ಶನಿವಾರ, ಜೂನ್ 19, 2021
29 °C

ಕೆರೆಯಲ್ಲಿ ನೀರು: ಬರದ ಭೀತಿ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಯಲ್ಲಿ ನೀರು: ಬರದ ಭೀತಿ ದೂರ

ಕೊಳ್ಳೇಗಾಲ: ಗ್ರಾಮದ ಕೆರೆಗಳಲ್ಲಿ ಸಮೃದ್ಧನೀರು, ಕೊಳವೆ ಬಾವಿಗಳಲ್ಲಿ ಹೆಚ್ಚಿನ ಅಂತರ್ಜಲ, ಹರ್ಷಚಿತ್ತ ರೈತ ಸಮುದಾಯ.. ಇದು ನೀರಿನಿಂದ ತತ್ತರಿ ಸುತ್ತಿದ್ದ ತಾಲ್ಲೂಕಿನ ದೊಡ್ಡಿಂದುವಾಡಿ, ಕಾಮಗೆರೆ, ಸಿಂಗಾನಲ್ಲೂರು, ಕಣ್ಣೂರು ಗ್ರಾಮಗಳ ಚಿತ್ರಣ.



19 ವರ್ಷಗಳಿಂದಲೂ ಒಣಗಿ ಬರಡಾಗಿ ನಿಂತ ಕೆರೆಗಳಿಗೆ ನೀರು ತುಂಬುವ ಮಾತನ್ನಾಡಿದಾಗ ಎಲ್ಲರೂ ನಕ್ಕವರೇ, ಒಣಗಿ ನಿಂತ ಈ ಕೆರೆಗಳಿಗೆ ನೀರನ್ನು ತುಂಬಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿತ್ತು. ಗುಂಡಾಲ್ ಜಲಾಶಯದಿಂದ ಈ ಕೆರೆಗಳಿಗೆ ನೀರು ತುಂಬುವ ವ್ಯವಸ್ಥೆ ಇದೆ.



ಆದರೆ, ಗುಂಡಾಲ್ ಜಲಾಶದಿಂದ ಬಿಡುವ ನೀರು ಕೇವಲ 5 ಮತ್ತು 6ನೇ ತೂಬಿನವರೆಗೆ ಮಾತ್ರ ಬಂದು ಹೂಳಿನಿಂದ ಚಾನಲ್ ತುಂಬಿದ್ದರಿಂದ ಅಲ್ಲಿಂದ ಮುಂದೆ ಬರದಂತಾಗಿತ್ತು. ಶಾಸಕ ಆರ್.ನರೇಂದ್ರ ಅವರು 35 ಲಕ್ಷ ವೆಚ್ಚದಲ್ಲಿ ಗುಂಡಾಲ್ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಚಾನಲ್‌ನ ಹೂಳು ತೆಗೆಸಿದರು. 



ಕೆರೆ ತುಂಬಿಸಲು ಬಿಡುವ ನೀರನ್ನು ಚಾನಲ್ ಅಕ್ಕಪಕ್ಕದ ರೈತರು ಬೆಳೆಗಳಿಗೆ ಬಳಸದಂತೆ ಶಾಸಕ ಆರ್.ನರೇಂದ್ರ ಹಾಗೂ ಜಿ. ಪಂ ಸದಸ್ಯ ಡಿ.ದೇವರಾಜು ಮನವೊಲಿಸಿದರು.  ಈ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬರದ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ಏರಿಸುವ ಈ ಯೋಜನೆ ಫಲಕೊಟ್ಟು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ.



ಬರಗಾಲದಿಂದ ಜನ ಕುಡಿಯುವ ನೀರಿಗೆ ತತ್ವಾರ ಪಡುವ, ಜನಜಾನುವಾರುಗಳಿಗೆ ನೀರು ಇಲ್ಲವೇ ಇಲ್ಲ ಎಂಬಂತಹ ಸ್ಥಿತಿ ಇದ್ದ ಈ ಗ್ರಾಮಗಳ ಜನರ ಮೊಗದಲ್ಲಿ ನಗುಮೂಡಿದೆ. 19 ವರ್ಷಗಳ ನಂತರ ಕೆರೆಯಲ್ಲಿ ತುಂಬಿದ ಸ್ಚಚ್ಛ ನೀರು ಜನಜಾನುವಾರುಗಳ ಬವಣೆ ನೀಗಿಸಿದೆ. ಅಂತರ್ಜಲ ಮಟ್ಟ ಹೆಚ್ಚಳಗೊಂಡು ರೈತರು ಹರ್ಷಚಿತ್ತರಾಗಿದ್ದಾರೆ. ಅಕ್ಕಪಕ್ಕದ ರೈತರ ಜಮೀನಿನ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಳಗೊಂಡು ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ಸಿಕ್ಕಿದೆ. ಮಳೆಗಾಲದಲ್ಲಿ ಉಕ್ಕಿಹರಿಯುವ ಜಲಾಶಯಗಳಿಗೆ ಬಾಗಿನ ಸಮರ್ಪಿಸುವುದು ಸಾಮಾನ್ಯ.



ಆದರೆ, ನೀರಿನಿಂದ ತತ್ತರಿಸುತ್ತಿರುವ ಗ್ರಾಮಗಳಲ್ಲಿ ಕೆರೆಗೆ ಬಾಗಿನ ಅರ್ಪಿಸುವ ವಿಶೇಷ ದೃಶ್ಯ ವೀಕ್ಷಿಸಲು ನೂರಾರು ಜನರು ಸಮಾವೇಶಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.