ಶನಿವಾರ, ಮಾರ್ಚ್ 6, 2021
28 °C

ಕೆರೆಗಳಲ್ಲಿ ಮೀನು ಸಾಕಣೆ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಮೀನು ಪೌಷ್ಠಿಕಾಂಶಗಳ ಆಗರ. ಹಾಗೆಯೇ ಮೀನು ಸಾಕಣೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭಗಳಿಸುವ ಪೂರಕ ವೃತ್ತಿ. ರೈತರು ಲಭ್ಯವಿರುವ ಜಲ ಸಂಪನ್ಮೂಲ ಬಳಸಿ ಕೊಂಡು ಅಧಿಕ ಆದಾಯಗಳಿಸಬಹುದು.

 

ಶಿವಮೊಗ್ಗ ಜಿಲ್ಲೆಯಾದ್ಯಂತ ಸುಮಾರು 200 ದೊಡ್ಡ ಪ್ರಮಾಣದ ಕೆರೆಗಳು ಹಾಗೂ ನಾಲ್ಕು ಸಾವಿರಕ್ಕೂ ಮಧ್ಯಮ ಪ್ರಮಾಣದ ಕೆರೆಗಳಿದ್ದು, ಒಟ್ಟು 10 ಸಾವಿರ ಹೆಕ್ಟೇರ್‌ನಲ್ಲಿ  ಮೀನು ಸಾಕಣೆ ನಡೆಯುತ್ತಿದೆ.ಸಾಕುವ ಮೀನುಗಳ ಬೆಳವಣಿಗೆಯ ಮೇಲೆ ನೀರಿನ ಭೌತಿಕ ಮತ್ತು ರಾಸಾಯನಿಕ ಗುಣ ಪ್ರಭಾವ ಬೀರುತ್ತವೆ. ಹೀಗಾಗಿ ಮೀನು ಪಾಲನೆ  ಮಾಡುವ ಕೆರೆಯ ನೀರು ಆರೋಗ್ಯ ಪೂರ್ಣವಾಗಿರುವಂತೆ ಕಾಯ್ದುಕೊಳ್ಳಬೇಕಾದುದು ಅವಶ್ಯಕ.

 

ಮೀನು ಸಾಕುವ ವೇಳೆ ರೈತರು ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಮೀನು ಸಾಕಣೆ ಅಕ್ಷಯ ಪಾತ್ರೆಯಾಗಿ ಪರಿವರ್ತಿತ ವಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಡಾ.ಮಂಜಪ್ಪ.ಜಲ ಕಳೆಗಳು:  ಜಲ ಕಳೆಗಳಲ್ಲಿ ಮುಖ್ಯವಾಗಿ ತೇಲುವ ಕಳೆ, ಮುಳುಗಿರುವ ಕಳೆ, ಅರೆ ಮುಳುಗಿರುವ ಕಳೆಗಳು ಸರ್ವೆಸಾಮಾನ್ಯ. ಈ ಕಳೆಗಳು ಮೀನು ಪಾಲನೆಯ ಕೆರೆಗಳಲ್ಲಿ ಬೆಳೆದಂತೆಲ್ಲ ನೈಸರ್ಗಿಕ ಆಹಾರದ ಉತ್ಪತ್ತಿಯನ್ನು ಕುಂಠಿತ ಗೊಳಿಸುತ್ತವೆ.

ಮೀನು ಹಿಡಿಯಲು ಬಲೆಗಳಿಗೆ ಅಡ್ಡಿಯನ್ನುಂಟುಮಾಡುತ್ತವೆ. ಈ ಎಲ್ಲ ಕಾರಣಗಳಿಂದ ಆದಷ್ಟೂ ಇವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಜೈವಿಕ ವಿಧಾನದಲ್ಲಿ ಹುಲ್ಲುಗೆಂಡೆ ಮೀನುಗಳನ್ನು ಬಿತ್ತಿ ಬೆಳೆಯುವುದರಿಂದ ಜಲ ಕಳೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.ದೀರ್ಘಾವಧಿ ಮೀನು ಬೆಳೆಯುವ ಕೆರೆಗಳಲ್ಲಿ ಸಾಮಾನ್ಯವಾಗಿ ಮಾಂಸಾಹಾರಿ ಮೀನುಗಳಾದ ಕುಚ್ಚು, ಕೊರವ, ಬಾಳೆ, ಗೊದ್ದಲೆ, ಚಾಮಾರಿ, ಸಾಸಲು ಮೀನುಗಳು ಬಂದು ಸೇರುವ ಸಂಭವವಿರುತ್ತದೆ. ಮಾಂಸಾಹಾರಿ ಮೀನುಗಳು ಗೆಂಡೆ ಮೀನು ಮರಿಗಳನ್ನು ತಿನ್ನುವ ಸ್ವಭಾವ ಹೊಂದಿರುವುದರಿಂದ ಕೆರೆಗೆ ಮೀನು ಬಿತ್ತುವ ಮುನ್ನ ಎಳೆಯುವ ಬಲೆಯಿಂದ ಇವನ್ನು ಹಿಡಿದು ತೆಗೆಯಬೇಕು.

 

ಇದು ಸಾಧ್ಯವಾಗದಿದ್ದಲ್ಲಿ ಎಕರೆಗೆ 40 ಕಿ.ಗ್ರಾಂ ಬ್ಲೀಚಿಂಗ್ ಪುಡಿಯನ್ನು ನೀರಿನೊಂದಿಗೆ ಕರಗಿಸಿ ಕೆರೆಗೆ ಹಾಕಬೇಕು. ಈ ವಿಧಾನದಿಂದ  ಮಾಂಸಾಹಾರಿ ಮೀನುಗಳನ್ನು ಹಾಗೂ ಅನಗತ್ಯ ಮೀನುಗಳನ್ನು ನಿರ್ಮೂಲನೆ ಮಾಡಬಹುದು.ಕೆರೆಗಳ ಫಲವತ್ತತೆ: ಮೀನು ಸಾಕುವ ಕೆರೆಗಳು ಆಯಾ ಪ್ರದೇಶದ ಮಣ್ಣಿಗೆ ಅನುಗುಣವಾಗಿ ಆಮ್ಲೀಯವಾಗಿ ಇಲ್ಲವೇ ಪ್ರತ್ಯಾಮ್ಲೀಯವಾಗಿ ಪರಿವರ್ತಿತವಾಗಿರುತ್ತವೆ. ನೀರು ಆಮ್ಲೀಯ ಗುಣ ಹೊಂದಿದ್ದರೆ ಒಂದು ಎಕರೆಗೆ ಸುಮಾರು 600 ಕಿ.ಗ್ರಾಂ.ನಷ್ಟು ಸುಣ್ಣವನ್ನು ಹಾಕಿ ಸರಿಪಡಿಸಿ ಕೊಳ್ಳಬೇಕು.

 

ನಂತರ ಕೆರೆಗೆ ನೀರನ್ನು ಹಾಯಿಸಿ ಸಗಣಿ ಗೊಬ್ಬರವನ್ನು ಬಗ್ಗಡದ ರೂಪದಲ್ಲಿ ಕೆರೆಗೆ ಹಾಕಬೇಕು. ಮೀನುಗಳ ನೈಸರ್ಗಿಕ ಆಹಾರ ವರ್ಧನೆಗೆ ಹಾಗೂ ನೀರಿನ ಫಲವತ್ತತೆಗೆ ಮೀನು ಮರಿಗಳನ್ನು ಕೆರೆಗೆ ಬಿಡುವ 7 ದಿನಗಳ ಮುಂಚಿತವಾಗಿ 3000 ಕಿ.ಗ್ರಾಂ ಸಗಣಿಗೊಬ್ಬರ, 500 ಕಿ.ಗ್ರಾಂ. ಕೋಳಿಗೊಬ್ಬರ, 20 ಕಿ.ಗ್ರಾಂ. ಸೂಪರ್ ಫಾಸ್ಪೇಟ್ ಮತ್ತು 10 ಕಿ.ಗ್ರಾಂ. ಯೂರಿಯಾ ಹಾಕಬೇಕು. ನಂತರ ಕೆರೆಗೆ ಮೀನು ಮರಿಗಳನ್ನು ಬಿತ್ತಬೇಕು.ವಿವಿಧ ಜಾತಿಯ ಬಿತ್ತನೆ ಮೀನು ಮರಿಗಳು ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಮೀನು ಉತ್ಪಾದನಾ ಕೇಂದ್ರಗಳಲ್ಲಿ ದೊರೆಯುತ್ತವೆ. ಬಿತ್ತುವಾಗ 4ರಿಂದ 5 ಸೆ.ಮೀ. ಉದ್ದನೆಯ ಮೀನು ಮರಿಗಳನ್ನು ಬಿತ್ತಬೇಕು. ಮೀನುಮರಿಗಳಿಗೆ ಕೃತಕ ಆಹಾರವನ್ನು ಒದಗಿಸುವುದಾದರೆ ಎಕರೆಗೆ 3000-4000 ಮೀನುಮರಿಗಳ ಬಿತ್ತನೆ ಮಾಡಬಹುದು.ಕೇವಲ ನೈಸರ್ಗಿಕ ಆಹಾರದಲ್ಲಿ ಸಾಕಾಣಿಕೆ ಮಾಡುವುದಾದರೆ ಎಕರೆಗೆ 2000 ಮರಿಗಳನ್ನು ಬಿತ್ತಿ ಬೆಳೆಯಬಹುದು. ಕಾಟ್ಲ, ರೋಹು, ಮೃಗಾಲ್ ಮೀನು ಮರಿಗಳನ್ನು 4:3:3ರ ಅನುಪಾತದಲ್ಲಿ ಬಿತ್ತಬೇಕು. ಕಾಟ್ಲ, ರೋಹು, ಮೃಗಾಲ್ ಹಾಗೂ ಬೆಳ್ಳಿಗೆಂಡೆ, ಹುಲ್ಲುಗೆಂಡೆ, ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ಒಟ್ಟಾಗಿ ಬಿತ್ತುವುದಾದರೆ 2:5:1 :5:0:2:0:2:0ರ ಅನುಪಾತದಲ್ಲಿ ಬಿತ್ತಬಹುದು. ಕೃತಕ ಆಹಾರ:  ಮೀನುಮರಿಗಳ ಶೀಘ್ರ ಬೆಳವಣಿಗೆಗೆ ಕೃತಕ ಆಹಾರ ಕೊಡುವುದು ಮುಖ್ಯ. ಶೇಂಗಾ ಹಿಂಡಿ ಹಾಗೂ ಅಕ್ಕಿತೌಡನ್ನು 1:1ರ ಪ್ರಮಾಣದಲ್ಲಿ ಮೀನು ಮರಿಗಳಿಗೆ ಆಹಾರವಾಗಿ ಕೊಡಬೇಕು.ಒಂದು ಎಕರೆಗೆ ಸುಮಾರು 3000 ಮೀನುಮರಿಗಳನ್ನು ಬಿತ್ತಿದಾಗ ಮೊದಲ ತಿಂಗಳು ಆಹಾರವನ್ನು ಪ್ರತಿದಿನಕ್ಕೆ 1.6ಕಿ.ಗ್ರಾಂ, ಎರಡನೇ ತಿಂಗಳು 2 ಕಿ.ಗ್ರಾಂ. ಮೂರನೇ ತಿಂಗಳು 2.4 ಕಿ.ಗ್ರಾಂ, ನಾಲ್ಕನೇ ತಿಂಗಳು 3.2 ಕಿ.ಗ್ರಾಂ, ಐದನೇ ತಿಂಗಳು 4 ಕಿ.ಗ್ರಾಂ. ಆರನೇ ತಿಂಗಳು 4.8 ಕಿ.ಗ್ರಾಂ, ಏಳನೇ ತಿಂಗಳು 5.6. ಕಿ.ಗ್ರಾಂ, ಎಂಟು, ಒಂಬತ್ತು ಮತ್ತು ಹತ್ತನೇ ತಿಂಗಳು ಕ್ರಮವಾಗಿ 6.4, 7.2, ಮತ್ತು 8 ಕಿ.ಗ್ರಾಂ. ಕೃತಕ ಆಹಾರವನ್ನು ಒದಗಿಸಬೇಕು.ಕೃತಕ ಆಹಾರವನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಮೀನುಗಳ ದೇಹ ತೂಕದ ಶೇ 2ರಂತೆ ಪ್ರತಿ ದಿವಸ ಕೊಡಬೇಕು. ಪ್ರತಿ ತಿಂಗಳು ಮೀನುಗಳನ್ನು ಹಿಡಿದು ಅವುಗಳ ಬೆಳವಣಿಗೆ ಹಾಗೂ ಆರೋಗ್ಯವನ್ನು ಖಚಿತಪಡಿಸಿಕೊಂಡು ಆಹಾರ ಒದಗಿಸುವುದು ಉತ್ತಮ.  ಕೆರೆಯಲ್ಲಿ ಸುಮಾರು 8ರಿಂದ 10 ತಿಂಗಳು ಪಾಲನೆ ಮಾಡಿದ ಮೀನುಗಳು ಈ ಅವಧಿಯಲ್ಲಿ 0.75ಯಿಂದ 1.25 ಕಿ.ಗ್ರಾಂ ಬೆಳೆಯಬಲ್ಲವು. ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮೀನುಗಳನ್ನು ಹಿಡಿದು ಮಾರಾಟ ಮಾಡುವುದು ಸೂಕ್ತ.ಎಳೆಯುವ ಬಲೆ, ಬಿಡುಬಲೆ ಹಾಗೂ ಬೀಸುಬಲೆಗಳನ್ನು ಉಪಯೋಗಿಸಿ ಮೀನು ಹಿಡಿಯಬಹುದು. ಮೀನುಗಳ ಗುಣಮಟ್ಟ ಕೆಡದಂತೆ ವಿವಿಧ ಸಂಸ್ಕರಣಾ ವಿಧಾನಗಳಲ್ಲಿ ಸಂರಕ್ಷಿಸಿ ತಾಜಾತನದೊಂದಿಗೆ ಮಾರುಕಟ್ಟೆಗಳಿಗೆ ರವಾನಿಸುವುದು ಮುಖ್ಯ. ಹೀಗೆ ಮಾಡಿದರೆ ಉತ್ತಮ ಬೆಲೆ ಸಿಗುತ್ತದೆ.ಒಂದು ಎಕರೆಯಲ್ಲಿ ವಾರ್ಷಿಕ ಸರಾಸರಿ 2 ಸಾವಿರ ಕಿ.ಗ್ರಾಂ. ಮೀನು ಉತ್ಪಾದನೆ ಮಾಡಬಹುದು. ಕಿ.ಗ್ರಾಂಗೆ ರೂ.60ರಂತೆ ಮಾರಾಟ ಮಾಡಿದರೂ 1,20,000 ಆದಾಯವಿದೆ. ಖರ್ಚು ಕಳೆದು 45,000 ರೂ ನಿವ್ವಳ ಆದಾಯ ಪಡೆಯಬಹುದು ಎನ್ನುತ್ತಾರೆ ಡಾ.ಮಂಜಪ್ಪ.ಹೆಚ್ಚಿನ ಮಾಹಿತಿ ಬೇಕಿದ್ದವರು ಮಂಜಪ್ಪ ಅವರನ್ನು ಸಂಪರ್ಕಿಸಬಹುದು.  ಅವರ ಮೊಬೈಲ್ ನಂಬರ್- 99648 18922.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.