ಗುರುವಾರ , ಮೇ 19, 2022
20 °C

ಕೇಂದ್ರಸ್ಥಾನಕ್ಕೆ ಮರಳುವ ನಿರೀಕ್ಷೆಯಲ್ಲಿ ಕಲಾವಿದರು

ಪ್ರಜಾವಾಣಿ ವಾರ್ತೆ/ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಿವೃತ್ತಿ ಅಂಚಿನಲ್ಲಿದ್ದು ಶಿವಮೊಗ್ಗ, ಧಾರಾವಾಡ ರಂಗಾಯಣಗಳಿಗೆ ವರ್ಗಾವಣೆಗೊಂಡಿದ್ದ ಮೈಸೂರಿನ ರಂಗಾಯಣ ಕಲಾವಿದರು ಮತ್ತೆ ಕೇಂದ್ರಸ್ಥಾನದ ರಂಗ ರೆಪರ್ಟರಿಯಲ್ಲಿ ಕೂಡಿಕೊಳ್ಳುವ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ.ಹಿಂದಿನ ಸರ್ಕಾರ ಮೈಸೂರು ರಂಗಾಯಣದಲ್ಲಿದ್ದ 18 ಕಲಾವಿದರನ್ನು ವಿಂಗಡಿಸಿ ಶಿವಮೊಗ್ಗ, ಧಾರಾವಾಡ ಹಾಗೂ ಮೈಸೂರು ರಂಗಾಯಣಗಳಿಗೆ ತಲಾ 6 ಜನರಂತೆ ಎತ್ತಂಗಡಿ ಮಾಡಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲೂ ಕಲಾವಿದರಿಗೆ ಮೈಸೂರಿನಿಂದ ಬಿಡುಗಡೆ ಆದೇಶ ನೀಡಲಾಗಿತ್ತು. ಇದನ್ನು ನಾಡಿನ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ಪ್ರಬಲವಾಗಿ ವಿರೋಧಿಸಿದ್ದರು. ಈಗ ಹೊಸ ಸರ್ಕಾರ ಬಂದಿದೆ. ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ; ಇದೇ ಜಿಲ್ಲೆಯ ವಿ.ಶ್ರೀನಿವಾಸ ಪ್ರಸಾದ್ ಉಸ್ತುವಾರಿ ಸಚಿವರು. ಮೇಲಾಗಿ ರಂಗಕಲಾವಿದೆ ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ಕಲಾವಿದರ ಕಷ್ಟ-ಸುಖಗಳನ್ನು ಹತ್ತಿರದಿಂದ ಬಲ್ಲ ಈ ಮೂವರು, ಕಲಾವಿದರಿಗೆ ಒಳಿತಾಗುವ ನಿರ್ಧಾರವನ್ನೇ ಕೈಗೊಳ್ಳುತ್ತಾರೆಂಬ ನಿರೀಕ್ಷೆ ಶಿವಮೊಗ್ಗ-ಧಾರವಾಡ ರಂಗಾಯಣಗಳಿಗೆ ವರ್ಗಾವಣೆಗೊಂಡ ಕಲಾವಿದರದ್ದು.  ಸರ್ಕಾರ, ಶಿವಮೊಗ್ಗ ರಂಗಾಯಣಕ್ಕೆ ಮಂಜುನಾಥ ಬೆಳಕೆರೆ, ಬಿ.ಎನ್.ಶಶಿಕಲಾ, ಎಂ.ಸಿ.ಕೃಷ್ಣಪ್ರಸಾದ್, ಹುಲಗಪ್ಪ ಕಟ್ಟಿಮನಿ, ಪ್ರಮೀಳಾ ಬೇಂಗ್ರೆ ಹಾಗೂ ಮಹಾದೇವ್ ಅವರನ್ನು ವರ್ಗಾವಣೆ ಮಾಡಿದೆ. ಆದರೆ, ಇವರಿಗೆ ಕೆಲಸ ಮಾಡಲು ಯಾವುದೇ ಮೂಲ ಸೌಕರ್ಯಗಳನ್ನು ಸರ್ಕಾರ ಇದುವರೆಗೂ ಕಲ್ಪಿಸಿಲ್ಲ. ಈ ರಂಗಾಯಣಕ್ಕೆ ಇನ್ನೂ ಕಲಾವಿದರು, ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಹಿರಿಯ ಕಲಾವಿದರೆಲ್ಲ  ಕೈಕಟ್ಟಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಮಧ್ಯೆ ಬಿ.ವಿ.ಕಾರಂತರ ಕನಸಿನ ಮೈಸೂರು ರಂಗಾಯಣ ಸ್ಥಾಪನೆಗೊಂಡು 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೂಲ ಕಲಾವಿದರನ್ನೆಲ್ಲ ಮತ್ತೆ ಕರೆಸಿಕೊಳ್ಳಬೇಕೆಂಬ ಒತ್ತಡವೂ ಸೃಷ್ಟಿಯಾಗುತ್ತಿದೆ. ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ನಾಟಕ ಪ್ರದರ್ಶನಗಳಿಗೆ ಕಲಾವಿದರು ಪೂರ್ಣ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಅಡಚಣೆಯಾಗಿದ್ದು, ನಿಯೋಜನೆಗೊಂಡಿರುವ ಕಲಾವಿದರ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತರಿಗೆ ಕಲಾವಿದರು ಮನವಿ ಮಾಡಿದ್ದಾರೆ.ಇದರ ಜತೆಗೆ ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ, ದೇವನೂರ ಮಹಾದೇವ, ಸಂಸತ್ ಸದಸ್ಯ ಎಚ್.ವಿಶ್ವನಾಥ, ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಮೈಸೂರು ರಂಗ ರೆಪರ್ಟರಿ ಉಳಿಸಿ, ಮೂಲ ಆಶಯ ಕಾಪಾಡಿ ಎಂದು ಮನವಿ ಮಾಡಿದ್ದಾರೆ.`ರಂಗಾಯಣ ವೃತ್ತಿನಿರತ ನಾಟಕ ತಂಡವಾಗಿ ರೂಪುಗೊಳ್ಳಬೇಕು. ಶಿವಮೊಗ್ಗ, ಧಾರಾವಾಡ ರಂಗಾಯಣಗಳೂ ಕೂಡ ಇದೇ ಮಾದರಿಯಲ್ಲಿ ಬೆಳೆಯಬೇಕು. ಈ ಹಿಂದೆ ಕಲಾವಿದರ ಭವಿಷ್ಯದ ದೃಷ್ಟಿಯಿಂದ ಸರ್ಕಾರ, ಮೈಸೂರು ರಂಗಾಯಣದಲ್ಲಿದ್ದವರನ್ನೆಲ್ಲ ಕಾಯಂಗೊಳಿಸಿತು. ಇದು ಚಾರಿತ್ರಿಕವಾದ ತಪ್ಪು; ಇದನ್ನು ತಿದ್ದಿಕೊಳ್ಳಲು ಆಗುತ್ತಿಲ್ಲ. ಇದನ್ನೇ ನೆಪಮಾಡಿಕೊಂಡ ಸರ್ಕಾರ, ಮೈಸೂರು ರಂಗಾಯಣವನ್ನು ವಿಭಜನೆಗೊಳಿಸಿದ್ದು ತಪ್ಪು. ಸರ್ಕಾರ ಇವರ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಇವರ ಅಪಾರವಾದ ಅನುಭವವನ್ನು ಬಳಸಿಕೊಳ್ಳುವುದರ ಬಗ್ಗೆ ಸ್ಪಷ್ಟ ನಿಲುವು ಹೊಂದಿರಬೇಕು' ಎನ್ನುತ್ತಾರೆ ಹಿರಿಯ ರಂಗನಿರ್ದೇಶಕ ಹೆಗ್ಗೋಡಿನ ಪ್ರಸನ್ನ.`ನಾವು ಹಿರಿಯ ಕಲಾವಿದರು. ನಮ್ಮ ಅನುಭವಗಳನ್ನು ಶಿವಮೊಗ್ಗ-ಧಾರಾವಾಡ ರಂಗಾಯಣಗಳಿಗೆ ಹಂಚಲು ಸಿದ್ಧರಿದ್ದೇವೆ. ವರ್ಷಕ್ಕೆ ಕೆಲ ದಿನ ಇಲ್ಲಿಗೆ ಬಂದು ಹೋಗುತ್ತೇವೆ. ಆದರೆ, ಬಿ.ವಿ.ಕಾರಂತರ ಕನಸಿನ ಮೈಸೂರು ರಂಗಾಯಣ ರೆಪರ್ಟರಿಯನ್ನು ಒಡೆಯುವುದಕ್ಕೆ ನಮ್ಮ ವಿರೋಧ ಇದೆ' ಎನ್ನುತ್ತಾರೆ ಹೆಸರು ಹೇಳಬಯಸದ ಕಲಾವಿದರೊಬ್ಬರು.`ಕಲಾವಿದರ ಅಹವಾಲನ್ನು ಹೊಸ ಸರ್ಕಾರ ಬಹುತೇಕ ಆಲಿಸುತ್ತದೆ. ಸಚಿವೆ ಉಮಾಶ್ರೀ ಈ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ಪರಿಹರಿಸಲು ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ; ಕೇಂದ್ರ ಸ್ಥಾನಕ್ಕೆ ಕಲಾವಿದರು ಮರಳುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ' ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.