀಸ್ ಠಾಣೆ ಗ್ರಾಮದ ಮಧ್ಯಭಾಗದಲ್ಲಿರುವುದರಿಂದ ಹಲವು ಸಮಸ್ಯೆಗಳ ಆಗರವಾಗಿದೆ. ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ನಡೆಯುತ್ತದೆ ಎಂಬ ಕೆಲವು ದೂರು, ಸಾರ್ವಜನಿಕರ ಸಂಶಯವನ್ನು ಇನ್ನು ಮುಂದೆ ದಾಖಲೆ ಸಮೇತ ನಿವಾರಿಸಬಹುದು ಎಂಬ ವಿಶ್ವಾಸವನ್ನು ಠಾಣೆ ಸಬ್ ಇನ್ಸ್‌ಪೆಕ್ಟರ್ ಬಿ.ಆರ್.ಜಗದೀಶ್ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.