ಶನಿವಾರ, ಮೇ 21, 2022
27 °C
ಪ್ರಜಾವಾಣಿ ವಾರ್ತೆ/ ಶರತ್ ಹೆಗ್ಡೆ

ಕೆಸರಿನಲ್ಲಿ ನರಳಿದ ಕೊಪ್ಪಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಒಂದೆರಡು ದಿನ ಬಂದ ಸಾಧಾರಣ ಮಳೆ. ನಗರದ ಪಾಲಿಗೆ ಸೃಷ್ಟಿಯಾದದ್ದು ಅಪ್ಪಟ ಕೆಸರು, ಕೊಚ್ಚೆ. ನಗರದ ಗವಿಮಠ ರಸ್ತೆಯ ಭಾಗದಿಂದ ನಗರದ ಹೊರವಲಯದವರೆಗೂ ಕೆಸರು ನೀರು ಹರಿಯಿತು.ಕಾರಣವಿಷ್ಟೇ ಅವ್ಯವಸ್ಥಿತ ರಸ್ತೆ ಕಾಮಗಾರಿ, ಇರುವ ರಸ್ತೆಗಳು ದುರಸ್ತಿ ಕಾಣದೇ ಇರುವುದು, ಅಲ್ಲಲ್ಲಿ ಬಿದ್ದ ಹೊಂಡಗಳು, ಅದರ ಮೇಲೆ ವಾಹನ ಚಲಿಸಿದಾಗ ಮತ್ತಷ್ಟು ಸೃಷ್ಟಿಯಾಗುವ ಕೆಸರು ಊರಿಡೀ ಹರಡಿತು.ನಗರಕ್ಕೆ ಮಳೆ ಬಾರದಿದ್ದರೆ ಬರ. ಬಂದರೆ ನಗರ ನಿರ್ಮಾಣದ ಅವ್ಯವಸ್ಥೆ, `ಸ್ವಯಂಕೃತಾಪರಾಧ'ದಿಂದ ಕೆಸರುಮಯ ಊರು. ನಗರದ ಹಸನ್‌ರಸ್ತೆಯಿಂದ ಶಾರದಾ ಕಾಲೇಜಿಗೆ ಬರುವ ಮಾರ್ಗವಂತೂ ವಿದ್ಯಾರ್ಥಿಗಳು, ನಾಗರಿಕರು ಸಂಚರಿಸಲಾರದಷ್ಟು ಕೆಸರುಮಯವಾಗಿರುತ್ತದೆ. ರೈಲು ನಿಲ್ದಾಣದ ಮುಂಭಾಗ ರಸ್ತೆಯೂ ಇದೇ ಸ್ಥಿತಿಗೆ ಹೊರತಲ್ಲ. ಕೇವಲ ಎರಡು ಮೂರು ದಿನಗಳ ಮಳೆಯ ಪರಿಣಾಮ ಹೊಂಡದಲ್ಲಿ ಸಿಲುಕಿದ ವಾಹನಗಳು, ಪಲ್ಟಿ ಹೊಡೆದ ದ್ವಿಚಕ್ರ ವಾಹನ ಸವಾರರು, ಬೈಸಿಕಲ್ ಸವಾರ ವಿದ್ಯಾರ್ಥಿಗಳು... ಕೊಚ್ಚೆ ಸಿಡಿದು ಹಿಡಿಶಾಪ ಹಾಕಿದ ನಾಗರಿಕರು, ಹೀಗೆ ಲೆಕ್ಕವಿಲ್ಲದ ಸನ್ನಿವೇಶಗಳನ್ನು ಉದಾಹರಿಸಬಹುದು.ನಗರದ ಮುಖ್ಯರಸ್ತೆ ನೋಡಲೇನೋ ವಿಶಾಲವಾಗಿದೆ. ಕೇಂದ್ರೀಯ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಅಗೆದುಹಾಕಿದ ರಸ್ತೆ ಗೋಚರಿಸುತ್ತದೆ. ಇಲ್ಲಿ ಎಲ್ಲ ಬಗೆಯ ವಾಹನಗಳು ತ್ರಾಸದಿಂದಲೇ ಸಂಚರಿಸುತ್ತವೆ. ಹೊಂಡ ತಪ್ಪಿಸಿಕೊಂಡು ಹೋಗಲು ಪರ್ಯಾಯ ರಸ್ತೆಯೂ ಇಲ್ಲ. ಸ್ವಲ್ಪ ಮುಂದಕ್ಕೆ ಬಂದರೆ ಹಿಂದಿ ಬಿ-ಇಡಿ ಕಾಲೇಜು ಸಮೀಪ ಮತ್ತೆ ರಸ್ತೆ ಅಗೆದು ಮಣ್ಣಿನ ತೇಪೆ ಹಾಕಲಾಗಿದೆ. ಹೇಳಲಷ್ಟೇ ಹೆದ್ದಾರಿ ಎನ್ನಲಾಗುವ ಮುಖ್ಯರಸ್ತೆಯಲ್ಲಿ ವಾಹನಗಳು ತೆವಳುತ್ತಲೇ ಸಾಗಬೇಕು.ಭಾಗ್ಯನಗರಕ್ಕೆ ಹೋಗುವ ರಸ್ತೆಯೂ ಆರಂಭದಲ್ಲಿ ಉತ್ತಮವಾಗಿದೆ. ರೈಲು ಹಳಿ ದಾಟಿದ ಬಳಿಕ ಮತ್ತದೇ ಅವ್ಯವಸ್ಥೆ ಎದುರಾಗುತ್ತದೆ.

ನಗರದ ವಸತಿ ಬಡಾವಣೆಗಳಲ್ಲಿಯೂ ಇದೇ ಪರಿಸ್ಥಿತಿ. ಅಲ್ಲಲ್ಲಿ ಒತ್ತುವರಿ ಆಗಿರುವುದರಿಂದ ಸೂಕ್ತ ವ್ಯವಸ್ಥಿತ ರಸ್ತೆ ನಿರ್ಮಿಸಲು ನಗರಸಭೆ ಅಸಹಾಯಕವಾಗಿದೆ. ಪದೇ ಪದೇ ರಸ್ತೆ ಅಗೆಯುತ್ತಿರುವುದರಿಂದ ಟೆಲಿಫೋನ್, ನೀರಿನ ಸಂಪರ್ಕ ಕಡಿತಗೊಳ್ಳುತ್ತಿರುವುದು ಇಲ್ಲಿ ಸಾಮಾನ್ಯ.ಒಟ್ಟು 28.78 ಚದರ ಕಿಲೋಮೀಟರ್ ಚಾಚಿಕೊಂಡಿರುವ ನಗರದಲ್ಲಿ ದೊಡ್ಡ ಮತ್ತು ಸಣ್ಣವು ಸೇರಿ 160 ಕಿ.ಮೀ. ಉದ್ದದ ರಸ್ತೆಯಿದೆ. ಉತ್ತಮ ಕಾಮಗಾರಿ, ಸೂಕ್ತ ಪೂರ್ವಯೋಜನೆ ಇದ್ದರೆ ರಸ್ತೆ ಹೊಂಡ ಬೀಳುವುದನ್ನು ತಪ್ಪಿಸಬಹುದು. ರಸ್ತೆ ನಿರ್ಮಾಣ ಮಾಡುವಾಗಲೇ ಪೈಪ್‌ಲೈನ್, ಚರಂಡಿ, ಟೆಲಿಫೋನ್, ವಿದ್ಯುತ್ ತಂತಿ ಹಾದುಹೋಗಲು ಸೂಕ್ತ ವ್ಯವಸ್ಥೆ ಮಾಡಿದ್ದರೆ ಪದೇ ಪದೇ ರಸ್ತೆ ಅಗೆಯುವುದನ್ನು ತಡೆಯಬಹುದು ಎಂದು ನಗರದ ನಾಗರಿಕರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.