ಭಾನುವಾರ, ಮೇ 16, 2021
23 °C
ಸಾರಕ್ಕಿ ಕೆರೆ ಅತಿಕ್ರಮಣಕ್ಕೆ ಅಧಿಕಾರಿಗಳಿಂದಲೇ ಮೌನ ಸಮ್ಮತಿ

ಕೆರೆಯನ್ನುಕಿರಿದು ಮಾಡಿದ ಒತ್ತುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಯನ್ನುಕಿರಿದು ಮಾಡಿದ ಒತ್ತುವರಿ

ಬೆಂಗಳೂರು: ಕಂದಾಯ ಅಧಿಕಾರಿಗಳ ಮೌನ ಸಮ್ಮತಿಯಿಂದಾಗಿ ನಗರದ ಸಾರಕ್ಕಿ ಕೆರೆ ಅಂಗಳ ಒತ್ತುವರಿಯಾಗಿದ್ದು, ಅತಿಕ್ರಮಣಗೊಂಡ ಜಾಗದಲ್ಲಿ `ಅಧಿಕೃತ' ಕಟ್ಟಡಗಳು ತಲೆ ಎತ್ತಿವೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.ಇಷ್ಟು ಸಾಲದೆಂಬಂತೆ ಕೆರೆ ಪಾತ್ರದಲ್ಲಿ ರಸ್ತೆ ನಿರ್ಮಿಸುವ ಮೂಲಕ ಅದನ್ನು ಇನ್ನಷ್ಟು ಘಾಸಿಗೊಳಿಸಲು ಬಿಬಿಎಂಪಿ ಮುಂದಾಗಿತ್ತು. ಇದರಿಂದ ಜಲಮೂಲ ಇಬ್ಭಾಗ ಆಗಲಿತ್ತು. ಕೆರೆ ರಕ್ಷಣೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಯತ್ನದಿಂದ ಯೋಜನೆಯನ್ನು ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.ದಾಖಲೆಗಳ ಪ್ರಕಾರ ಸಾರಕ್ಕಿ ಕೆರೆ ವಿಸ್ತೀರ್ಣ 82 ಎಕರೆ, 24 ಗುಂಟೆ. ಆದರೆ, ಅದರ ಪಾತ್ರವೀಗ 63 ಎಕರೆಗೆ ಸಂಕುಚಿತಗೊಂಡಿದೆ. ವರ್ಷಗಟ್ಟಲೆ ಸತತ ಪ್ರಯತ್ನ ನಡೆಸಿದ್ದಲ್ಲದೆ ಲೆಕ್ಕವಿಲ್ಲದಷ್ಟು ಪತ್ರ ವ್ಯವಹಾರ ಮಾಡಿದರೂ ಬಿಡಿಎ ಅಧಿಕಾರಿಗಳಿಗೆ ಸಾರಕ್ಕಿ ಕೆರೆಯ ಅಧಿಕೃತ ನಕ್ಷೆಯನ್ನು ಬಿಬಿಎಂಪಿಯಿಂದ ಪಡೆಯಲು ಸಾಧ್ಯವಾಗಿರಲಿಲ್ಲ.ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಆಂದೋಲನ ಆರಂಭಿಸಿದ ಮೇಲೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಕೊನೆಗೂ ಕೆರೆಯ ನಕ್ಷೆಯೊಂದನ್ನು ಸಿದ್ಧಪಡಿಸಿದರು. ಆದರೆ, ಅದರಲ್ಲಿ ತಪ್ಪು ಮಾಹಿತಿಗಳೇ ಹೆಚ್ಚಾಗಿದ್ದವು.ದೋಷಪೂರಿತ ನಕ್ಷೆ: ಕೆರೆಗಳ ವಿಷಯವಾಗಿ ಕಳಕಳಿ ಹೊಂದಿರುವ ಹೈಕೋರ್ಟ್ ತಮಗೆ ಛೀಮಾರಿ ಹಾಕಲಿದೆ ಎಂಬ ಭಯದಿಂದ ಕಂದಾಯ ಅಧಿಕಾರಿಗಳು ಏಪ್ರಿಲ್ 16ರಂದು ಹೊಸ ನಕ್ಷೆ ಸಿದ್ಧಪಡಿಸಿ ಕೊಟ್ಟರು. ಆದರೆ, ಆ ನಕ್ಷೆಯಲ್ಲೂ ಕೆರೆಯ ವಾಸ್ತವ ಚಿತ್ರಣ ಸಿಗಲಿಲ್ಲ. ವಾಸ್ತವವಾಗಿ ಎಷ್ಟು ಅತಿಕ್ರಮಣವಾಗಿದೆ ಎಂಬ ಮಾಹಿತಿ ಸಹ ಇರಲಿಲ್ಲ. `ಸೂಕ್ತ ದಾಖಲೆ' ಇಲ್ಲದೆ ನಿರ್ಮಿಸಲಾದ ಕಟ್ಟಡಗಳ ವಿವರವನ್ನಷ್ಟೇ ಅದು ಒಳಗೊಂಡಿತ್ತು.ಸುಮಾರು 2 ಎಕರೆ, 30 ಗುಂಟೆ ಜಾಗ ಒತ್ತುವರಿಯಾಗಿದೆ ಎಂಬ ವಿವರವನ್ನು ಆ ನಕ್ಷೆ ಒಳಗೊಂಡಿತ್ತು. ವಾಸ್ತವದಲ್ಲಿ ಅತಿಕ್ರಮಿತ ಪ್ರದೇಶದ ವಿಸ್ತೀರ್ಣ 20 ಎಕರೆಯಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.`ಅತಿಕ್ರಮಿತ ಜಾಗದಲ್ಲಿ `ಅಧಿಕೃತ' ನಿವೇಶನಗಳು ಎದ್ದಿವೆ. ಕೆರೆ ಪಾತ್ರದಲ್ಲಿ ಒತ್ತುವರಿ ಮಾಡಿದ್ದ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಕಂದಾಯ ಅಧಿಕಾರಿಗಳೇ ಇಂತಹ ಅತಿಕ್ರಮಿತ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಿರುವುದರಿಂದ ಅವುಗಳೆಲ್ಲ ಅಕ್ರಮ ನಿವೇಶನಗಳು ಎನ್ನುವುದನ್ನು ಸಿದ್ಧಮಾಡುವುದು ಕಷ್ಟವಾಗಿದೆ' ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.`ಕೆರೆ ಪಾತ್ರದಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿದ್ದರಿಂದಲೇ ಕಂದಾಯ ಅಧಿಕಾರಿಗಳು ಅದರ ನಕ್ಷೆ ನೀಡಲು ಹಿಂದೇಟು ಹಾಕಿದ್ದರು' ಎಂದು ಅವರು ವಿವರಿಸುತ್ತಾರೆ. ಒಂದೂವರೆ ವರ್ಷದ ಹಿಂದೆ ಕೆರೆ ನಿರ್ವಹಣೆಯನ್ನು ಬಿಡಿಎಗೆ ವಹಿಸಿಕೊಡಲಾಗಿದ್ದು, ಆಗಿನಿಂದಲೂ ಬಿಡಿಎ ಕೆರೆ ಕುರಿತು ಮಾಹಿತಿ ಕಲೆ ಹಾಕುತ್ತಿದೆ. 2012ರ ಮೇ 7ರಂದು ಬಿಬಿಎಂಪಿಗೆ ಮೊದಲ ಪತ್ರ ಬರೆಯಲಾಗಿತ್ತು. 2013ರ ಏಪ್ರಿಲ್ 30ರಂದು ಕೊನೆಯ ಪತ್ರ ಹೋಗಿದೆ.`ಕೆರೆಯನ್ನು ಇಬ್ಭಾಗ ಮಾಡುವಂತಹ ರಸ್ತೆ ಯೋಜನೆಯೊಂದನ್ನು ಬಿಬಿಎಂಪಿ ಸಿದ್ಧಪಡಿಸಿತ್ತು. ಈ ಸಂಬಂಧ ಸೂಚನೆ ಸಿಗುತ್ತಿದ್ದಂತೆ ನಾವು ಬಿಬಿಎಂಪಿ ಅಧಿಕಾರಿಗಳಿಗೆ 2012ರ ಸೆ. 25ರಂದು ಪತ್ರ ಬರೆದೆವು. ಆಗ ಯೋಜನೆ ಕೈಬಿಡಲಾಯಿತು' ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

ಪತ್ರದಲ್ಲಿ ಏನಿದೆ?

ಬಿಡಿಎ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ಏಪ್ರಿಲ್ 30ರಂದು ಬೆಂಗಳೂರು ದಕ್ಷಿಣದ ತಹಶೀಲ್ದಾರರಿಗೆ ಬರೆದ ಪತ್ರದ ಸಾರಾಂಶ ಹೀಗಿದೆ:ಸಾರಕ್ಕಿ, ಜರಗನಹಳ್ಳಿ ಕೆರೆಯ ಸರ್ವೆ ನಕ್ಷೆಯನ್ನು ತಾವು ದೃಢೀಕರಿಸಿ 2013ರ ಏಪ್ರಿಲ್ 17ರಂದು ನೀಡಿರುವುದು ಸರಿಯಷ್ಟೇ.

ಸದರಿ ಕೆರೆಯ ಎಲ್ಲೆಗಳನ್ನು ಸರ್ವೆ ನಕ್ಷೆಯಲ್ಲಿ ಇರುವಂತೆ ಗುರುತಿಸಿಕೊಟ್ಟಲ್ಲಿ ಚೈನ್‌ಲಿಂಕ್ ಬೇಲಿ ಅಳವಡಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕೆರೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.