ಬುಧವಾರ, ಜನವರಿ 22, 2020
28 °C

ಕೆಜಿಎಫ್‌ನಿಂದ ಕನ್ನಡ ನುಡಿ ತೇರು..

ಪ್ರಜಾವಾಣಿ ವಾರ್ತೆ/ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಕೆಜಿಎಫ್:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಕನ್ನಡ ನುಡಿತೇರು ಕೆಜಿಎಫ್‌ನಲ್ಲಿ ಮಂಗಳವಾರ ಉದ್ಘಾಟನೆಗೊಳ್ಳಲಿದೆ.ಕನ್ನಡ ಮನೋಧರ್ಮ ಜಾಗೃತಗೊಳಿಸುವುದು, ವಿವಿಧ ಭಾಷೆಗಳ ನಡುವೆ ಸೌಹಾರ್ದ ಮೂಡಿಸುವುದೇ ಪ್ರಮುಖ ಉದ್ದೇಶವಾದ ನುಡಿತೇರು ತಮಿಳು-ಕನ್ನಡದ ನೆಲವಾದ ಕೆಜಿಎಫ್‌ನಿಂದಲೇ ರಾಜ್ಯದ ಇತರೆ ಜಿಲ್ಲೆಗಳಿಗೆ ಹೊರಟಿರುವುದು ವಿಶೇಷ.ತೇರಿನ ಉದ್ಘಾಟನೆ ಜಿಲ್ಲೆಯ ಇತರ ಗಡಿ ಭಾಗ ಹೊರತುಪಡಿಸಿ ಕೆಜಿಎಫ್ ನಗರದಲ್ಲೆ ನಡೆಯುತ್ತಿರುವುದು ಸಮುದಾಯದಲ್ಲಿ ಸಂತಸ ಮೂಡಿಸಿದೆ.ಜಿಲ್ಲೆಯ ಬಹುತೇಕ ಗಡಿ ಪ್ರದೇಶಗಳಲ್ಲಿ ಕನ್ನಡ, ತೆಲುಗು ಭಾಷೆ ಪ್ರಧಾನವಾಗಿದೆ. ಆದರೆ ಕೆಜಿಎಫ್ ಪರಿಸ್ಥಿತಿ ಭಿನ್ನ. ಬಹುಸಂಖ್ಯಾತ ತಮಿಳರು, ಕನ್ನಡಿಗರು, ತೆಲುಗು ಮತ್ತು ಮಲೆಯಾಳಿ ಭಾಷಿಕರು ಹೆಚ್ಚು ಎದ್ದು ಕಾಣುತ್ತಾರೆ.ತಮಿಳು ಸಂಸ್ಕೃತಿ ಮತ್ತು ರಾಜಕೀಯದಲ್ಲಿ ಕನ್ನಡ ಎಂದಿಗೆ ಪ್ರಧಾನ ಭಾಷೆಯಾಗಿ ಪರಿವರ್ತನೆಯಾಗುತ್ತದೆ ಎಂಬ ಪ್ರಶ್ನೆ ಬಹುದಿನದಿಂದ ಕೇಳಿಬರುತ್ತಿತ್ತು. ಈಚಿನ ವರ್ಷಗಳಲ್ಲಿ ಈ ಪ್ರಶ್ನೆಗೆ ಉತ್ತರ ದೊರಕುವ ರೀತಿಯಲ್ಲಿ ಕನ್ನಡ-ತಮಿಳು ಭಾಷಿಕರ ನಡುವೆ ಸೌಹಾರ್ದ ಮೂಡುತ್ತಿದೆ.ಇಂಥ ಸಂದರ್ಭದಲ್ಲೆ ಪ್ರಾಧಿಕಾರವು ನುಡಿತೇರಿಗೆ ಇಲ್ಲಿಂದಲೇ ಚಾಲನೆ ನೀಡಲು ನಿರ್ಧರಿಸುವುದು ಮಹತ್ವದ ಬೆಳವಣಿಗೆ ಆಗಿದೆ. ಜಿಲ್ಲೆಯ ಕೆಲ ಅಧಿಕಾರಿಗಳು ಮತ್ತು ಕನ್ನಡ ಪರ ಸಂಘಗಳ ಮುಖಂಡರು ಉದ್ಘಾಟನೆಗೆ ಬೇರೆ ಸ್ಥಳ ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರೂ; ಕೆಜಿಎಫ್ ನಗರವನ್ನೇ ಆಯ್ಕೆ ಮಾಡಿರುವುದು ವಿಶೇಷ.

ನಗರಕ್ಕೆ ಇದೊಂದು ಐತಿಹಾಸಿಕ ಮಹತ್ವದ ದಿನ ಎಂಬುದು ಹಲವರ ಅಭಿಪ್ರಾಯ. ಹೀಗಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಬ ಭಾವನೆ ಜಾಗೃತಗೊಳ್ಳುತ್ತಿದೆ.ಹಿನ್ನೋಟ: ಗೋಕಾಕ್ ವರದಿ ಜಾರಿಗೊಳಿಸಬೇಕೆನ್ನುವ ಕನ್ನಡಿಗರ ಚಳವಳಿ ಉತ್ತುಂಗದಲ್ಲಿದ್ದಾಗ, ನಗರದಲ್ಲಿ  ಮೂವತ್ತು ವರ್ಷಗಳ ಹಿಂದೆ ನಡೆದಿದ್ದ ರಾಜಕೀಯ ಪ್ರೇರಿತ ಗೋಕಾಕ್ ವಿರೋಧಿ ಚಳವಳಿಯಿಂದ ಉಂಟಾದ ಅನಾಹುತ ತಡೆಗಟ್ಟಲು ಸುಮಾರು ಎರಡು ದಶಕಗಳೇ ಬೇಕಾಯಿತು.ತಮಿಳು ಭಾಷಿಕರ ಭಾವನಾತ್ಮಕ ವಿಷಯ ಕೆದಕಿ ರಾಜಕೀಯವಾಗಿ ಕೆಲವರು ಬೇಳೆ ಬೇಯಿಸಿಕೊಂಡರೂ, ಅದರ ಹೊಡೆತ ತಿಂದವರು ಮಾತ್ರ ಅಮಾಯಕರು. ಚಿನ್ನದ ಗಣಿ ಮುಚ್ಚುವವರೆವಿಗೂ ಕನ್ನಡ ಭಾಷೆ ಕಲಿಯಬೇಕೆಂಬ ಇರಾದೆ ಬಹುತೇಕ ಗಣಿ ಕಾರ್ಮಿಕರಲ್ಲಿ ಇರಲಿಲ್ಲ.ವಂಶ ಪರಂಪರಾಗತವಾಗಿ ಚಿನ್ನದ ಗಣಿ ಕೆಲಸ ಕೊಡುತ್ತದೆ. ಇರಲಿಕ್ಕೆ ವಸತಿ ಗೃಹ ಇದೆ. ಸಂಸಾರ ನಡೆಯುತ್ತಿದೆ. ಇನ್ನೂ ಕನ್ನಡ ಯಾಕೆ ಎಂಬ ದಿವ್ಯ ನಿರ್ಲಕ್ಷ್ಯ ಗಣಿ ಕಾರ್ಮಿಕರಲ್ಲಿ ಎದ್ದು ಕಾಣುತ್ತಿತ್ತು. ಗಣಿ ಮುಚ್ಚಿದ ಮೇಲೆಯೇ ಬಹುತೇಕ ಗಣಿ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಹೊರ ಜಗತ್ತಿನ ಪರಿಚಯವಾದದ್ದು. ಇದರೊಂದಿಗೆ ಸಂಪರ್ಕ ಭಾಷೆಯಾಗಿ ಕನ್ನಡ ಬೇಕೇ ಬೇಕು ಎಂಬ ಅರಿವು ಸಹ ಮೂಡಿಬಂದಿತು.ಈ ಹಿನ್ನೆಲೆಯಲ್ಲಿ ಈಗ ಗೋಕಾಕ್ ವಿರೋಧಿ ಚಳವಳಿ ಒಂದು ದುಃಸ್ವಪ್ನ ಎಂದು ಜನ ಮರೆತಿದ್ದಾರೆ. ಎಲ್ಲರಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಕಲಿತಿದ್ದಾರೆ. ತಮಿಳು ಮಾತೃಭಾಷೆಯಾದರೂ ನಾವು ಕನ್ನಡಿಗರು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ.ಗಣಿ ಕಾಲೋನಿಗಳಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಿವೆ. ಹಳೇ ತಲೆಮಾರಿನವರಿಗೆ ಕನ್ನಡ ಬಾರದಿದ್ದರೂ; ಹೊಸ ತಲೆಮಾರಿನ ಹುಡುಗರು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಓದುತ್ತಿರುವರು ಸಹ ತಮಿಳರೇ ಎಂಬುದು ವಿಶೇಷ.ಕೆಲವು ಕನ್ನಡ ಪರ ಸಂಘಟನೆಗಳ ಮುಖಂಡರು ವೈಯಕ್ತಿಕ ಕಾರಣಕ್ಕಾಗಿ ತಮಿಳು-ಕನ್ನಡ ಎಂಬ ಬೇಧ ಹುಟ್ಟುಹಾಕಲು ಪ್ರಯತ್ನಿಸಿದ್ದರೂ; ಅದಕ್ಕೆ ಕಿವಿ ಕೊಡದೆ ಶಾಂತಿ ಕಾಪಾಡುತ್ತಿದ್ದಾರೆ.ನಗರಸಭೆಗೆ ಹೆಚ್ಚಿನ ಸಂಖ್ಯೆಯ ತಮಿಳು ಮಾತೃ ಭಾಷೆಯ ಸದಸ್ಯರು ಆಯ್ಕೆಯಾಗಿದ್ದರೂ; ಆಡಳಿತ ಈಚಿನ ದಿನಗಳಲ್ಲಿ ಕನ್ನಡದಲ್ಲೇ ನಡೆಯುತ್ತಿದೆ. ಅಧಿಕ ಸಂಖ್ಯೆಯಲ್ಲಿದ್ದ ತಮಿಳು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿ ಕನ್ನಡ ಶಾಲೆಗಳಾಗಿ ಪರಿವರ್ತನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ತೇರಿನ ಉದ್ಘಾಟನೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)