ಕೆರೆ ಒತ್ತುವರಿ ತೆರವಿಗೆ ಸೂಕ್ತ ಕ್ರಮ
ಕೋಲಾರ: ನಗರದ ಕೋಲಾರಮ್ಮ ಕೆರೆಯನ್ನು ಮಿತಿ ಮೀರಿ ಒತ್ತುವರಿ ಮಾಡಲಾಗಿದೆ. ಅದನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಿ ಎಂದು ಶಾಸಕ ವರ್ತೂರು ಪ್ರಕಾಶ್ ಅವರು ಡಿಸಿ ಮನೋಜ್ಕುಮಾರ್ ಮೀನಾ ಅವರಿಗೆ ಸೂಚಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಹಲವು ಮಹತ್ವದ ಕೆರೆಗಳಿವೆ. ಅವುಗಳಲ್ಲಿ ಕೋಲಾರಮ್ಮ ಕೆರೆಯೂ ಒಂದು. ಅದನ್ನು ಒತ್ತುವರಿ ಮಾಡಲಾಗಿದೆ. ಅದನ್ನು ತೆರವು ಮಾಡಿಸಿದರೆ ರಾಜ್ಯದಲ್ಲೆ ಮಾದರಿ ಜಿಲ್ಲಾಧಿಕಾರಿಯಾಗುತ್ತೀರಿ ಎಂದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದವರು ಅಲ್ಲಿಯೂ ಜಿಲ್ಲೆಗೆ ಉತ್ತಮ ಹೆಸರನ್ನು ಗಳಿಸಲು ಪ್ರಾಮಾಣಿಕವಾಗಿ ಪರಿಶ್ರಮ ಪಡಬೇಕು. ನಿಮಗೆ ಅಗತ್ಯ ಸೌಲಭ್ಯ, ಸಹಕಾರವನ್ನು ಜಿಲ್ಲಾಡಳಿತ ನೀಡುತ್ತದೆ. ಬಹುಮಾನ ಗೆಲ್ಲುವ ಜೊತೆಗೆ ಜೀವನವಿಡೀ ಕ್ರೀಡಾಸ್ಫೂರ್ತಿ ಹೊಂದಿರುವುದು ಕೂಡ ಮುಖ್ಯ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಉಮಾಲಕ್ಷ್ಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ರಂಗಯ್ಯ, ಎಂ.ಸುಬ್ರಮಣಿ, ಶ್ರೀನಿವಾಸಗೌಡ ಉಪಸ್ಥಿತರಿದ್ದರು.
ವಾಲಿಬಾಲ್ ಮತ್ತು ಥ್ರೋಬಾಲ್ ವಿಭಾಗದಲ್ಲಿ ಮುಳಬಾಗಲು ತಂಡಗಳು ಶ್ರೀನಿವಾಸಪುರ ತಂಡಗಳ ವಿರುದ್ಧ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.