ಮಂಗಳವಾರ, ಮೇ 11, 2021
21 °C

ಕೆನಡಿಯನ್ ವಿದ್ಯಾರ್ಥಿಗಳ ಸಾಮಾಜಿಕ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಡಿಯನ್ ವಿದ್ಯಾರ್ಥಿಗಳ ಸಾಮಾಜಿಕ ಕಾಳಜಿ

ಮೊಬೈಲ್, ಕಂಪ್ಯೂಟರ್, ಐಪಾಡ್‌ಗಳ ಒಡನಾಟದಲ್ಲಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಅಂದು ಬಣ್ಣ ಬಳಿಯುವ ಬ್ರಶ್, ಹಾರೆ, ಗುದ್ದಲಿಗಳಿದ್ದವು. ಕಂಪ್ಯೂಟರ್ ಮೌಸ್‌ನೊಂದಿಗೆ ಒಡನಾಡುತ್ತಿದ್ದ ಅವರ ಬೆರಳುಗಳು ಆವತ್ತು ಬಣ್ಣ ಕಲೆಸುವಲ್ಲಿ ನಿರತವಾಗಿದ್ದವು.ಬಡವರ ಮನೆಗೆ ಬಣ್ಣ ಬಳಿದು ಪೂರೈಸಿದ ನಂತರ ಅವರ ಕಣ್ಣುಗಳಲ್ಲಿ ಮಿನುಗುತ್ತಿದ್ದ ಸಂತೃಪ್ತ ಭಾವಕ್ಕೆ ಎಣೆಯಿಲ್ಲ. ಇಂತದ್ದೊಂದು ಅವರ್ಣನೀಯ ಅನುಭವ ದಕ್ಕಿಸಿಕೊಂಡು ಖುಷಿಪಟ್ಟಿದ್ದು ನಗರದ ಕೆನಡಿಯನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು.ಅಂದಹಾಗೆ, ಅವರು ಒಂದು ಸದುದ್ದೇಶಕ್ಕಾಗಿ ಹ್ಯಾಬಿಟೇಟ್ ಫಾರ್ ಹ್ಯುಮ್ಯೋನಿಟಿ ಸ್ವಯಂಸೇವಾ ಸಂಸ್ಥೆ ಜತೆ ಕೈಗೂಡಿಸಿದ್ದರು.`ಬ್ರಶ್ ಆಫ್ ಕೈಂಡ್‌ನೆಸ್' ಎಂಬ ಯೋಜನೆ ಹಮ್ಮಿಕೊಳ್ಳುವ ಮೂಲಕ ಈ ವಿದ್ಯಾರ್ಥಿಗಳು ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ತರಕಾರಿ ಮಾರಾಟಗಾರರು ಹಾಗೂ ಬಿಬಿಎಂಪಿ ಕೆಲಸಗಾರರ ಮನೆಗಳಿಗೆ ಸುಣ್ಣ-ಬಣ್ಣಬಳಿದು ಅವರ ಮನೆಗಳನ್ನು ಹಸನು ಮಾಡಿಕೊಟ್ಟರು. ಸಿಐಎಸ್ ಸಮುದಾಯ ಹಮ್ಮಿಕೊಂಡಿದ್ದ ಧನಸಂಗ್ರಹ ಜಾಥಾದಲ್ಲಿ ಪಾಲ್ಗೊಂಡು ಈ ಯೋಜನೆಗಾಗಿ 50 ಸಾವಿರ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿದ್ದರು.ಮನೆಗಳಿಗೆ ಬಣ್ಣ ಬಳಿಯಲು ಹಾಗೂ ರಾಮಮೂರ್ತಿನಗರದ ಸಮೀಪವಿರುವ ಕೊಟ್ಟೂರು ಎಂಬ ಹಳ್ಳಿಯಲ್ಲಿ ಬಡಜನರಿಗೆ ಮನೆಕಟ್ಟಲು ಬೇಕಾದ ಮರಳಿನ ಪೂರೈಕೆ ಮಾಡುವಲ್ಲಿ ಈ ಹಣವನ್ನು ವ್ಯಯಿಸಲಾಯಿತು. `ಈ ಯೋಜನೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಉತ್ಸಾಹ ಮತ್ತು ಪ್ರಯತ್ನಗಳು ಪ್ರಶಂಸನೀಯ. ತಾವು ಮಾಡಬೇಕಾದ ದೈಹಿಕ ದುಡಿಮೆಯ ಕುರಿತಾಗಿ ಒಂದು ಬಾರಿಯೂ ಯಾವುದೇ ವಿದ್ಯಾರ್ಥಿಯೂ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಯೋಜನೆಯ ಅಂತಿಮ ಹಂತದಲ್ಲಿ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಮನೆಗಳನ್ನು ಕಂಡು ಅವರೆಲ್ಲರ ಮುಖದಲ್ಲಿ ಮಿನುಗಿದ ಸಂತೋಷವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ' ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸಿಐಎಸ್‌ನ ಸಮುದಾಯ ಸೇವಾ ಸಂಯೋಜಕಿ ಪ್ರಿಯಾ ಆನಂದ.`ಹ್ಯಾಬಿಟೇಟ್ ಫಾರ್ ಹ್ಯುಮ್ಯೋನಿಟಿಯೊಂದಿಗೆ ಇದೊಂದು ಒಳ್ಳೆ ಅನುಭವ. ಕೊಳೆಗೇರಿಗಳಲ್ಲಿ ವಾಸಿಸುವ ಜನರು ಹೇಗೆ ಬದುಕುತ್ತಾರೆ ಎನ್ನುವ ನೈಜ ಚಿತ್ರಣ ಈ ಚಟುವಟಿಕೆಯಿಂದ ನಮಗೆ ಸಿಕ್ಕಿತು.  ಆ ಮನೆಗಳಲ್ಲಿ ವಾಸಿಸುವ ಜನರ ಜೀವನ ಮಟ್ಟ ಕಂಡಾಗ ನಿಜಕ್ಕೂ ದುಃಖವಾಗುತ್ತದೆ.ಅವರ ಮನೆಗಳಿಗೆ ಯಾವುದೇ ಕಿಟಕಿಗಳಾಗಲೀ, ಸೂಕ್ತವಾದ ಗಾಳಿ-ಬೆಳಕು ಬರುವಂತಹ ರಚನೆಗಳಾಗಲಿ ಇರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಇದೊಂದು ಬೇಸರದ ಸಂಗತಿ.ಇಂತಹ ಪರಿಸ್ಥಿತಿಯಲ್ಲಿರುವ ಅವಶ್ಯಕತೆಯುಳ್ಳವರಿಗೆ ನಮ್ಮ ಕೈಲಾದದ್ದನ್ನು ಮಾಡಿದೆವು ಎಂಬ ಸಂತೋಷ ನಮಗಿದೆ' ಎಂದು ವಿದ್ಯಾರ್ಥಿಗಳೆಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.