ಶನಿವಾರ, ಜನವರಿ 25, 2020
15 °C

ಕೆಸಿಸಿ ಬ್ಯಾಂಕ್ ಶಾಖೆಗೆ ಬೀಗ ಜಡಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್‌: ಕೆಸಿಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದು ರೈತರು ಬೆಳೆವಿಮಾ ಪರಿಹಾರ ಪಡೆಯಬೇಕು ಎನ್ನುವ ಕೆಸಿಸಿ ಬ್ಯಾಂಕ್‌ ಆದೇಶವನ್ನು ಧಿಕ್ಕರಿಸಿರುವ ತಾಲ್ಲೂಕಿನ ರೈತವರ್ಗ ಸೋಮವಾರ ಇಲ್ಲಿನ ಕೆಸಿಸಿ ಬ್ಯಾಂಕ್‌ನ ಶಾಖೆಗೆ ಬೀಗ ಜಡಿದು ಪ್ರತಿಭಟಿಸಿದರು.ತಾಲ್ಲೂಕಿನಲ್ಲಿರುವ ಎರಡು ಕೆಸಿಸಿ ಬ್ಯಾಂಕ್‌ನ ಶಾಖೆಗಳಲ್ಲಿ ಬೆಳೆವಿಮಾ ಹಣ ವಿತರಣೆಯಿಂದ ರೈತರಿಗೆ ಹೊಸಖಾತೆ ತೆರೆಯಲು ₨ 500 ಠೇವಣಿ ಮತ್ತು 7500 ರೈತರಿಗೆ ಬೆಳೆವಿಮೆ ವಿತರಿಸಲು ಸಾಕಷ್ಟು ವಿಳಂಬವಾಗುತ್ತದೆ. ಆದ್ದರಿಂದ ಮೊದಲಿನ ಪದ್ಧತಿಯಂತೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಬೆಳೆವಿಮೆ ವಿತರಣೆ ಮಾಡಬೇಕು ಎಂದು ಹಸಿರು ಸೇನೆ ಮತ್ತು ರೈತ ಸಂಘ ತಾಲ್ಲೂಕು ಘಟಕದಿಂದ ಕೆಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ರೈತರು ನೀಡಿದ ಗಡುವು ಮೀರಿದರೂ ಬೇಡಿಕೆ ಈಡೇರದಿದ್ದರಿಂದ ಸೋಮವಾರ ಬ್ಯಾಂಕ್‌ಗೆ ಬೀಗ ಜಡಿಯಲಾಗಿತ್ತು.ಹಸಿರುಸೇನೆ ಮತ್ತು ರೈತಸಂಘ ಕರೆ ನೀಡಿದ್ದ ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸುಮಾರು 30 ವ್ಯವಸಾಯ ಸಹಕಾರಿ ಬ್ಯಾಂಕ್‌ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. ಬ್ಯಾಂಕ್‌ನ ಸಿಬ್ಬಂದಿಗಳನ್ನು ಹೊರಹಾಕಿ ಬ್ಯಾಂಕ್‌ಗೆ ಬೀಗ ಜಡಿದು ರೈತರು ಧರಣಿ ಕುಳಿತಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ, ‘ಬೇಡಿಕೆ ಈಡೇರುವವರೆಗೂ ಬ್ಯಾಂಕಿನ ಬೀಗ ತೆರೆಯಲು ಅವಕಾಶ ನೀಡುವುದಿಲ್ಲ. ಬುಧವಾರದ ಒಳಗಾಗಿ ಬೆಳೆವಿಮೆ ವಿತರಣೆಯನ್ನು ಸಹಕಾರಿ ಬ್ಯಾಂಕ್‌ಗಳಿಗೆ ವರ್ಗಾಯಿಸದ್ದಿದ್ದರೆ ಬ್ಯಾಂಕಿನ ಕಾಗದ ಪತ್ರಗಳನ್ನು ಸುಟ್ಟು ಉಘ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.   ‘ಅಸಹಾಯಕರಾಗಿ ನಿಂತಿದ್ದ ಬ್ಯಾಂಕ್‌ ಸಿಬ್ಬಂದಿ  ಘಟನೆಯ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಮುಂದಿನ ಪ್ರಕ್ರಿಯೆಗಾಗಿ ಈವರೆಗೂ ಯಾವುದೇ ಆದೇಶ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು. ಸಂಜೆಯ ವರೆಗೂ ಪ್ರತಿಭಟನೆ ಮುಂದುವರೆದಿತ್ತು. ಪೋಲಿಸರು ಸ್ಥಳದಲ್ಲಿದ್ದರು.   ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ವಾಸುದೇವ ಕಮಾಟಿ, ಚಂದ್ರಣ್ಣ ಕೋಟಿ, ಗದಿಗೆಪ್ಪ ಗುಡಗೇರಿ, ಬಸವರಾಜ ಮಡಿವಾಳರ, ಚನ್ನಬಸಪ್ಪ ಅಕ್ಕಿವಳ್ಳಿ, ಸದಾನಂದ ದಾನಪ್ಪನವರ, ಶಂಕ್ರಣ್ಣ ದಾನಪ್ಪನವರ, ಮಲ್ಲೇಶಪ್ಪ ತಳಗೇರಿ, ಸಿ.ಎಂ.ಪಾಟೀಲ, ಸಿದ್ಧನಗೌಡ ಪಾಟೀಲ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)